ದಿಟ್ಟ ನಾಯಕಿ ಕಮಲಾ ಹ್ಯಾರಿಸ್ ಯಾಕಿಷ್ಟು ಫೇಮಸ್?!

  • TV9 Web Team
  • Published On - 16:12 PM, 9 Nov 2020
ದಿಟ್ಟ ನಾಯಕಿ ಕಮಲಾ ಹ್ಯಾರಿಸ್ ಯಾಕಿಷ್ಟು ಫೇಮಸ್?!

ಕಮಲಾ ಹ್ಯಾರಿಸ್. ಈ ಹೆಸರು ಅಮೆರಿಕದಲ್ಲಷ್ಟೇ ಅಲ್ಲ, ವಿಶ್ವದೆಲ್ಲೆಡೆ ಇಂದು ಸಂಚಲನ ಮೂಡಿಸುತ್ತಿದೆ. ಅಮೆರಿಕದ ಅಧ್ಯಕ್ಷ ಗಾದಿಗೆ ತಕ್ಕ ಉಪಾಧ್ಯಕ್ಷೆಯಾಗಿ ಬಲ ತುಂಬುವ ನಿರೀಕ್ಷೆ ಸರ್ವ ಜನರಲ್ಲಿ ಮನೆಮಾಡುವಂತಾಗಿದೆ. ಮಹಿಳಾ ನಾಯಕಿಯ ಛಲ, ಯಾವುದೇ ಕೆಲಸ ನಿರ್ವಹಿಸಬಲ್ಲ ಧೈರ್ಯ, ಸಾಮರ್ಥ್ಯ, ಚರ್ಚೆ-ವಿಚಾರ ಮಂಡನೆಗಳ ವಾಕ್ ಚಾತುರ್ಯ, ಜನರನ್ನು ಮೋಡಿ ಮಾಡಬಲ್ಲ ಗುಣ ನಡತೆಗಳು ಕಮಲಾ ಹ್ಯಾರಿಸ್ ಗೆ ವಿಶೇಷ ಪ್ರಾತಿನಿಧ್ಯ ಒದಗಿಸಿಕೊಟ್ಟಿದೆ. ಇಂತಹ ಮಹಿಳೆಯೊಬ್ಬಳು ವಿಶ್ವದ ದೈತ್ಯ ರಾಷ್ಟ್ರ ಎಂದು ಕರೆಸಿಕೊಳ್ಳುವ ಅಮೆರಿಕದ ಉಪಾಧ್ಯಕ್ಷೆಯಾಗಿ, ಅಧ್ಯಕ್ಷ ಜೋ ಬೈಡೆನ್ ಗೆ ಸಾಥ್​ ನೀಡಲಿದ್ಧಾಳೆ.

ಕಮಲಾ ಹ್ಯಾರಿಸ್, ಯಾಕಿಷ್ಟು ಫೇಮಸ್?!
ಒಂದೆಡೆ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್ ಹೆಸರು ಎಲ್ಲೆಡೆ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ರಿಪಬ್ಲಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಮೈಕ್ ಪೆನ್ಸ್ ಗೆ ಇಷ್ಟು ಪ್ರಚಾರ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಮಲಾ ಹ್ಯಾರಿಸ್ ಮುನ್ನೆಲೆಗೆ ಬರುವಲ್ಲಿ ಕಾರಣಗಳನ್ನು ಯೋಚಿಸಬೇಕಿದೆ.

ಕಮಲಾ ಹ್ಯಾರಿಸ್ ಭಾರತೀಯ ಮೂಲದ ಮಹಿಳೆ ಎಂಬ ಪ್ರೀತಿ ನಮ್ಮ ಜನರಿಗಿದೆ. ಕಮಲಾ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನ ತಿರುವರೂರಿನವರು. ಈ ಕಾರಣದಿಂದ ಭಾರತದ ಜನರಿಗೆ ಕಮಲಾ ಬಗ್ಗೆ ಹೆಚ್ಚಿನ ಅಭಿಮಾನ ಇದೆ ಎಂದು ಹೇಳಬಹುದು. ಕಮಲಾ ತಂದೆ ಡೊನಾಲ್ಡ್ ಜೆ. ಹ್ಯಾರಿಸ್ ಜಮೈಕನ್ ಮೂಲದವರು. 

ಇದರಿಂದ ಕಮಲಾ ಆಫ್ರಿಕನ್-ಅಮೆರಿಕನ್ ಮೂಲದವರು ಎಂದು ಗುರುತಿಸಿಕೊಂಡಿದ್ದಾರೆ. ಮತ್ತು ಆಫ್ರಿಕನ್ ಮೂಲದ ಕಪ್ಪು ವರ್ಣೀಯ ನಾಯಕಿ ಎಂದೂ ಹೇಳಿಕೊಂಡಿದ್ದಾರೆ. ಏಷಿಯನ್-ಅಮೆರಿಕನ್, ಆಫ್ರಿಕನ್-ಅಮೆರಿಕನ್ ಮೂಲದ ಮೊದಲ ಉಪಾಧ್ಯಕ್ಷೆ ಮತ್ತು ಕಪ್ಪು ವರ್ಣದ ಮೊದಲ ಉಪಾಧ್ಯಕ್ಷೆ ಎಂಬ ದಾಖಲೆಯ ಕಾರಣಗಳಿಂದ ಕಮಲಾ ಬಹುಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ. ಇತಿಹಾಸ ಸೃಷ್ಟಿಸಬಲ್ಲ ನಾಯಕಿ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳನ್ನು ತಲುಪಬಲ್ಲ ಸಾಮರ್ಥ್ಯವನ್ನು ಕಮಲಾ ತಮ್ಮ ಮಾತುಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಆರ್ಥಿಕತೆ, ರಾಜಕೀಯ ನೀತಿಗಳು ಮುಂತಾದ ಸಾಮಾನ್ಯ ಅಂಶಗಳನ್ನು ಬದಿಗಿರಿಸಿ ಮಹಿಳೆ, ವರ್ಣನೀತಿ, ಬಡತನ, ಕಡಿಮೆ ಆದಾಯ ಹೊಂದಿದ ಜನತೆಯ ಕುರಿತು ಹೆಚ್ಚು ಗಮನಹರಿಸುವ ಸೂಚನೆ ನೀಡಿದ್ದಾರೆ. ತಮ್ಮನ್ನು ತಾವು ಪ್ರಗತಿಪರ ನಾಯಕಿ ಎಂದು ಬಿಂಬಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ನಾಗರಿಕರೂ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ, ಸ್ವಯಂ ಅಸ್ಮಿತೆ ರೂಪುಗೊಳ್ಳಬೇಕು. ಅಂತಹ ದೂರದರ್ಶಿ ನಾಯಕತ್ವ ಅಮೆರಿಕಕ್ಕೆ ಬೇಕು ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಇಂತಹ ಹೊಸ ಯೋಚನೆಗಳು, ನಾಯಕತ್ವ ಗುಣಗಳು ಮತ್ತು ಬಹುಜನರ ಪ್ರೀತಿ, ಅಭಿಮಾನಗಳಿಂದಾಗಿ ಭವಿಷ್ಯದ ಉತ್ತಮ ನಾಯಕಿಯಾಗುವ ಸೂಚನೆಯನ್ನು ಕಮಲಾ ಕಾಣಿಸಿದ್ದಾರೆ.