ಸದಾ ನೆಲದೊಳಗೆ ಭಾರಿ ಸದ್ದು, ಗೋಡೆಗಳಲ್ಲಿ ಬಿರುಕು: ಗ್ರಾಮಸ್ಥರು ಕಂಗಾಲು!

  • TV9 Web Team
  • Published On - 16:06 PM, 10 Dec 2019
ಸದಾ ನೆಲದೊಳಗೆ ಭಾರಿ ಸದ್ದು, ಗೋಡೆಗಳಲ್ಲಿ ಬಿರುಕು: ಗ್ರಾಮಸ್ಥರು ಕಂಗಾಲು!

ವಿಜಯಪುರ: ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಹಗಲು ರಾತ್ರಿಯೆನ್ನದೆ ನೆಲದಲ್ಲಿ ಭಾರಿ ಸದ್ದು ಉಂಟಾಗುತ್ತಿದೆ. ಇದ್ದಕ್ಕಿದ್ದಂತೆ ಕೇಳೋ ಈ ಸದ್ದಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಜತೆಗೆ ಮನೆಗಳ ಗೋಡೆಗಳಲ್ಲಿ ಬಿರುಕು ಸಹ ಕಾಣಿಸಿಕೊಳ್ಳುತ್ತಿದೆ. ನೆಲದೊಳಗೆ ಆಗುವ ಕಂಪನದಿಂದ ಹೀಗಾಗಿದೆಯೆಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

4 ವರ್ಷಗಳ ಹಿಂದೆಯೂ ಸದ್ದು ಕೇಳಿಸಿತ್ತು:
4 ವರ್ಷಗಳ ಹಿಂದೆಯೂ ಇದೇ ರೀತಿಯ ಸದ್ದು ಕೇಳಿಸಿತ್ತು. ಆಗ ಭೂಮಿಯ ಒಳಗಿನ ಸದ್ದಿನ ಮೂಲ ಪತ್ತೆ ಹಚ್ಚುವ ಕೆಲಸವಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸದ್ದಿನ ಬಗ್ಗೆ ಸಿಸ್ಮೋ ಮೀಟರ್ ಅಳವಡಿಸಿ ಅಧ್ಯಯನ ನಡೆಸಿದ್ದರು. ಸದ್ದಿಗೆ ಭೂಮಿಯ ಒಳಪದರದಲ್ಲಿ ಆಗುವ ಕಂಪನವೇ ಕಾರಣವೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದರು. ಇದೀಗ ಹಿಂದಿಗಿಂತಲೂ ಹೆಚ್ಚಾಗಿ ಕಂಪನದ ಸದ್ದು ಕೇಳಿಸುತ್ತಿದೆ.

ಗ್ರಾಮದಲ್ಲಿ ಸದ್ದಿನ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮತ್ತೆ ಗ್ರಾಮಕ್ಕೆ ತೆರಳಿ ಸದ್ದಿನ ಬಗ್ಗೆ ಅಧ್ಯಯನ ನಡೆಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೆ, ಭೂಕಂಪದ ಭಯ ಬೇಡ ಎಂದು ಗ್ರಾಮಸ್ಥರಿಗೆ ಡಿಸಿ ಅಭಯ ನೀಡಿದ್ದಾರೆ. ಆದಾಗ್ಯೂ ಹಗಲು ರಾತ್ರಿ ಭಯದಲ್ಲೇ ಗ್ರಾಮದ ಜನ ಕಾಲಕಳೆಯುತ್ತಿದ್ದಾರೆ.