ಸಂಕಷ್ಟ ಕಾಲದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಹತ್ತಾರು ವಲಯಗಳಲ್ಲಿ ನೂರಾರು ನಿರೀಕ್ಷೆಗಳು ಮನೆಮಾಡಿವೆ. ಈ ಲೇಖನದಲ್ಲಿ ಎಫ್ಕೆಸಿಸಿಐ ಉಪಾಧ್ಯಕ್ಷರೂ ಆಗಿರುವ ಲೆಕ್ಕಪರಿಶೋಧಕ ಐ.ಎಸ್.ಪ್ರಸಾದ್ ಈ ಬಾರಿಯ ಕೇಂದ್ರ ತಾವು ನಿರೀಕ್ಷಿಸುವುದು ಏನು ಎಂಬ ವಿಚಾರವನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಪರಿಣಾಮದಿಂದ ಕುಸಿದು ಹೋಗಿರುವ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಯೊಂದಿಗೆ ದೇಶದ ಜನರು ಕೇಂದ್ರ ಬಜೆಟ್ಎದುರು ನೋಡುತ್ತಿದ್ದಾರೆ.
ಸ್ವಾತಂತ್ರ್ಯಾನಂತರದ 74 ವರ್ಷಗಳಲ್ಲಿ ಮಂಡನೆಯಾದ ಇತರೆಲ್ಲಾ ವರ್ಷಗಳ ಬಜೆಟ್ಗಿಂತ ಈ ವರ್ಷದ ಬಜೆಟ್ ಮೇಲಿರುವ ನಿರೀಕ್ಷೆಗಳ ಭಾರ ದೊಡ್ಡದು. ಅದರಲ್ಲೂ ಜಿಎಸ್ಟಿ ಸುಧಾರಣೆ ನಂತರದ ಕೆಲ ಬದಲಾವಣೆಗಳಿಂದ ನಿರೀಕ್ಷೆಗಳು ಹೆಚ್ಚಿವೆ. ಸದ್ಯ ಷೇರು ಮಾರುಕಟ್ಟೆ ಮಾತ್ರ ಚೇತರಿಕೆಯಲ್ಲಿದ್ದು ಇತರ ಉದ್ಯಮಗಳು ಕುಸಿದ ಸ್ಥಿತಿಯಲ್ಲೇ ತೆವಳುತ್ತಿವೆ.
ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಅತಿ ಹೆಚ್ಚು ಆದ್ಯತೆ ಕೊಡಲಿದೆ ಎಂಬುದು ನನ್ನ ಊಹೆ ಮತ್ತು ನಿರೀಕ್ಷೆ. ಕೊರೊನಾ ನಂತರ ಆರೋಗ್ಯ ಕ್ಷೇತ್ರದ ಸ್ಥಿತಿಗತಿಗಳು ನಮ್ಮ ಅರಿವಿಗೆ ಬಂದಿವೆ. ಅದರಲ್ಲೂ ಈಗ ಕೊರೊನಾ ಲಸಿಕೆ ಬಂದ ನಂತರ ಉಚಿತ ಲಸಿಕೆ ವಿತರಣೆ ನಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ. ಕೊರೊನಾ ಲಸಿಕೆಯೂ ಸೇರಿದಂತೆ, ಆರೋಗ್ಯ ಕ್ಷೇತ್ರದ ಮೇಲೆ ಅಧಿಕ ಹೂಡಿಕೆ ಆಗಬೇಕು ಎಂಬುದು ನನ್ನ ನಿರೀಕ್ಷೆ.
ಜತೆಜತೆಗೆ, ಉತ್ಪಾದನಾ ಕ್ಷೇತ್ರವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಬೇಕು. ಉತ್ಪಾದನೆಯ ಪ್ರಮಾಣ ಹೆಚ್ಚಿದರೆ ಸಹಜವಾಗಿ ಉದ್ಯೋಗ ಸೃಷ್ಟಿಯೂ ಆಗಲಿದೆ. ಲಾಕ್ಡೌನ್ ಪರಿಣಾಮದಿಂದ ಕುಸಿದಿರುವ ಉದ್ಯೋಗ ಸೃಷ್ಟಿಯ ಚೇತರಿಕೆಗೆ ಉತ್ಪಾದನಾ ಕ್ಷೇತ್ರದಲ್ಲಿನ ಹೂಡಿಕೆಯೇ ಮದ್ದು.
ಬ್ಯಾಂಕಿಂಗ್ ವಲಯದ ಸುಧಾರಣೆ ಕಡೆಗೂ ಸರ್ಕಾರ ಇನ್ನಷ್ಟು ಗಮನಕೊಡುವ ಅಗತ್ಯವಿದೆ. ದೇಶದ ಆರ್ಥಿಕ ಉನ್ನತಿಗೆ ಈ ಕ್ರಮ ಅನಿವಾರ್ಯ. ಬಂಡವಾಳ ಕೊರತೆಯಿಂದ ಬಳಲುತ್ತಿರುವ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಗೊಳಿಸಲು ಸರ್ಕಾರ ಕ್ರಿಯಾಶೀಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಲೀಡ್ ಬ್ಯಾಂಕ್ ಪರಿಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿ, ಬ್ಯಾಂಕ್ಗಳ ಆಡಳಿತ ಸುಧಾರಿಸಬೇಕಿದೆ. ಐಪಿಒ ಮಾದರಿಯಲ್ಲಿ ಹೊಸದಾಗಿ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ, ಅದನ್ನು ಬ್ಯಾಂಕ್ ವಲಯದಲ್ಲಿ ಬಂಡವಾಳ ಮರುಪೂರಣಕ್ಕೆ ಬಳಸುವಂಥ ಕ್ರಮ ತೆಗೆದುಕೊಳ್ಳಬೇಕಿದೆ.
ಕರ್ನಾಟಕದಿಂದ ₹ 1.20 ಲಕ್ಷ ಕೋಟಿ ನೇರ ತೆರಿಗೆ ಸಲ್ಲಿಕೆಯಾಗುತ್ತಿದೆ. ವರ್ಷಕ್ಕೆ ಸುಮಾರು ₹ 2 ಲಕ್ಷ ಕೋಟಿಯಷ್ಟು ನೇರ ತೆರಿಗೆಯನ್ನು ಕೇಂದ್ರಕ್ಕೆ ನೀಡುತ್ತಿದ್ದೇವೆ. ಆದರೆ ಕೇಂದ್ರದಿಂದ ಬರಬೇಕಿದ್ದ ರಾಜ್ಯದ ಪಾಲು ಸಕಾಲಕ್ಕೆ ಬರುತ್ತಿಲ್ಲ. ಸಕಾಲಕ್ಕೆ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಹಣ ಬಂದರೆ, ರಾಜ್ಯದಲ್ಲಿಯೂ ಅಭಿವೃದ್ಧಿ ಚಟುವಟಿಕೆಗಳು ಚುರುಕಾಗುತ್ತವೆ.
ಉತ್ಪಾದನೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸಿ, ರಫ್ತು ಹೆಚ್ಚಿಸಲು ತೆಗೆದುಕೊಳ್ಳುವ ಕ್ರಮಗಳ ಕುರಿತು ನಾನು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಹಿಂದಿನ ಬಜೆಟ್‌ನಲ್ಲಿ ಸರ್ಕಾರ ಕಂಡುಕೊಂಡ ಕಾಲುದಾರಿಯನ್ನೇ ಹೆದ್ದಾರಿಯನ್ನಾಗಿ ಪರಿವರ್ತಿಸಿಕೊಂಡು ಸಾಗಿದರೆ ಆರ್ಥಿಕತೆ ನಿಜಕ್ಕೂ ಸುಧಾರಿಸಬಹುದು.
ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್ ಅಥವಾ ಸರ್ ಚಾರ್ಜ್ ವಿಧಿಸುವ ಸಾಧ್ಯತೆ
Published On - 12:40 pm, Thu, 28 January 21