ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಎಸ್‌.ಕೆ.ಜೈನ್

ಜನಸಾಮಾನ್ಯರು ಈ ಬಾರಿಯ ಹೊಸ ವರ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳಲಿದ್ದಾರೆ. ಕೊರೊನಾ 2020ರಲ್ಲಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ ಕಾರಣ 2021 ಹೊಸತನವನ್ನು, ಹೊಸ ಬದುಕನ್ನು ಹೊತ್ತು ತರಲಿದೆಯಾ ಎಂಬ ನಿರೀಕ್ಷೆ ಜನರದ್ದು..

  • Updated On - 10:41 pm, Thu, 31 December 20 Edited By: Ghanashyam D M | ಡಿ.ಎಂ.ಘನಶ್ಯಾಮ Follow us -
ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಎಸ್‌.ಕೆ.ಜೈನ್
ಎಸ್​.ಕೆ.ಜೈನ್

ಹೊಸ ವರ್ಷದಲ್ಲಿ ಯಾವ ರಾಶಿಯವರ ಭವಿಷ್ಯ ಹೇಗಿರಲಿದೆ ಎಂದು ವಿವರಿಸಿದ್ದಾರೆ ಹಿರಿಯ ಜ್ಯೋತಿಷಿ ಎಸ್‌.ಕೆ.ಜೈನ್.

ಮೇಷ ರಾಶಿ: 2021 ನಿಮಗೆ ಗುರುಬಲವನ್ನು ಹೊತ್ತು ತರಲಿದೆ. ಅವಿವಾಹಿತರಾಗಿದ್ದಲ್ಲಿ ವಿವಾಹ ಯೋಗ ಲಭಿಸಲಿದೆ. ಬಹುದಿನದ ಆಕಾಂಕ್ಷೆಗಳು ಪೂರ್ಣಗೊಳ್ಳಲಿದ್ದು, ಸಂಕಟಗಳಿಂದ ಮುಕ್ತಿ ಸಿಗಲಿದೆ. ರಕ್ಷಣಾ ಇಲಾಖೆಯವರಿಗೆ ಶುಭವಾಗಲಿದೆ. ಹೋಟೆಲ್ ಉದ್ಯಮ ಉತ್ತಮ ಹಂತಕ್ಕೇರಲಿದೆ. ಪ್ರಯಾಣಗಳು ಪ್ರಾರಂಭವಾಗಲಿವೆ. ಭೂಮಿ ಖರೀದಿಸಿ ಮನೆ ಕಟ್ಟುವ ನಿಮ್ಮ ಬಹುದಿನದ ಕನಸು ನನಸಾಗಲಿದೆ. ದಂಪತಿ ನಡುವಿನ ಸಂಬಂಧ ವೃದ್ಧಿಯಾಗಲಿದ್ದು, ಸಂತಾನ ಯೋಗವಿದೆ. ರೈತರಿಗೆ ಶುಭವಾಗಲಿದ್ದು, ಲಾಭ ಮತ್ತು ಜಯವನ್ನು ನಿರೀಕ್ಷಿಸಿ. ಹೊಸದಾಗಿ ಉದ್ಯಮ ಮಾಡುವವರು ಎಲೆಕ್ಟ್ರಾನಿಕ್ಸ್‌ ವಸ್ತುಗಳ ವ್ಯಾಪಾರ, ಹೋಟೆಲ್, ಕ್ಯಾಟರಿಂಗ್‌ ಮಾಡಬಹುದು.

ಒಳಿತಿಗಾಗಿ ಕುಜ ಶಾಂತಿ ಮಾಡಿಸಿದರೆ ಉತ್ತಮ. ನರಸಿಂಹಸ್ವಾಮಿ ಪೂಜೆ ಮಾಡಿ. ಹವಳ ಧಾರಣೆ ಉತ್ತಮ ಫಲ ನೀಡಲಿದ್ದು, ತಾಮ್ರದ ತಂಬಿಗೆಯಲ್ಲಿ ನೀರು ಸೇವಿಸಿದರೆ ಉತ್ತಮ. 3, 5 ನಿಮ್ಮ ಪಾಲಿನ ಶುಭ ಸಂಖ್ಯೆ.

ವೃಷಭ ರಾಶಿ: ಈ ರಾಶಿಯವರಿಗೆ ಗುರುಬಲ ಕೂಡಿಬರಲಿದ್ದು, ಅವಿವಾಹಿತರಿಗೆ ವಿವಾಹ ಯೋಗ ಲಭಿಸಲಿದೆ. ಈಶಾನ್ಯ ದಿಕ್ಕಿನ ಪ್ರಯಾಣ ಶುಭಕರವಾಗಲಿದೆ. ಕುಟುಂಬದಲ್ಲಿ ನೆಮ್ಮದಿ ನೆಲಸಲಿದೆ. ವ್ಯವಹಾರದಲ್ಲಿ ಜಯ ಲಭಿಸಲಿದೆ. ಅರಣ್ಯಾಧಿಕಾರಿಗಳು ಶುಭಫಲವನ್ನು ನಿರೀಕ್ಷಿಸಬಹುದು. ರೋಗಗಳಿಂದ ಮುಕ್ತಿ ಸಿಗಲಿದ್ದು ಆರೋಗ್ಯ ಸುಧಾರಿಸಲಿದೆ. ರೈತರು ಉತ್ತಮ ಲಾಭ ಪಡೆಯಲಿದ್ದಾರೆ. ನೃತ್ಯ, ನಾಟ್ಯ, ಚಿತ್ರಕಲೆ, ಸಿನಿಮಾ ಕೈ ಹಿಡಿಯಲಿದೆ.

ಒಳಿತಿಗಾಗಿ ಭಗವದ್ಗೀತೆಯ ಅನ್ನಾತ್ ಭವಂತಿ ಭೂತಾನಿ (3/14) ಮಂತ್ರ ಪಠಿಸಿ. 4,7 ಸಂಖ್ಯೆಗಳಿಂದ ಶುಭಫಲ ಪ್ರಾಪ್ತಿ.

ಮಿಥುನ ರಾಶಿ: ಈ ರಾಶಿಯವರಿಗೆ ಆರಂಭದಲ್ಲಿ ಗುರುಬಲ ಇಲ್ಲ. ಏಪ್ರಿಲ್ 5ಕ್ಕೆ ಗುರುಬಲ ಬರಲಿದೆ. ಉತ್ತರ ದಿಕ್ಕಿನ ಪ್ರಯಾಣ ಶುಭಕರ. ಗ್ರಹಣಗಳ ನಂತರ ಭಾಗ್ಯೋದಯ. ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟ ಸಂಭವ. ಸಂತಾನ ಭಾಗ್ಯ ಕೂಡಿ ಬರಲಿದ್ದು ಅವಳಿ-ಜವಳಿ ಮಕ್ಕಳ ಜನನ ಸಾಧ್ಯತೆ. ಕಂಪ್ಯೂಟರ್ ವ್ಯಾಪಾರಸ್ಥರಿಗೆ ಶುಭವಾಗಲಿದ್ದು. ಕಂಪ್ಯೂಟರ್ ಕೆಲಸ, ಜ್ಯೋತಿಷ್ಯ ಶಾಸ್ತ್ರ ಮತ್ತು ಗಣಿತಶಾಸ್ತ್ರ ಉನ್ನತ ಹಂತಕ್ಕೆ ಕೊಂಡೊಯ್ಯಲಿದೆ.

ಉತ್ತಮ ಫಲಕ್ಕಾಗಿ ಪಚ್ಚೆ ಧಾರಣೆ ಮಾಡಿ, ಹನುಮಾನ್ ಚಾಲೀಸಾ ಪಠಿಸಿ. 3, 5 ಸಂಖ್ಯೆಗಳಿಂದ ಶುಭವಾಗಲಿದೆ.

ಕಟಕ ರಾಶಿ: ಈ ರಾಶಿಯವರಿಗೆ ಶುಭಫಲಗಳಿವೆ. 2 ಗ್ರಹಣಗಳು ಶುಭ ಉಂಟುಮಾಡಲಿವೆ. ಮೀನುಗಾರರಿಗೆ ಲಾಭ. ಸ್ತ್ರೀಯರಿಗೆ ಶುಭ. ಕೃಷಿಕರಿಗೆ ಉತ್ತಮ ಕಾಲ. ರಾಜಕೀಯ ವ್ಯಕ್ತಿಗಳಿಗೆ ಒಳಿತಾಗಲಿದೆ. ನವರತ್ನ ಮತ್ತು ಬೆಳ್ಳಿ ವ್ಯಾಪಾರಸ್ಥರಿಗೆ ಶುಭವಾಗಲಿದೆ. ಮಾನಸಿಕ ಚಂಚಲತೆ ಕಾಡುವ ಸಾಧ್ಯತೆ ಇದ್ದು ಕೊಂಚ ಜಾಗ್ರತರಾಗಿರಿ. ಮಿತ್ರತ್ವ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ಬದುಕಿನಲ್ಲಿ ಶುಭ ಕಾರ್ಯಗಳು ನಡೆಯಲಿವೆ.

ಉತ್ತಮ ಫಲಕ್ಕಾಗಿ ಮುತ್ತನ್ನು ಧರಿಸಿ. ಗುರು ಶಾಂತಿ ಮಾಡಿಸಿ. ಹರೇ ರಾಮ ಹರೇ ಕೃಷ್ಣ ಪಠಣೆ ಶಾಂತಿ ತಂದುಕೊಡಲಿದೆ. 5, 9 ಸಂಖ್ಯೆಗಳಿಂದ ಶುಭವಾಗಲಿದೆ

ಸಿಂಹ ರಾಶಿ: ಗುರುಬಲ ಬರಲಿದ್ದು ಸಂಕಟಗಳು ನಿವಾರಣೆಯಾಗುತ್ತವೆ. ಸ್ತ್ರೀಯರಿಗೆ ಶುಭ ಫಲಗಳಿವೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮತ್ತು ರಾಜಕಾರಣಿಗಳಿಗೆ ಉತ್ತಮ ಫಲ. ಆಡಳಿತ ನಡೆಸುವವರು ಆರೋಗ್ಯದ ಕಡೆ ಗಮನ ಹರಿಸುವುದು ಅವಶ್ಯಕ. ಹೊಟ್ಟೆ ಸಂಬಂಧಿ ರೋಗಗಳು ಕಾಡಲಿದ್ದು, ಆಪರೇಷನ್ ಆಗುವ ಸಾಧ್ಯತೆ ಇದೆ. ಅಪಘಾತಗಳಾಗುವ ಸಂಭವ ಇರುವುದರಿಂದ ಎಚ್ಚರಿಕೆ ಅಗತ್ಯ.

ಮನಃಶಾಂತಿಗಾಗಿ ಗಣಪತಿ ಆರಾಧನೆ, ರಾಮನ ಧ್ಯಾನ ಮಾಡಿ. ದಶರಥ ರಾಮ ಮಂತ್ರ, ಓಂ ಲಂಬೋದರಾಯ ನಮಃ ಮಂತ್ರ ಪಠಿಸಿ. ತುಳಸಿ ರಾಮಾಯಣ ಓದಿದರೆ ಉತ್ತಮ. 1, 7 ಸಂಖ್ಯೆಗಳಿಂದ ಶುಭವಾಗಲಿದೆ.

ಕನ್ಯಾ ರಾಶಿ: ಸ್ತ್ರೀಯರಿಗೆ ಶುಭಫಲಗಳಿವೆ. ಆರೋಗ್ಯ ಸುಧಾರಿಸಲಿದೆ. ಸಿನಿಮಾ ರಂಗದವರಿಗೆ ಶುಭವಾಗುತ್ತದೆ. ಕಂಪ್ಯೂಟರ್ ಕ್ಷೇತ್ರದವರಿಗೆ ಲಾಭ. ಕೋರ್ಟ್ ವ್ಯಾಜ್ಯಗಳಿದ್ದರೆ ಮಧ್ಯವರ್ತಿಯಿಂದ ಪರಿಹಾರ ಆಗುವುದು. ವಿವಾಹ ಕಾರ್ಯ, ಸಂತಾನ ಫಲ ಯೋಗ ಕೂಡಿಬರಲಿದೆ.

ಉತ್ತಮ ಫಲಕ್ಕಾಗಿ ಸರ್ಪ ಶಾಂತಿ ಮಾಡಿಸಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರ ದರ್ಶನ ಮಾಡಿ. ವಿಷ್ಣು ಸಹಸ್ರನಾಮ ಪಠಿಸಿ. ಜಪ-ತಪ ಮಾಡಿ. 2, 5 ಸಂಖ್ಯೆಗಳಿಂದ ಶುಭವಾಗಲಿದೆ.

ತುಲಾ ರಾಶಿ: ಏಪ್ರಿಲ್ 6 ರಂದು ಜೀವನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಲಾಭದಾಯಕವಾಗುವ ಸಾಧ್ಯತೆ ಹೆಚ್ಚಿದೆ. ಶ್ವಾಸಕೋಶ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇರುವುದರಿಂದ ದುರ್ವ್ಯಸನಗಳನ್ನು ಬಿಟ್ಟುಬಿಡಿ. ಬಂಗಾರ, ನವರತ್ನ ವ್ಯಾಪಾರಿಗಳಿಗೆ, ಸಿನಿಮಾರಂಗದವರಿಗೆ, ಗರ್ಭಿಣಿ ಸ್ತ್ರೀಯರಿಗೆ, ದೂರದೇಶ ಪ್ರಯಾಣ ಮಾಡುವವರಿಗೆ ಶುಭವಾಗಲಿದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಒದಗಿ ಬರಲಿದೆ. ವಯೋವೃದ್ಧರಿಗೆ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿದೆ. ಹೊಸ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ.

ಹಿತಕ್ಕಾಗಿ ದೇವಿ ಪೂಜೆ ಮಾಡಿ, ಪರಶುರಾಮನ ಲೀಲೆ ಪಠಿಸಿ, ಶುಕ್ರನ ಸ್ಮರಣೆ ಮಾಡಿ. 6, 9 ಸಂಖ್ಯೆಗಳಿಂದ ಶುಭಫಲ ಪ್ರಾಪ್ತಿ.

ವೃಶ್ಚಿಕ ರಾಶಿ: ಶುಭಫಲ ಅನುಭವಿಸಲಿದ್ದೀರಿ. ರಾಜಕೀಯ ವಲಯದವರಿಗೆ ಶುಭವಾಗಲಿದೆ. ಆದರೆ, ದೂರದೇಶ ಪ್ರಯಾಣದಲ್ಲಿ ಸಂಕಟವಾಗುವ ಸಾಧ್ಯತೆ ಇದೆ. ಆಡಳಿತ ವರ್ಗದಲ್ಲಿರುವವರು ಸುಮುಹೂರ್ತದಲ್ಲಿ ಪ್ರಯಾಣಿಸುವುದು ಉತ್ತಮ. ಜಮೀನು ಖರೀದಿಸುವವರಿಗೆ ಶುಭಕಾಲ. ಹೊಸ ಮನೆ ಪ್ರವೇಶಕ್ಕೆ ಕಾಲ ಕೂಡಿಬರಲಿದೆ. ಮಾಂಸಾಹಾರ ಸೇವನೆ ಕಡಿಮೆ ಮಾಡಿ.

ಒಳಿತಿಗಾಗಿ ಗುರು ಶಾಂತಿ ಮಾಡಿಸಿಕೊಳ್ಳಿ. ಹವಳವನ್ನು ಧಾರಣೆ ಮಾಡಿ. ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ಆಶ್ಲೇಷ ಬಲಿ, ಸರ್ಪಶಾಂತಿ ಮಾಡಿ. ಧರ್ಮಸ್ಥಳ ಮಂಜುನಾಥನ ದರ್ಶನ ಶುಭ ತರಲಿದೆ. 7, 9 ಸಂಖ್ಯೆಗಳಿಂದ ಶುಭಫಲ ಪ್ರಾಪ್ತಿ.

ಧನಸ್ಸು ರಾಶಿ: ಮೇ, ಜೂನ್‌ನಲ್ಲಿನ ಗ್ರಹಣಗಳಿಂದ ತೊಂದರೆ ಸಾಧ್ಯತೆ. ಫಿಕ್ಸ್ ಡೆಪಾಸಿಟ್ ಮಾಡಿದರೆ ಉತ್ತಮ. ರಕ್ಷಣಾ ಇಲಾಖೆಯಲ್ಲಿರುವವ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಈ ರಾಶಿಯವರಿಗೆ ತೊಡೆಗೆ ಏಟು ಬೀಳುವ ಸಂಭವ ಇದೆ ಮತ್ತು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಮಳೆಗಾಲಕ್ಕೆ ಶುಭ ನಿಮ್ಮನ್ನು ಅರಸಿ ಬರಲಿದೆ.

ಉತ್ತಮ ಫಲಕ್ಕಾಗಿ ಶನಿ ಶಾಂತಿ ಮಾಡಿಸಿ, ವಾಮನ ಲೀಲೆ ಧ್ಯಾನ ಮಾಡಿ, ಓಂ ನಮಃ ಶಿವಾಯ ಮಂತ್ರ ಜಪಿಸಿ, ಮೌನವಾಗಿ ಜಪಮಾಲೆ ಹಿಡಿದು ದೇವರ ಧ್ಯಾನ ಮಾಡಿ. 3, 5 ಸಂಖ್ಯೆಗಳಿಂದ ಶುಭವಾಗಲಿದೆ.

ಮಕರ ರಾಶಿ: ನಿಮ್ಮ ಬಾಳಲ್ಲಿ ಯುಗಾದಿಗೆ ದೊಡ್ಡ ಪರಿವರ್ತನೆ ಆಗಲಿದೆ. ಏಪ್ರಿಲ್ 6 ಕ್ಕೆ ಗುರುಬಲ ಕೂಡಿ ಬರಲಿದ್ದು, ಆ ನಂತರದಲ್ಲಿ ಪ್ರಯಾಣ ಬೆಳೆಸುವುದು ಕ್ಷೇಮ. ಗ್ರಹಣದಿಂದ ನಿಮಗೆ ಒಳಿತಾಗಲಿದೆ. ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರ್ಸ್‌ಗೆ, ಎಣ್ಣೆ ವ್ಯಾಪಾರ ಮಾಡುವವರಿಗೆ ಶುಭ. ಏನೇ ಕಷ್ಟವಿದ್ದರೂ ಈ ಬಾರಿ ಅವುಗಳು ದೂರಾಗಲಿವೆ. ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಒಳಿತಿಗಾಗಿ ಶನಿ ಶಾಂತಿ ಮಾಡಿಸಿ, ಹನುಮಾನ್ ಚಾಲೀಸಾ ಪಠಿಸಿ. 5, 9 ಸಂಖ್ಯೆಗಳನ್ನು ಉಪಯೋಗಿಸಿ.

ಕುಂಭ ರಾಶಿ: ಸ್ತ್ರೀಯರಿಗೆ, ರೈತರಿಗೆ ತಡವಾಗಿಯಾದರೂ ಉತ್ತಮ ಫಲ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ ವಹಿಸಿ. ಕಾಲು ನೋವು ಕಾಣಿಸಲಿದೆ. ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರ್​ಗಳಿಗೆ ಶುಭವಾಗಲಿದೆ. ವ್ಯವಹಾರದಲ್ಲಿ ತಾಳ್ಮೆಯಿರಲಿ.

ಉತ್ತಮ ಫಲಕ್ಕಾಗಿ ಗುರು, ಶನಿ ಶಾಂತಿ ಮಾಡಿಸಿ. ಕೂರ್ಮ ಪುರಾಣ ಓದಿ. ಧ್ಯಾನ ಮಾಡಿ. ಕೂರ್ಮೋ ಭಾಸ್ಕರ ಪುತ್ರಸ್ಯಾ ಮಂತ್ರ ಒಳಿತು ತರಲಿದೆ. 6, 9 ಸಂಖ್ಯೆಗಳಿಂದ ಶುಭಫಲ ಪ್ರಾಪ್ತಿಯಾಗಲಿದೆ.

ಮೀನ ರಾಶಿ: ಈ ರಾಶಿಯವರಿಗೆ ಇದು ಅದ್ಭುತ ಕಾಲ. ಎಲ್ಲಾ ಕ್ಷೇತ್ರದವರಿಗೂ ಶುಭಫಲ ಸಿಗಲಿದೆ. ನೀವು ಶ್ರಮಪಡದೇ ಲಾಭ ಗಳಿಸಲಿದ್ದೀರಿ. ಗ್ರಹಣ ಫಲ ಶುಭ ಉಂಟು ಮಾಡಲಿದೆ.

ನೆಮ್ಮದಿಗಾಗಿ ಬ್ರಹ್ಮನ ಧ್ಯಾನ ಮಾಡಿ. 7, 9 ಸಂಖ್ಯೆಗಳು ಶುಭ ತರಲಿವೆ.

ಸಂಪರ್ಕ ಸಂಖ್ಯೆ: ಎಸ್ ಕೆ ಜೈನ್- 98804 59923,

Click on your DTH Provider to Add TV9 Kannada