ನಿನ್ನೆಯಷ್ಟೇ ವಿಶ್ವ ನಿದ್ರಾ ದಿನ ಆಚರಿಸಿದ್ದೇವೆ. ನಿದ್ರೆಯೊಂದು ಸರಿಯಾಗಿ ಆದರೆ ಎಲ್ಲವೂ ಸರಿಯಿರುತ್ತೆ ಮಾರಾಯ ಎಂದು ಹೇಳಿಕೊಳ್ಳುವುದನ್ನು ನಾವು ನೀವು ಕೇಳಿಯೇ ಇರುತ್ತೇವೆ. ಸರಿಯಾಗಿ ನಿದ್ರಿಸದೇ ಆರೋಗ್ಯ ಕೆಡಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ. 2021ರ ವಿಶ್ವ ಆರೋಗ್ಯ ದಿನವನ್ನು ನಿಯಮಿತ ನಿದ್ರೆ, ಆರೋಗ್ಯಯುತ ಭವಿಷ್ಯ ಎಂಬ ಘೋಷವಾಕ್ಯದಡಿ ಆಚರಿಸಲಾಗಿದೆ. ಚೆನ್ನಾಗಿ ನಿದ್ರೆ ಮಾಡದೇ ಇದ್ದರೆ ಇಂದಿನಿಂದಲೇ ರೂಢಿಯನ್ನು ಬದಲಿಸುವುದು ಒಳಿತು.
ನಿಯಮಿತ ನಿದ್ರೆ ಮಾಡದೇ ಇದ್ದವರು ನಿದ್ರೆಯ ಕೊರತೆಯಿಂದ ಆಫೀಸಿನಲ್ಲಿ ಕೆಲಸ ಮಾಡಲು ಕಷ್ಟಪಡುತ್ತಾರೆ ಎನ್ನುತ್ತದೆ ವರದಿ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಆ್ಯಂಕ್ಸಿಟಿ ಸಮಸ್ಯೆಯಿಂದ ಬಳಲುತ್ತಾರೆ. ಮತ್ತು ಅಂತಹ ವ್ಯಕ್ತಿಗಳಿಗೆ ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯ ಕಾಡುತ್ತದಂತೆ.
ಸಾಮಾನ್ಯವಾಗಿ ನಿದ್ರೆ ಮಾಡುವುದರ ಕುರಿತು ನಮ್ಮಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಇದೇ ನಿದ್ರಾಹೀನತೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬ ಮನುಷ್ಯನನ್ನೂ ನಿದ್ರಾಹೀನತೆ ಭಾದಿಸಿಯೇ ಭಾದಿಸುತ್ತದೆ ಎಂದು ಹಲವು ತಜ್ಞ ವರದಿಗಳು ವಿವರಿಸುತ್ತವೆ. ಆದರೆ ಈ ನಿದ್ರಾಹೀನತೆಯನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಈ ವರದಿಗಳು ಸಮಸ್ಯೆಗೆ ಪರಿಹಾರವನ್ನೂ ಸೂಚಿಸುತ್ತವೆ.
ನಿದ್ರಾ ಹೀನತೆ ಪರಿಹಾರಕ್ಕೆ ಒಮ್ಮೆಗೆ ಏಕಾಕಿ ಇಡೀ ದಿನ ನಿದ್ರೆ ಮಾಡುವುದು ಸರಿಯಾದ ಪರಿಹಾರವಲ್ಲ. ನಿಯಮಿತ ನಿದ್ರೆ, ಪ್ರತಿದಿನವೂ ಒಂದೇ ಸಮಯಕ್ಕೆ ನಿದ್ರೆಹೋಗುವುದು ಮತ್ತು ಒಂದೇ ಸಮಯಕ್ಕೆ ನಿದ್ರೆಯಿಂದ ಏಳುವುದು ತುಂಬಾ ಮುಖ್ಯ. ಬರೋಬ್ಬರಿ 8 ತಾಸು ನಿದ್ರೆಯಂತೂ ಎಲ್ಲರಿಗೂ ಅಗತ್ಯ. ನಿದ್ರೆಯ ಈ ಸಮಯ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್ಚು ಕಡಿಮೆ ಆಗುತ್ತ ಸಾಗಿದರೂ ನಿದ್ರೆಯ ಅಧಿಯನ್ನು 6 ಗಂಟೆಗಳಿಗಿಂತ ಕಡಿಮೆಗೆ ಇಳಿಸಬಾರದು ಎಂದು ತಜ್ಞರು ಹೇಳುತ್ತಾರೆ.
ಸುಂದರ ನಿದ್ರೆ ಎನ್ನುವ ಶಬ್ದವನ್ನು ನೀವು ಕೇಳಿರಬಹುದು. ಹೌದು, ನಿದ್ರೆಯು ಸರಿಯಾಗಿದ್ದರೆ ಸೌಂದರ್ಯವು ಚೆನ್ನಾಗಿರುತ್ತೆ. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಿದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಅದ್ಭುತವನ್ನು ಉಂಟು ಮಾಡುತ್ತದೆ. ಅದೇ ನಿದ್ರಾಹೀನತೆ ಇದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಚರ್ಮದ ಸಮಸ್ಯೆಗೂ ಕಾರಣ ನಿದ್ರಾಹೀನತೆ
ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸಲು ಸರಿಯಾದ ನಿದ್ರೆ ಅತೀ ಅಗತ್ಯ.ರಾತ್ರಿ ವೇಳೆ ನಿದ್ರೆಯು ಸರಿಯಾದರೆ ಆಗ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಆದರೆ ನಿದ್ರೆಯ ತೊಂದರೆ ಕಾಣಿಸಿಕೊಂಡರೆ ಆಗ ಚರ್ಮ ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರಬಹುದು.
ನಿದ್ರೆ ಕಡಿಮೆಯಾದರೆ ದೇಹದಲ್ಲಿ ಕಾರ್ಟಿಸಲ್ ಪ್ರಮಾಣವು ಹೆಚ್ಚಾಗುವುದು. ಇದು ಚರ್ಮದಲ್ಲಿ ಉರಿಯೂತ ಉಂಟು ಮಾಡುವ ಹಾರ್ಮೋನ್ ಆಗಿದೆ ಮತ್ತು ಚರ್ಮವನ್ನು ಇದು ನಿಸ್ತೇಜಗೊಳಿಸುವುದು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ಕಾಂತಿ ಕಳೆದುಕೊಳ್ಳುವಿರಿ ಮತ್ತು ಚರ್ಮವು ಒಣ ಹಾಗೂ ನಿಸ್ತೇಜವಾಗುವುದು.
ನಿದ್ರಾಹೀನತೆಯ ಮತ್ತೊಂದು ಪ್ರಮುಖ ಪರಿಣಾಮವೆಂದರೆ ಮೊಡವೆ, ಬೊಕ್ಕೆ ಇತ್ಯಾದಿಗಳು ಮೂಡುವುದು. ನಿದ್ರಾ ಹೀನತೆಯಿಂದಾಗಿ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗುವುದು ಮತ್ತು ಚರ್ಮದ ಮೇಲೆ ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳು ದಾಳಿ ಮಾಡುವುದು. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಉರಿಯೂತ ಉಂಟಾಗುವುದು ಮತ್ತು ಇದರಿಂದ ಮೊಡವೆಯಂತಹ ಸಮಸ್ಯೆ ಕಂಡುಬರುವುದು.
ನಿದ್ರಾಹೀನತೆಯಿಂದಾಗಿ ಮೊಡವೆಗಳು ಮೂಡುವುದು ಮಾತ್ರವಲ್ಲದೆ, ನಿಮಗೆ ಯಾವುದೇ ಚರ್ಮದ ಸಮಸ್ಯೆಯಿದ್ದರೆ ಅದನ್ನು ಮತ್ತಷ್ಟು ಹೆಚ್ಚಿಸುವುದು. ಮೊಡವೆ ಅಥವಾ ಇನ್ಯಾವುದೇ ಸಮಸ್ಯೆ ಕಾಣಿಸುತ್ತಿದ್ದರೆ ಆಗ ನಿದ್ರಾ ಹೀನತೆಯಿಂದ ಅದು ಮತ್ತಷ್ಟು ಕೆಡುವುದು. ರಾತ್ರಿ ವೇಳೆ ನಿದ್ರೆ ಸರಿಯಾಗಿದ್ದರೆ ಆಗ ಚರ್ಮವು ವೇಗವಾಗಿ ಚೇತರಿಸುವುದು.
ಚರ್ಮವನ್ನು ಪುನರ್ಶ್ಚೇತನಗೊಳಿಸಲು ಮತ್ತು ಆರೋಗ್ಯವಾಗಿಡಲು ಸರಿಯಾದ ನಿದ್ರೆಯು ಅತೀ ಅಗತ್ಯವಾಗಿದೆ. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಕಾಲಜನ್ ಉತ್ಪತ್ತಿಯು ಕಡಿಮೆ ಮಾಡುವುದು ಮತ್ತು ಇದರಿಂದಾಗಿ ಚರ್ಮದಲ್ಲಿ ಗೆರೆ ಹಾಗೂ ನೆರಿಗೆಗಳು ಮೂಡುವುದು. ನಿದ್ರಾಹೀನತೆಯಿಂದಾಗಿ ಚರ್ಮವು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು ಮತ್ತು ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಬಹುದು.
ಹೀಗೆ ನಿದ್ರಾ ಹೀನತೆಯು ಉಂಟುಮಾಡುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೆಕು ಎಂದರೆ ಸರಿಯಾಗಿ ನಿದ್ರಿಸಬೇಕು. ನಿದ್ರಾಹೀನತೆ ಇತರ ಖಾಯಿಲೆಗಳನ್ನು ತಂದೊಡ್ಡುವ ಮುನ್ನವೇ ಒಳ್ಳೆಯ ನಿದ್ರೆ ಮಾಡಿಕೊಂಡು ಎದ್ದೇಳೋಣ!
ಇದನ್ನೂ ಓದಿ: ಹೊಟ್ಟೆ ಕೆಟ್ಟರೆ ಎಷ್ಟು ಕಷ್ಟ! ಕರುಳಿನ ಆರೋಗ್ಯ ಚೆನ್ನಾಗಿರಲು ಈ ನಿಯಮಗಳನ್ನು ಪಾಲಿಸಿ..