ಮೈಸೂರು: ಕೊರೊನಾ ಕಾಟ ಆಯ್ತು. ಇದೀಗ ಅರಮನೆ ನಗರಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೌದು, ನಗರದ ಹೃದಯ ಭಾಗದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದೆ.
ನಗರದ ಅರಸು ರಸ್ತೆಯಲ್ಲಿರುವ ಕೆಲವು ಮಳಿಗೆಗಳಲ್ಲಿ ಸರಣಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಅರಸು ರಸ್ತೆಯಲ್ಲಿರುವ ಮಳಿಗೆಗಳ ಬಾಗಿಲು ಮುರಿದ ಕಳ್ಳತನಕ್ಕೆ ಮುಂದಾದ ಖದೀಮರು ಪೆಪೆ ಜೀನ್ಸ್, ಲೀವೈಸ್, US ಪೋಲೋ, ಜಮಾಲಿ ಹಾರ್ಡ್ವೇರ್ಸ್ ಸೇರಿ 5 ಅಂಗಡಿಗಳಲ್ಲಿ ದರೋಡೆ ಮಾಡಿದ್ದಾರೆ.
ಇವಱರೋ ಶೋಕಿ ಕಳ್ಳರೇ ಇರಬೇಕು. ಯಾಕಂದ್ರೆ ಅಂಗಡಿಗಳನ್ನ ಟಾರ್ಗೆಟ್ ಮಾಡಿರೋ ಗ್ಯಾಂಗ್ ಕೇವಲ ಹಣ ಮಾತ್ರ ಅಲ್ಲ ಬ್ರಾಂಡೆಡ್ ಬಟ್ಟೆ ಮತ್ತು ಶೂಗಳನ್ನು ದೋಚಿದ್ದಾರಂತೆ. ಇದಲ್ಲದೆ, ಅಂಗಡಿಯಲ್ಲಿದ್ದ ಸಿಸಿಟಿವಿಯ DVRನ ಚಾಲಾಕಿ ಕಳ್ಳರು ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ದೇವರಾಜ ಠಾಣೆಯ ಇನ್ಸ್ಪೆಕ್ಟರ್ ಮತ್ತು ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ತಪಾಸಣೆ ನಡೆಸಿದ್ದಾರೆ. ಕಳ್ಳತನವಾಗಿರುವ ಸ್ವತ್ತುಗಳ ಮೌಲ್ಯ ತಿಳಿದು ಬರಬೇಕಿದೆ.
ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೃದಯಭಾಗದಲ್ಲಿರುವ ಮಳಿಗೆಗಳಲ್ಲಿಯೇ ಕಳ್ಳತನ ನಡೆಯುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಸದಾ ವಾಹನಗಳು ಓಡಾಡುವ ಸ್ಥಳಗಳಲ್ಲಿಯೇ ಈ ರೀತಿ ಆದರೆ ಇನ್ನು ಜನಸಂಚಾರವಿಲ್ಲದ ಪ್ರದೇಶಗಳ ಕಥೆ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.