Up close with Ashwin | ಪ್ರತಿ ಪಂದ್ಯಕ್ಕೂ ಭಿನ್ನವಾದ ಯೋಜನೆಯನ್ನು ಮಾಡಬೇಕಾಗುತ್ತದೆ: ರವಿಚಂದ್ರನ್ ಅಶ್ವಿನ್

ಅಶ್ವಿನ್ ಈ ಸಂದರ್ಶನದಲ್ಲಿ, ಶ್ರೀಧರ್ ಅವರೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ತಮ್ಮ ವೃತ್ತಿಬದುಕು, ಸಾಧನೆ, ಪ್ಲ್ಯಾನಿಂಗ್, ಕೊವಿಡ್ ಮೊದಲಾದವುಗಳ ಬಗ್ಗೆ ಅವರು ಹೇಳಿಕೊಂಡಿದ್ದು ಕೊವಿಡ್​ ಸೃಷ್ಟಿಸಿದ ಕೋಲಾಹಲದ ನಂತರ ಟೀಮ್ ಇಂಡಿಯಾಗೆ ಆಡುತ್ತಿರುವುದು ಅದೃಷ್ಟ ಅಂತ ಹೇಳಿದ್ದಾರೆ.

  • TV9 Web Team
  • Published On - 22:37 PM, 26 Feb 2021
Up close with Ashwin | ಪ್ರತಿ ಪಂದ್ಯಕ್ಕೂ ಭಿನ್ನವಾದ ಯೋಜನೆಯನ್ನು ಮಾಡಬೇಕಾಗುತ್ತದೆ: ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

ಭಾರತದ ಅಗ್ರಮಾನ್ಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮೊಬೈಲ್​ ಫೋನ್ ರಿಂಗುಣಿಸುವುದನ್ನು ನಿಲ್ಲಿಸಿಲ್ಲ. ಅಹಮದಾಬಾದ್​ನಲ್ಲಿ ಅವರು 400 ವಿಕೆಟ್​ಗಳನ್ನು ಪಡೆದ ನಂತರ ಎಲ್ಲರೂ ಅವರನ್ನು ಅಭಿನಂದಿಸುವವರೇ. ಯಾಕಾಗಬಾರದು? ಮುತ್ತಯ್ಯ ಮುರಳೀಧರನ್ ನಂತರ ಅತಿ ಕಡಿಮೆ ಟೆಸ್ಟ್​ಗಳಲ್ಲಿ 400 ವಿಕೆಟ್ ಕ್ಲಬ್ ಸೇರಿರುವ ದಾಖಲೆಯನ್ನು ಅವರು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರ ಕರೀಯರ್​ನ ಇಂಥ ಮಹತ್ವದ ದಿನದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಂದ ಒಂದು ಚಿಕ್ಕ ಸಂದರ್ಶನವನ್ನು ಮಾಡಿಸಿದೆ. ಈ ಸಂದರ್ಶನದಲ್ಲಿ ಅಶ್ವಿನ್, ಶ್ರೀಧರ್ ಅವರೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ತಮ್ಮ ವೃತ್ತಿಬದುಕು, ಸಾಧನೆ, ಪ್ಲ್ಯಾನಿಂಗ್, ಕೊವಿಡ್ ಮೊದಲಾದವುಗಳ ಬಗ್ಗೆ ಅಶ್ವಿನ್ ಹೇಳಿಕೊಂಡಿದ್ದಾರೆ.

ಅಶ್ವಿನ್​ರೊಂದಿಗೆ ಮಾತು ಶುರುಮಾಡುತ್ತಿದ್ದಂತೆಯೇ 400-ವಿಕೆಟ್ ಸಾಧನೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನಿಂದ ವರ್ಷದ ಟೆಸ್ಟ್ ಕ್ರಿಕೆಟ್ ಪ್ರಶಸ್ತಿ ಪಡೆದಿರವುದಕ್ಕೆ ಅಭಿನಂದಿಸುತ್ತಾ ಇದುವರೆಗಿನ ಎಲ್ಲ ಸಾಧನೆಗಳ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದ್ದಾರೆ.

ಶ್ರೀಧರ್ ಅವರ ಅಭಿನಂದನೆ ಮತ್ತು ಪ್ರಶ್ನೆಗೆ ನಗುತ್ತಲೇ ಮಾತು ಶುರು ಮಾಡುವ ಅಶ್ವಿನ್, ಮೂರನೇ ಟೆಸ್ಟ್​ ಆರಂಭವಾದಾಗ ತಾನು ಭಾರಿ ಒತ್ತಡದಲ್ಲಿದ್ದೆ ಎಂದು ಹೇಳಿದ್ದಾರೆ. ಭಾರತ ಅಲ್ಪ ಮೊತ್ತದ ಲೀಡ್​ ಗಳಿಸಿದ್ದರಿಂದ ಪಂದ್ಯ ಬ್ಯಾಲೆನ್ಸಡ್ ಸ್ಥಿತಿಯಲ್ಲಿತ್ತು . ತಾವು 400ನೇ ವಿಕೆಟ್​ ಪಡೆದಿದ್ದು ಗಮನಕ್ಕೆ ಬಂದಿರಲೇ ಇಲ್ಲ. ಆ ವಿಕೆಟ್​ನ ತೀರ್ಪು ಥರ್ಢ್ ಅಂಪೈರ್​ಗೆ (ಡಿಆರ್​ಎಸ್) ಹೋಗಿತ್ತು ಮತ್ತು ತಮಗೆ ದಾಖಲೆಯ ಬಗ್ಗೆ ಗೊತ್ತಾಗಿದ್ದು ಪ್ರೇಕ್ಷಕರೆಲ್ಲ ಎದ್ದು ನಿಂತು ಚಪ್ಪಾಳೆ ಬಾರಿಸಲಾರಭಿಸಿದ ನಂತರವೇ ಎಂದು ಅವರು ಹೇಳಿದ್ದಾರೆ. ಆ ಸಂಧರ್ಭವನ್ನು ನಿಖರವಾಗಿ ಹೇಳಲು ತನಗೆ ಸಾಧ್ಯವಿಲ್ಲ ಎಂದು ಹೇಳುವ ಆಶ್ವಿನ್, ಕಳೆದ ಮೂರು ತಿಂಗಳುಗಳಿಂದ ಟೀಮ್ ಇಂಡಿಯಾ ಬಹಳ ಬ್ಯೂಸಿಯಾಗಿದೆ ಎಂದಿದ್ದಾರೆ.

‘ಟೆಸ್ಟ್ ಪಂದ್ಯಕ್ಕೆ ಮೊದಲಿನ ಮತ್ತು ಅದು ಜಾರಿಯಲ್ಲಿಯಲ್ಲಿರುವಾಗ ಅಶ್ವಿನ್ ಮನಸ್ಥಿತಿ ಹೇಗಿರುತ್ತದೆ, ಅಟಿಟ್ಯೂಡ್ ಹೇಗಿರುತ್ತದೆ ಎಂದು ಶ್ರೀಧರ್ ಕೇಳಿರುವ ಪ್ರಶ್ನೆಗೆ ಅಶ್ವಿನ್, ಮೂಲತಃ ತಾನೊಬ್ಬ ಕ್ರಿಕೆಟ್ ಪ್ರೇಮಿ, ಕ್ರೀಡೆಯನ್ನು ಬಹಳ ಅನಂದಿಸುವುದಾಗಿ ಹೇಳಿ ತನ್ನ ಕನಸುಗಳನ್ನು ಸಾಕಾರಗೊಳಿಸುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಭಾರತದ ಟೀಮಿಗೆ ಗೆಲುವು ತಂದುಕೊಡುವ ಸಂತೋಷಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ ಅಂತ ಅವರು ಹೇಳುತ್ತಾರೆ.

ಕೋವಿಡ್​ ಸಮಯದಲ್ಲಿ ಮತ್ತು ಇಂಡಿಯನ್​ ಪ್ರಿಮೀಯರ್​ ಲೀಗ್ ಆಡಿದ ನಂತರ ತಾನು ಭಾರತಕ್ಕೆ ಪುನಃ ಆಡುವ ಬಗ್ಗೆ ಅನುಮಾನ ಮೂಡಿತ್ತು, ಆದರೀಗ ಆಡುತ್ತಿರುವುದು ತನ್ನ ಅದೃಷ್ಟವೆಂದು ಅಶ್ವಿನ್ ಹೇಳಿದ್ದಾರೆ. ಜೊತೆ ಆಟಗಾರರಿಂದ , ಮಂಡಳಿಯಿಂದ, ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿಗೆ ತಾನು ಋಣಿಯಾಗಿರುವುದಾಗಿ ಅವರು ಹೇಳಿದ್ದಾರೆ.

ಪ್ರತಿ ಟೆಸ್ಟ್​ ಮ್ಯಾಚ್​ಗೆ ಪ್ಲ್ಯಾನಿಂಗ್ ಹೇಗಿರುತ್ತದೆ, ಈ ಪ್ಲ್ಯಾನಿಂಗ್ ಅವರು ವ್ಯಯಿಸುವ ಸಮಯವೆಷ್ಟು ಎಂದು ಶ್ರೀಧರ್ ಕೇಳಿದಾಗ, ಅಸ್ಟ್ರೇಲಿಯಾ ಪ್ರವಾಸದಲ್ಲಿ ಅಡಿಲೇಡ್​ ಟೆಸ್ಟ್​ ಆರಂಭವಾಗುವ ಮೊದಲು ಆಸ್ಟ್ರೇಲಿಯನ್ ಆಟಗಾರರ 8-ಗಂಟೆ ಅವಧಿಯ ಫುಟೇಜ್ ತಾನು ನೋಡಿದ್ದಾಗಿ ಅಶ್ವಿನ್ ನಗುತ್ತಾ ಹೇಳಿದ್ದಾರೆ.

ಪ್ರತಿ ಪಂದ್ಯಕ್ಕೂ ಭಿನ್ನವಾದ ಯೋಜನೆ ಮಾಡಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಎದುರಾಳಿ ತಂಡದ ಆಟಗಾರರ ಫುಟೇಜ್​ಗಳನ್ನು ಮೊದಲು ಸಹ ನೋಡುತ್ತಿದ್ದುದ್ದಾಗಿ ಹೇಳಿದ ಅವರು, ಕೊವಿಡ್​ ಪಿಡುಗುನಿಂದ ಉಂಟಾದ ಲಾಕ್​ಡೌನ್ ಅವಧಿಯಲ್ಲಿ ಹಳೆಯ ಪಂದ್ಯಗಳ ಹಲವಾರು ವಿಡಿಯೊಗಳನ್ನು ನೋಡಿದರಂತೆ. ಹಾಗಾಗಿಯೇ ಕ್ರೀಡೆಯನ್ನು ತಾನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಸುಧಾರಣೆಯಾಗಿದೆ ಅಂತ ಹೇಳುತ್ತಾರೆ. ಸಚಿನ್ ತೆಂಡೂಲ್ಕರ್ ಚೆಪಾಕ್ ಮೈದಾನದಲ್ಲಿ ಶತಕ ಬಾರಿಸಿದ ವಿಡಿಯೊ ನೋಡಿ ಬ್ಯಾಟಿಂಗ್​ನಲ್ಲೂ ಸುಧಾರಣೆಗಳನ್ನು ತಂದುಕೊಂಡಿರುವುದಾಗಿ ಅಶ್ವಿನ್ ಹೇಳುತ್ತಾರೆ. ಹಾಗೆಯೇ, ಆ ಹಳೆಯ ಪಂದ್ಯಗಳ ವಿಡಿಯೊಗಳನ್ನು ನೋಡುವಾಗ ಇನ್ನೂ ಬಹಳಷ್ಟು ಸಾಧಿಸಬೇಕಿದೆ ಅನ್ನುವ ಭಾವನೆ ಮೂಡಿತು ಎಂದು ಅವರು ಹೇಳಿದ್ದಾರೆ. ಕ್ರಿಕೆಟ್​ಗೆ ಸಂಬಂಧಿಸಿದ ವಿಡಿಯೊಗಳನ್ನು ಮನರಂಜನೆ ನೋಡುತ್ತಿದ್ದೆ ಅದರೀಗ ಕ್ರೀಡೆಯನ್ನು ಕಲಿಯಲು, ಅರ್ಥ ಮಾಡಿಕೊಳ್ಳಲು ನೋಡುತ್ತಿದ್ದೇನೆ ಎಂದಿದ್ದಾರೆ.

ಟೆಸ್ಟ್​ ಪಂದ್ಯವೊಂದು ನಡೆಯುವಾಗ ವಿಕೆಟ್ ಪಡೆಯಲು ಮತ್ತು ರನ್ ಗಳಿಸಲು ತಾನು ಬಹಳ ಶ್ರಮಪಡುತ್ತೇನೆ ಅಂತ ಅವರು ಹೇಳುತ್ತಾರೆ.
ತಾನು ಎಸೆತವೊಂದನ್ನು ಬೌಲ್​ ಮಾಡುವ ಮೊದಲೇ ಅದನ್ನು ಬ್ಯಾಟ್ಸ್​ಮನ್ ಹೇಗೆ ಆಡಬಹುದೆನ್ನುವ ಬಗ್ಗೆ ಯೋಚಿಸುತ್ತೇನೆ ಅಂತ ಅಶ್ವಿನ್ ಹೇಳುತ್ತಾರೆ.

ಕ್ರಿಕೆಟ್​ ಪ್ರೇಮಿಗಳು ಅಶ್ವಿನ್ ಅವರ ಇತ್ತೀಚಿನ ಹವ್ಯಾಸವೊಂದನ್ನು ಗಮನಿಸಿರಬಹುದು. ಭಾರತ ಟೆಸ್ಟ್ ಪಂದ್ಯವೊಂದನ್ನು ಗೆದ್ದಾಗ ನೆನಪಿಗೋಸ್ಕರ ಅವರ ಒಂದು ಸ್ಟಂಪ್ ತೆಗೆದುಕೊಳ್ಳುತ್ತಾರೆ. ಭಾರತದ ಹಿಂದಿನ ನಾಯಕ ಮಹೇಂದ್ರಸಿಂಗ್ ಧೋನಿ ಅವರಲ್ಲೂ ಇಂಥ ಅಭ್ಯಾಸವಿತ್ತು, ಸ್ಟಂಪ್​​ ಸಂಗ್ರಹಣೆಯಲ್ಲೂ ಧೋನಿಯ ದಾಖಲೆಯನ್ನು ಹಿಂದಟ್ಟಲಿದ್ದೀರಿ ಅಂತ ಶ್ರೀಧರ್ ಛೇಡಿಸಿದಾಗ, ಧೋನಿಯವರಲ್ಲಿ ಬಹಳಷ್ಟು ಸ್ಟಂಪ್​ಗಳಿವೆ ಅವರ ದಾಖಲೆ ಮುರಿಯಲಾಗದು ಅಂತ ನಗುತ್ತಾ ಹೇಳಿದ ಅಶ್ವಿನ್ ತಾವು ಇತ್ತೀಚಿಗಷ್ಟೇ ಸ್ಟಂಪ್​ಗಳನ್ನು ಸಂಗ್ರಹಿಸಲು ಶುರು ಮಾಡಿದ್ದು ಎಂದಿದ್ದಾರೆ.

ಇದನ್ನೂ ಓದಿ: Ravichandran Ashwin: ಕಡಿಮೆ ಟೆಸ್ಟ್​ಗಳಲ್ಲಿ 400 ವಿಕೆಟ್​ ಪಡೆದ 2ನೇ ಆಟಗಾರ ಅಶ್ವಿನ್ ಮುಡಿಗೆ ಮತ್ತೊಂದು ಗರಿ