ಸಂಜನಾ-ರಾಗಿಣಿಗೆ ಇಲ್ಲ ಜಾಮೀನು, ಮುಂದೆ ಸುಪ್ರೀಂಕೋರ್ಟ್​ನಲ್ಲೂ ಬೇಲ್ ಸಿಗದಿದ್ರೆ..?

  • TV9 Web Team
  • Published On - 14:43 PM, 3 Nov 2020
ಸಂಜನಾ-ರಾಗಿಣಿಗೆ ಇಲ್ಲ ಜಾಮೀನು, ಮುಂದೆ ಸುಪ್ರೀಂಕೋರ್ಟ್​ನಲ್ಲೂ ಬೇಲ್ ಸಿಗದಿದ್ರೆ..?

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಡ್ರಗ್ಸ್​ ನಂಟಿನ ಕೇಸ್​ನಲ್ಲಿ ಆರೋಪ ಹೊತ್ತ ಇಬ್ಬರು ನಟಿಮಣಿಯರು ಸೇರಿದಂತೆ ಇತರೆ ಕೆಲ ಪಾತ್ರಧಾರಿಗಳಿಗೆ ಇಂದೂ ಸಹ ಜಾಮೀನು ಸಿಕ್ಕಿಲ್ಲ.

A2 ರಾಗಿಣಿ ದ್ವಿವೇದಿ, A14 ಸಂಜನಾ ಗಲ್ರಾನಿ ಮತ್ತು A4 ಪ್ರಶಾಂತ್ ರಂಕಾ ಅವರುಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.24ರಂದು ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಹೈಕೋರ್ಟ್ ಈಗ ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರೋಪಿಗಳ ಪರ ವಕೀಲರು ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಧೀಶರ ಎದುರು ಹಾಜರಾಗಿದ್ದರು.

ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್​ರವರ ಪೀಠ ನಟಿಯರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಇಬ್ಬರೂ ನಟಿಯರಿಗೆ ಕನಿಷ್ಠ 15 ದಿನ ಜೈಲೇ ಗತಿ ಎಂಬಂತಾಗಿದೆ. ಇದೀಗ ಆರೋಪಿಗಳಿಗೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುವುದೊಂದೇ ದಾರಿ. ಜಾಮೀನು ಸಿಗುವವರೆಗೂ ನಟಿಯರು ಜೈಲಿನಲ್ಲಿರಬೇಕಾಗಿದೆ.

ಇನ್ನು ಕೋರ್ಟ್​ ಆದೇಶ ಕೇಳುತ್ತಿದ್ದಂತೆ ಇಬ್ಬರೂ ನಟಿಯರು ಗಳಗಳನೆ ಅಳುತ್ತಾ ಕುಸಿದುಬಿದ್ದರು ಎಂದು ಸೆಂಟ್ರಲ್ ಜೈಲ್ ಮೂಲಗಳಿಂದ ತಿಳಿದುಬಂದಿದೆ.

ಸುಪ್ರೀಂನಲ್ಲೂ ಬೇಲ್ ಸಿಗದಿದ್ರೆ 6 ತಿಂಗಳು ಜೈಲು

ಸದ್ಯಕ್ಕೆ ರಾಗಿಣಿ ಮತ್ತು ಸಂಜನಾಗೆ NDPS ಕಾಯ್ದೆಯೇ ಸಂಕಷ್ಟ ತಂದೊಡ್ಡಿರುವುದು. ಅದರ ನೆಲಗಟ್ಟಿನಲ್ಲಿ ಮುಂದೆ ಸುಪ್ರೀಂಕೋರ್ಟ್ ನಲ್ಲಿ ಬೇಲ್ ಸಿಗದಿದ್ದರೆ ಶಾಕ್ ಕಾದಿದೆ. ಏಕೆಂದ್ರೆ ಸುಪ್ರೀಂ ಕೋರ್ಟ್​ ನಲ್ಲೂ ಬೇಲ್ ಸಿಗದಿದ್ರೆ 6 ತಿಂಗಳು ಜೈಲುವಾಸ ಖಂಡಿತವಾಗಲಿದೆ.

ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ತಿರಸ್ಕೃತಗೊಂಡರೆ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕವೇ ಬೇಲ್ ಅರ್ಜಿಗೆ ಸಲ್ಲಿಸಬೇಕಾದೀತು. ಅಲ್ಲಿಯವರೆಗೂ ಅಂದ್ರೆ 6 ತಿಂಗಳು ಜೈಲೇ ಗತಿ. ಇನ್ನು ಅದೇ ವೇಳೆ ಸಿಸಿಬಿ ಪೊಲೀಸರಿಗೂ 6 ತಿಂಗಳು ಸಮಯ ಸಿಗಲಿದೆ.