Budget 2021 ನಿರೀಕ್ಷೆ | ಡಿಜಿಟಲ್ ಆರ್ಥಿಕತೆ ಸುಧಾರಣೆ ಈ ಹೊತ್ತಿನ ತುರ್ತು

ಸಂಕಷ್ಟ ಕಾಲದಲ್ಲಿ ಜನರಿಗೆ ಆಸರೆಯಾಗಿ ನಿಂತ ಡಿಜಿಟಲ್ ಜಗತ್ತಿಗೆ ಕಾಯಕಲ್ಪ ನೀಡಲು ಈ ಬಾರಿಯ ಬಜೆಟ್​ನಲ್ಲಿ ಗಮನಾರ್ಹ ಕ್ರಮಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Budget 2021 ನಿರೀಕ್ಷೆ | ಡಿಜಿಟಲ್ ಆರ್ಥಿಕತೆ ಸುಧಾರಣೆ ಈ ಹೊತ್ತಿನ ತುರ್ತು
ಕೇಂದ್ರ ಬಜೆಟ್ - ಡಿಜಿಟಲ್ ತೆರಿಗೆ
Rashmi Kallakatta

|

Jan 30, 2021 | 7:49 PM

ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲೆಂದು ಹೇರಿದ ಲಾಕ್​ಡೌನ್​ ನಂತರ ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಸಿಕ್ಕಿದೆ. ಈ ಕ್ಷೇತ್ರದ ಲೋಪದೋಷಗಳು ಎದ್ದು ಕಂಡಿದ್ದು ಇದೇ ಅವಧಿಯಲ್ಲಿ. ಲಾಕ್​ಡೌನ್​ಗೆ ಮೊದಲಿನಿಂದಲೂ ಡಿಜಿಟಲ್​ ಆರ್ಥಿಕತೆಯ ಅನಿವಾರ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುತ್ತಿದ್ದರು. ಸಂಕಷ್ಟ ಕಾಲದಲ್ಲಿ ಜನರಿಗೆ ಆಸರೆಯಾಗಿ ನಿಂತ ಡಿಜಿಟಲ್ ಜಗತ್ತಿಗೆ ಕಾಯಕಲ್ಪ ನೀಡಲು ಈ ಬಾರಿಯ ಬಜೆಟ್​ನಲ್ಲಿ ಗಮನಾರ್ಹ ಕ್ರಮಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಭಾರತದಲ್ಲಿ ಜನರು ಡಿಜಿಟಲ್ ಜಗತ್ತಿಗೆ ತೆರೆದುಕೊಂಡಿರುವ ಕಾರಣ ಡಿಜಿಟಲ್ ಮೂಲ ಸೌಕರ್ಯ ಮತ್ತು ತಂತ್ರಜ್ಞಾನ ವಲಯಕ್ಕೆ ಹೆಚ್ಚು ಒತ್ತು ನೀಡುವ ಕ್ರಮಗಳನ್ನು ಈ ಬಜೆಟ್​ನಲ್ಲಿ ನಿರೀಕ್ಷಿಸಲಾಗಿದೆ. ದೇಶದಲ್ಲಿ ಡಿಜಿಟಲ್ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ. ಹಾಲಿ ಜಾರಿಯಲ್ಲಿರುವ ನೀತಿಗಳಲ್ಲಿ ಅಗತ್ಯ ಸುಧಾರಣೆ ತರುವ ಮೂಲಕ ಮತ್ತು ಅಗತ್ಯವಿರುವ ಕ್ಷೇತ್ರಗಳಲ್ಲಿ ನೀತಿಗಳನ್ನು ರೂಪಿಸುವ ಮೂಲಕ ಡೇಟಾ ಸೆಂಟರ್ ಮಾರುಕಟ್ಟೆಯಲ್ಲಿ ಭಾರತ ತನ್ನ ಪಾಲುದಾರಿಕೆಯನ್ನು ಹೆಚ್ಚಿಸಬಹುದು ಎಂದು ಹಣಕಾಸು ಸೇವೆ, ಲೆಕ್ಕಪರಿಶೋಧನೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ವೃತ್ತಿಪರ ಸಲಹೆ ನೀಡುವ ಡೆಲಾಯಿಟ್ ಇಂಡಿಯಾ ಸಂಸ್ಥೆ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ ನಂತರ ಡಿಜಿಟಲ್ ಜಗತ್ತಿಗೆ ಜನರು ತೆರೆದುಕೊಂಡರು. ಪ್ರತಿನಿತ್ಯದ ವಹಿವಾಟುಗಳಿಗಾಗಿ ಜನರು ಡಿಜಿಟಲ್ ವ್ಯವಸ್ಥೆಯನ್ನು ಬಳಸುವುದು ಹೆಚ್ಚಾಯಿತು. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿಯೂ ಡಿಜಿಟಲ್ ಸೇವೆಯ ವ್ಯಾಪ್ತಿ ವಿಸ್ತಾರವಾಯಿತು. ತಂತ್ರಜ್ಞಾನ ವಲಯವು ದೇಶದ ಆರ್ಥಿಕತೆಯಲ್ಲಿ ಹೆಚ್ಚಿನ ಪ್ರಭಾವ ಬೀರಿತು ಎಂದು ಡೆಲಾಯಿಟ್ ಇಂಡಿಯಾದ ಪಾಲುದಾರ ಪಿ.ಎನ್.ಸುದರ್ಶನ್ ಹೇಳಿದ್ದಾರೆ.

ಭಾರತದ ಡಿಜಿಟಲ್ ವಲಯ ಕೇಂದ್ರ ಬಜೆಟ್​ನಲ್ಲಿ ಏನು ನಿರೀಕ್ಷಿಸುತ್ತಿದೆ ಎಂಬುದರ ಬಗ್ಗೆ ಡೆಲಾಯಿಟ್ ಇಂಡಿಯಾ ಸಂಸ್ಥೆ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಸಂಗ್ರಹ ರೂಪ ಇಲ್ಲಿದೆ.

1. ಡೇಟಾ ಸೆಂಟರ್ ಮತ್ತು ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರತ ಪ್ರಗತಿ ಸಾಧಿಸುತ್ತಿದ್ದು, ಕ್ಯಾಪೆಕ್ಸ್​ನಲ್ಲಿ (ಬಂಡವಾಳ ವೆಚ್ಚ) ಇದು ಹೆಚ್ಚಿನ ಹೂಡಿಕೆಗೆ ಪೂರಕವಾಗಲಿದೆ. ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಉಪಕರಣಗಳ ಸ್ಥಳೀಯ ಉತ್ಪಾದನೆಯು ಆಮದನ್ನು ಕಡಿಮೆಗೊಳಿಸುತ್ತದೆ. ಇದು ಎಲೆಕ್ಟ್ರಾನಿಕ್ ಉಪಕರಣಗಳ ಒಟ್ಟಾರೆ ಉತ್ಪಾದನೆಯ ಪರಿಸ್ಥಿತಿ ಸುಧಾರಣೆಗೆ ಸಹಾಯವಾಗಲಿದೆ.

2. ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ 1,140 ಸಂಶೋಧನೆ ಮತ್ತು ಅಭಿವೃದ್ಧಿ (ಆರ್​ ಆ್ಯಂಡ್ ಡಿ) ಕೇಂದ್ರಗಳಿದ್ದು, ನಮ್ಮ ದೇಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿ ದೇಶವಾಗಿ ಮಾರ್ಪಟ್ಟಿದೆ. ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್ (ಎಂಎಲ್) ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನವು ದೇಶದ ಪ್ರಮುಖ ವೈಜ್ಞಾನಿಕ ಮತ್ತು ಕೈಗಾರಿಕಾ ಅಧ್ಯಯನ ವಲಯವನ್ನು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಭಾವಿಸಲಿದೆ.

3. ಭಾರತವು ತಂತ್ರಜ್ಞಾನ ಸ್ನೇಹಿ ತೆರಿಗೆ ನೀತಿಯನ್ನು ಹೊಂದಿರಬೇಕು. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯೊಂದಿಗೆ, ಡಿಜಿಟಲ್ ತೆರಿಗೆಯ ಸುತ್ತಲಿನ ಸಮಸ್ಯೆಗಳನ್ನು ಬಗೆಹರಿಸುವ ಅವಶ್ಯಕತೆಯಿದೆ.

4. ಬಿಇಪಿಎಸ್ (BEPS – Base Erosion and Profit Shifting) ಅಂದರೆ, ವಿವಿಧ ದೇಶಗಳ ತೆರಿಗೆ ನಿಯಮಗಳಲ್ಲಿರುವ ಇರುವ ನ್ಯೂನತೆಗಳನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರಕ್ಕೆ ಮಾಡುವ ತೆರಿಗೆ ವಂಚನೆಯನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಬಿಇಪಿಎಸ್ ಕಾರ್ಯ ಯೋಜನೆಯಡಿಯಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು (ಒಇಸಿಡಿ) ಆದಾಯದ ತೆರಿಗೆ ವಿಧಿಸದ ಸಮಸ್ಯೆಯನ್ನು ನಿಭಾಯಿಸಲು ಒಮ್ಮತ ಆಧಾರಿತ ಪರಿಹಾರವನ್ನು ಅಭಿವೃದ್ಧಿಪಡಿಸಲು ಒಪ್ಪಿಕೊಂಡಿತು. ಭಾರತೀಯ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ ಕೆಲವು ತೆರಿಗೆಗಳು (Equalisation Levy EQL- ಭಾರತದಲ್ಲಿ ನಡೆಯುವ ವಹಿವಾಟಿನಿಂದ ವಿದೇಶಿ ಇ-ಕಾಮರ್ಸ್​ ಕಂಪನಿಗಳು ಪಡೆದುಕೊಳ್ಳುವ ಹಣದ ಮೇಲೆ ವಿಧಿಸುವ ತೆರಿಗೆ) ಮತ್ತು Significant Economic Presence (SEP – ಅನಿವಾಸಿ ಭಾರತೀಯರು ಭಾರತದಲ್ಲಿ ನಡೆಸುವ ವಹಿವಾಟಿಗೆ ತೆರಿಗೆ ಲೆಕ್ಕ ಹಾಕಲು ರೂಪಿಸಿರುವ ನಿಯಮಗಳು)  ಬಿಇಪಿಎಸ್ ಕಾರ್ಯ ಯೋಜನೆಯ ಅಂಗವಾಗಿದೆ. ಈ ನಿಯಮಗಳಲ್ಲಿ ಇರುವ ಗೊಂದಲಗಳನ್ನು ಪರಿಹರಿಸಲು ಸರ್ಕಾರ ಹೆಚ್ಚು ಗಮನ ನೀಡಬೇಕಿದೆ.

5. ಕ್ಲೌಡ್ ಆಧಾರಿತ ವಹಿವಾಟುಗಳು ಸೇವೆಗಳ ಸ್ವರೂಪದಲ್ಲಿರುತ್ತವೆ ಮತ್ತು ಸಾಮಾನ್ಯವಾಗಿ  ಇವು ಬಳಕೆದಾರರಿಗೆ ಯಾವುದೇ ಹಕ್ಕನ್ನು ಅನುಮತಿಸುವುದಿಲ್ಲ. ಆದಾಗ್ಯೂ, ಕ್ಲೌಡ್ ಪೇಮೆಂಟ್ ಗಳ ಮೇಲಿನ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ವ್ಯಾಜ್ಯಕ್ಕೆ ದಾರಿ ಮಾಡಿಕೊಡುವುದರಿಂದ ಕ್ಲೌಡ್ ಸರ್ವೀಸ್ ಗಳ ಪಾವತಿಗಳನ್ನು ತೆರಿಗೆ ಅಧಿಕಾರಿಗಳು ಗೌರವಧನ ಎಂದು ಪರಿಗಣಿಸುತ್ತಾರೆ.

6. ಇ-ಕಾಮರ್ಸ್ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಉತ್ತೇಜಿಸಲು ಎಎಂಪಿ ಪುಟ (ವೇಗವರ್ಧಿತ ಮೊಬೈಲ್ ಪುಟಗಳಿಗೆ) ಖರ್ಚು ಮಾಡುತ್ತಾರೆ. ಈ ಖರ್ಚುಗಳನ್ನು ತೆರಿಗೆ ಅಧಿಕಾರಿಗಳು ಬಂಡವಾಳ ಎಂದು ಪರಿಗಣಿಸುತ್ತಿದ್ದಾರೆ. ಅಂತಹ ಖರ್ಚುಗಳ ಪ್ರಯೋಜನಗಳು ಅಲ್ಪಾವಧಿಯದ್ದಾಗಿದ್ದರೂ ಸಹ ಎಎಂಪಿ ವೆಚ್ಚದ ಮೇಲೆ ಹೇರುವ ತೆರಿದೆ ಬಗ್ಗೆ ಸರ್ಕಾರ ಅಗತ್ಯವಾದ ಸ್ಪಷ್ಟೀಕರಣವನ್ನು ನೀಡಬೇಕು.

7. ರಫ್ತು ಅಥವಾ  ಶೂನ್ಯ ದರದ ಸರಬರಾಜಿನಲ್ಲಿ ಬಳಸುವ ಬಂಡವಾಳ ಸರಕುಗಳಿಗೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮರುಪಾವತಿ ಸದ್ಯ ಲಭ್ಯವಿಲ್ಲ. ವ್ಯಾಪಾರದಲ್ಲಿನ ಹೂಡಿಕೆಯಲ್ಲಿ ಬಂಡವಾಳ ಸರಕು ಮಹತ್ತರ ಪಾತ್ರವಹಿಸುತ್ತಿದ್ದು, ಮರುಪಾವತಿಗೆ ನಿರ್ಬಂಧ ಹೇರುವುದು ನಗದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಹಾಗಾಗಿ ಬಂಡವಾಳ ಸರಕುಗಳ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಮರುಪಾವತಿ ಮಾಡಬೇಕು ಎಂದು ಡೆಲಾಯಿಟ್ ಬಯಸುತ್ತಿದೆ.

ಟ್ಯಾಕ್ಸ್ ಕ್ರೆಡಿಟ್ ಅಂದರೆ ಸರ್ಕಾರಕ್ಕೆ ಪಾವತಿಸಬೇಕಿರುವ ತೆರಿಗೆಯ ಕೆಲ ಭಾಗವನ್ನು ನೇರವಾಗಿ ಪಾವತಿದಾರರೇ ತಮ್ಮ ಆದಾಯದಿಂದ ಕಳೆದು, ಉಳಿದ ಮೊತ್ತವನ್ನು ಮಾತ್ರ ಆದಾಯದ ಭಾಗವಾಗಿ ಲೆಕ್ಕ ಹಾಕಿ ತೆರಿಗೆ ಪಾವತಿಸಲು ಸಿಗುವ ಅವಕಾಶ. ಒಂದು ವೇಳೆ ತೆರಿಗೆ ಪಾವತಿಸಿದ್ದರೆ, ಪಾವತಿಯಾದ ಮೊತ್ತವನ್ನು ಭವಿಷ್ಯದಲ್ಲಿ ಪಾವತಿಸಬೇಕಾದ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಈ ನಿಯಮಗಳಲ್ಲಿ ಅವಕಾಶ ಇರುತ್ತದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada