ಮೈಸೂರು: ಕುಮಾರಸ್ವಾಮಿ ಹೋಟೆಲ್ನಲ್ಲಿ ಉಳಿಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಆರೋಪಿಸಿದ್ದಾರೆ. ನೀವು ಸಿಎಂ ಅಧಿಕೃತ ನಿವಾಸ ಖಾಲಿ ಮಾಡದ ಕಾರಣ ಅವರು ಹೋಟೆಲ್ಗೆ ಹೋಗಬೇಕಾಯ್ತು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿದರು.
ಕುಮಾರಸ್ವಾಮಿಯವರ ಜೆ.ಪಿ. ನಗರದ ಮನೆ ದೂರವಾಗಿತ್ತು. ಹಾಗಾಗಿ, ಅವರು ಹೋಟೆಲ್ಗೆ ಹೋದರು. ಆದರೆ, ಕುಮಾರಸ್ವಾಮಿ ವಿಧಾನಸೌಧಕ್ಕೆ ಬರುತ್ತಿರಲಿಲ್ಲವಾ ? ವಿಶ್ರಾಂತಿ ಪಡೆಯಲು ಹೋಟೆಲ್ಗೆ ಹೋಗಿದ್ದು ತಪ್ಪಾ? ನೀವು ಯಾರೂ ಹೋಟೆಲ್ನಲ್ಲಿ ವಾಸ ಮಾಡಿಲ್ವಾ? ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನಿಸಿದರು.
‘ಭಾಷೆಯ ಮೇಲೆ ಹಿಡಿತ ಇರಬೇಕು’
ಭಾಷೆಯ ಮೇಲೆ ಹಿಡಿತ ಇರಬೇಕು. ಏಕವಚನದಲ್ಲಿ ನೀವು ಮಾತನಾಡಿದರೆ ಬೇರೆಯವರು ಅದೇ ಮಾಡುತ್ತಾರೆ. ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಮನಸ್ಸು ಪೂರ್ತಿಯಾಗಿ ಸಿಎಂ ಮಾಡಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ರೇವಣ್ಣ ಸಿದ್ದರಾಮಯ್ಯ ಮೊದಲಿನಿಂದಲೂ ಚೆನ್ನಾಗಿದ್ದಾರೆ. ಕುಮಾರಸ್ವಾಮಿ ಸಿದ್ದರಾಮಯ್ಯ ರಾಜಕೀಯವಾಗಿ ಚೆನ್ನಾಗಿಲ್ಲ ಎಂದು ಮಹೇಶ್ ಹೇಳಿದರು.
ಚಾಮುಂಡೇಶ್ವರಿ ಸೋಲಿಗೆ ಬಿಜೆಪಿ ಜೆಡಿಎಸ್ ಒಳಒಪ್ಪಂದ ಕಾರಣ ಎಂಬ ವಿಚಾರವಾಗಿ ಮಂಡ್ಯ, ತುಮಕೂರು ಚುನಾವಣೆಗಳ ಉದಾಹರಣೆ ನೀಡಿದ ಸಾ.ರಾ.ಮಹೇಶ್ ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
‘ಮಂಡ್ಯದಲ್ಲಿ ನಿಖಿಲ್ ಕುಮಾರ್ ವಿರುದ್ಧ ಸಂಚು ಆಗಲಿಲ್ಲವೇ?’
ಸಿದ್ದರಾಮಯ್ಯ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ಮಹೇಶ್ ಮಂಡ್ಯದಲ್ಲಿ ನಿಖಿಲ್ ಕುಮಾರ್ ವಿರುದ್ಧ ಸಂಚು ಆಗಲಿಲ್ಲವೇ? HDDಯನ್ನು ತುಮಕೂರಲ್ಲಿ ಸಂಚು ಮಾಡಿ ಸೋಲಿಸಲಿಲ್ಲವೇ? ಸಂವಿಧಾನ ರಚಿಸಿದ ಅಂಬೇಡ್ಕರ್ರನ್ನೇ ಸೋಲಿಸಿದ್ರು ಅಲ್ವಾ? ರಾಜಕಾರಣದಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು. ಅಂತಹ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಇದೆ. ಆದರೆ ಅದನ್ನ ಅವರು ಅರ್ಥ ಮಾಡಿಕೊಂಡು ಸ್ವೀಕರಿಸಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು ಕೊಟ್ಟರು.
‘ರಾಜ್ಯದಲ್ಲಿ ಅತಿ ಹೆಚ್ಚು ಸಾಲಮಾಡಿದ ಸಿಎಂ ಸಿದ್ದರಾಮಯ್ಯ’
ರಾಜ್ಯದಲ್ಲಿ ಅತಿ ಹೆಚ್ಚು ಸಾಲಮಾಡಿದ ಸಿಎಂ ಸಿದ್ದರಾಮಯ್ಯ. ನೀವು ಮೈಸೂರಿನವರು ಅನ್ನೋ ಕಾರಣಕ್ಕೆ ಮಾತನಾಡಿರಲಿಲ್ಲ. ಸಿದ್ದರಾಮಯ್ಯನವರೇ ನಿಮ್ಮ ಮೇಲೆ ನಮಗೆ ಗೌರವವಿದೆ. ಕಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
‘ಸಮ್ಮಿಶ್ರ ಸರ್ಕಾರ ಬೀಳಲು ಆ ಹೋಟೆಲ್ ಗಿರಾಕಿಯೇ ಕಾರಣ; ನನ್ನ ಮೇಲೆ ಬರೀ ಹೊಟ್ಟೆ ಕಿಚ್ಚು’