‘ನಿಂಬೆಗೂ ಹುಳಿ ಹಿಂಡೈತಿ.. ಬದುಕು ಹಾಳ್ ಮಾಡೈತಿ ಈ ಕೊರೊನಾ’
ವಿಜಯಪುರ: ಜಿಲ್ಲೆ ನಿಂಬೆ ಮತ್ತು ದ್ರಾಕ್ಷಿಯ ತವರೂರು ಎಂದೇ ಪ್ರಸಿದ್ಧ. ಇದಲ್ಲದೆ ಒಳ್ಳೆಯ ಹವಾಮಾನ, ಅನುಕೂಲಕರ ತಾಪಮಾನ ಹಾಗೂ ಫಲವತ್ತಾದ ಭೂಮಿಯನ್ನು ಹೊಂದಿರುವ ಈ ಜಿಲ್ಲೆಯಲ್ಲಿ ದಾಳಿಂಬೆ ಹಾಗೂ ಸದ್ಯ ಡ್ರ್ಯಾಗನ್ ಫ್ರೂಟನ್ನು ಸಹ ಹೇರಳವಾಗಿ ಬೆಳೆಯುತ್ತಾರೆ. ಇಲ್ಲಿನ ಕೃಷಿ ಬೆಳೆಗಳು ವಿವಿಧ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಅದರಲ್ಲಿ ನಿಂಬೆಹಣ್ಣು ಕೂಡ ಒಂದು. ಸದ್ಯ ಜಿಲ್ಲೆಯ 8,500 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆಯನ್ನು ಬೆಳೆಯಲಾಗುತ್ತಿದೆ. ನಿಂಬೆ ಮಾರಾಟಕ್ಕೆ ಹುಳಿ ಹಿಂಡಿದ ಕೊರೊನಾ ಇಂಥ ಉತ್ತಮ ಗುಣಮಟ್ಟದ ನಿಂಬೆಯನ್ನು ಬೆಳೆಯುವ ರೈತರಿಗೆ […]
ವಿಜಯಪುರ: ಜಿಲ್ಲೆ ನಿಂಬೆ ಮತ್ತು ದ್ರಾಕ್ಷಿಯ ತವರೂರು ಎಂದೇ ಪ್ರಸಿದ್ಧ. ಇದಲ್ಲದೆ ಒಳ್ಳೆಯ ಹವಾಮಾನ, ಅನುಕೂಲಕರ ತಾಪಮಾನ ಹಾಗೂ ಫಲವತ್ತಾದ ಭೂಮಿಯನ್ನು ಹೊಂದಿರುವ ಈ ಜಿಲ್ಲೆಯಲ್ಲಿ ದಾಳಿಂಬೆ ಹಾಗೂ ಸದ್ಯ ಡ್ರ್ಯಾಗನ್ ಫ್ರೂಟನ್ನು ಸಹ ಹೇರಳವಾಗಿ ಬೆಳೆಯುತ್ತಾರೆ. ಇಲ್ಲಿನ ಕೃಷಿ ಬೆಳೆಗಳು ವಿವಿಧ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಅದರಲ್ಲಿ ನಿಂಬೆಹಣ್ಣು ಕೂಡ ಒಂದು. ಸದ್ಯ ಜಿಲ್ಲೆಯ 8,500 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆಯನ್ನು ಬೆಳೆಯಲಾಗುತ್ತಿದೆ.
ನಿಂಬೆ ಮಾರಾಟಕ್ಕೆ ಹುಳಿ ಹಿಂಡಿದ ಕೊರೊನಾ ಇಂಥ ಉತ್ತಮ ಗುಣಮಟ್ಟದ ನಿಂಬೆಯನ್ನು ಬೆಳೆಯುವ ರೈತರಿಗೆ ಮಾತ್ರ ಇದೀಗ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ. ಇದಕ್ಕೆ ಪ್ರಮುಖ ಕಾರಣ; ನಿಮ್ಮೆಲ್ಲರಿಗೂ ಗೊತ್ತಿರುವಂತೆ ಲಾಕ್ಡೌನ್.
ಸ್ವತಃ ರೈತರೇ ಹೇಳುವಂತೆ ಫೆಬ್ರುವರಿಯಿಂದ ಹಿಡಿದು ಜೂನ್ವರೆಗೆ ನಿಂಬೆ ಬೆಳೆಗೆ ಉತ್ತಮ ದರ ಸಿಗುತ್ತಿತ್ತಂತೆ. ಆದರೆ ಕೇಂದ್ರ ಸರ್ಕಾರ ಘೋಷಿಸಿದ ದೇಶವ್ಯಾಪಿ ಲಾಕ್ಡೌನ್ ಇಂದ ರೈತರಿಗೆ ಭಾರಿ ಹೊಡೆತ ಬಿತ್ತು. ಸೂಕ್ತ ಸಮಯದಲ್ಲಿ ನಿಂಬೆಯನ್ನು ಮಾರಾಟ ಮಾಡೋಕಾಗದೆ ಕೊನೆಗೆ ಬೆಳೆದ ಬೆಳೆಯನ್ನು ತಿಪ್ಪೆಗೆ ಸುರಿಯುವಂತಾಯ್ತು.
ದರ ಕುಸಿತದಿಂದ ಗಾಯದ ಮೇಲೆ ಬರೆ ಸದ್ಯ ಲಾಕ್ಡೌನ್ ಸಡಿಲಿಕೆ ಆಗಿದೆ. ಮಾರಾಟ ಮಾಡಲು ಮಾರುಕಟ್ಟೆಗಳು ಸಹ ಓಪನ್ ಆಗಿವೆ. ಹೀಗೆಂದು ಭಾವಿಸಿ ತುಸು ಸಂತಸಗೊಂಡ ನಿಂಬೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ; ನಿಂಬೆ ದರದಲ್ಲಿ ಕುಸಿತ.
ವಿಜಯಪುರದ ನಿಂಬೆಕಾಯಿ ವಹಿವಾಟಿನ ಭಾಷೆಯಲ್ಲಿ ಒಂದು ಮೂಟೆಯನ್ನ ಡಾಗ್ ಎಂದು ಕರೆಯುತ್ತಾರೆ. ಇಂಥ ಒಂದು ಮೂಟೆಯಲ್ಲಿ 1 ಸಾವಿರ ನಿಂಬೆಕಾಯಿಗಳಿರುತ್ತವೆ. ಸದ್ಯಕ್ಕೆ ಒಂದು ಡಾಗ್ ನಿಂಬೆ 300 ರಿಂದ 400 ರೂಪಾಯಿಗೆ ಮಾತ್ರ ಮಾರಾಟವಾಗ್ತಿದ್ಯಂತೆ. ಈ ದಿಢೀರ್ ದರ ಕುಸಿತದಿಂದ ನಿಂಬೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೂಕ್ತ ನೀರಿಲ್ಲದಿದ್ರೂ ಟ್ಯಾಂಕರ್ ಮೂಲಕ ನೀರು ತರಿಸಿ, ಗೊಬ್ಬರ ಹಾಕಿ ಬೆಳೆದ ನಿಂಬೆಗೆ ಒಳ್ಳೆಯ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿನ ರೈತರು ಹೇಳುವ ಪ್ರಕಾರ ಒಂದು ಮೂಟೆ ನಿಂಬೆಯನ್ನ ಬೆಳೆದು ಮಾರುಕಟ್ಟೆಗೆ ತರಲು ತಗಲುವ ಖರ್ಚು ಸರಿಸುಮಾರು 300 ರೂಪಾಯಿ. ಜೊತೆಗೆ ಮಾರುಕಟ್ಟೆಯ ಮಧ್ಯವರ್ತಿಗಳಿಗೆ ಕಮೀಷನ್ ಸಹ ನೀಡಬೇಕಂತೆ. ಹೀಗಾಗಿ ಬರುವ ಲಾಭ ಅಷ್ಟಕಷ್ಟೇ ಎಂದು ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ.
ಇತ್ತ ಮಾರುಕಟ್ಟೆಯ ವರ್ತಕರು ನಿಂಬೆಯನ್ನು ನಾವು ಖರೀದಿ ಮಾಡಿ ದೂರದ ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದ್ದೆವು. ಆದರೆ ಕೊರೊನಾದಿಂದ ಈಗ ಯಾರೊಬ್ಬರೂ ಖರೀದಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ತಮ್ಮ ಅಸಹಾಯಕತೆಯನ್ನು ತೋಡಿಕೊಂಡ ವರ್ತಕರು ಲಾಕ್ಡೌನ್ ಸಡಿಲಿಕೆ ನಂತರ ನಾವೇ ಅಲ್ಲಿಗೆ ರಫ್ತು ಮಾಡಿದ್ವಿ. ಆದರೆ ಅದಕ್ಕೆ ತಗಲಿದ ಖರ್ಚಿಂದ ನಮಗೂ ಲಾಭ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ, ಕೊರೊನಾ ವಿಜಯಪುರದ ನಿಂಬೆ ಬೆಳೆಗಾರರ ಮತ್ತು ವರ್ತಕರ ಬಾಳಿಗೆ ಹುಳಿ ಹಿಂಡುಬಿಟ್ಟಿದೆ. -ಅಶೋಕ ಯಡಳ್ಳಿ
Published On - 1:52 am, Tue, 16 June 20