World Cancer Day 2021 ಕ್ಯಾನ್ಸರ್ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !
World Cancer Day 2021 ಅಲ್ಕೋಹಾಲ್ನಿಂದ ಸುಮಾರು 7 ತರಹದ ಕ್ಯಾನ್ಸರ್ ಬರಬಹುದು ಎಂಬುದು ತಜ್ಞ ವೈದ್ಯರ ಅಭಿಪ್ರಾಯ. ಅಲ್ಕೋಹಾಲಿಕ್ ಅಂಶಗಳು ನಿರತಂತರವಾಗಿ ರಕ್ತದಲ್ಲಿ ಸೇರಿದರೆ ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ, ಸ್ತನ, ಕರುಳು, ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚಿರುತ್ತದೆ.
ಇಂದು ವಿಶ್ವ ಕ್ಯಾನ್ಸರ್ ದಿನ. (World Cancer Day 2021) ನಮಗೆ ಕ್ಯಾನ್ಸರ್ ಎಂಬ ಪದ ಕಿವಿಗೆ ಕೇಳಿದರೇ ಭಯ ಹುಟ್ಟುತ್ತದೆ. ಆದರೂ ಈಗ 10 ವರ್ಷದ ಹಿಂದೆ ಇದ್ದಷ್ಟು ಆತಂಕ ಇಲ್ಲ. ಕ್ಯಾನ್ಸರ್ ಕೂಡ ಗುಣಪಡಿಸುವ ಕಾಯಿಲೆ ಎಂಬುದು ಮನದಟ್ಟಾಗುತ್ತಿದೆ. ಅದಕ್ಕೆ ತಕ್ಕಂತೆ ಮುಂದುವರಿದ, ಅತ್ಯಾಧುನಿಕ ಚಿಕಿತ್ಸೆಗಳೂ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹಾಗೇ ಹೆಚ್ಚೆಚ್ಚು ಸಂಶೋಧನೆಗಳೂ ಕ್ಯಾನ್ಸರ್ ಬಗ್ಗೆ ನಡೆಯುತ್ತಿದ್ದು, ಕ್ಯಾನ್ಸರ್ ನಿಯಂತ್ರಣದ ಹಲವು ವಿಧಾನಗಳನ್ನೂ ತಜ್ಞರು ಪರಿಚಯಿಸುತ್ತಿದ್ದಾರೆ.
ಆದರೆ ಬಹುಮುಖ್ಯವಾಗಿ ಕ್ಯಾನ್ಸರ್ ರೋಗ ಬರಲು ಕಾರಣವೇನು? ಎಂಬ ಪ್ರಶ್ನೆ ಕೇಳಿದರೆ.. ಇಂಥದ್ದೇ ಎಂದು ಒಂದು ಕಾರಣವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಆದರೂ ಸಾಮಾನ್ಯವಾಗಿ ಯಾವ್ಯಾವ ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಈಗಾಗಲೇ ವೈದ್ಯಕೀಯ ಲೋಕ ಪಟ್ಟಿ ಮಾಡಿದೆ. ಈ ವಿಚಾರದಲ್ಲಿ ಜಗತ್ತಿನ ಅನೇಕ ದೇಶಗಳ ತಜ್ಞರು ಒಂದೇ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿ ಲಂಡನ್ನ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯೊಂದು ಕ್ಯಾನ್ಸರ್ ಯಾವ್ಯಾವ ರೀತಿಯಲ್ಲಿ ಬರಬಹುದು ಎಂಬುದನ್ನು ಹೀಗೆ ವಿವರಿಸಿದೆ.
ಧೂಮಪಾನ (Smoking) ಜಗತ್ತಿನಾದ್ಯಂತ ಕ್ಯಾನ್ಸರ್ಗೆ ಬಹುಮುಖ್ಯವಾಗಿ ಕಾರಣವಾಗುತ್ತಿರುವುದು ಧೂಮಪಾನ. ಸಿಗರೇಟ್ ಸೇದಿದಾದ ಅದರಲ್ಲಿರುವ ರಾಸಾಯನಿಕಗಳು ರಕ್ತದಲ್ಲಿ ಸೇರುತ್ತವೆ. ಹೀಗೆ ಸತತವಾಗಿ ಸಿಗರೇಟ್, ತಂಬಾಕಿನ ಹೊಗೆಗಳು ದೇಹದೊಳಗೆ ಹೋಗುವುದರಿಂದ ಏನಿಲ್ಲವೆಂದರೂ ಸುಮಾರು 15 ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಧೂಮಪಾನದಿಂದ ಬರೀ ಶ್ವಾಸಕೋಶದ ಕ್ಯಾನ್ಸರ್ ಅಷ್ಟೇ ಅಲ್ಲ, ಬಾಯಿ, ಗಂಟಲುಕುಳಿ, ಮೂಗು ಮತ್ತು ಸೈನಸ್, ಧ್ವನಿಪೆಟ್ಟಿಗೆ, ಅನ್ನನಾಳ, ಪಿತ್ತಜನಕಾಂಗ, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಮೂತ್ರಪಿಂಡ, ಕರುಳು, ಅಂಡಾಶಯ, ಗರ್ಭಕಂಠ ಮತ್ತು ಕೆಲವು ವಿಧದ ಬ್ಲಡ್ ಕ್ಯಾನ್ಸರ್ಗೂ ತುತ್ತಾಗುವ ಸಾಧ್ಯತೆ ಇದೆ. ಇದರ ಹೊರತಾಗಿ ಹೃದ್ರೋಗ, ಶ್ವಾಸಕೋಶಕ್ಕೆ ಸಂಬಂಧಪಟ್ಟ ಇನ್ನಿತರ ಕಾಯಿಲೆಯನ್ನೂ ಹೊತ್ತು ತರುತ್ತದೆ.
ಬೊಜ್ಜು, ಅತಿಯಾದ ತೂಕ ಅತಿಯಾದ ತೂಕ, ಬೊಜ್ಜಿನ ಕಾರಣದಿಂದಲೂ ಕ್ಯಾನ್ಸರ್ ಬರುತ್ತದೆ ಎನ್ನುತ್ತದೆ ವೈದ್ಯಕೀಯ ಲೋಕ. ಬೊಜ್ಜು ನಿಯಂತ್ರಣ ಮಾಡಿ, ಸಮ ಪ್ರಮಾಣದ ತೂಕ ಹೊಂದುವ ಮೂಲಕ ಏನಿಲ್ಲವೆಂದರೂ 13 ರೀತಿಯ ಕ್ಯಾನ್ಸರ್ ರಿಸ್ಕ್ನಿಂದ ಪಾರಾಗಬಹುದಂತೆ..! ಹಾಗಂತ ಅತ್ಯಂತ ತೂಕ ಹೊಂದಿದ್ದೀರಿ, ಬೊಜ್ಜು ಬಂದಿದೆ ಎಂದಾಕ್ಷಣ ನಿಶ್ಚಿತವಾಗಿಯೂ ಕ್ಯಾನ್ಸರ್ ಬರುತ್ತದೆ ಎಂದರ್ಥವಲ್ಲ. ಆದರೆ ಸಹಜವಾಗಿ, ಆರೋಗ್ಯವಾಗಿ ಇರುವವರಿಗಿಂತ ಹೀಗೆ ಬೊಜ್ಜು, ಅತಿಯಾದ ತೂಕ ಇರುವವರಿಗೆ ಅಪಾಯ ಜಾಸ್ತಿ.
ದೇಹದಲ್ಲಿನ ಅತಿಯಾದ ಕೊಬ್ಬುಹಾರ್ಮೋನುಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕೋಶಗಳು ವಿಭಜನೆಗೊಳ್ಳುವುದಲ್ಲದೆ, ಹೆಚ್ಚಿನ ಸೆಲ್ಸ್ ಹುಟ್ಟಲೂ ಕಾರಣವಾಗುತ್ತದೆ. ಇದು ಕ್ಯಾನ್ಸರ್ ತರಬಹುದು. ಇನ್ನು ಉರಿಯೂತ, ಅಂದರೆ ದೇಹದಲ್ಲಿ ಕೊಬ್ಬಿನ ಕೋಶಗಳ ಪ್ರಮಾಣ ಅಧಿಕವಾಗುತ್ತಿದ್ದಂತೆ, ಪ್ರತಿರೋಧಕ ಕೋಶಗಳೂ ಕೂಡ ಅಲ್ಲಿಯೇ ಸೇರುತ್ತವೆ. ಇದು ಉರಿಯೂತಕ್ಕೆ ಕಾರಣವಾಗಿ, ಕೋಶಗಳನ್ನು ತೀವ್ರವಾಗಿ ವಿಭಜಿಸುತ್ತವೆ.
ಇದೂ ಕೂಡ ಕ್ಯಾನ್ಸರ್ಗೆ ಕಾರಣವಾಗಲಿದೆ. ಹಾಗೇ, ಮುಟ್ಟು ನಿಂತ (menopause) ಮಹಿಳೆಯರಲ್ಲಿ ಉಂಟಾಗುವ ಅತಿಯಾದ ಬೊಜ್ಜು, ಈಸ್ಟ್ರೋಜನ್ ಸೆಕ್ಸ್ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ಸ್ತನ ಮತ್ತು ಗರ್ಭಕೋಶದ ಜೀವಕೋಶಗಳನ್ನು ವಿಭಜಿಸುತ್ತವೆ. ಇದರಿಂದಾಗಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ನ ಅಪಾಯ ಜಾಸ್ತಿ ಇರುತ್ತದೆ.
ಇನ್ನು ಅತಿಯಾದ ಬೊಜ್ಜಿನಿಂದ ಬರುವ ಕ್ಯಾನ್ಸರ್ಗಳೆಂದರೆ: ಸ್ತನ ಕ್ಯಾನ್ಸರ್, ಕರುಳು, ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಗರ್ಭಕೋಶ, ಅಂಡಾಶಯ, ಕಿಡ್ನಿ, ಲಿವರ್, ಮೈಲೋಮಾ ಎಂಬ ಬ್ಲಡ್ ಕ್ಯಾನ್ಸರ್ ಮತ್ತು ಥೈರಾಡ್ ಕ್ಯಾನ್ಸರ್ಗಳು.
ಸೂರ್ಯನ ನೇರಳಾತೀತ ಕಿರಣಗಳು..ಇತರ ರೇಡಿಯೇಶನ್ಗಳು ಸೂರ್ಯನ ಬೆಳಕು ಆರೋಗ್ಯಕ್ಕೆ ತುಂಬ ಅಗತ್ಯ. ಆದರೆ ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ವಿಕಿರಣ ಚರ್ಮದ ಕ್ಯಾನ್ಸರ್ನ್ನು ಉಂಟು ಮಾಡಬಲ್ಲದು. ಮುಂಜಾನೆ ಹೊತ್ತಲ್ಲಿ ಸೂರ್ಯನ ಹಿತವಾದ ಬಿಸಿಲಿಗೆ ಮೈಯೊಡ್ಡುವ ಮೂಲಕ ಡಿ ವಿಟಮಿನ್ ಪಡೆಯಬಹುದು. ಆದರೆ ಮಧ್ಯಾಹ್ನವಾದಂತೆ ಬರುವ ಅತಿಯಾದ ಶಾಖವುಳ್ಳ ಕಿರಣಕ್ಕೆ ಸತತವಾಗಿ ಮೈಯೊಡ್ಡುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.
ಹೀಗೆ ಅತಿಯಾದ ಶಾಖವಿದ್ದಾಗ ಆದಷ್ಟು ನೆರಳಿನಲ್ಲಿ ಇರಿ. ಇನ್ನು ಹೊರಗೆ ಹೋಗಲೇಬೇಕಾದಾಗ ಮೈಯನ್ನು ಪೂರ್ತಿಯಾಗಿ ಮುಚ್ಚುವ ಬಟ್ಟೆ ಧರಿಸುವುದು, ಚರ್ಮಕ್ಕೆ ಸನ್ಸ್ಕ್ರೀನ್ ಲೋಶನ್ ಹಚ್ಚಬೇಕು ಎಂದು ಸಲಹೆ ನೀಡುತ್ತಾರೆ ತಜ್ಞರು.
ಹಾಗೇ, ಇನ್ನಿತರ ಕೆಲವು ರೇಡಿಯಶನ್ಗಳಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೀಗಾಗುತ್ತ ಹೋದಂತೆ ಕಾಲಾನಂತರದಲ್ಲಿ ಜೀವಕೋಶಗಳು ಅತಿಯಾಗಿ ಬೆಳೆಯಲು ಶುರುವಾಗುತ್ತವೆ. ಇದು ಚರ್ಮದ ಕ್ಯಾನ್ಸರ್ ರಿಸ್ಕ್ ತಂದೊಡ್ಡುತ್ತದೆ.
ಮದ್ಯಪಾನ ಅಲ್ಕೋಹಾಲ್ನಿಂದ ಸುಮಾರು 7 ತರಹದ ಕ್ಯಾನ್ಸರ್ ಬರಬಹುದು ಎಂಬುದು ತಜ್ಞ ವೈದ್ಯರ ಅಭಿಪ್ರಾಯ. ಅಲ್ಕೋಹಾಲಿಕ್ ಅಂಶಗಳು ನಿರತಂತರವಾಗಿ ರಕ್ತದಲ್ಲಿ ಸೇರಿದರೆ ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ, ಸ್ತನ, ಕರುಳು, ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚಿರುತ್ತದೆ.
ಅಲ್ಕೋಹಾಲ್ನ್ನು ಸೇವಿಸಿದಾಗ ಅದು ನಮ್ಮ ದೇಹದ ಒಳಗೆ ಹೋಗಿ, Acetaldehyde (ಅಸೆಟಾಲ್ಡಿಹೈಡ್) ರಾಸಾಯನಿಕವಾಗಿ ಆಗಿ ಬದಲಾಗುತ್ತದೆ. ಇದು ಮುಖ್ಯವಾಗಿ ಲಿವರ್ನಲ್ಲಿ ಉಂಟಾಗುವ ಕ್ರಿಯೆ ಆದರೂ, ಬಾಯಿ, ಗಂಟಲಿನಲ್ಲಿ ಇರುವ ಕೋಶಗಳು, ಬ್ಯಾಕ್ಟೀರಿಯಾಗಳೂ ಸಹ ಅಸೆಟಾಲ್ಡಿಹೈಡ್ ಉತ್ಪತ್ತಿ ಮಾಡಬಲ್ಲವು. ಈ Acetaldehyde ಗಳು ಡಿಎನ್ಎಗೆ ಹಾನಿ ಮಾಡುವಷ್ಟು ಬಲಿಷ್ಠವಾಗಿದ್ದು, ಕ್ಯಾನ್ಸರ್ಗೆ ಕಾರಣವಾಗಬಲ್ಲವು.
ಬ್ಯಾಕ್ಟೀರಿಯಾ-ವೈರಸ್ಗಳು ಯಾವುದೇ ಬ್ಯಾಕ್ಟೀರಿಯಾ, ವೈರಸ್ಗಳು ನೇರವಾಗಿ ಕ್ಯಾನ್ಸರ್ ರೋಗವನ್ನು ತರಲಾರವು. ಆದರೆ ಕೆಲವು ವೈರಸ್ಗಳು ದೇಹವನ್ನು ಪ್ರವೇಶಿಸಿದಾಗ ಕ್ಯಾನ್ಸರ್ ರೋಗದ ಸಾಧ್ಯತೆಯನ್ನೂ ಹೆಚ್ಚಿಸುತ್ತವೆ. ಏಡ್ಸ್ಗೆ ಕಾರಣವಾಗುವ ಎಚ್ಐವಿ, ಎಚ್ಪಿವಿ ವೈರಸ್ಗಳಿಂದ ಕ್ಯಾನ್ಸರ್ ಅಪಾಯವೂ ಇರುತ್ತದೆ. HPV (human papilloma virus) ಸಾಮಾನ್ಯ ವೈರಸ್ ಆಗಿದ್ದು, ಇದು ದೇಹದ ಒಳಗಿನ ಕೋಶಕ್ಕೆ ಸೋಂಕು ತರುತ್ತದೆ. ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ತಂದೊಡ್ಡುತ್ತದೆ. ಲೈಂಗಿಕ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ವಾಯುಮಾಲಿನ್ಯ ವಾಯುಮಾಲಿನ್ಯದಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂಬುದು ಈಗಾಗಲೇ ಸಾಬೀತಾಗಿದೆ. ಸಣ್ಣದಾದ ಧೂಳಿನ ಕಣಗಳು, ವಾಹನಗಳಿಂದ ಹೊಮ್ಮುವ ರಾಸಾಯನಿಕಗಳು, ಕೆಲವು ಫ್ಯಾಕ್ಟರಿಗಳಿಂದ ಹೊರಸೂಸುವ ಹೊಗೆಗಳೆಲ್ಲ ಸೇರಿ ವಾಯುಮಾಲಿನ್ಯ ಉಂಟಾಗುತ್ತದೆ. ಈ ಮಾಲಿನ್ಯದ ಮಧ್ಯೆಯೇ ಓಡಾಟ, ಬದುಕುವುದು ನಮಗೂ ಅನಿವಾರ್ಯವಾಗಿದೆ. ಇದು ಮನುಷ್ಯರಲ್ಲಿನ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸಿದೆ.
ಇವಿಷ್ಟರ ಹೊರತಾಗಿ ಕೆಲವು ಆಹಾರಗಳು, ಡಯಟ್ಗಳ ವಿಧಾನ, ಆನುವಂಶಿಕ ಸಮಸ್ಯೆಗಳೂ ಕ್ಯಾನ್ಸರ್ಗೆ ಕಾರಣವಾಗುತ್ತವೆ. ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿದೆ. ಕ್ಯಾನ್ಸರ್ಗೆ ಕಾರಣ, ನಿಯಂತ್ರಣ ಕ್ರಮಗಳು, ಔಷಧಗಳನ್ನು ಕಂಡು ಹಿಡಿಯಲು ಸತತವಾಗಿ ಪರಿಶ್ರಮ ವಹಿಸುತ್ತಿದ್ದಾರೆ.
Published On - 3:19 pm, Thu, 4 February 21