ಮುಂಬೈ: ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಮಂಗಳವಾರವೂ ಏರುಮುಖವಾಗಿಯೇ ಇದ್ದವು. ಮುಂಬೈಪೇಟೆಯ ಸೆನ್ಸೆಕ್ಸ್ 150 ಅಂಶಗಳಷ್ಟು ಏರಿಕೆ ಕಂಡು 48,330 ತಲುಪಿದ್ದು, ದೇಶದ ಬೃಹತ್ ಸಂಸ್ಥೆಗಳ ಬಗ್ಗೆ ಹೂಡಿಕೆದಾರರ ಮನಃಸ್ಥಿತಿ ಬಿಂಬಿಸುವ ರಾಷ್ಟ್ರೀಯ ಷೇರು ಸಂವೇದಿಕೆ ಸೂಚ್ಯಂಕ ‘ನಿಫ್ಟಿ 50’ ಇದೇ ಮೊದಲ ಬಾರಿ 14,200 ಅಂಶ ಮುಟ್ಟಿ ಹೊಸ ದಾಖಲೆ ಬರೆದಿದೆ.
ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟು ಚುರುಕಾಗಿತ್ತು. ಮಧ್ಯಾಹ್ನ 12.54 ಕ್ಕೆ ಸೆನ್ಸೆಕ್ಸ್ 90 ಅಂಶ ಏರಿಕೆ ಕಂಡು 48,267 ಕ್ಕೆ ತಲುಪಿದರೆ, ನಿಫ್ಟಿ 16 ಅಂಶ ಏರಿಕೆಯಾಗಿ 14,148ಕ್ಕೆ ತಲುಪಿತ್ತು.
ಆಕ್ಸಿಸ್ ಬ್ಯಾಂಕ್ ಷೇರು ಮೌಲ್ಯ ಒಂದೇ ದಿನದಲ್ಲಿ ಶೇ 4ರಷ್ಟು (666.25) ಏರಿಕೆ ದಾಖಲಿಸಿದೆ. ಎಚ್ಡಿಎಫ್ಸಿ (2,558) ಮತ್ತು ಟಿಸಿಎಸ್ (927.35) ಷೇರುಗಳ ಮೌಲ್ಯ ಶೇ 2ರಷ್ಟು ಏರಿದೆ. ಮತ್ತೊಂದೆಡೆ, ಬಜಾಜ್ ಫೈನಾನ್ಸ್ನ ಷೇರುಮೌಲ್ಯವು ಡಿಸೆಂಬರ್ ತ್ರೈಮಾಸಿಕ ಫಲಿತಾಂಶ ಘೋಷಣೆಯ ನಂತರ ಶೇ 2ಕ್ಕಿಂತಲೂ ಹೆಚ್ಚು ಕುಸಿದಿದೆ.
ಷೇರು ಮಾರುಕಟ್ಟೆಯಲ್ಲಿ 11 ವಲಯಗಳ ಪೈಕಿ 6ರಲ್ಲಿ ನಿಫ್ಟಿ ಐಟಿ ಸೂಚ್ಯಂಕ ಶೇ 1 ಕ್ಕಿಂತ ಹೆಚ್ಚಿನ ಲಾಭವನ್ನು ಗಳಿಸಿವೆ. ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್, ಬ್ಯಾಂಕ್, ಫಾರ್ಮಾ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ಸಹ ಮುನ್ನಡೆ ದಾಖಲಿಸಿವೆ. ಖನಿಜ, ವಾಹನೋದ್ಯಮ ಮತ್ತು ಸರ್ಕಾರಿ ಬ್ಯಾಂಕ್ಗಳ ಷೇರುಗಳ ವಹಿವಾಟು ಕಳೆಗಟ್ಟಲಿಲ್ಲ.