ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್ 19 ವೈರಾಣು ಜನಜೀವನವನ್ನೇ ಬದಲಾಯಿಸಿದೆ. ಮಕ್ಕಳಂತೂ ಶಾಲೆಯ ಮೆಟ್ಟಿಲು ಹತ್ತದೆ ಎಂಟು ತಿಂಗಳುಗಳೇ ಕಳೆದಿವೆ. ಮಕ್ಕಳು ಹೊರಹೋದರೆ ಎಲ್ಲಿ ಕೊರೊನಾ ತಗುಲುತ್ತದೋ ಎಂಬ ಆತಂಕದಲ್ಲಿ ಪೋಷಕರು ದಿನದೂಡುತ್ತಿದ್ದಾರೆ.
ಆರಂಭದಲ್ಲಿ ಕೆಲ ರಾಷ್ಟ್ರಗಳು ಸಾಮುದಾಯಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾದರಿಯ ಬಗ್ಗೆ ಯೋಚಿಸಿದ್ದವಾದರೂ ಆ ನಿರ್ಧಾರ ಅವರಿಗೆ ತಿರುಗುಬಾಣವಾಗಿ ಸಾವಿನ ಪ್ರಮಾಣ ಏರಿಕೆಯಾಗಲು ಕಾರಣವಾಗಿತ್ತು. ನಂತರದ ದಿನಗಳಲ್ಲಿ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ಧದ ಲಸಿಕೆಗೆ ತುದಿಗಾಲಲ್ಲಿ ಕಾಯುತ್ತಿವೆ.
ಆದರೀಗ ಲಂಡನ್ನ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯೊಂದರಲ್ಲಿ ಕೊರೊನಾ ಸೋಂಕಿಗೆ ಇದುವರೆಗೂ ತುತ್ತಾಗದ ಒಂದಿಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಪತ್ತೆಯಾಗಿಬಿಟ್ಟಿದೆ. ಅಂತಹ ವ್ಯಕ್ತಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಪತ್ತೆಯಾಗಿದೆ.
ಅದರಲ್ಲೂ 6 ರಿಂದ 16 ವರ್ಷದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಪರೀಕ್ಷೆಗೆ ಒಳಪಡಿಸಿರುವ ಮಂದಿಯಲ್ಲಿ ಯಾರಾದರೂ ಕೋವಿಡ್ 19 ವೈರಾಣುವಿಗೂ ಮುನ್ನ ಅದೇ ಮಾದರಿಯ ಬೇರಾವುದೇ ಜ್ವರಕ್ಕೆ ತುತ್ತಾಗಿದ್ದರಾ ಎಂಬುದು ತಿಳಿದುಬಂದಿಲ್ಲವಾದರೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಆಗಿರುವುದು ಹೊಸ ಭರವಸೆಯನ್ನು ಮೂಡಿಸಿದೆ.
ಒಂದುವೇಳೆ ವಿಶ್ವದ ಎಲ್ಲೆಡೆಯೂ ಜನರಲ್ಲಿ ಹೀಗೆ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾದರೆ ಕೊರೊನಾ ವೈರಸ್ ಲಸಿಕೆ ಸಿಗುವ ಮುನ್ನವೇ ಮಾಯವಾಗಬಹುದೇನೋ. ಆದರೆ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಮಾಸ್ಕ್, ಸ್ಯಾನಿಟೈಸರ್ ಬದಿಗೊತ್ತಿ ಉಡಾಫೆಯಿಂದ ವರ್ತಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ನಾವು ನೀವು ಮರೆಯಬಾರದಷ್ಟೇ.