ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 23-01-2021

 • TV9 Web Team
 • Published On - 19:05 PM, 23 Jan 2021
ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 23-01-2021
ಪ್ರಧಾನಿ ನರೇಂದ್ರ ಮೋದಿ

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
 • 23 Jan 2021 19:05 PM (IST)

  ಆರ್​ಜೆಡಿ ಮುಖ್ಯಸ್ಥ ಲಾಲು ಯಾದವ್​ಗೆ ಅನಾರೋಗ್ಯ: ಶೀಘ್ರ ದೆಹಲಿಗೆ ಸ್ಥಳಾಂತರ

  07:05 pm ಆರ್​ಜೆಡಿ ಮುಖ್ಯಸ್ಥ ಲಾಲು ಯಾದವ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಾರ್ಖಂಡ್​ನ ರಾಂಚಿ ಆಸ್ಪತ್ರೆಯಿಂದ ದೆಹಲಿಗೆ ಏರ್​ ಲಿಫ್ಟ್​ ಮಾಡಲಾಗಿದೆ. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲು  ಜಾರ್ಖಂಡ್​ ವೈದ್ಯಕೀಯ ಮಂಡಳಿಯಿಂದ ಶಿಫಾರಸು ಬಂದ ಹಿನ್ನೆಲೆಯಲ್ಲಿ ರಾಂಚಿ ಆಸ್ಪತ್ರೆಯಿಂದ ದೆಹಲಿಗೆ ಏರ್​ ಲಿಫ್ಟ್​ ಮಾಡಲಾಗುತ್ತಿದೆ.

 • 23 Jan 2021 18:56 PM (IST)

  ಶಾಂತಿಯುತ ಪರೇಡ್ ನಡೆಸುತ್ತೇವೆ: ಯೋಗೇಂದ್ರ ಯಾದವ್

  ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಶಾಂತಿಯುತ ಮತ್ತು ಐತಿಹಾಸಿಕ ಕಿಸಾನ್ ಗಣತಂತ್ರ ಪರೇಡ್ ನಡೆಸಲಿದ್ದೇವೆ ಎಂದು ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಇಂದು ರಾತ್ರಿ ಹೆಚ್ಚಿನ ವಿವರ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

 • 23 Jan 2021 18:48 PM (IST)

  ಅಕ್ರಮ ಸುರಂಗ ಮಾರ್ಗದ ಕುರಿತು ಸುಳಿವು ನೀಡಿದ್ದ ಬೇಹುಗಾರಿಕಾ ಇಲಾಖೆ

  ಭೂಭಾಗದಲ್ಲೆ 145ರಿಂದ 150 ಮೀಟರ್ ಉದ್ದ

  ಜಮ್ಮು ಮತ್ತು ಕಾಶ್ಮೀರದ ಕಥುವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಅಕ್ರಮ ಸುರಂಗ ಮಾರ್ಗದ ಕುರಿತು ಬೇಹುಗಾರಿಕಾ ಇಲಾಖೆ ಸುಳಿವು ನೀಡಿತ್ತು. 2-3 ಮೀಟರ್ ಅಗಲವಿರುವ ಈ ಸುರಂಗವನ್ನು ಪಾಕಿಸ್ತಾನ ನಿರ್ಮಿಸಿದ್ದು, ಭಾರತದ ಭೂಭಾಗದಲ್ಲೆ 145ರಿಂದ 150 ಮೀಟರ್ ಉದ್ದವಿದೆ ಎಂದು ಬಿಎಸ್​ಎಫ್​ನ ಐಜಿ ಎನ್ ಎಸ್ ಜನ್ವಾಲ್ ತಿಳಿಸಿದ್ದಾರೆ.

 • 23 Jan 2021 18:42 PM (IST)

  ಶಿವಸೇನಾ ಸ್ಥಾಪಕ ಭಾಳಾ ಠಾಕ್ರೆ ಪ್ರತಿಮೆ ಉದ್ಘಾಟನೆ

  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿವಸೇನಾ ಪಕ್ಷದ ಸಂಸ್ಥಾಪಕ ಭಾಳಾ ಠಾಕ್ರೆಯವರ ಪ್ರತಿಮೆ ಲೋಕಾರ್ಪಣೆ ಮಾಡಿದರು. ಮುಂಬೈ ಬಂದರು ಪ್ರದೇಶದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

 • 23 Jan 2021 18:21 PM (IST)

  ಎಲ್ಲರೂ ಸಮಾಧಾನಪಟ್ಟಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

  ಪಶ್ಚಿಮ ಬಂಗಾಳದಲ್ಲಿ ಸಹ ಬಿಜೆಪಿ ಜಯ ಸಾಧಿಸಲಿದೆ

  ಎಲ್ಲಿಯೂ ಅಸಮಾಧಾನಿತ ಶಾಸಕರಿಲ್ಲ, ಎಲ್ಲರೂ ಸಮಾಧಾನಿತರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
  ಯಾರೂ ಅಸಮಾಧಾನಿತ ಶಾಸಕರಿಲ್ಲ ಎಲ್ಲರ ಜೊತೆ ಮಾತನಾಡಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಸಹ ಬಿಜೆಪಿ ಜಯ ಸಾಧಿಸಲಿದೆ. ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಕಾರ್ಯಕರ್ತರು ಸೇವೆ ಸಲ್ಲಿಸಿದ್ದರು. ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

 • 23 Jan 2021 18:16 PM (IST)

  ಅಖಂಡ ಭಾರತ ಹರಿಕಾರ ನೇತಾಜಿ

  ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೇತಾಜಿ ಸುಬಾಷ್​ಚಂದ್ರ ಬೋಸ್​ ಅವರು ತ್ರಿವರ್ಣ ಧ್ವಜ ಹಾರಿಸಿದ್ದರು.ಈಮೂಲಕ ಅವರು ಅಖಂಡ ಭಾರತದ ಹರಿಕಾರರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 • 23 Jan 2021 18:07 PM (IST)

  ಇಂದು ನೇತಾಜಿ ಇದ್ದಿದ್ದರೆ..ಪ್ರಧಾನಿ ಹೇಳಿದ್ದೇನು?

  ಇಂದು ನೇತಾಜಿ ಸುಭಾಷ್​ಚಂದ್ರ ಬೋಸ್ ಬದುಕಿದ್ದರೆ ಭಾರತ ಇತರ ದೇಶಗಳಿಗೆ ಕೊರೊನಾ ಲಸಿಕೆ ನಿಡುವುದನ್ನು ಕಂಡು ಹೆಮ್ಮೆ ಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ ಹಲವು ರಾಷ್ಟ್ರಗಳಿಗೆ ಕೊರೊನಾ ಲಸಿಕೆ ವಿತರಿಸಿದ್ದು, ಇದು ಅವರ ಹೆಮ್ಮೆಗೆ ಕಾರಣವಾಗುತ್ತಿತ್ತು ಎಂದು ಅವರು ವ್ಯಾಖ್ಯಾನಿಸಿದರು.

 • 23 Jan 2021 17:58 PM (IST)

  ನೇತಾಜಿಯವರಿಂದ ದೇಶ ಕಲಿಯಬೇಕಿದೆ: ಪ್ರಧಾನಿ ನರೇಂದ್ರ ಮೋದಿ

  ಭಾರತೀಯರ ಬಡತನ, ಅನಾರೋಗ್ಯ ಸೇರಿ ಎಲ್ಲ ತೊಂದರೆಗಳಿಗೂ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಆಗಲೇ ನೇತಾಜಿಯವರು ಚಿಂತಿಸಿದ್ದರು. ದೂರದೃಷ್ಟಿ ಹೊಂದಿದ ನಾಯಕರಾಗಿ ಅವರು ಯೋಚಿಸುತ್ತಿದ್ದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ನೇತಾಜಿಯವರಿಂದ ಕಲಿಯಬೇಕಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 • 23 Jan 2021 17:37 PM (IST)

  ನೇತಾಜಿಯವರೇ ನನಗೆ ಸ್ಫೂರ್ತಿ: ಪ್ರಧಾನಿ ಸ್ಮರಣೆ

  ಬಾಲ್ಯದಿಂದಲೂ ಸುಭಾಷ್‌ಚಂದ್ರ ಬೋಸ್​ ನನಗೆ ಸ್ಫೂರ್ತಿಯಾಗಿದ್ದಾರೆ. ನೇತಾಜಿಯನ್ನು ಪ್ರಶಂಸಿಸಲು ಮಾತುಗಳಲ್ಲಿ ಸಾಧ್ಯವಾಗದು. ನೇತಾಜಿಯರವರು ಆಗಲೇ ಸೇನೆಯ ಬಗ್ಗೆ ದೂರದೃಷ್ಟಿ ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸುಭಾಷ್​ಚಂದ್ರ ಬೋಸ್​ರನ್ನು ಸ್ಮರಿಸಿಕೊಂಡರು.

 • 23 Jan 2021 17:28 PM (IST)

  ನೇತಾಜಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

  ನೇತಾಜಿ ಸುಭಾಷ್‌ಚಂದ್ರ ಬೋಸ್​ರವರ 125ನೇ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಮಾಡಿದರು.

 • 23 Jan 2021 17:25 PM (IST)

  ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಆರೋಗ್ಯದಲ್ಲಿ ಪ್ರಗತಿ

  ಕಾರವಾರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್​ರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ.

 • 23 Jan 2021 17:20 PM (IST)

  ಜೈಶ್ರೀರಾಮ್ ಘೋಷಣೆ: ಭಾಷಣ ಮಾಡದ ಸಿಎಂ ಮಮತಾ ಬ್ಯಾನರ್ಜಿ

  ಸುಭಾಷ್‌ಚಂದ್ರ ಬೋಸ್​ರವರ 125ನೇ ಜಯಂತಿಯ ಪರಾಕ್ರಮ ದಿವಸ್ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಜೈಶ್ರೀರಾಮ್ ಘೋಷಣೆ ಕೇಳಿಬಂತು.ಹೀಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಷಣ ಮಾಡಲಿಲ್ಲ.

 • 23 Jan 2021 17:01 PM (IST)

  12 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢ

  ಈವರೆಗೆ 12 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಧ್ಯಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಛತ್ತೀಸ್​ಘಢ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ,ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ

 • 23 Jan 2021 16:55 PM (IST)

  150ಕ್ಕೇರಿದ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ

  ದೇಶದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 150ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 • 23 Jan 2021 16:47 PM (IST)

  ಆರೋಪಿಗಳು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ಹುಣಸೋಡು ಸ್ಪೋಟ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಇಲ್ಲಿನ ಎಲ್ಲ ಕ್ರಷರ್​ಗಳಿಗೆ ಸರ್ಕಾರದಿಂದ ಅನುಮತಿ ಇದೆ.ಆದರೆ, ಕಲ್ಲು ಗಣಿಗಾರಿಕೆಗೆ ಯಾವುದೇ ಅನುಮತಿ ಇರಲಿಲ್ಲ. ಆರೋಪಿಗಳು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಐದಾರು ನಿಮಿಷಗಳ ಕಾಲ ಸ್ಥಳ ವೀಕ್ಷಿಸಿ ಮರಳಿದರು.

 • 23 Jan 2021 16:42 PM (IST)

  ‘ನಾಗಾಭರಣ ಸಿನಿಮಾವರಣ’ ಕೃತಿ ಲೋಕಾರ್ಪಣೆ

  ಪ್ರಸಿದ್ಧ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಚಲನಚಿತ್ರಗಳ ಕುರಿತ ‘ನಾಗಾಭರಣ ಸಿನಿಮಾವರಣ’ ಕೃತಿಯನ್ನು ಖ್ಯಾತ ನಟ ಅನಂತನಾಗ್, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ,ನಿರ್ದೇಶಕ ಪಿ.ಶೇಷಾದ್ರಿ, ಹಿರಿಯ ಕಲಾವಿದರಾದ ಶ್ರೀನಾಥ್, ಶ್ರೀಧರ್, ರಾಮಕೃಷ್ಣ, ದತ್ತಣ್ಣ, ಕಲಾವಿದೆ ಸುಧಾರಾಣಿ ಬಿಡುಗಡೆಗೊಳಿಸಿದರು. ಕೃತಿಯ ಲೇಖಕರಾದ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ, ಗುಬ್ಬಿಗೂಡು ರಮೇಶ್ ಉಪಸ್ಥಿತರಿದ್ದರು. ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಚಲನಚಿತ್ರಗಳ ಕುರಿತು ಸೂಕ್ಷ್ಮ ಅವಲೋಕನವನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.

 • 23 Jan 2021 16:36 PM (IST)

  ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

  ನಾವು ಜೀವಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಲ್ಲವೇ?

  ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಇಡೀ ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ. ನಾವು ಜೀವಿಸುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೇ ಅಲ್ಲವಾ ಎಂದು ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ.

 • 23 Jan 2021 16:32 PM (IST)

  ಅಕ್ರಮ ಗಣಿಗಾರಿಕೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ಕುಮ್ಮಕ್ಕು : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

  ಹುಣಸೋಡು ದುರಂತಕ್ಕೆ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಎಂದ ಕಾಂಗ್ರೆಸ್ ನಾಯಕ

  ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.

 • 23 Jan 2021 16:29 PM (IST)

  ಶಿವಮೊಗ್ಗ ಸ್ಫೋಟ: ಸ್ಥಳಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ

  ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದಾರೆ.
  ಅಧಿಕಾರಿಗಳ ಜೊತೆ ತೆರಳಿ ಸ್ಥಳ ಪರಿಶೀಲಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಜತೆ,ಅವರ ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಉಪಸ್ಥಿತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್ ನಾಯಕ, ಶಿವಮೊಗ್ಗ ಡಿಸಿ ಕೆ.ಬಿ.ಶಿವಕುಮಾರ್, ಎಸ್​ಪಿ ಶಾಂತರಾಜು,ಜಿ.ಪಂ. ಸಿಇಒ ವೈಶಾಲಿ, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.

 • 23 Jan 2021 16:22 PM (IST)

  ಶಿವಮೊಗ್ಗ ಸ್ಫೋಟ ಪ್ರಕರಣ ತನಿಖೆಗೆ ಸೂಚಿಸಿದ್ದೇನೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

  ಶಿವಮೊಗ್ಗ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಮತ್ತು
  ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದು ಏಕೆಂದು ತನಿಖೆ ನಡೆಸಲು ನಿರ್ದೇಶನ ನೀಡಲಾಗಿದೆ. ಇಡೀ ಪ್ರಕರಣದ ಬಗ್ಗೆ ತನಿಖೆ ಮಾಡಲು ಗಣಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಕಲ್ಲಿದ್ದಲು & ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ತಿಳಿಸಿದರು.

 • 23 Jan 2021 15:41 PM (IST)

  ದೇಶದ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ರಾಜಧಾನಿ ಸ್ಥಾಪಿಸಿ: ಸಿಎಂ ಮಮತಾ ಬ್ಯಾನರ್ಜಿ

  ದೇಶದ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ರಾಜಧಾನಿ ಸ್ಥಾಪಿಸಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಹೊರಗಿನವರೇ ಎಲ್ಲಾ ತುಂಬಿಕೊಂಡಿದ್ದಾರೆ.ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ದೇಶಕ್ಕೆ ನಾಲ್ಕು ರಾಜಧಾನಿಗಳನ್ನು ಸ್ಥಾಪಿಸುವಂತೆ ಅವರು ನೇತಾಜಿ ಸುಭಾಶ್ ಚಂದ್ರ ಬೋಸ್​ ಅವರ 125ನೇ ಜನ್ಮದಿನದಂದು ಆಗ್ರಹಿಸಿದ್ದಾರೆ.

 • 23 Jan 2021 15:38 PM (IST)

  ಜನವರಿ 25ಕ್ಕೆ ಸಿಎಂ ಮನೆ ಮುಂದೆ ಧರಣಿ: ಎಚ್​ಡಿಕೆ ಘೋಷಣೆ

  ಜೆಡಿಎಸ್​ಗೆ ಬಿಜೆಪಿ ಮೇಲೆ ಮೃದು ಧೋರಣೆಯಿಲ್ಲ

  ಜನವರಿ 25ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ನಡೆಸಿಯೇ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಘೋಷಿಸಿದ್ದಾರೆ. ಜೆಡಿಎಸ್​ ವರಿಷ್ಠ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಧರಣಿ ನಡೆಸುತ್ತೇವೆ. ಹಾಸನದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ,ಅವರ ಮೇಲೆ ನಂಬಿಕೆ ಇಲ್ಲದ ಕಾರಣ ಧರಣಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಜತೆಗೆ, ಜೆಡಿಎಸ್​ಗೆ ಬಿಜೆಪಿ ಮೇಲೆ ಮೃದು ಧೋರಣೆಯಿಲ್ಲ ಎಂದು ಅವರು ತಿಳಿಸಿದ್ದಾರೆ.

 • 23 Jan 2021 15:32 PM (IST)

  ಲಾಲೂ ಪ್ರಸಾದ್ ಯಾದವ್​ಗೆ ಅನಾರೋಗ್ಯ: ರಾಂಚಿಯಿಂದ ದೆಹಲಿಗೆ ರವಾನೆಗೆ ನಿರ್ಧಾರ

  ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್​ಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಂಚಿಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಲಾಗಿದೆ. ಈ ಕುರಿತು ಬೆಳಗ್ಗೆಯಿಂದ ಊಹಾಪೋಹಗಳು ಹರಿದಾಡುತ್ತಿದ್ದವು.

 • 23 Jan 2021 15:23 PM (IST)

  ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಆಗಮನ

  ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 125ನೇ ಜನ್ಮದಿನದಂದು ಪರಾಕ್ರಮ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ.

 • 23 Jan 2021 15:18 PM (IST)

  6 ಕ್ರಿಕೆಟಿಗರಿಗೆ ಥಾರ್ ಎಸ್​ಯುವಿ ಉಡುಗೊರೆ ಘೋಷಿಸಿದ ಆನಂದ್ ಮಹೀಂದ್ರಾ

  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಕಾಪಾಡಿದ ಕ್ರಿಕೆಟಿಗರಿಗೆ ಆನಂದ್ ಮಹೀಂದ್ರಾ ಭರ್ಜರಿ ಕೊಡುಗೆ ಘೋಷಿಸಿದ್ದಾರೆ. 6 ಯುವ ಕ್ರಿಕೆಟಿಗರಿಗೆ ಥಾರ್ ಎಸ್​ಯುವಿಯನ್ನು ಸ್ವಂತ ಹಣದಲ್ಲಿ ಉಡುಗೊರೆ ನೀಡುವುದಾಗಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

 • 23 Jan 2021 15:02 PM (IST)

  ಜೋ ಬೈಡೆನ್ ಪದಗ್ರಹಣ:150 ಭದ್ರತಾ ಸಿಬ್ಬಂದಿಗೆ ಕೊರೊನಾ

  ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪದಗ್ರಹಣದಲ್ಲಿ ಕಾರ್ಯನಿರ್ವಹಿಸಿದ್ದ 150 ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಈ ಪೈಕಿ 150 ಸಿಬ್ಬಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

 • 23 Jan 2021 14:58 PM (IST)

  ಕೊರೊನಾ ನಿಯಂತ್ರಣ: ಭಾರತ, ಪ್ರಧಾನಿಯವರನ್ನು ಶ್ಲಾಘಿಸಿದ WHO

  ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಭಾರತ ವಹಿಸಿದ ಪಾತ್ರದ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ಸಹ ಪ್ರಶಂಸಿರುವ ಅವರು,ಎಲ್ಲರೂ ಜೊತೆಯಾಗಿ ಲಭ್ಯ ಮಾಹಿತಿ ಹಂಚಿಕೊಳ್ಳುವ ಮೂಲಕ ಕೊರೊನಾ ಪಿಡುಗು ನಿಯಂತ್ರಿಸಲು ಸಾಧ್ಯ ಎಂದು ವಿವರಿಸಿದ್ದಾರೆ.

 • 23 Jan 2021 14:11 PM (IST)

  ನೇತಾಜಿ ಆಶಯಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ: ಸಿಎಂ ಮಮತಾ ಬ್ಯಾನರ್ಜಿ ಟೀಕೆ

  ನೇತಾಜಿ ಸುಭಾಶ್ ಚಂದ್ರ ಬೊಸ್ ಅವರು ಬೆಂಗಾಳಿ,ತಮಿಳು,ಗುಜರಾತ್​ನ ಎಲ್ಲರನ್ನೂ ಒಳಗೊಂಡು ಆಜಾದ್ ಹಿಂದ್ ಫೌಜ್​ ಪ್ರಾರಂಭಿಸಿದ್ದರು. ಆದರೆ, ಅವರ ಆಶಯಕ್ಕೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

 • 23 Jan 2021 14:02 PM (IST)

  ಕಥುವಾ ಗಡಿಯಲ್ಲಿ ಸುರಂಗ ಪತ್ತೆ

  ಜಮ್ಮು-ಕಾಶ್ಮೀರದ ಕಥುವಾ ಬಳಿಯ ಅಂತಾರಾಷ್ಟ್ರಿಯ ಗಡಿಯಲ್ಲಿ ಉಗ್ರರು ನಿರ್ಮಿಸಿದ್ದಾರೆ ಎನ್ನಲಾದ ಸುರಂಗ ಪತ್ತೆಯಾಗಿದೆ. ಸುರಂಗ ಪತ್ತೆಯಾದ ಸ್ಥಳಕ್ಕೆ BSF​ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 • 23 Jan 2021 14:00 PM (IST)

  ಶಿಕ್ಷಣ ಸಂಸ್ಥೆ, ಪೋಷಕರಿಗೆ ಹೊರೆಯಾಗದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು: ಶಿಕ್ಷಣ ಸಚಿವ ಸುರೇಶ್ ಕುಮಾರ್

  ಖಾಸಗಿ ಶಾಲಾ ಶುಲ್ಕ ಪಾವತಿಗೆ ಸರ್ಕಾರದ ಮುಂದೆ 3 ಸೂತ್ರ ರೂಪಿಸಲಾಗಿದೆ ಎಂದು ಜಮಖಂಡಿಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಂತಿಮ ನಿರ್ಧಾರದೊಂದಿಗೆ ಒಂದು ಸೂತ್ರ ಪ್ರಕಟಿಸುತ್ತೇವೆ. ಕೊರೊನಾ ಸಂಕಷ್ಟದಿಂದ ಶುಲ್ಕ ಪಾವತಿ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಶುಲ್ಕ ಪಾವತಿಸದಿದ್ದರೆ ಶಾಲೆ ನಡೆಸುವುದು ಕಷ್ಟ ಎಂಬ ವಾದವಿದೆ. ಶಿಕ್ಷಣ ಸಂಸ್ಥೆ, ಪೋಷಕರಿಗೆ ಹೊರೆಯಾಗದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

 • 23 Jan 2021 13:52 PM (IST)

  ಆರೋಗ್ಯ ವ್ಯತ್ಯಯ: ಲಾಲು ಪ್ರಸಾದ್ ಯಾದವ್ ದೆಹಲಿಯ ಏಮ್ಸ್​ಗೆ ರವಾನೆ ಸಂಭವ

  ಆರೋಗ್ಯ ವ್ಯತ್ಯಯದಿಂದ ರಾಷ್ಟ್ರೀಯ ಜನತಾ ದಖಳದ ನಾಯಕ ಲಾಲೂ ಪ್ರಸಾದ್ ಯಾದವ್​ರನ್ನು ದೆಹಲಿಯ ಏಮ್ಸ್​ಗೆ ದಾಖಲಿಸುವ ಸಂಭವ ಹೆಚ್ಚಾಗಿದೆ.ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್​ರಿಗೆ ಪುತ್ರ ತೇಜಸ್ವಿ ಯಾದವ್ ಜತೆಯಾಗುವ ಸಾಧ್ಯತೆಯಿದೆ.

 • 23 Jan 2021 13:48 PM (IST)

  ಕನ್ನಡ ಪರ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

  ಗಡಿಯಲ್ಲಿ ಶಿವಸೇನೆಯ ಪುಂಡಾಟ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್​, ಕರವೇ ಕಾರ್ಯಕರ್ತರು ಮತ್ತು ಸ್ಥಳೀಯ ಕಾರ್ಯಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿನ್ನೋಳಿ ಚೆಕ್​ಪೋಸ್ಟ್​ನಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದಾಗ ತಡೆದು ವಶಕ್ಕೆ ಪಡೆದಿದ್ದಾರೆ.

 • 23 Jan 2021 13:35 PM (IST)

  ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳುನಾಡು ಸಂಸ್ಕೃತಿ ಮೇಲೆ ಗೌರವವಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

  ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳುನಾಡು ಸಂಸ್ಕೃತಿ ಮೇಲೆ ಗೌರವವಿಲ್ಲ ಎಂದು ಕಾಂಗ್ರೆಸ್ ನಾಯಕ,ಸಂಸದ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮೆರವಣಿಗೆಗೆ ಚಾಲನೆ ನೀಡಿರುವ ಅವರು, ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಬಹು ಸಂಸ್ಕೃತಿ, ಭಾಷೆಗಳ ಮೇಲೆ ಬಿಜೆಪಿ ಗೌರವ ಹೊಂದಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

 • 23 Jan 2021 13:29 PM (IST)

  ಜೂನ್ ಮೊದಲ ವಾರ ಎಸ್ಎಸ್ಎಲ್​ಸಿ ಮತ್ತು ಮೇ ಎರಡನೇ ವಾರ ಪಿಯುಸಿ ಪರೀಕ್ಷೆ: ಸಚಿವ ಎಸ್ ಸುರೇಶ್​ ಕುಮಾರ್

  ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ, ಕೋವಿಡ್ ಕಾರಣ ವಿನಾಯಿತಿ ನೀಡಲಾಗಿದೆ

  ಜೂನ್ ಮೊದಲ ವಾರ ಎಸ್ಎಸ್ಎಲ್​ಸಿ ಮತ್ತು ಮೇ ಎರಡನೇ ವಾರ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ತಿಳಿಸಿದ್ದಾರೆ. ಈಗಿನ ಸಮಯ ಲೆಕ್ಕ ಹಾಕಿ ಶೇಕಡಾ 30 ರಷ್ಟು ಪಠ್ಯವಿಷಯ ಕಡಿಮೆ ಮಾಡಲಾಗಿದೆ.ಪರೀಕ್ಷೆ ಯಾವ ರೀತಿ ನಡೆಸಬೇಕು ಎಂದು ಎಸ್ಎಸ್ಎಲ್​ಸಿ ಮತ್ತು ಪಿಯು ಬೋಡ್೯ಗಳು ತೀಮಾ೯ನಿಸುತ್ತವೆ. ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ, ಕೋವಿಡ್ ಕಾರಣ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 • 23 Jan 2021 13:23 PM (IST)

  ಕೊಡಗು: ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕಾರ

  ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕೊಡಗು ಜಿಲ್ಲಾ ಪಂಚಾಯತ್​ನ ಸಿಇಓ ಆಗಿದ್ದ ಚಾರುಲತಾ ಅವರು ಇಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಭನ್ವರ್ ಸಿಂಗ್ ಮೀನಾ ಅಧಿಕಾರ ಹಸ್ತಾಂತರಿಸಿದರು.

 • 23 Jan 2021 13:18 PM (IST)

  ಪಶ್ಚಿಮ ಬಂಗಾಳದಲ್ಲಿ ಮೊಳಗಿದ ಶಂಖನಾದ

  ನೇತಾಜಿ ಸುಭಾಶ್ ಚಂದ್ರ ಬೊಸ್​ ಅವರ 125ನೇ ಜನ್ಮದಿನದ ಪ್ರಯುಕ್ತ ಶಂಖನಾದ ಮೊಳಗಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾದಯಾತ್ರೆಗೆ ಚಾಲನೆ ನೀಡಿದರು.

 • 23 Jan 2021 13:15 PM (IST)

  ಎಂಇಎಸ್ ವಜಾಕ್ಕೆ ಆಗ್ರಹಿಸಿದ ವಾಟಾಳ್ ನಾಗರಾಜ್

  ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ಸಂಘಟನೆ ವಜಾ ಮಾಡಬೇಕು.ಎಂಇಎಸ್ ಸಂಘಟನೆ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದನ್ನು ಮಾಡುವ ಶಕ್ತಿ ಇಲ್ಲ.ಹೀಗಾಗಿ, ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

 • 23 Jan 2021 13:11 PM (IST)

  ಕೃಷಿ ಕಾಯ್ದೆ ವಿರೋಧಿಸಿ ವಿಜಯಪುರದಲ್ಲಿ ಟ್ರ್ಯಾಕ್ಟರ್ ಮೆರವಣಿಗೆ

  ಕೇಂದ್ರ‌ ಸರ್ಕಾರ ಜಾರಿಗೆ ತರಲು ಯತ್ನಿಸುತ್ತಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿಜಯಪುರದಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಯಿತು. ನಗರದ ಸಿದ್ದೇಶ್ವರ ದೇವಸ್ಥಾನದಿಂದ‌ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.ಕೃಷಿ ಕಾಯ್ದೆಗಳನ್ನು ಕೇಂದ್ರ ಹಿಂಪಡೆಯಬೇಕೆಂದು ಒತ್ತಾಯಿಸಲಾಯಿತು. ಅಲ್ಲದೇ,ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 • 23 Jan 2021 12:48 PM (IST)

  ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ

  ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ ಮತ್ತು ಸ್ಥಳೀಯ ಕನ್ನಡಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೋರಾಟಗಾರರು ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ತಡೆದಿದ್ದಾರೆ.

 • 23 Jan 2021 12:43 PM (IST)

  ಗಣರಾಜ್ಯೋತ್ಸವ ಮೆರವಣಿಗೆ: ಅಯೋಧ್ಯಾ ರಾಮ ಮಂದಿರ ಮಾದರಿ ಪ್ರದರ್ಶಿಸಲಿರುವ ಉತ್ತರ ಪ್ರದೇಶ

  ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಉತ್ತರ ಪ್ರದೇಶ ಅಯೋಧ್ಯಾ ರಾಮ ಮಂದಿರ ಮಾದರಿಯನ್ನು ಪ್ರದರ್ಶಿಸಲಿದೆ. ಈಗಾಗಲೇ ರಾಮ ಮಂದಿರ ಮಾದರಿ ನಿರ್ಮಾಣ ಕೈಗೊಳ್ಳಲಾಗಿದ್ದು, ರಾಜ್ಯದ ಪ್ರಾಚೀನ ಸ್ಮಾರಕ ಪ್ರದರ್ಶನಗೊಳ್ಳಲಿದೆ ಎಂದು ಮಾದರಿ ನಿರ್ಮಿಸಿದ ಕಲಾವಿದರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

 • 23 Jan 2021 12:42 PM (IST)

  ಸಿಎಂ ಮಮತಾ ಬ್ಯಾನರ್ಜಿ ಪಾದಯಾತ್ರೆ: ಹರಿದು ಬಂದ ಜನಸಾಗರ

  ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಕೋಲ್ಕತ್ತಾದ ಶ್ಯಾಮ್ ಬಜಾರ್ ರಸ್ತೆಯಿಂದ ರೆಡ್ ರೋಡ್​ಗೆ ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗೆ ಜನಸಾಗರವೇ ಹರಿದುಬಂದಿದ್ದು, ನೇತಾಜಿಯವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಲು ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ಒತ್ತಾಯಿಸಿದ್ದಾರೆ.

 • 23 Jan 2021 12:31 PM (IST)

  ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ ದೇಣಿಗೆ ನೀಡಿದ ಟಿವಿ9 ನೆಟ್​ವರ್ಕ್ ಪ್ರಮೋಟರ್‌ಗಳು

  ತ್ರಿದಂಡ ಚಿನ್ನ ಜೀಯಾರ್ ರಾಮಾನುಜ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ, ಸಮಾರಂಭದಲ್ಲಿ ದೇಣಿಗೆ ಅರ್ಪಣೆ

  ಟಿವಿ9 ನೆಟ್​ವರ್ಕ್ ಪ್ರಮೋಟರ್‌ಗಳು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ಸಲ್ಲಿಸಿದ್ದಾರೆ. ತ್ರಿದಂಡ ಚಿನ್ನ ಜೀಯಾರ್ ರಾಮಾನುಜ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ, ಸಮಾರಂಭದಲ್ಲಿ ದೇಣಿಗೆ ಅರ್ಪಿಸಲಾಗಿದೆ. ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ್ ರಾವ್ ಅವರು 5 ಕೋಟಿ ರೂಪಾಯಿ ಹಾಗೂ ಮೆಘಾ ಇಂಜಿನಿಯರಿಂಗ್ ಗ್ರೂಪ್ ಎಂಡಿ ಪಿ.ವಿ.ಕೃಷ್ಣಾರೆಡ್ಡಿ ಅವರು 6 ಕೋಟಿ ರೂಪಾಯಿ ದೇಣಿಗೆಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಡೆದಿರುವ ದೇಣಿಗೆ ಅಭಿಯಾನಕ್ಕೆ ಟಿವಿ9 ನೆಟ್‌ವರ್ಕ್ ಪ್ರಮೋಟರ್ಸ್ ಕೈಜೋಡಿಸಿದ್ದಾರೆ. ಶ್ರೀ ಚಿನ್ನ ಜೀಯರ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಆರ್‌ಎಸ್‌ಎಸ್ ಹಿರಿಯ ನಾಯಕ ಭೈಯಾಜಿ ಜೋಶಿ ಅವರು ಉಪಸ್ಥಿತರಿದ್ದರು.

 • 23 Jan 2021 12:26 PM (IST)

  ಶಿವಮೊಗ್ಗ ಸ್ಫೋಟ: ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸಮಸ್ಯೆ

  ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣದ ನಂತರ ಸುತ್ತಮುತ್ತಲಿನ ಗ್ರಾಮದ ಜನರಿಗೆ ಕಾಣಿಸಿಕೊಂಡ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
  ಕಿವಿ, ಕಣ್ಣು ಮತ್ತು ಶ್ವಾಸಕೋಶದಲ್ಲಿ ಕಾಣಿಸಿಕೊಂಡ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ನಿನ್ನೆಯಿಂದ ಸಾಕಷ್ಟು ಜನರಿಗೆ ಸರಿಯಾಗಿ ಕಿವಿ ಕೇಳುತ್ತಿಲ್ಲ, ಕಣ್ಣು ಮಂಜು ಮಂಜಾಗಿ ಕಾಣುತ್ತಿದೆ. ಕೆಲವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಟಿವಿ9 ಕನ್ನಡದ ಜೊತೆ ಜನರು ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕರು ಆರೋಗ್ಯ ಇಲಾಖೆ ಗ್ರಾಮಗಳಿಗೆ ಬರುವಂತೆ ಮನವಿ ಮಾಡಿದ್ದಾರೆ.

 • 23 Jan 2021 12:21 PM (IST)

  ಎಲ್ಲರಿಗೂ ಸಾಕ್ಷಿ ಪ್ರಜ್ಞೆ ಇದ್ದರೆ ಅಕ್ಕನ ಆಶಯವನ್ನು ಈಡೇರಿಸಬಹುದು: ಮುಖ್ಯಮಂತ್ರಿ

  ಮೈಸೂರಿನಲ್ಲಿ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ‌ ಬಿ.ಎಸ್. ಯಡಿಯೂರಪ್ಪ ಬೆಟ್ಟದ ಮೇಲೆ‌ ಮನೆಯ ಮಾಡಿ ಮೃಗಗಳಿಗೆ ಅಂಜಿದರೆಂತಯ್ಯ ನಾಣ್ಣುಡಿಯನ್ನು ನೆನೆದಿದ್ದಾರೆ.

  ‘ಅಕ್ಕಮಹಾದೇವಿಯವರು ರಚಿಸಿದ ಕವನಗಳು ಮೌಲ್ಯಯುತ ಬರವಣಿಗೆಯಾಗಿವೆ. ಮನುಕುಲದ ಕಲ್ಯಾಣಕ್ಕೆ ಅಂತರಂಗ ಬಹಿರಂಗ ಶುದ್ದ ಅಕ್ಕನ ಆಶಯವಾಗಿತ್ತು.ಎಲ್ಲರಿಗೂ ಸಾಕ್ಷಿ ಪ್ರಜ್ಞೆ ಇದ್ದರೆ ಅಕ್ಕನ ಆಶಯವನ್ನು ಈಡೇರಿಸಬಹುದು. ಪ್ರತಿಮೆ ಅವರಂತೆ ನಡೆಯುವಂತೆ ಪ್ರೇರಣೆ ನೀಡಲಿ’ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿವರಿಸಿದರು.

 • 23 Jan 2021 12:18 PM (IST)

  ಶಾಸಕನಾಗಬೇಕು, ಮಂತ್ರಿಯಾಗಬೇಕೆಂಬ ಭ್ರಮೆಯಿಲ್ಲ: ಶಾಸಕ ಎ.ಎಸ್.ರಾಮದಾಸ್

  ಮೈಸೂರಿನಲ್ಲಿ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಹೇಳಿಕೆ

  ಸಚಿವ ಸ್ಥಾನ ಸಿಗದಿದ್ದಕ್ಕೇ ಇತ್ತೀಚೆಗೆ ತಾನೇ ಬೇಸರ ವ್ಯಕ್ತಪಡಿಸಿದ್ದ ಶಾಸಕ ಎಸ್. ಎ. ರಾಮದಾಸ್ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗುಣಗಾನ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ‘ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಅಪರೂಪದ ಮುಖ್ಯಮಂತ್ರಿ.ರಾಜಕಾರಣಿಗಳಾದಂತಹವರು ಯಾವುದಕ್ಕೂ ಹೆದರಬೇಡಿ ಎಂಬುದನ್ನು ಅಕ್ಕಮಹಾದೇವಿ ಕಳೆದ 800 ವರ್ಷಗಳ ಹಿಂದೆಯೇ ಹೇಳಿದ್ದಾರೆ. ನನ್ನಂತಹವರಿಗೆ ಕೂಡ ಅಧಿಕಾರದ ಆಸೆ, ಭ್ರಮೆ ಇರಬಾರದು ಎಂದು ಅಕ್ಕ ಹೇಳಿದ್ದಾರೆ. ನನಗೂ ಶಾಸಕನಾಗಬೇಕು, ಮಂತ್ರಿಯಾಗಬೇಕೆಂಬ ಭ್ರಮೆಯಿಲ್ಲ.ಇದಕ್ಕೆ ಅಕ್ಕನವರ ಸಂದೇಶ ವಿಚಾರಧಾರೆಗಳು ಕಾರಣರಾಗಿವೆ’ ಎಂದು ಭಾಷಣದಲ್ಲಿ ಶಾಸಕ ಎಸ್. ಎ. ರಾಮದಾಸ್ ಹೇಳಿಕೆ ನೀಡಿದ್ದಾರೆ.

 • 23 Jan 2021 12:15 PM (IST)

  ಕಾಂಗ್ರೆಸ್​ನಲ್ಲಿ ಮಾದಿಗ ಸಮುದಾಯದ ನಿರ್ಲಕ್ಷ: ಮಾಜಿ ಸಚಿವ ಎಚ್. ಆಂಜನೇಯ

  ಮಾದಿಗ‌ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ದೊಡ್ಡ ಸಮುದಾಯವನ್ನು ಕಾಂಗ್ರೆಸ್ ಸಂಘಟನೆಯಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ‌ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ಸಮುದಾಯದ ನನ್ನ ಹೆಸರು, ಎಲ್ ಹನುಮಂತಯ್ಯ ಹಾಗೂ ತಿಮ್ಮಪ್ಪ ಅವರ ಹೆಸರನ್ನು ಕಾಂಗ್ರೆಸ್ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

 • 23 Jan 2021 12:11 PM (IST)

  ತಮಿಳುನಾಡಿಗೆ ಆಗಮಿಸಿದ ರಾಹುಲ್ ಗಾಂಧಿ

  ತಮಿಳುನಾಡಿನ ಕೊಯಮತ್ತೂರುಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ತಮಿಳುನಾಡಿನ ಜನರೊಂದಿಗೆ ಸಂವಾದ, ಚರ್ಚೆ ನಡೆಸಲಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

 • 23 Jan 2021 12:07 PM (IST)

  ಟ್ರ್ಯಾಕ್ಟರ್ ಪರೆಡ್: ದಾವಣಗೆರೆಯಿಂದ ದೆಹಲಿಗೆ ಹತ್ತು ರೈತರ ಪ್ರಯಾಣ

  ರಾಜ್ಯದ ರೈತ ಕ್ರಾಂತಿ ಹೋರಾಟ ಸಂಘಟನೆಯ ಅರಳಾಪುರ ಮಂಜೆಗೌಡ ಅವರ ನೇತ್ರತ್ವದ ಜಾಥಾ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಇದೇ 26 ರಂದು ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ದಾವಣಗೆರೆ ಸೇರಿ ರಾಜ್ಯದ ವಿವಿಧ ಭಾಗದ ರೈತರು ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗವಹಿಸಲು ನಿರ್ಧರಿಸಿದ್ದು, ಇಂದು ದಾವಣಗೆರೆಗೆ ಆಗಮಿಸಿದ ಜಾಥಾವನ್ನು ರಾಜ್ಯ ರೈತ ಸಂಘದ ಹುಚ್ಚವನಳ್ಳಿ ಮಂಜುನಾಥ ನೇತ್ರತ್ವದ ಸಂಘಟನೆ ಸ್ವಾಗತಿಸಿತು. ದಾವಣಗೆರೆಯಿಂದ ಹತ್ತು ಜನರು ದೆಹಲಿಗೆ ಪಯಣಿಸಲಿದ್ದಾರೆ.

 • 23 Jan 2021 11:52 AM (IST)

  ಹಿಂದೆ ಕಿಸ್ತಪೂರ್ವ, ಕ್ರಿಸ್ತಶಕ: ಈಗ ಮೋದಿ ಪೂರ್ವ, ಮೋದಿ ನಂತರ

  ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ವ್ಯಾಖ್ಯಾನ

  ನಮ್ಮ ಮಾತಿನ ಪ್ರತಿ ಶಬ್ದವೂ ಜವಾಬ್ದಾರಿಯಿಂದ ಕೂಡಿರಬೇಕು ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಹೇಳಿದರು.
  ನಾವು ಸ್ವತಂತ್ರರಲ್ಲ, ಜವಾಬ್ದಾರಿ ಇದೆ ಎಂಬುವನ್ನು ಅರಿಯಿರಿ. ಬಿಜೆಪಿ ವಕ್ತಾರರು ತಮ್ಮ ಜವಾಬ್ದಾರಿ ಅರಿತು ಮಾತಾಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಾವೆಲ್ಲರೂ ಬದಲಾಗಿದ್ದೇವೆ.ರಾಜಕಾರಣ, ಆಡಳಿತ, ಮಾನಸಿಕವಾಗಿಯೂ ಬದಲಾಗಿದ್ದೇವೆ. ಹಿಂದೆ ಕಿಸ್ತಪೂರ್ವ, ಕ್ರಿಸ್ತಶಕ: ಈಗ ಮೋದಿ ಪೂರ್ವ, ಮೋದಿ ನಂತರ ಎಂದು ಅಧ್ಯಯನ ಮಾಡುವಂತಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

 • 23 Jan 2021 11:47 AM (IST)

  ರಾಮ ಮಂದಿರಕ್ಕೆ ದೇಣಿಗೆ

  ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆಗಾಗಿ ಶ್ರೀ ತ್ರಿದಾನಾ ಚಿನ್ನಾ ಜೀಯರ್ ರಾಮಾನುಜ ಸ್ವಾಮಿ ಜಿ ಅವರು ಶುಕ್ರವಾರ ಹೈದರಾಬಾದ್‌ನಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಿದರು.ಈ ಸಂದರ್ಭದಲ್ಲಿ ಮೈ ಹೋಮ್ ಗ್ರೂಪ್ ಅಧ್ಯಕ್ಷ ಶ್ರೀ ರಾಮೇಶ್ವರ ರಾವ್ ಅವರು 5 ಕೋಟಿ ರೂ. ಮತ್ತು ಮೇಘಾ ಎಂಜಿನಿಯರಿಂಗ್‌ನ ಸಿಎಂಡಿ ಶ್ರೀ ಕೃಷ್ಣ ರೆಡ್ಡಿ 6 ಕೋಟಿ ರೂ ದೇಣಿಗೆ ನೀಡಿದರು. ಭೈಯಾ ಹಿ ಜೋಶಿ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

 • 23 Jan 2021 11:37 AM (IST)

  ಲಕ್ಷ್ಮಣನನ್ನು ಬದುಕಿಸಿದ ಸಂಜೀವಿನಿಯಂತೆ ಭಾರತ ನೀಡಿದ ಕೊರೊನಾ ಲಸಿಕೆ: ಬ್ರೆಜಿಲ್

  ಬ್ರೆಜಿಲ್ ಪ್ರಧಾನಿ ಜೈರ್ ಎಂ ಬೊಲ್ಸೊನಾರೋ ವ್ಯಾಖ್ಯಾನ

  ಭಾರತದಲ್ಲಿ ತಯಾರಿಸಿದ 20 ಲಕ್ಷ ಕೊರೊನಾ ಲಸಿಕೆಯನ್ನು ಒದಗಿಸಿದ್ದಕ್ಕಾಗಿ ಬ್ರೆಜಿಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿ ಗೌರವ ಅರ್ಪಿಸಿದೆ. ರಾಮಾಯಣದಲ್ಲಿ ಲಕ್ಷ್ಮಣನನ್ನು ಬದುಕಿಸಲು ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತರುವ ಸಂದರ್ಭವನ್ನು ಸ್ಮರಿಸಿರುವ ಬ್ರೆಜಿಲ್ ಪ್ರಧಾನಿ ಜೈರ್ ಎಂ ಬೊಲ್ಸೊನಾರೋ ಕೊರೊನೊ ಸೋಂಕನ್ನು ಶಮನಗೊಳಿಸಲು ಭಾರತ ನೀಡಿರುವ ಲಸಿಕೆ ಸಂಜೀವಿನಿ ದೊರೆತಂತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

 • 23 Jan 2021 11:23 AM (IST)

  1.06 ಲಕ್ಷ ಫಲಾನುಭವಿಗಳಿಗೆ ಭೂ ಒಡೆತನದ ಪತ್ರ ವಿತರಣೆ

  ಅಸ್ಸಾನ 1.06 ಲಕ್ಷ ಫಲಾನುಭವಿಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಮಾಲಿಕತ್ವದ ಅಧಿಕೃತ ಪತ್ರ ವಿತರಿಸಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತ್ತು ಅಸ್ಸಾಂ ಸರ್ಕಾರ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

 • 23 Jan 2021 11:18 AM (IST)

  ತಮಿಳುನಾಡಲ್ಲಿ ಅರಳದು ಕಮಲ: ಡಿಎಂಕೆ ನಾಯಕಿ ಕನಿಮೋಳಿ

  ತಮಿಳುನಾಡಿನಲ್ಲಿ ಯಾವುದೇ ಕಾರಣಕ್ಕೂ ಕಮಲ ಅರಳುವುದಿಲ್ಲ. ಬಿಜೆಪಿ ನಾಯಕರು ಎಷ್ಟು ಬಾರಿ ತಮಿಳುನಾಡಿಗೆ ಬಂದು ಪ್ರಚಾರ ನಡೆಸಿದರೂ ಬಿಜೆಪಿ ಗೆಲುವು ಸಾಧಿಸದು ಎಂದು ರಾಮೇಶ್ವರಂನಲ್ಲಿ ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರ ಹೆಚ್ಚಿಸಿರುವ ಬಿಜೆಪಿಯನ್ನು ಗುರಿಯಾಗಿರಿಸಿಕೊಂಡು ಅವರು ಹೀಗೆಂದಿದ್ದಾರೆ.

 • 23 Jan 2021 11:05 AM (IST)

  ಕಾಂಗ್ರೆಸ್​ನ ಕೇರಳ ವೀಕ್ಷಕರ ತಂಡದಲ್ಲಿ ಜಿ.ಪರಮೇಶ್ವರ್

  ಮುಂಬರುವ ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇರಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ವೀಕ್ಷಕರ ತಂಡದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಇದ್ದರು. ಎಐಸಿಸಿ ವೀಕ್ಷಕರ‌ ತಂಡದ ನೇತೃತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ವಹಿಸಿದ್ದರು.

 • 23 Jan 2021 11:01 AM (IST)

  ತೃತೀಯ ಲಿಂಗಿಗಳ ಹಕ್ಕು ರಕ್ಷಣೆಗೆ ರಾಜ್ಯಗಳಿಗೆ ಸೂಚನೆ ನೀಡಿದ ಕೇಂದ್ರ

  ತೃತೀಯ ಲಿಂಗಿಗಳ ಹಿತ ಕಾಯಲು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ತೃತೀಯ ಲಿಂಗಿಗಳ ಹಕ್ಕು ರಕ್ಷಣೆ ರಾಜ್ಯಗಳ ಕರ್ತವ್ಯವಾಗಿದ್ದು,ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
  ಪೊಲೀಸರು ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತೃತೀಯ ಲಿಂಗಿಗಳ ರಕ್ಷಣೆ, ಪುನರ್ವಸತಿಗಾಗಿ ಕ್ರಮ ಕೈಗೊಳ್ಳಬೇಕು. ತೃತೀಯ ಲಿಂಗಿಗಳ ಹಕ್ಕು ಕಾಪಾಡುವಂತೆ ಕೇಂದ್ರ ಸೂಚನೆ ನೀಡಿದೆ.

 • 23 Jan 2021 10:47 AM (IST)

  ವಿಜಯ್ ಮಲ್ಯ ಆಶ್ರಯದ ಮೊರೆ: ಪ್ರತಿಕ್ರಿಯಿಸದ ಬ್ರಿಟನ್ ಗೃಹ ಕಾರ್ಯದರ್ಶಿ

  ಭಾರತದ ಕಾನೂನು ಕುಣಿಕೆಯಿಂದ ಪಾರಾಗಲು ಒಂದಿಲ್ಲೊಂದು ಕಸರತ್ತುಗಳಲ್ಲಿ ನಿರತರಾಗಿರುವ 65 ವರ್ಷದ ವಿಜಯ್ ಮಲ್ಯ, ಇದೀಗ ಬ್ರಿಟನ್​ನ ಗೃಹ ಕಾರ್ಯದರ್ಶಿಗೆ ಪತ್ರ ಬರೆದು ಆಶ್ರಯದ ಮೊರೆ ಹೋಗಿದ್ದಾರೆ. ಆದರೆ, ಅವರ ಮನವಿಗೆ ಈವರೆಗೂ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಪ್ರತಿಕ್ರಿಯಿಸಿಲ್ಲ.

 • 23 Jan 2021 10:02 AM (IST)

  ಫೆಬ್ರವರಿ 9ಕ್ಕೆ ಟ್ರಂಪ್ ದೋಷಾರೋಪಣೆ ವಿಚಾರಣೆ

  ಜನವರಿ 6ರಂದು ಅಮೆರಿಕ ಕ್ಯಾಪಿಟಲ್ ಕಟ್ಟಡದ ಆವರೆಣದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಅಮೆರಕ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 9ಕ್ಕೆ ದೋಷಾರೋಪಣೆ ವಿಚಾರಣೆ ಎದುರಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆಗೆ ಅಮೆರಿಕ ಸಂಸತ್​ನಲ್ಲಿ ಬಹುಮತ ದೊರೆತಿತ್ತು.

 • 23 Jan 2021 09:50 AM (IST)

  ಇಂದು ಅಸ್ಸಾಂ, ಬಂಗಾಳಕ್ಕೆ ಪ್ರಧಾನಿ ಭೇಟಿ

  ಇಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಸ್ಸಾಂನಲ್ಲಿ 1 ಲಕ್ಷ ಫಲಾನುಭವಿಗಳಿಗೆ ಭೂ ಹಕ್ಕು ಪತ್ರ ವಿತರಿಸಿ ನಂತರ, ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನ ಆಚರಣೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

 • 23 Jan 2021 09:46 AM (IST)

  ಪಾದಯಾತ್ರೆ, ಶಂಖನಾದ: ನೇತಾಜಿಯವರ ಜನ್ಮದಿನಕ್ಕೆ ಬಂಗಾಳ ಸಂಭ್ರಮ

  ನೇತಾಜಿಯವರ 125ನೇ ಜನ್ಮದಿನದ ಪ್ರಯುಕ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮಧ್ಯಾನ್ಹ 12:15 ಕ್ಕೆ ಮುಖ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಸೈರನ್ ಮೊಳಗಿಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕರು ಶಂಖನಾದ ಮೊಳಗಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿದೆ.

 • 23 Jan 2021 09:31 AM (IST)

  ನೇತಾಜಿಯವರನ್ನು ಸ್ಮರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

  ಸುಭಾಷ್‌ಚಂದ್ರ ಬೋಸ್​ರವರ 125ನೇ ಜನ್ಮ ದಿನಾಚರಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ. ‘ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನೇತಾರ, ಧೈರ್ಯದಿಂದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಹೋರಾಟದ ಕಹಳೆಯನ್ನೂದಿದ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳು. ಅವರ ದೇಶಪ್ರೇಮ, ಧೈರ್ಯ ಮತ್ತು ಹೋರಾಟಗಳು ಭಾರತೀಯರ ಪಾಲಿಗೆ ಸದಾ ಸ್ಫೂರ್ತಿಯ ಸೆಲೆಗಳಾಗಿವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯರಪ್ಪ ಟ್ವೀಟ್ ಮಾಡಿದ್ದಾರೆ.

 • 23 Jan 2021 09:21 AM (IST)

  ನೇತಾಜಿ 125ನೇ ಜನ್ಮದಿನ: ‘ಪರಾಕ್ರಮ ದಿವಸ‘ ಆಚರಣೆ

  ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ.ಪಶ್ಚಿಮ ಬಂಗಾಳದ ಮಹಾನ್ ಸ್ವಾತಂತ್ರ್ಯ ಸೇನಾನಿಯನ್ನು ನೆನಪಿಸಿಕೊಳ್ಳಲು ಕೇಂದ್ರ ಸರ್ಕಾರ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳಿಯಲ್ಲಿ ಟ್ವೀಟ್ ಮಾಡಿ ನೇತಾಜಿಯವರನ್ನು ಸ್ಮರಿಸಿದ್ದಾರೆ.

 • 23 Jan 2021 09:12 AM (IST)

  ತಮಿಳುನಾಡಿಗೆ ರಾಹುಲ್ ಗಾಂಧಿ ಪ್ರವೇಶ

  ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ತಯಾರಿಯನ್ನು ಕಾಂಗ್ರೆಸ್ ಪ್ರಾರಂಭಿಸಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೊಯಂಬತ್ತೂರ್​ನಲ್ಲಿ ಪ್ರಚಾರ ಮೆರವಣಿಗೆ ನಡೆಸಲಿದ್ದಾರೆ. ಸಂಜೆ, ತಿರುಪ್ಪೂರ್ ಜಿಲ್ಲೆಯಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

 • 23 Jan 2021 08:49 AM (IST)

  ವಿಶ್ವದಲ್ಲಿನ ಒಟ್ಟು ಕೊರೊನಾ ಪೀಡಿತರ ಸಂಖ್ಯೆ

  ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 9,87,05,632ಕ್ಕೇರಿದೆ. ಈವರೆಗೆ ಕೊರೊನಾದಿಂದ 21,14,567 ಜನ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರಲ್ಲಿ 7,08,92,467 ಜನರು ಗುಣಮುಖರಾಗಿದ್ದಾರೆ. ಕೊರೊನಾ ಸಕ್ರಿಯ ಪ್ರಕರಣಗಳು ಒಟ್ಟು 2,56,98,598.

 • 23 Jan 2021 08:45 AM (IST)

  ಶಿವಮೊಗ್ಗ ಸ್ಫೋಟ ಪ್ರಕರಣ: ಬಂಧಿತ ಮೂವರನ್ನು ವಿಚಾರಣೆ ನಡೆಸಲಿರುವ ಪೊಲೀಸರು

  ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗ ಲೀಸ್‌ಗೆ ಪಡೆದಿದ್ದ ಸುಧಾಕರ್, ಪಾಲುದಾರ ನರಸಿಂಹ ಹಾಗೂ ಜಮೀನು ಮಾಲೀಕ ಅವಿನಾಶ್ ಕುಲಕರ್ಣಿ ಇವರನ್ನು ಪೊಲೀಸರು ಇಂದು ವಿಚಾರಣೆ ನಡೆಸಲಿದ್ದಾರೆ.

 • 23 Jan 2021 08:29 AM (IST)

  ಇಂದು ಮೈಸೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

  ಇಂದು ಬೆಳಿಗ್ಗೆ ಮೈಸೂರಿನ ಜೆಪಿ ನಗರದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದ ನಿಮಿತ್ತ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮೈಸೂರಿಗೆ ಆಗಮಿಸಲಿದ್ದಾರೆ. ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ನಂತರ 12.30ಕ್ಕೆ ವಿಜಯನಗರದ ಬಸವ ಭವನ ಉದ್ಘಾಟನೆ ನಿಮಿತ್ತ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ.