ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆಯನ್ನು ತಯಾರಿಸುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ, ಮೂರು ಕಂಪನಿಗಳು ಇದರ ಸಂಶೋಧನೆಯಲ್ಲಿ ತೊಡಗಿದ್ದು, ಸದರಿ ಕಂಪನಿಗಳಿಗೆ ಭಾರಿ ಭದ್ರತೆಯನ್ನು ಒದಗಿಸಲಾಗಿದೆ.
ಭಾರತದಲ್ಲಿ ಲಸಿಕೆ ಕಂಡುಹಿಡಿಯದಂತೆ ತಡೆಯಲು ಅನೇಕ ವಿದೇಶೀ ರಾಷ್ಟ್ರಗಳು ಷಡ್ಯಂತ್ರ ನಡೆಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಯಾರಿಕಾ ಘಟಕಗಳಿಗೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಯಾವುದೇ ರೀತಿಯ ಷಡ್ಯಂತ್ರ ಅಥವಾ ಭಯೋತ್ಪಾದಕರು ದಾಳಿ ನಡೆಸಲು ಆಸ್ಪದ ನೀಡದಂತೆ ಕಟ್ಟೆಚ್ಚರವಹಿಸಲಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಜಾರಿಗೊಳಿಸಲಾಗಿದೆ.
ಈಗಾಗಲೇ ವರದಿಯಾಗಿರುವಂತೆ, ಭಾರತದಲ್ಲಿ; ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್, ಅಹಮದಾಬಾದ್ನ ಜೈಡಸ್ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಹಾಗೂ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗಳು ಕೊರೊನಾ ವೈರಸ್ ವಿರುದ್ಧ ಲಸಿಕೆ ತಯಾರಿಸುವ ಕಾರ್ಯದಲ್ಲಿ ಮಗ್ನವಾಗಿವೆ.