ಭಾರತದಲ್ಲಿ ಅನೇಕ ಹೆಸರಾಂತ ಕ್ರೀಡಾಪಟುಗಳ ಹೆಸರು ಡೋಪಿಂಗ್ ವಿವಾದದಲ್ಲಿ ಕೇಳಿಬರುತ್ತಿದೆ. ಡೋಪಿಂಗ್ ವಿವಾದದಲ್ಲಿ ಭಾರತೀಯ ಕ್ರೀಡಾಪಟುಗಳು ಕಳೆದ ವರ್ಷದಲ್ಲಿ ರಷ್ಯಾ ಮತ್ತು ಅಮೇರಿಕಾವನ್ನು ಹಿಂದಿಕ್ಕಿದ್ದಾರೆ ಎಂದು ಶಿಸ್ತು ಸಮಿತಿ ಹೇಳಿದೆ.
ಡೋಪಿಂಗ್ ಆರೋಪಿತರಲ್ಲಿ ಎನ್ಬಿಎ (ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಅಸೊಸಿಯೇಷನ್) ತಂಡಕ್ಕೆ ಸೇರ್ಪಡೆಯಾದ ಮೊದಲ ಭಾರತೀಯ ಆಟಗಾರ ಸತ್ನಂ ಸಿಂಗ್ ಭಮ್ರಾ ಅವರ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ. ಕಳೆದ ವರ್ಷ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಭಮ್ರಾ ಅವರು ವಿಫಲರಾದ ಕಾರಣ ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಶಿಸ್ತಿನ ಸಮಿತಿ ಎರಡು ವರ್ಷಗಳ ಕಾಲ ಎನ್ಬಿಎ ಆಟದಿಂದ ನಿಷೇಧಿಸಿತ್ತು.
ಕಳೆದ ವರ್ಷ ತಾತ್ಕಾಲಿಕ ಅಮಾನತು
ಕಳೆದ ವರ್ಷ ನವೆಂಬರ್ನಲ್ಲಿ 25 ವರ್ಷದ ಭಮ್ರಾ ಅವರಿಗೆ ತಾತ್ಕಾಲಿಕ ಅಮಾನತು ವಿಧಿಸಲಾಗಿತ್ತು. ದಕ್ಷಿಣ ಏಷ್ಯಾ ಕ್ರೀಡಾಕೂಟದ ತಯಾರಿ ಶಿಬಿರದಲ್ಲಿ ಅವರು ನಾಡಾ ನಡೆಸುವ ಪರೀಕ್ಷೆಯಿಂದ ಹೊರಗುಳಿದಿದ್ದರು. 2015ರಲ್ಲಿ ಎನ್ಬಿಎ ತಂಡಕ್ಕೆ ಸೇರ್ಪಡೆಗೊಂಡಿದ್ದ ಭಮ್ರಾ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು ಜೊತೆಗೆ ನಾಡಾವನ್ನು, ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ವಿಚಾರಣೆಗೆ ಒಳಪಡಿಸಬೇಕೆಂದು ವಿನಂತಿಸಿದ್ದರು.
ನಾಡಾ ನಡೆಸಿದ ವಿಚಾರಣೆಯಲ್ಲಿ ಹಿಜೆನಮೈನ್ ಬೀಟಾ-2 ಅಗೊನಿಸ್ಟ್ ಸೇವಿಸಿದ ಆರೋಪದಲ್ಲಿ ಬಾಸ್ಕೆಟ್ಬಾಲ್ ಆಟಗಾರ ಸತ್ನಮ್ ಸಿಂಗ್ ಭಮ್ರಾ ತಪ್ಪಿತಸ್ಥರೆಂದು ನಾಡಾ ಗುರುವಾರ ಟ್ವೀಟ್ ಮಾಡಿದೆ. ಹೀಗಾಗಿ ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ.
ಮುಂದಿನ ವರ್ಷ ನಿಷೇಧ ಅಂತ್ಯ..
ಭಮ್ರಾ ಅವರ ಅಮಾನತು 2019ರಿಂದ ಪ್ರಾರಂಭವಾಗಿರುವುದರಿಂದ ಮುಂದಿನ ವರ್ಷ ನವೆಂಬರ್ 19 ರಂದು ಕೊನೆಗೊಳ್ಳಲ್ಲಿದೆ. ವಾಡಾ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿರುವ ಹಿಜೆನಮೈನ್ನನ್ನು ಭಮ್ರಾ ಅವರು ಸೇವಿಸಿರುವುದು ಸಕಾರಾತ್ಮಕವಾಗಿ ಕಂಡುಬಂದಿರುವುದರಿಂದ ಭಮ್ರಾ ಅವರಿಗೆ ನಿಷೇಧ ಹೇರಿದೆ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಐದು ವರ್ಷಗಳ ಹಿಂದೆ ಭಮ್ರಾ ಅವರು ಎನ್ಬಿಎ ಆಟದಲ್ಲಿ ಸೇರ್ಪಡೆಗೊಂಡು ಇತಿಹಾಸ ನಿರ್ಮಿಸಿದರು. ನಂತರ ಅವರು ಟೆಕ್ಸಾಸ್ ಲೆಜೆಂಡ್ಸ್ ಆಫ್ ಡಲ್ಲಾಸ್ ಮೇವರಿಕ್ಸ್ ಜೊತೆ ಎರಡು ವರ್ಷಗಳ ಕಾಲ ಡೆವಲಪ್ಮೆಂಟ್ ಲೀಗ್ನಲ್ಲಿ ಆಡಿದ್ದಾರೆ.