ಸರ್ಕಾರದ್ದೇ ಕುಮ್ಮಕ್ಕು! ಲಸಿಕೆಯ ರಹಸ್ಯ ಕದಿಯಲು ಚೀನಾ, ರಷ್ಯಾ ಹ್ಯಾಕರ್​ಗಳ ಯತ್ನ

  • TV9 Web Team
  • Published On - 12:37 PM, 23 Nov 2020
ಸರ್ಕಾರದ್ದೇ ಕುಮ್ಮಕ್ಕು! ಲಸಿಕೆಯ ರಹಸ್ಯ ಕದಿಯಲು ಚೀನಾ, ರಷ್ಯಾ ಹ್ಯಾಕರ್​ಗಳ ಯತ್ನ

ಇಂಗ್ಲೆಂಡ್: ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹ್ಯಾಕರ್​ಗಳು, ಕೊವಿಡ್ 19 ಲಸಿಕೆಯ ರಹಸ್ಯ ಮಾಹಿತಿಗಳನ್ನು ಕದಿಯಲು ಪ್ರಯತ್ನ ಪಡುತ್ತಿದ್ದಾರೆ.

ವಿವಿಧ ಹಂತಗಳಲ್ಲಿರುವ ಕೊರೊನಾ ಲಸಿಕೆಯ ಪ್ರಯೋಗಗಳ ಫಲಿತಾಂಶ, ಲಸಿಕೆಗಳ ಬೃಹತ್​ ಪ್ರಮಾಣದ ಉತ್ಪಾದನೆಯ ಮಾಹಿತಿ ತಿಳಿಯುವ ಹುನ್ನಾರವನ್ನು ಕೆಲ ಹ್ಯಾಕರ್​ಗಳು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್​ನ ಸೈಬರ್​ ಸುರಕ್ಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ‘ಬೌದ್ಧಿಕ ಆಸ್ತಿ ಯುದ್ಧ’ ಎಂದು ಕರೆದಿರುವ ಅವರು, ಲಸಿಕೆಯು ಸರ್ಕಾರಗಳ ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು, ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಂದರ್ಭದಲ್ಲಿ ಹ್ಯಾಕಿಂಗ್​ ಮೂಲಕ ಮಾಹಿತಿ ಕದಿಯುವ ಕೃತ್ಯಕ್ಕೆ ಹೊಸ ವೇಗ ದೊರೆತಿದೆ ಎಂದು ಹೇಳಿದ್ದಾರೆ.

ಲಸಿಕೆ ರೂಪುಗೊಳ್ಳಲು ಬಳಕೆಯಾಗುತ್ತಿರುವ ರಹಸ್ಯ ತಂತ್ರಗಳನ್ನು ಅರಿಯುವುದು ಈ ಹಿಂದೆ ಹ್ಯಾಕರ್​ಗಳ ಮುಖ್ಯ ಉದ್ದೇಶವಾಗಿತ್ತು. ಲಸಿಕೆಗಾಗಿ ಹಲವು ಔಷಧ ಕಂಪೆನಿಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಆರೋಗ್ಯ ಕೇಂದ್ರಗಳು ಒಗ್ಗೂಡಿ ಕೆಲಸ ಮಾಡುತ್ತಿವೆ. ಹ್ಯಾಕರ್​ಗಳು ಇಂಥ ಸಂಸ್ಥೆಗಳನ್ನೂ ಒಂದೇ ಏಟಿಗೆ ಗುರಿ ಮಾಡಿಕೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಕ್ರೌಡ್​ಸ್ಟ್ರೈಕ್, IT ಭದ್ರತಾ ತಜ್ಞರ ತಂಡದ ಹಿರಿಯ ಉಪಾಧ್ಯಕ್ಷ ಆಡಮ್ ಮೇಯುರ್ಸ್, ಪಾಶ್ಚಾತ್ಯ ರಾಷ್ಟ್ರಗಳಿಂದ ಮಾಹಿತಿ ಕದಿಯುವ ಕೆಲಸದಲ್ಲಿ ರಷ್ಯಾ ಮತ್ತು ಚೀನಾದಂಥ ದೇಶಗಳು ಕಳೆದ 20 ವರ್ಷಗಳಿಂದಲೂ ತೊಡಗಿಸಿಕೊಂಡಿವೆ. ಆದರೆ ಕಳೆದ ಮಾರ್ಚ್​ನಿಂದ ಕೊವಿಡ್-19ರ ಬಗ್ಗೆ ಅವುಗಳು ಗಮನ ಕೇಂದ್ರೀಕರಿಸಿವೆ ಎಂದು ಹೇಳಿದ್ದಾರೆ.

ಬಹುಕಾಲದಿಂದ ನಡೆಯುತ್ತಿರುವ ಬೌದ್ಧಿಕ ಹಕ್ಕು ಸ್ವಾಮ್ಯ ಯುದ್ಧದ ಹೊಸ ಅಧ್ಯಾಯವೊಂದನ್ನು ಈಗ ನಾವು ಗಮನಿಸುತ್ತಿದ್ದೇವೆ. ಕೊವಿಡ್-19 ಲಸಿಕೆಯ ಯಶಸ್ವಿ ತಯಾರಿಯನ್ನು ಯಾವ ದೇಶ ಮೊದಲು ನಡೆಸುತ್ತದೆ ಎಂಬುದು ರಾಷ್ಟ್ರೀಯ ಘನತೆಯ ವಿಚಾರವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ, ಲಸಿಕೆ ರಹಸ್ಯಗಳನ್ನು ಹ್ಯಾಕಿಂಗ್ ನಡೆಸುತ್ತಿರುವ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದು ಹೇಳಿದೆ. ಕೊವಿಡ್ ಲಸಿಕೆ ಸಂಶೋಧನೆಯಲ್ಲಿ ನಾವು ಮುಂದಿದ್ದೇವೆ. ಬೇರೆಯವರಿಂದ ಮಾಹಿತಿ ಕದಿಯುವ ಅಗತ್ಯವೇ ಇಲ್ಲ ಎಂದು ಚೀನಾ ಹೇಳಿಕೆ ಕೊಟ್ಟಿದೆ. ಸೈಬರ್ ಯುದ್ಧದಲ್ಲಿ ನಾವಿಲ್ಲ ಎಂದು ಇರಾನ್ ಹೇಳಿಕೊಂಡಿದೆ.