TV9 Facebook Live | ಕೊರೊನಾ ಲಸಿಕೆಯ ಊಹಾಪೋಹಗಳ ಬಗ್ಗೆ ವೈದ್ಯರ ವಿವರಣೆ

ಲಸಿಕೆಯ ಮೂರನೇ ಹಂತದ ಪ್ರಯೋಗದ‌ ಫಲಿತಾಂಶ ಪ್ರಕಟವಾಗಿಲ್ಲ. ಆಗಲೇ ಲಸಿಕೆಯ ಬಳಕೆಗೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ಲಸಿಕೆಯಿಂದ ನಪುಂಸಕತ್ವ ಉಂಟಾಗುತ್ತದೆ ಎಂಬ ಬಗ್ಗೆಯೂ ಊಹಾಪೋಹಗಳು ಹರಿದಾಡಿವೆ. ಈ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಟಿವಿ9 ಕನ್ನಡ ಡಿಜಿಟಲ್ ಪ್ರಯತ್ನವಿದು.

TV9 Facebook Live | ಕೊರೊನಾ ಲಸಿಕೆಯ ಊಹಾಪೋಹಗಳ ಬಗ್ಗೆ ವೈದ್ಯರ ವಿವರಣೆ
ಡಾ. ಪವನ್, ಮಾಲ್ತೇಶ್ ಜಾನಗಲ್ ಹಾಗೂ ಡಾ. ಸುನಿಲ್
TV9kannada Web Team

| Edited By: ganapathi bhat

Apr 06, 2022 | 11:01 PM


ಬೆಂಗಳೂರು: ದೇಶದಲ್ಲಿ ನಿನ್ನೆಯಷ್ಟೇ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (DCGI) ಅನುಮತಿ ನೀಡಿದ್ದಾರೆ. ಕೊರೊನಾ ವಿರುದ್ಧದ ಲಸಿಕೆಗಳಿಗೆ ಅನುಮತಿ ನೀಡಿರುವ ಬಗ್ಗೆ ವಾದ ವಿವಾದಗಳೂ ಆರಂಭವಾಗಿವೆ. ರಾಜಕಾರಣಿಗಳು ಅಪಸ್ವರ ಎತ್ತಿದ್ದಾರೆ.

ಲಸಿಕೆಯ ಮೂರನೇ ಹಂತದ ಪ್ರಯೋಗದ‌ ಫಲಿತಾಂಶ ಪ್ರಕಟವಾಗಿಲ್ಲ. ಆಗಲೇ ಲಸಿಕೆಯ ಬಳಕೆಗೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ಲಸಿಕೆಗೆ ಹಂದಿ ಪ್ರೊಟೀನ್ ಬಳಕೆ ಮಾಡಲಾಗಿದೆ ಎಂದು ಮುಸ್ಲಿಂ ಸಂಘಟನೆಯ ನಾಯಕರು ಲಸಿಕೆ ತಿರಸ್ಕರಿಸುವ ಮಾತುಗಳನ್ನಾಡಿದ್ದಾರೆ. ಲಸಿಕೆಯಿಂದ ನಪುಂಸಕತ್ವ ಉಂಟಾಗುತ್ತದೆ ಎಂಬ ಬಗ್ಗೆಯೂ ಊಹಾಪೋಹಗಳು ಹರಿದಾಡಿವೆ. ಈ ಎಲ್ಲಾ ಆತಂಕ, ಗೊಂದಲಗಳನ್ನು ದೂರಮಾಡುವ ನಿಟ್ಟಿನಲ್ಲಿ ಟಿವಿ9 ಕನ್ನಡ ಡಿಜಿಟಲ್ ಇಂದು ಫೇಸ್​ಬುಕ್ ಲೈವ್ ಸಂವಾದ ನಡೆಸಿತು.

ಸಂವಾದದಲ್ಲಿ ಸಾಂಕ್ರಾಮಿಕ ರೋಗತಜ್ಞ ಡಾ.ಸುನಿಲ್, ಶ್ವಾಸಕೋಶ ತಜ್ಞ ಡಾ‌.ಪವನ್, ಗೃಹಿಣಿ ಅಶ್ವಿನಿ, ಹಿರಿಯ ಪತ್ರಕರ್ತ ಸಿದ್ದರಾಜು ಭಾಗವಹಿಸಿದ್ದರು. ಟಿವಿ9 ಆ್ಯಂಕರ್ ಮಾಲ್ತೇಶ್ ಜಾನಗಲ್ ಕಾರ್ಯಕ್ರಮ ನಿರ್ವಹಿಸಿದರು.

ಲಸಿಕೆಯ ಬಗೆಗಿನ ಆರೋಪ ಪ್ರತ್ಯಾರೋಪಗಳ ಬಗ್ಗೆ ಮಾತನಾಡಿದ ಡಾ.ಪವನ್, ಯಾವ ಲಸಿಕೆಯೂ ಪೂರ್ಣ ಪ್ರಮಾಣದ ಪ್ರಯೋಗಕ್ಕೆ ಒಳಪಟ್ಟು ಮಾರುಕಟ್ಟೆಗೆ ಬಂದಿಲ್ಲ. ಬ್ರಿಟನ್​ನ ಫೈಜರ್ ಕೂಡ ಪೂರ್ಣ ಪ್ರಯೋಗಕ್ಕೆ ಒಳಪಟ್ಟಿಲ್ಲ. ಲಸಿಕೆ ಎಲ್ಲಾ ಹಂತದ ಪ್ರಯೋಗಕ್ಕೆ ಒಳಪಟ್ಟ ನಂತರವೇ ಮಾರುಕಟ್ಟೆಗೆ ಬರಬೇಕಾದರೆ ಒಟ್ಟು ಏಳರಿಂದ ಎಂಟು ವರ್ಷಗಳು ಬೇಕು. ಕೊವಿಡ್-19, SARS ರೀತಿಯ ರೋಗವಾದ್ದರಿಂದ ವೈದ್ಯರು ಅಥವಾ ವಿಜ್ಞಾನಿಗಳು ಸಂಶೋಧನೆ ನಡೆಸಿ ಈ ಲಸಿಕೆ ತಯಾರಿಸಿರುತ್ತಾರೆ. ಸಣ್ಣಪುಟ್ಟ ಅಡ್ಡಪರಿಣಾಮಗಳು ಎಲ್ಲಾ ಲಸಿಕೆಯಲ್ಲೂ ಇರುತ್ತವೆ. ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಸದ್ಯ, ಲಸಿಕೆಯ ತುರ್ತು ಬಳಕೆಗೆ ಮಧ್ಯಂತರ ವರದಿಯ ಪ್ರಕಾರ ಅನುಮತಿ ನೀಡಲಾಗಿದೆ ಎಂದು ಲಸಿಕೆಗೆ ಅನುಮೋದನೆ ದೊರೆತಿರುವ ಬಗ್ಗೆ ಸ್ಪಷ್ಟನೆ ನೀಡಿದರು.

ಲಸಿಕೆಯ ಮೂರನೇ ಹಂತದ ಪ್ರಯೋಗವು ಪೂರ್ಣಗೊಂಡಿಲ್ಲ ಎಂಬ ವಿಚಾರವಾಗಿ ಡಾ.ಸುನಿಲ್ ಮಾತನಾಡಿದರು. ಕೊರೊನಾ ವಿರುದ್ಧದ ಲಸಿಕೆ ಏಪ್ರಿಲ್, ಮೇ ತಿಂಗಳಲ್ಲಿ ಸಿಗಬಹುದು ಎಂದು ಈ ಹಿಂದೆ ಮಾಹಿತಿ ಇತ್ತು. ಆದರೆ, ಈಗ ತಕ್ಷಣ ಲಸಿಕೆಗೆ ಅನುಮತಿ ಕೊಟ್ಟಾಗ ಅದರ ಪರಿಣಾಮತ್ವದ ಬಗ್ಗೆ ಚರ್ಚೆಯಾಗುವುದು ಸಹಜ. ನಾವು ಇನ್ನೂ ಸ್ವಲ್ಪ ಕಾಲ‌ ಕಾಯಬಹುದಿತ್ತು. ಮೂರನೇ ಹಂತದ ಪ್ರಯೋಗ ಅಂತಿಮವಾದ ಬಳಿಕ ಅನುಮತಿ ನೀಡಬಹುದಿತ್ತು ಎಂದು ಡಾ. ಸುನಿಲ್ ಅಭಿಪ್ರಾಯಪಟ್ಟರು. ಜೊತೆಗೆ, ಕೊರೊನಾ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮಗಳು ಏನೂ ಇಲ್ಲ ಎಂದೂ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?

ಜನರಲ್ಲಿ, ಎಲ್ಲರಿಗೂ ಲಸಿಕೆ ಸಿಗಲಿದೆ ಎಂಬ ಯೋಚನೆ ಇದೆ. ಆದರೆ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಮಾತ್ರ ಲಸಿಕೆ ಸಿಗಲಿದೆ. ಜನರಿಗೆ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಡಾ. ಸುನಿಲ್ ಹೇಳಿದರು.

ಕೊರೊನಾ ಲಸಿಕೆಗೆ ಅನುಮತಿ ನೀಡುವುದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ತಿಳಿಸಿದ ಡಾ. ಪವನ್, ಈ ಮೊದಲು ಕೊವಿಡ್-19 ಆರಂಭವಾದಾಗ ರಂಡೆಸ್ವೇರ್ ಮಾತ್ರೆ ಕೊಡಲು ತಿಳಿಸಲಾಯಿತು. ಪ್ರಯೋಗದ ನಡುವೆ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಬಳಿಕ ರಂಡೆಸ್ವೇರ್​ನಿಂದ ಪ್ರಯೋಜನವಿಲ್ಲ ಎಂದರು. ಹಾಗೆ ಯೋಚಿಸಿದಾಗ ಈಗ ಲಸಿಕೆಯನ್ನು ಪ್ರಯೋಗದ ನಡುವೆ ಕೊಡುವ ಅವಶ್ಯಕತೆ ಏನು ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿವರಿಸಿದರು.

ಈ ಹಿಂದೆ H1N1ಗೆ ಕೋಟ್ಯಾಂತರ ರೂಪಾಯಿ ಮೊತ್ತ ವ್ಯಯಿಸಿ ಲಸಿಕೆ ಕಂಡುಹಿಡಿಯಲಾಗಿತ್ತು. ಆದರೆ, ರೋಗ ಹೋದಮೇಲೆ ಯಾರೂ ಲಸಿಕೆ ಪಡೆಯಲಿಲ್ಲ. ಬಳಿಕ, H1N1 ಲಸಿಕೆಯನ್ನು ಆಫ್ರಿಕಾದಂಥ ಬಡದೇಶಗಳಿಗೆ ಉಚಿತವಾಗಿ ಹಂಚಿದರು. ಲಸಿಕೆ‌ ಕೊಡುವುದು ತಡವಾದರೆ ಲಸಿಕೆ ಪಡೆಯುವವರು ಇರುವುದಿಲ್ಲ. ಹಾಗಾಗಿ ಸರ್ಕಾರ ಅವಸರ ಮಾಡಿರಬಹುದು ಎಂಬ ಊಹೆ ವ್ಯಕ್ತಪಡಿಸಿದರು.

ಕೊರೊನಾ ಲಸಿಕೆಗೆ ಹಂದಿಯ ಮಾಂಸ ಬಳಸಿಕೊಂಡಿರುವ ಮಾತುಕತೆಗಳ ಬಗ್ಗೆ ಡಾ. ಸುನಿಲ್ ಪ್ರತಿಕ್ರಿಯೆ ನೀಡಿದರು. ಲಸಿಕೆಗೆ ಯಾವ ಪ್ರೊಟೀನ್ ಸೂಕ್ತವೋ ಅದನ್ನು ಬಳಸಿಕೊಳ್ಳುತ್ತಾರೆ. ಲಸಿಕೆಯಲ್ಲಿ ಯಾವುದೇ ಅಂಶವಿರಲಿ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ‌ಇದು‌ ಒಂದು ಲಸಿಕೆ, ಮದ್ದು.‌ ಅದನ್ನು ಯಾವುದರಿಂದ ತಯಾರಿಸಲಾಗಿದೆ ಎಂಬ ಬಗ್ಗೆ ಗೊಂದಲ ಬೇಡ ಎಂದು ತಿಳಿಸಿದರು. ಕೆಲವೊಮ್ಮೆ ನಾವು ವೈದ್ಯರಾಗಿ, ರೋಗಿಗಳಿಗೆ ಮೊಟ್ಟೆ ತಿನ್ನಲು ಹೇಳುವ ಸಂದರ್ಭ ಬರುತ್ತದೆ. ಆಗ ಅವರು ರೋಗಿಯಾಗಿ ಮೊಟ್ಟೆಯನ್ನು ಸ್ವೀಕರಿಸಬೇಕಾಗುತ್ತದೆ ಎಂದು ಉದಾಹರಿಸಿದರು.

ಇದನ್ನೂ ಓದಿ: ‘ಹರಾಮ್’ ಅಂಶಗಳಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು: ಜಮಾತ್​-ಎ-ಇಸ್ಲಾಮಿ ಸ್ಪಷ್ಟನೆ

ಕೊರೊನಾ ಲಸಿಕೆಯಿಂದ ನಪುಂಸಕತ್ವ ಉಂಟಾದ ವಿಚಾರ ಈವರೆಗೆ ವರದಿಯಾಗಿಲ್ಲ. ಲಸಿಕೆಯಿಂದ ಆ ರೀತಿಯ ಅಡ್ಡಪರಿಣಾಮಗಳು ಇರುವುದೂ ಇಲ್ಲ. ಹಿಂದೆ, ಪೋಲಿಯೊ ಲಸಿಕೆ ಕೊಟ್ಟಾಗಲೂ ಜನಸಂಖ್ಯೆ ನಿಯಂತ್ರಣಕ್ಕೆ ಇದನ್ನು ಕೊಡುತ್ತಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದರು. ಆ ರೀತಿಯ ಗಾಳಿಸುದ್ದಿ ಒಳ್ಳೆಯದಲ್ಲ ಎಂದು ಡಾ. ಸುನಿಲ್ ವಿಷಯ ಮನದಟ್ಟುಮಾಡಿದರು. ಸ್ಪಾನಿಷ್ ಫ್ಲೂ ಬಳಿಕ ಬಂದಿರುವ ದೊಡ್ಡ ಸಾಂಕ್ರಾಮಿಕ ಖಾಯಿಲೆ ಇದು. ಹಾಗಾಗಿ ಕೊರೊನಾವನ್ನು H1N1ಗೆ ಹೋಲಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸಿದ್ದರಾಜು ಮಾತನಾಡಿ, ಕೊವಿಶೀಲ್ಡ್ ಮೂರನೇ ಹಂತದ ಪ್ರಯೋಗ ಪೂರೈಸಿದೆ ಎನ್ನುತ್ತಿದ್ದಾರೆ. ಅದನ್ನು ಮಾತ್ರ ಕೊಡಬಹುದಿತ್ತು. ಜೊತೆಗೆ ಕೊವ್ಯಾಕ್ಸಿನ್​ಗೂ ಅನುಮತಿ ನೀಡಿದ್ದು ಯಾಕೆ. ಇದರಿಂದ ಡ್ರಗ್ ಮಾಫಿಯಾಕ್ಕೆ ಸರ್ಕಾರ ಸಾಥ್‌ ನೀಡುತ್ತದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ ಎಂದು ಹೇಳಿದರು. ದೇಶದ ಪ್ರಜೆಗಳಿಗೆ ಲಸಿಕೆ ನೀಡುವಲ್ಲಿ ಸರ್ಕಾರದ ಜವಾಬ್ದಾರಿ ಇದೆ. ಆದರೆ ಪೂರ್ಣ ಪ್ರಮಾಣದ ಪ್ರಯೋಗ ಆಗಬೇಕು. ಅರ್ಧಾಂಶ ಜನರಿಗೆ ಲಸಿಕೆ ಪಡೆದ ನಂತರ ತೊಂದರೆಯಾದರೆ ಹೇಗೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಅವಸರ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Explainer | ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದಾಯ್ತು; ಮುಂದೇನು?


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada