ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದರೂ, ಅಚ್ಚ ಕನ್ನಡದಲ್ಲೇ ಮಾತನಾಡುತ್ತಾರೆ!

ತೆಲಂಗಾಣ ರಾಜ್ಯದಲ್ಲಿ ಮೆದಕ್ ಹಾಗೂ ಸಂಗಾರೆಡ್ಡಿ ತಾಲೂಕಿನ ಐದಕ್ಕೂ ಹೆಚ್ಚು ಗ್ರಾಮಗಳು ಕರ್ನಾಟಕ ಹಾಗೂ ಕನ್ನಡ ಭಾಷೆಯ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ.

  • TV9 Web Team
  • Published On - 16:49 PM, 12 Jan 2021
ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದರೂ, ಅಚ್ಚ ಕನ್ನಡದಲ್ಲೇ ಮಾತನಾಡುತ್ತಾರೆ!
ತೆಲಂಗಾಣ ಜನರ ಅಚ್ಚಳಿಯದ ಕನ್ನಡ ಭಾಷೆ

ಬೀದರ್​: ತೆಲಂಗಾಣ ರಾಜ್ಯದಲ್ಲಿದ್ದರೂ ಇವರು ಮಾತನಾಡುವ ಭಾಷೆ ಮಾತ್ರ ಅಚ್ಚಕನ್ನಡ. ಕನ್ನಡ ಭಾಷೆ ಬಿಟ್ಟರೆ ಇವರಿಗೆ ಬೇರೆ ಭಾಷೆ ಮಾತನಾಡುವ ಮನಸ್ಸಿಲ್ಲ. ಮಕ್ಕಳಿಗೂ ಕನ್ನಡ ಶಾಲೆಗೆ ಕಳುಹಿಸಿಕೊಡುವುದರ ಮೂಲಕ ಭಾಷಾಭಿಮಾನ ಮೆರೆಯುತ್ತಿದ್ದಾರೆ. ಕನ್ನಡ ಕಲಿಯಲು ದಿನವೂ ಕಿಲೋ ಮೀಟರ್​ಗಟ್ಟಲೆ ನಡೆದುಕೊಂಡು ಬಂದು ಕನ್ನಡ ಕಲಿಯುತ್ತಿದ್ದಾರೆ. ಯಾರಿರಬಹುದು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ತೆಲಂಗಾಣ ರಾಜ್ಯದಲ್ಲಿ ಮೇಡಕ್ ಹಾಗೂ ಸಂಗಾರೆಡ್ಡಿ ತಾಲೂಕಿನ ಐದಕ್ಕೂ ಹೆಚ್ಚು ಗ್ರಾಮಗಳು ಕರ್ನಾಟಕ ಹಾಗೂ ಕನ್ನಡ ಭಾಷೆಯ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ತೆಲಂಗಾಣ ಅಂದರೆ ತೆಲುಗು ಭಾಷೆಯ ನೆಲ. ಆದರೂ ಕೂಡ, ಪ್ರತಿಯೊಂದು ಮನೆಯಲ್ಲಿಯೂ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದು, ವ್ಯಾಪಾರದ ದೃಷ್ಟಿಯಿಂದ ತೆಲುಗು ಭಾಷೆಯನ್ನು ಕಲಿತಿದ್ದಾರೆ.

ಸರ್ಕಾರದಿಂದ ಸಹಾಯ ಬೇಕು:

ಇನ್ನು ಈ ಊರಲ್ಲಿರುವ ಮಕ್ಕಳು ಕನ್ನಡದಲ್ಲಿಯೇ ಶಾಲೆ ಕಲಿಯುತ್ತಿದ್ದಾರೆ. ಇಲ್ಲಿನ ಗ್ರಾಮದಲ್ಲಿ ಪ್ರತಿಯೊಂದು ಊರಿನಲ್ಲಿಯೂ ಕನ್ನಡ ಮಾಧ್ಯಮದ ಶಾಲೆಯನ್ನು ತರೆಯಲಾಗಿದೆ. 1 ರಿಂದ 5 ನೇ ತರಗತಿಯವರೆಗೆ ಮಾತ್ರ ಇಲ್ಲಿ ಶಾಲೆ ಕಲಿಸಲಾಗುತ್ತದೆ. ನಂತರ ಇವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕವನ್ನೇ ಅವಲಂಬಿಸಿದ್ದಾರೆ.

ಈ ಗ್ರಾಮದಲ್ಲಿ ತೆಲುಗೂ ಮಾಧ್ಯಮದ ಶಾಲೆಗಳಿದ್ದರೂ ಇಲ್ಲಿನ ಮಕ್ಕಳು ತೆಲುಗು ಮಾಧ್ಯಮದಲ್ಲಿ ಶಿಕ್ಷಣ ಕಲಿಯುವುದಕ್ಕೆ ಮುಂದಾಗದೇ ಇರುವುದರಿಂದ ಇದ್ದ ತೆಲುಗೂ ಮಾಧ್ಯಮದ ಶಾಲೆಯನ್ನು ಬಂದ್​ ಮಾಡಿ ಕನ್ನಡ ಶಾಲೆಗೆ ಹೆಚ್ಚು ಒತ್ತುಕೊಡುತ್ತಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದರೇ ಪ್ರತಿ ನಿತ್ಯ ಮೂರು ಕಿಲೋ ಮೀಟರ್​ಗಟ್ಟಲೇ ಹೋಗಿ ಕನ್ನಡ ಶಾಲೆ ಕಲಿಯುವಂತಹ ಸ್ಥಿತಿ ಇಲ್ಲಿನ ಮಕ್ಕಳಿಗಿದೆ. ಆದರೇ ಇವರಿಗೆ ಒಂದು ಬಸ್ ಬಿಡುವ ವ್ಯವಸ್ಥೆಯನ್ನು ಬೀದರ್ ಜಿಲ್ಲಾಡಳಿತ ಮಾಡುತ್ತಿಲ್ಲ ಎಂಬುದು ವಿಷಾದನೀಯ.

ಜಿಲ್ಲಾಡಳಿತ ಕೈಜೋಡಿಸಬೇಕು:

ಇದರ ಜೊತೆಗೆ ಗ್ರಾಮದ ಜನರು ಬೀದರ್ ಮಾರುಕಟ್ಟೆಗೆ ಬರಬೇಕೆಂದರೆ 3 ಕಿ.ಮೀ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ ಹತ್ತಿ ಬೀದರ್​ಗೆ ಬರುವಂತಹ ಸ್ಥಿತಿ ಇಲ್ಲಿನವರದು. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಇಲ್ಲಿನ ಶಾಸಕರಾಗಲೀ ಅಥವಾ ಸಂಸದರಾಗಲೀ ಇಲ್ಲಿನ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ.

ಮೂಲಭೂತ ಸೌಲಭ್ಯದ ಕೊರತೆ:

ಇನ್ನು, ಈ ಗ್ರಾಮದಲ್ಲಿ ಕರೆಂಟ್ ಕಂಬಗಳು ಯಾವಾಗ ಬೀಳುತ್ತವೆಯೋ ಗೊತ್ತಿಲ್ಲ. ವಾಹನಗಳ ವ್ಯವಸ್ಥೆ ಇಲ್ಲ. ಜನರು ಭಯಭೀತರಾಗಿ ತಿರುಗಾಡುವ ಪರಿಸ್ಥತಿ ನಿರ್ಮಾಣವಾಗಿದೆ. ಇದರಿಂದ ಬೇಸತ್ತ ಜನರು ಓಟು ಕೇಳುವಾಗ ಎಲ್ಲ ಸೌಲಭ್ಯವನ್ನ ಮಾಡಿಕೊಡುತ್ತೇವೆ. ಅಂತಾ ಹೇಳೋ ರಾಜಕಾರಣಿಗಳು ನಂತರ ಮಾಯವಾಗಿ ಬಿಡುತ್ತಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರದವರಿಗೂ ಕೂಡಾ ಇಲ್ಲಿನವರ ನೋವು ಮಾತ್ರ ಕಾಣುವುದಿಲ್ಲ ಎಂದು ಆರೋಪಿಸಿದ್ದಾರೆ.

45 ಕನ್ನಡ ಮನಸ್ಸುಗಳು ಪರಿಚಯಿಸಿದ್ದು 90 ಅತ್ಯುತ್ತಮ ಪುಸ್ತಕಗಳು; ನೀವೂ ಓದಿ, ಓದಿಸಿ