ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಸಂದೀಪ ಈಶಾನ್ಯ

‘ಪದೇ ಪದೆ ಅದದೇ ಕತೆಗಳನ್ನು ಓದುವ ಮೂಲಕ ಒಬ್ಬರದೇ ಬದುಕನ್ನು ಹಲವು ಮಗ್ಗಲುಗಳಲ್ಲಿ ನೋಡಲು ಸಾಧ್ಯತೆಯನ್ನು ಮಂಜುನಾಯಕರ ಬರವಣಿಗೆ ಹೇಗೆ ಕರುಣಿಸಿದೆ ಎನ್ನುವ ರೀತಿಗೆ ಬೆರಗಾಗಿದ್ದೇನೆ.’ ಸಂದೀಪ ಈಶಾನ್ಯ. 

  • ಶ್ರೀದೇವಿ ಕಳಸದ
  • Published On - 14:57 PM, 31 Dec 2020
ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಸಂದೀಪ ಈಶಾನ್ಯ
ಕವಿ, ಕಥೆಗಾರ ಸಂದೀಪ ಈಶಾನ್ಯ

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕವಿ, ಕಥೆಗಾರ ಸಂದೀಪ ಈಶಾನ್ಯ ಅವರ ಆಯ್ಕೆಗಳು ಇಲ್ಲಿವೆ.

ಕೃ: ಫೂ (ಕಥಾ ಸಂಕಲನ)
ಲೇ: ಮಂಜುನಾಯಕ ಚೆಳ್ಳೂರು
ಪ್ರ: ಅಹರ್ನಿಶಿ

ಸಾಹಿತ್ಯ ಪ್ರಕಾರಗಳಲ್ಲಿ ಕವಿತೆಗಳಷ್ಟೇ ಸಣ್ಣ ಕತೆಗಳನ್ನು ನಂಬಿದವನು ನಾನು. ಕಾವ್ಯಗಳು ರೂಪಕಗಳ ಮೂಲಕ ಓದುಗನಿಗೆ ದಾಟಿಸಬೇಕಾದ ವಿವರಗಳನ್ನು ದಾಟಿಸಿದರೆ ಸಣ್ಣಕತೆಗಳು ಪಾತ್ರ ಹಾಗೂ ಕತೆಯ ಹಿನ್ನಲೆಯ ಮೂಲಕ ದಾಟಿಸುತ್ತದೆ. ಗದ್ಯಕ್ಕೂ ಪದ್ಯದ ಸ್ಪರ್ಶ ದೊರಕಿದಾಗಲೇ ರಚನೆಗೊಂಡ ಸಾಲುಗಳಿಗೆ ಮಾಂತ್ರಿಕ ಶಕ್ತಿ ಪ್ರಧಾನವಾಗುವ ಸಾಧ್ಯತೆ ಹೆಚ್ಚು. ಈ ದೃಷ್ಟಿಯಲ್ಲಿ ನೋಡಿದಾಗ ನನಗೆ ಈ ವರ್ಷ ನಾನು ಓದಿದ ಅತಿಮುಖ್ಯ ಪುಸ್ತಕ ಎಂದರೆ ಮಂಜುನಾಯಕ ಚೆಳ್ಳೂರು ಅವರ ‘ಫೂ’ ಕಥಾಸಂಕಲನ. ಈ ಕತೆಗಳನ್ನು ಬಿಡುಗಡೆಯಾದ ಆರಂಭದಲ್ಲೇ ಓದಿದ್ದರೂ ಈ ವರ್ಷವೂ ಆ ಸಂಕಲನದ ಹಲವು ಕತೆಗಳನ್ನು ಹಲವು ಬಾರಿ ಓದಿದ್ದೇನೆ. ಪದೇ ಪದೆ ಅದದೇ ಕತೆಗಳನ್ನು ಓದುವ ಮೂಲಕ ಒಬ್ಬರದೇ ಬದುಕನ್ನು ಹಲವು ಮಗ್ಗಲುಗಳಲ್ಲಿ ನೋಡಲು ಸಾಧ್ಯತೆಯನ್ನು ಮಂಜುನಾಯಕರ ಬರವಣಿಗೆ ಹೇಗೆ ಕರುಣಿಸಿದೆ ಎನ್ನುವ ರೀತಿಗೆ ಬೆರಗಾಗಿದ್ದೇನೆ.

ಒಂದು ದೀರ್ಘ ಪ್ರಯಾಣದ ನಂತರ ಹಿಂದಿರುಗಿ ನೋಡಿದಾಗ ನಾವೇ ಬಿಟ್ಟು ಬಂದ ಹೆಜ್ಜೆ ಗುರುಗಳೇ ಕತೆಯಾದರೇ ಹೊಳೆಯಬಹುದಾದ ಎಲ್ಲಾ ಮಾತುಗಳನ್ನು ಈ ಕಥಾ ಸಂಕಲನಕ್ಕೆ ಅನ್ವಯಿಸಿ ಹೇಳಬಹುದು. ಮನುಷ್ಯನ ಒಳಪದರದಲ್ಲಿರುವ ಕ್ರೌರ್ಯ, ಅಸಹಾಯಕತೆ, ಸಂಕೀರ್ಣ ಆಲೋಚನೆ, ಒಂಟಿತನಗಳಲ್ಲಿ ಅರಳಿದ ಜೀವಗಳೇ ಓದುಗರ ಎದುರು ನಿಂತು ತಮ್ಮದೇ ಕತೆಗಳನ್ನು ಓದುಗನಿಗೆ ಹೇಳಿ ಮೌನವಾಗುತ್ತವೆ. ಯಾವುದೇ ಹೇರಿಕೆ ಹಾಗೂ ತೋರಿಕೆಯೂ ಇಲ್ಲದೆ ಮೂಡಿರುವ ಚಂದ್ರ, ಫೂ ಮಾಡುವ ಅತ್ತೆ, ಹುಸೇನಿ, ಪಾತಿ, ಲಚುಮಾ, ಮಾತನಾಡುವ ಮಾತುಗಳು ಹಲವು ವರ್ಷಗಳ ನಂತರವೂ ಉಳಿಯಲಿದೆ. ಈ ಕಾರಣಕ್ಕೆ ಈ ಎಲ್ಲಾ ಪಾತ್ರಗಳಷ್ಟೇ ಈ ಎಲ್ಲಾ ಪಾತ್ರಗಳನ್ನು ನಮಗೆ ಪರಿಚಯಿಸಿದ ಕತೆಗಾರ ಮಂಜುನಾಯಕರು ಮುಖ್ಯವಾಗುತ್ತಾರೆ.

ಕೃ: India’s Ancient Past
ಲೇ: R. S. Sharma
ಪ್ರ: Oxford University Press

ಕಳೆದ ವರ್ಷದ ಓದಿನಲ್ಲಿ ಒಬ್ಬ ಭಾರತೀಯನಾಗಿ ನನ್ನ ಮೂಲವನ್ನು ನಾನೇ ಕಂಡುಕೊಳ್ಳಲು ಸಹಾಯ ಮಾಡಿದ ಪುಸ್ತಕ ಎಂದರೆ ಅದು ಆರ್‌. ಎಸ್‌. ಶರ್ಮಾ ಅವರ ಈ ಕೃತಿ. ಭಾರತದ ಪ್ರಾಚೀನ ಇತಿಹಾಸ, ನವಶಿಲಾಯುಗ ಕಾಲದಿಂದ ಹರಪ್ಪನ ನಾಗರಿಕತೆ, ವೈದಿಕ ಕಾಲ, ಮೌರ್ಯರ ಉದಯ ಸೇರಿದಂತೆ ಅನೇಕ ಪ್ರಮುಖ ಐತಿಹಾಸಿಕ ದಿನಗಳನ್ನು ದಾಖಲಿಸಿರುವ ಈ ಅಪರೂಪದ ಕೃತಿಯನ್ನು ಬರೆದಿರುವ ಆರ್‌. ಎಸ್‌. ಶರ್ಮಾ ಅವರು ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದವರು.

ಶರ್ಮಾರ ಈ ಕೃತಿ ಕೇವಲ ಐತಿಹಾಸಿಕ ವಿವರಗಳ ದಾಖಲೀಕರಣಕ್ಕಷ್ಟೇ ಸೀಮಿತವಾಗದೆ ಇಂದಿಗೂ ಭೂತಕಾರಾವಾಗಿ ಕಾಡುತ್ತ ಅಸ್ತಿತ್ವದಲ್ಲಿರುವ ವರ್ಣ ವ್ಯವಸ್ಥೆ, ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳ ಜೊತೆಜೊತೆಯೇ ಒಂದು ಸಮಾಜವನ್ನು ಸಾಂಸ್ಕೃತಿಕವಾಗಿ ರೂಪಿಸಲು ಅಗತ್ಯವಿರುವ ಕಲೆ, ಸಂಸ್ಕೃತಿ ಹಾಗೂ ವಾಣಿಜ್ಯ ಮತ್ತು ವ್ಯಾಪಾರಗಳ ವಿವರಗಲೂ ದಾಖಲಾಗಿವೆ. ಈ ದಶಕದ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಮಾತನಾಡಲು ಮಾತು ಇತಿಹಾಸಕ್ಕೆ ಜಾರುತ್ತದೆ. ಹೀಗೆ ಇತಿಹಾಸದಲ್ಲೇ ಮುಳುಗಿರುವವರಿಗೆ ನಿಜವಾಗಿಯೂ ಇತಿಹಾಸದಲ್ಲಿರುವ ವಿಚಾರಗಳು ಏನು ಎನ್ನುವುದನ್ನು ಅರಿಯಲು ಖಂಡಿತಾ ಈ ಕೃತಿ ಮುಖ್ಯವಾಗುತ್ತದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಕಥೆಗಾರ್ತಿ ದೀಪ್ತಿ ಭದ್ರಾವತಿ