ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಡಾ.ಬಸವರಾಜ ಗುರೂಜಿ

ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಡಾ.ಬಸವರಾಜ ಗುರೂಜಿ
ಬಸವರಾಜ ಗುರೂಜಿ

ಜನಸಾಮಾನ್ಯರು ಈ ಬಾರಿಯ ಹೊಸ ವರ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳಲಿದ್ದಾರೆ. ಕೊರೊನಾ 2020ರಲ್ಲಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದ ಕಾರಣ 2021 ಹೊಸತನವನ್ನು, ಹೊಸ ಬದುಕನ್ನು ಹೊತ್ತು ತರಲಿದೆಯಾ ಎಂಬ ನಿರೀಕ್ಷೆ ಜನರದ್ದು..

Skanda

| Edited By: pruthvi Shankar

Jan 08, 2021 | 6:20 PM

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. 2020ರ ಕಹಿ ನೆನಪುಗಳನ್ನು ಮರೆತು 2021 ನೇ ಇಸವಿಯತ್ತ ಹೊಸ ಭರವಸೆಯೊಂದಿಗೆ ಹೆಜ್ಜೆ ಹಾಕಬೇಕಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2021ನೇ ಇಸವಿ ಯಾವ ರಾಶಿಯವರಿಗೆ ಯಾವ ರೀತಿಯ ಫಲಾಫಲಗಳನ್ನು ಉಂಟುಮಾಡಲಿದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮೇಷ ರಾಶಿ: ನಿಮ್ಮ ಜೀವನದಲ್ಲಿ ತಾಳ್ಮೆ ನೆಲೆಯೂರಲಿದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಅಭಿವೃದ್ಧಿಯಾಗುವ ಮೂಲಕ ಸಂಬಂಧಗಳು ಬಲಗೊಳ್ಳಲಿವೆ. ಹೆಂಡತಿ-ಮಕ್ಕಳಿಂದ ಸಂತಸ ಲಭಿಸಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಪ್ರಾಪ್ತಿಯಾಗಲಿದೆ. ಇನ್ನೂ ಒಳ್ಳೆಯ ಸಂಬಳ, ಕೆಲಸ ಸಿಗುವ ಸಾಧ್ಯತೆ ಇದ್ದು, ಆರ್ಥಿಕ ಮುಗ್ಗಟ್ಟು ಸುಧಾರಿಸಲಿದೆ. ವರ್ಷವಿಡೀ ಉತ್ತಮ ಆರೋಗ್ಯ ಇದ್ದರೂ ನವೆಂಬರ್​ ವೇಳೆಗೆ ಕೊಂಚ ಏರಿಳಿತ ಆಗಬಹುದು. ಎಚ್ಚರವಿರಲಿ. ಇದು ಸ್ತ್ರೀಯರಿಗೆ ಒಳ್ಳೆಯ ಕಾಲ. ರೈತರಿಗೆ ಆದಾಯ ದ್ವಿಗುಣವಾಗಲಿದೆ. ಭೂಮಿ, ಎಲೆಕ್ಟ್ರಾನಿಕ್ಸ್‌, ದಿನಸಿ, ಬಟ್ಟೆ ವ್ಯಾಪಾರಸ್ಥರಿಗೆ ಶುಭ ಅರಸಿ ಬರುವುದು. ವೈದ್ಯರು, ಉಪನ್ಯಾಸಕರಿಗೆ ಒಳ್ಳೆಯ ಹೆಸರು ಸಿಗಲಿದೆ. ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರಿಗೆ ಉತ್ತಮ ಫಲ ದೊರೆಯಲಿದೆ.

ಮನಃಶಾಂತಿಗಾಗಿ ದಕ್ಷಿಣಾ ಮೂರ್ತಿಯ ಆರಾಧನೆ ಮಾಡಿ. ಕುದುರೆಯ ದರ್ಶನ ಅಥವಾ ಪೂಜೆ ಮಾಡಿ.

ವೃಷಭ ರಾಶಿ: ಈ ವರ್ಷ ನಿಮಗೆ ಒಟ್ಟಾರೆಯಾಗಿ ಉತ್ತಮ ಯೋಗವಿದೆ. 2021ರ ಎರಡು ಗ್ರಹಣಗಳು ಇದೇ ರಾಶಿಯಲ್ಲಿ ಸಂಭವಿಸಲಿದ್ದು ಶುಭ, ಅಶುಭ ಫಲಗಳು ಗೋಚರಿಸುವ ಸಾಧ್ಯತೆ ಇದೆ. ಮಕ್ಕಳಿಂದ ಕುಟುಂಬದಲ್ಲಿ ಕಲಹ ಆಗಬಹುದು. ಕಣ್ಣಿನ ತೊಂದರೆ, ಬೆನ್ನು ನೋವು, ಬಿಪಿ ಕಾಡಬಹುದು. ಆದರೆ, ಉಸಿರಾಟದ ತೊಂದರೆ ಸಂಪೂರ್ಣ ಸುಧಾರಿಸಲಿದೆ. ಈ ವರ್ಷ ಹಣಕಾಸಿನ ತೊಂದರೆ ಇರುವುದಿಲ್ಲ. ಸಿನಿಮಾ ರಂಗದವರಿಗೆ, ಅಕ್ಕಿ, ಬಟ್ಟೆ, ನೀರಿನ ವ್ಯಾಪಾರಸ್ಥರಿಗೆ, ಉಪನ್ಯಾಸಕರು, ಮಾತುಗಾರಿಕೆ ವೃತ್ತಿಯವರಿಗೆ, ಕಲಾವಿದರು, ಟ್ರಾವೆಲ್ ಏಜೆನ್ಸಿ, ಬ್ಯೂಟಿ ಪಾರ್ಲರ್ ನಡೆಸುವ ಶ್ರಮ ಜೀವಿಗಳಿಗೆ ಉತ್ತಮ ಕಾಲ. ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಮಾನಸಿಕ ಚಂಚಲತೆ ಬಾಧಿಸಬಹುದು. ಆದ್ದರಿಂದ ಹೆಚ್ಚು ಶ್ರಮ ಪಡಬೇಕು. ಉತ್ತರಾಭಿಮುಖವಾಗಿ ಕುಳಿತು ಓದಿದ್ರೆ ಶುಭವಾಗಲಿದೆ. ಕೃತಿಕಾ, ರೋಹಿಣಿ, ಮೃಗಶಿರ ನಕ್ಷತ್ರದವರಿಗೆ ಮಿಶ್ರಫಲ.

ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್. ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ಮಂತ್ರ ಪಠಣೆಯಿಂದ ಒಳಿತಾಗಲಿದೆ. ಶನಿ ಶಾಂತಿ ಮಾಡಿಸಿ, ಮೊಸರು ದಾನ ಮಾಡಿ.

ಮಿಥುನ ರಾಶಿ: ಜನವರಿಯಿಂದ ಏಪ್ರಿಲ್‌ವರೆಗೆ ಶುಭಫಲಗಳಿಲ್ಲ. ಮದುವೆ ಕೊನೆಯ ಹಂತದಲ್ಲಿ ತಪ್ಪಿ ಹೋಗಬಹುದು. ಅನಾವಶ್ಯಕ ವಾಗ್ವಾದ ಆಗಬಹುದು. ಮಾನಸಿಕ ಸ್ಥಿತಿಗತಿ ಏರುಪೇರಾಗಬಹುದು. ವ್ಯವಹಾರದಲ್ಲಿ ತೊಂದರೆ ಆಗುವ ಸಾಧ್ಯತೆಯೂ ಇದೆ. ಪುರುಷರಿಗೆ ಕಂಟಕ ಎದುರಾಗಲಿದೆ. ಆದರೆ, ಏಪ್ರಿಲ್​ನಿಂದ ಸೆಪ್ಟಂಬರ್‌ ನಡುವಿನ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾಣಲಿದ್ದೀರಿ. ಸ್ತ್ರೀಯರಿಗೆ ಶುಭ ಪ್ರಾಪ್ತಿ ಆಗಲಿದೆ. ಗೃಹಿಣಿಯರಿಂದ ಮನೆಗೆ ಶುಭವಾಗಲಿದೆ. ಆರೋಗ್ಯ ಸುಧಾರಿಸಲಿದೆ. ಸಣ್ಣಪುಟ್ಟ ಕಾಲುನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಭೂಮಿ ವ್ಯಾಪಾರಸ್ಥರಿಗೆ ಮತ್ತು ವಿದ್ಯಾಸಂಸ್ಥೆ ನಡೆಸುವವರಿಗೆ ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಸಂಕಷ್ಟದ ಕಾಲವಾಗಿರುವುದರಿಂದ ಶ್ರಮ ಹಾಕಲೇಬೇಕು. ಮೃಗಶಿರ, ಆರಿದ್ರಾ, ಪುನರ್ವಸು ನಕ್ಷತ್ರದವರಿಗೆ ಒತ್ತಡ.

ಉತ್ತಮ ಫಲಕ್ಕಾಗಿ ದಶರಥ ಕೃತ ಶನಿ ಸ್ತೋತ್ರ ಪಠಿಸಿ. ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ. ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಮಂತ್ರದಿಂದ ನೆಮ್ಮದಿ ಲಭಿಸಲಿದೆ. ಸಾಸಿವೆ ಎಣ್ಣೆಯಿಂದ ಇಷ್ಟದೇವರಿಗೆ ದೀಪ ಹಚ್ಚಿ.

ಕಟಕ ರಾಶಿ: ಇದು ನಿಮಗೆ ಪುಣ್ಯ ಕಾಲ. ಉತ್ತಮ ಯೋಗ ಕೂಡಿ ಬರಲಿದೆ. ಗುರುವಿನ ನೇರ ದೃಷ್ಟಿ ಇರಲಿದೆ. ವಿವಾಹ ಯೋಗ, ಸಂತಾನ ಯೋಗ ಪ್ರಾಪ್ತಿಯಾಗಲಿದ್ದು ಸಂತಸ ಮನೆಮಾಡಲಿದೆ. ಮನೆಯ ಯಜಮಾನನಿಗೆ ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗಸ್ಥ ಗೃಹಿಣಿಯರಿಗೆ ಶುಭಕಾಲ, ಹಳೆಯ ಸಾಲ ತೀರುವ ಜೊತೆಗೆ ಹೊಸ ಉಡುಗೊರೆಗಳು ಸಿಗಲಿವೆ. ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಉತ್ತಮ ಫಲ ಸಿಗಲಿದ್ದು, ಷೇರು ಹೂಡಿಕೆಯಿಂದ ಲಾಭ ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಶುಭ. ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ. ಆದರೆ, ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ ಸಲ್ಲದು. ಚರ್ಮ ವ್ಯಾಧಿ, ತಲೆನೋವು ಉಲ್ಬಣಿಸದಂತೆ ಎಚ್ಚರಿಕೆ ವಹಿಸಿ. ವಯೋವೃದ್ಧರಿಗೆ ಒತ್ತಡ ಹೆಚ್ಚಾಗಲಿದೆ. ವಾಗ್ವಾದಗಳಿಂದ ತೊಂದರೆಯಾಗಲಿದೆ. ರಾಜಕಾರಣಿಗಳಿಗೆ ಅಧಿಕಾರ ಪ್ರಾಪ್ತಿಯಾಗುವ ಸಾಧ್ಯತೆ. ಬೀದಿಬದಿ ವ್ಯಾಪಾರಿಗಳಿಗೆ, ಹಾಲು ಮಾರುವವರಿಗೆ, ಹೋಟೆಲ್ ನಡೆಸುವವರಿಗೆ ಶುಭವಾಗಲಿದೆ.

ನೆಮ್ಮದಿ ಲಭಿಸಲು ಗುರು ಸ್ತೋತ್ರ ಪಠಿಸಿ. ದೇವನಾಂಚ ಋಷಿನಾಂಚ ಗುರು ಕಾಂಚನ ಸನ್ನಿಭಂ.. ಬುದ್ಧಿಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪತಿಂ ಸ್ತೋತ್ರ ಪಠಣ ಮಾಡಿ. ಕ್ಯಾರೆಟ್‌ನಿಂದ ಸಿಹಿ ತಯಾರಿಸಿ ಗುರುವಾರ ದಾನ ಮಾಡಿ.

ಸಿಂಹ ರಾಶಿ: ಈ ರಾಶಿಯವರಿಗೆ ಮಿಶ್ರಫಲಗಳಿವೆ. ಏಪ್ರಿಲ್ 5ರ ತನಕ ಕಂಟಕವಿದ್ದು, ಮನೆಯಿಂದ ತೊಂದರೆ ಆಗಲಿದೆ. ಐಷಾರಾಮಿ ಜೀವನಕ್ಕೆ ಕಡಿವಾಣ ಬೀಳಲಿದೆ. ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ಸ್ಥಾನಕ್ಕೆ ಚ್ಯುತಿ ಬರಲಿದೆ. ಬಿಪಿ, ಶುಗರ್, ರಕ್ತಹೀನತೆ ಕಾಡಲಿದ್ದು, ಆರೋಗ್ಯಕ್ಕಾಗಿ ಖರ್ಚು ಮಾಡಲಿದ್ದೀರಿ. ಹಣಕಾಸಿನ ಮುಗ್ಗಟ್ಟು ಕಾಡಲಿದೆ. ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಇದು ಕಂಟಕ ಕಾಲ. ಆದ್ದರಿಂದ ಈ ರಾಶಿಯವರು ತಾಳ್ಮೆ ವಹಿಸುವುದು ಅತ್ಯವಶ್ಯಕ. ಸೆಪ್ಟಂಬರ್, ನವೆಂಬರ್ ಒಳ್ಳೆಯ ಕಾಲವಾಗಿದ್ದು, ಶುಭ ನಿಮ್ಮನ್ನು ಅರಸಿ ಬರಲಿದೆ. ಸಿಮೆಂಟ್, ಕಬ್ಬಿಣದ ವ್ಯಾಪಾರಿಗಳಿಗೆ ಶುಭವಾಗಲಿದೆ. ಸಂತಾನ ಯೋಗ ಪ್ರಾಪ್ತಿಯಾಗಲಿದೆ. ಆಸ್ತಿ ಗಲಾಟೆಗೆ ಹೆಚ್ಚಿನ ಸಮಯ ವ್ಯರ್ಥ ಮಾಡಬೇಡಿ. ಕೋರ್ಟ್​ ಕಲಹಗಳು ಮನಸ್ಸಿಗೆ ಕಷ್ಟ ಎನ್ನಿಸಬಹುದು. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ. ಪೂರ್ವಾಭಿಮುಖವಾಗಿ ಕುಳಿತು ಓದಿದರೆ ಒಳಿತಾಗಲಿದೆ.

ಶುಭ ಫಲಕ್ಕಾಗಿ ಸುಬ್ರಹ್ಮಣ್ಯ ಕರಾವಲಂಬ ಸ್ತೋತ್ರ ಪಠಿಸಿ. ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ. ತನ್ನೋ ಷಣ್ಮುಖ ಪ್ರಚೋದಯಾತ್ ಮಂತ್ರ ಪಠಣೆ ಮಾಡಿ. ತೊಗರಿ ಬೇಳೆಯಿಂದ ಮಾಡಿದ ಪದಾರ್ಥ ದಾನ ಮಾಡಿ.

ಕನ್ಯಾ ರಾಶಿ: ನಿಮಗೆ ಗುರುಬಲ ಚೆನ್ನಾಗಿದೆ. ಮನೆ ಖರೀದಿಗೆ, ವಿವಾಹಕ್ಕೆ ಉತ್ತಮ ಕಾಲ. ಆರ್ಥಿಕ ವೃದ್ಧಿ ಆಗಲಿದೆ. ಬಾಕಿ ಹಣ ವಾಪಸ್ಸಾಗಲಿದೆ. ಒಟ್ಟಾರೆಯಾಗಿ ಅಧಿಕ ಲಾಭ ಬರಲಿದೆ. ಮಠ-ಮಾನ್ಯಗಳ ವಿದ್ಯಾಸಂಸ್ಥೆಗಳಿಗೆ ಶುಭಕಾಲ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗಲಿದೆ. ಆದರೆ, ಆರೋಗ್ಯದಲ್ಲಿ ಮಿಶ್ರಫಲ ಇದ್ದು, ಜೀರ್ಣಶಕ್ತಿ ಸಂಬಂಧ ಕಾಯಿಲೆ ಬರಬಹುದು.

ಪರಿಹಾರಕ್ಕಾಗಿ ಶನಿ ಶಾಂತಿ ಮಾಡಿಸಿ. ಮೂರು ಬುಧವಾರಗಳ ಕಾಲ ವಿಷ್ಣು ದೇವಾಲಯದ ಹುಂಡಿಗೆ 11 ರೂಪಾಯಿ ಹಾಕಿ. ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಜಪಿಸಿ.

ತುಲಾ ರಾಶಿ: ಪ್ರಾರಂಭಿಕ ಕಾಲ ಕಷ್ಟಕರವಾಗಿರಲಿದೆ. ಆರೋಗ್ಯದಲ್ಲಿ, ಆದಾಯದಲ್ಲಿ ಏರುಪೇರಾಗಬಹುದು. ಕುಟುಂಬದಲ್ಲಿ ದಂಪತಿ ನಡುವೆ ಕಲಹವಾಗುವ ಸಂಭವ. ಹಣಕಾಸಿನ ಲೆಕ್ಕಾಚಾರದಲ್ಲಿ ಒದ್ದಾಟ ಆಗಬಹುದು. ಸಾಲಗಳ ವಿಚಾರಕ್ಕೆ ಸ್ವಲ್ಪ ಜಾಗರೂಕರಾಗಿರಿ. ಮಕ್ಕಳಿಂದ ತೊಂದರೆ ಅನುಭವಿಸುವಿರಿ. ಉದ್ಯೋಗದಲ್ಲಿ ಇರುವವರಿಗೆ ಕಿರಿಕಿರಿ, ವಿನಾಕಾರಣ ಅಪವಾದ ಬರಬಹುದು. ಕೊಲೆಸ್ಟ್ರಾಲ್, ಬಿಪಿ, ಮಾನಸಿಕ ಒತ್ತಡ ಉಂಟಾಗಬಹುದು. ಆದರೆ, ತಾಳ್ಮೆ ಕಳೆದುಕೊಳ್ಳಬೇಡಿ. ಉದ್ಯೋಗದಲ್ಲಿ ಬದಲಾವಣೆ ಮಾಡಬೇಡಿ. ಏಪ್ರಿಲ್ 6ರ ನಂತರ ಸ್ವಲ್ಪ ಚೇತರಿಕೆ ಕಾಣಲಿದ್ದೀರಿ. ಕಷ್ಟದಿಂದ ಮೇಲೇಳುವ ಕಾಲ ಒದಗಲಿದೆ. ಹೆಣ್ಣಿನಿಂದ ಯೋಗ ಪ್ರಾಪ್ತಿಯಾಗಬಹುದು. ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ, ಬಣ್ಣ ಮಾರುವವರಿಗೆ, ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಈ ವರ್ಷ ನಿಮಗೆ ಸಂಪೂರ್ಣ ಅದೃಷ್ಟ ದೊರಕುವುದು ಕಷ್ಟ ಎಂಬುದು ನೆನಪಿರಲಿ.

ಒಳಿತಿಗಾಗಿ ಕೂಲಿ ಕಾರ್ಮಿಕರಿಗೆ ಸಿಹಿ ಪೊಂಗಲ್ ನೀಡಿ, ಶುಕ್ರವಾರದಂದು ಹೊಸ ವಸ್ತ್ರ ದಾನ ಮಾಡಿ. ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ.. ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಸ್ತೋತ್ರ ಪಠಿಸಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಗುರುಬಲವಿಲ್ಲ. 2 ಗ್ರಹಣಗಳು ನಿಮ್ಮ ರಾಶಿಯಲ್ಲಿ ಸಂಭವಿಸಲಿದೆ. ಸಾಧ್ಯವಾದಷ್ಟು ತಾಳ್ಮೆ, ಸಹನೆಯಿಂದ ವರ್ತಿಸಿ. ವ್ಯಾಪಾರ, ಉದ್ಯೋಗ, ರಾಜಕೀಯ ವರ್ಗದವರಿಗೆ ಹತ್ತಿರದವರಿಂದಲೇ ಕಿರಿಕಿರಿ, ಸಂಕಟ ಉಂಟಾಗುವ ಸಾಧ್ಯತೆ. ಕೇಂದ್ರ ಹಾಗೂ ರಾಜ್ಯ ಕ್ಯಾಬಿನೆಟ್‌ನಲ್ಲಿ ಒತ್ತಡ ನಿರ್ಮಾಣವಾಗಬಹುದು. ರಾಜಕೀಯ ವಲಯದಲ್ಲಿ ಅಲ್ಲೋಲ-ಕಲ್ಲೋಲ ಆಗುವ ಸಾಧ್ಯತೆ ಇದೆ. ಭ್ರಷ್ಟಾಚಾರಿ ರಾಜಕಾರಣಿಗಳು ಜೈಲಿಗೆ ಹೋಗಲಿದ್ದಾರೆ. ರಾಜಕೀಯ ಧುರೀಣರು ಅಸ್ತಂಗತವಾಗುವ ಸಂಭವವಿದೆ. ಧರ್ಮಗುರುಗಳಿಗೆ ಕಂಟಕ ಎದುರಾಗಲಿದೆ. ಆಕ್ರಮವಾಗಿ ಆಸ್ಪತ್ರೆ ನಡೆಸುವವರಿಗೆ ತೊಂದರೆಯಾಗಲಿದೆ. ಅಣ್ಣ-ತಮ್ಮಂದಿರಿಗೆ ಅಪಘಾತ ಸಾಧ್ಯತೆ ಇದೆ. ಎಚ್ಚರವಿರಲಿ. ತಂದೆ-ತಾಯಿ, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ. ಕುಟುಂಬದಲ್ಲಿ ಆರೋಗ್ಯದಿಂದ ತೊಂದರೆ ಆಗಬಹುದು. ಪಾಲುದಾರಿಕೆಯಿಂದ ಗಲಾಟೆ ಶುರುವಾದೀತು. ಹಣಕಾಸಿನ ತೊಂದರೆ ಅನುಭವಿಸಲಿದ್ದೀರಿ. ಚತುರತೆಯಿಂದ ಪರಿಸ್ಥಿತಿ ನಿಭಾಯಿಸಿ. ಅಭಿವೃದ್ದಿ ಕುಂಠಿತವಾಗಲಿದ್ದು ಸ್ವಶಕ್ತಿ ಕಳೆದುಕೊಳ್ಳಬೇಡಿ. ವೈದ್ಯಕೀಯ ವಿಭಾಗದವರಿಗೆ, ಮೆಡಿಸಿನ್ ಮಾರುವವರಿಗೆ, ಲ್ಯಾಬೊರೇಟರಿ, ನರ್ಸ್, ಡಾಕ್ಟರ್‌ಗಳಿಗೆ ಶುಭವಾಗಲಿದೆ. ರಕ್ಷಣಾ ಇಲಾಖೆಯ ಅಕ್ರಮ ಬಯಲಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ಕಂಟಕ ಹಾಗೂ ಶುಭ ಎರಡೂ ಇದೆ. ನೆನಪಿಡಿ ಧರ್ಮದಿಂದ ಇರುವವರಿಗೆ ಯಾವ ಕಾರಣಕ್ಕೂ ತೊಂದರೆ ಆಗಲ್ಲ.

ಪರಿಹಾರಕ್ಕಾಗಿ ಅನಾಥರಿಗೆ, ಬಡ ಮಕ್ಕಳಿಗೆ, ವೃದ್ಧರಿಗೆ ದಾನ ಮಾಡಿ. ಗೋಪೂಜೆ, ಗೋಸೇವೆ ಮಾಡಿ. ಅರ್ಹರಿಗೆ ಗೋದಾನ ಮಾಡಿ. ಮಹಾಮೃತ್ಯುಂಜಯ ಮಂತ್ರ ಪಠಿಸಿ. ಶಿವ-ಪಾರ್ವತಿ ಆರಾಧನೆ ಮಾಡಿ. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ, ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮಕ್ಷೀಯ ಮಾಮೃತಾತ್ ಸ್ತೋತ್ರ ಪಠಣೆ ಮಾಡಿ.

ಧನಸ್ಸು ರಾಶಿ: ಈ ರಾಶಿಯವರಿಗೆ ಮಿಶ್ರಫಲಗಳಿವೆ. ಕುಟುಂಬದಲ್ಲಿ ಕಡಿಮೆ ಸಹಕಾರ ದೊರೆಯಲಿದೆ. ಒಡಂಬಡಿಕೆಗೆ ಕುಟುಂಬದ ಒಪ್ಪಿಗೆ ಇರುವುದಿಲ್ಲ. ಮಾತಿನ ಬಗ್ಗೆ ನಿಗಾ ವಹಿಸಿದರೆ ಉತ್ತಮ. ಪ್ರೀತಿ ವಿಚಾರದಲ್ಲಿ ಈ ರಾಶಿಯವರಿಗೆ ಶುಭವಾಗಲಿದೆ. ಮದುವೆ ಕೂಡಿಬರಲಿದೆ. ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿ. ಆದರೆ, ಹೆಂಡತಿಯ ಆರೋಗ್ಯ ವಿಚಾರದಲ್ಲಿ ಒದ್ದಾಟವಾಗಿ ಖರ್ಚು ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡಬೇಡಿ. ಹೊಸ ಮನೆ, ಹೊಸ ಭೂಮಿ ಖರೀದಿ ಬೇಡ. ವಾಹನಗಳ ವಿಚಾರದಲ್ಲಿ ಜಾಗ್ರತೆಯಿಂದಿರಿ ಜೂನ್ ನಂತರ ಅಪಘಾತ ಆಗಬಹುದು. ಬೇರೆಯವರಿಂದ ಮನಸ್ಸಿಗೆ ತೊಂದರೆ ಆಗಬಹುದು. ನಂಬಿಕೆಯ ಗೆಳೆಯರು ದೂರವಾಗಲಿದ್ದಾರೆ. ಕೂದಲು, ಮೂಗು, ಗಂಟಲು ಸಂಬಂಧ ರೋಗಬಾಧೆ ಉಂಟಾಗಬಹುದು. ಎಚ್ಚ ವಹಿಸಿ. ಆದರೆ, ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಕಾಲ. ಬಡ್ತಿ ಸಿಗುವ ಸಾಧ್ಯತೆ ಇದೆ. ಸ್ವಂತ ಉದ್ದಿಮೆ ನಡೆಸುವ ಹೆಂಗಸರಿಗೂ ಲಾಭ ಆಗಲಿದೆ. ಹೆಚ್ಚು ಪುಣ್ಯಕ್ಷೇತ್ರ ದರ್ಶನ ಭಾಗ್ಯ ಒದಗಲಿದೆ.

ಒಳಿತಿಗಾಗಿ ವರ್ಷದಲ್ಲಿ 3 ಗುರುವಾರ ಗುರುಗಳಿಗೆ ತಾಮ್ರ ದಾನ ಮಾಡಿ. ತತ್ಪುರುಷಾಯ ವಿದ್ಮಹೆ, ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್ ಮಂತ್ರ ಪಠಿಸಿ.

ಮಕರ ರಾಶಿ: ಏಪ್ರಿಲ್ ತನಕ ಅರ್ಧಭಾಗದಷ್ಟು ಮಾತ್ರ ಯಶಸ್ಸು. ಪರಿಪೂರ್ಣ ಜಯ ಪ್ರಾಪ್ತಿಯಾಗುವುದಿಲ್ಲ. ಗಂಡ-ಹೆಂಡತಿ ಮಧ್ಯೆ ಗಲಾಟೆಯಾಗಲಿದೆ. ಮನೆಯಲ್ಲಿ ಕಲಹ ಉಂಟಾಗಲಿದೆ. ವಿವಾಹ ವಿಚ್ಛೇದನ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಸಂಬಳ ಬಾರದಿರುವುದು. ಆದಾಯಕ್ಕಿಂತ ಹೆಚ್ಚು ಖರ್ಚಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಂಭವ ಇದೆ. ಆಸ್ತಿ ಕಳೆದುಕೊಳ್ಳಲಿದ್ದೀರಿ. ಕಾರ್ಯ ನಿಮಿತ್ತ ಹೋಗುವಾಗ ಆಕಸ್ಮಿಕ ಅಪಘಾತ ಆಗಬಹುದು. ಎಚ್ಚರವಿರಿ. ಭ್ರಮೆಯಿಂದ ಆರೋಗ್ಯ ಕೆಡುವ ಸಾಧ್ಯತೆ ಇದೆ. ಆದ್ದರಿಂದ ಮನಸ್ಸು ಉಲ್ಲಸಿತವಾಗಿರುವಂತೆ ನೋಡಿಕೊಳ್ಳಿ. ಸೆಪ್ಟೆಂಬರ್ ನಂತರ ಕಷ್ಟಕಾಲ ಒದಗಿ ಬರಬಹುದು ಎದುರಿಸಲು ಸಜ್ಜಾಗಿರಿ. ಅರಂಭದಲ್ಲಿ ವಿಘ್ನ, ಮಧ್ಯದಲ್ಲಿ ಶುಭ, ಅಂತ್ಯದಲ್ಲಿ ಅಶುಭ ಆಗುವುದು. ಮನೆ ಕಟ್ಟುವವರಿಗೆ, ಭೂಮಿ ವ್ಯಾಪಾರಿಗಳಿಗೆ, ಕಬ್ಬಿಣ ಮಾರುವವರಿಗೆ, ಹಾರ್ಡ್‌ವೇರ್‌ ಉದ್ಯಮದವರಿಗೆ ಲಾಭವಾಗಲಿದೆ.

ಶುಭಫಲ ಪ್ರಾಪ್ತಿಯಾಗಲು ಲಕ್ಷ್ಮೀ ನರಸಿಂಹನನ್ನು ಆರಾಧಿಸಿ. ಉದ್ಭವ ನರಸಿಂಹ ಸನ್ನಿಧಿಯಲ್ಲಿ ಅನ್ನದಾನ ಮಾಡಿ. ಉಗ್ರಂ ವೀರಂ ಮಹಾವಿಷ್ಣುಂ, ಜ್ವಲಂತಂ ಸರ್ವತೋಮುಖಂ, ನೃಸಿಂಹಂ ಭೀಷಣಂ ಭದ್ರಂ, ಮೃತ್ಯೋಮೃತ್ಯುಂ ನಮಾಮ್ಯಹಂ.. ಸ್ತೋತ್ರ ಪಠಿಸಿ.

ಕುಂಭ ರಾಶಿ: ಈ ರಾಶಿಯವರಿಗೆ ಆರಂಭದಲ್ಲಿ ಶುಭಫಲ, ಕಡೆಯದಾಗಿ ಅಶುಭಫಲ ಇದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಕುಟುಂಬದಲ್ಲಿ ವಿವಾಹ ಕಾರ್ಯ ನಡೆಯಲಿದೆ. ಮನೆ ನಿರ್ಮಾಣ, ಆಸ್ತಿ ಖರೀದಿ ಮಾಡುವಿರಿ. ಉದ್ಯೋಗ ಬದಲಾವಣೆ ಆಗಲಿದೆ. ವಿದೇಶದಿಂದ ಅವಕಾಶ ಬರುವ ಸಾಧ್ಯತೆ ಇದೆ. ಬ್ಯಾಂಕ್, ಸ್ಟಾಕ್ ಮಾರ್ಕೆಟ್, ಹೂಡಿಕೆಗೆ ಶುಭವಾಗಲಿದೆ. ಆದರೆ, ತಾಯಿ ಸಮಾನರ ಆರೋಗ್ಯಕ್ಕಾಗಿ ಒದ್ದಾಟ. ಬ್ಯಾಂಕಿನಲ್ಲಿರುವ ಹಣ ಖರ್ಚಾಗುವ ಸಾಧ್ಯತೆ. ಹೆಚ್ಚು ಮಾನಸಿಕ ಒತ್ತಡ ಕಾಡಲಿದೆ. ತಲೆನೋವು, ಕಾಲಿಗೆ ಸಂಬಂಧಿಸಿದ ಕಾಯಿಲೆ ಕಾಡಲಿದೆ. ಆಡಳಿತ ವರ್ಗದವರಿಗೆ ತೊಂದರೆ ಆಗಬಹುದು. ಬಾಂಧವ್ಯಗಳ ಬಗ್ಗೆ ಎಚ್ಚರವಾಗಿರಿ. ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಕಷ್ಟದಿಂದ ಸುಖ ಸಿಗಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಗೃಹಿಣಿಯರಿಗೆ, ನಿರ್ಮಾಣ ಕಾರ್ಯದವರಿಗೆ, ಭೂಮಿ ಖರೀದಿ ಹಾಗೂ ಮಾರುವವರಿಗೆ ಶುಭವಾಗಲಿದೆ.

ಉತ್ತಮ ಫಲಕ್ಕಾಗಿ ಓಂ ಧುಂ ದುರ್ಗಾಯ ನಮಃ ಸ್ತೋತ್ರವನ್ನು ಪಠಿಸಿ, ಚಾಮುಂಡಿಯ ದರ್ಶನ ಮಾಡಿ. ದುರ್ಗಾ, ಚಂಡಿಕಾ ಹೋಮಗಳಲ್ಲಿ ಭಾಗವಹಿಸಿ. ಓಂ ಕಾತ್ಯಾಯನಾಯ ವಿದ್ಮಹೇ, ಕನ್ಯಾಕುಮಾರಿ ಚ ಧೀಮಹಿ, ತನ್ನೋ ದುರ್ಗಿಃ ಪ್ರಚೋದಯತ್.. ಮಂತ್ರ ಪಠಣೆಯಿಂದ ಒಳಿತಾಗಲಿದೆ. ಎಳ್ಳೆಣ್ಣೆಯನ್ನು ಕಾಲಭೈರವ, ಶಿವ, ದುರ್ಗಿ ದೇವಸ್ಥಾನಕ್ಕೆ ನೀಡಿ. ವಿವಾಹ ಕಾರ್ಯಗಳಲ್ಲಿ ಸಿಹಿ ಹಂಚುವುದರಿಂದ, ಚಿಕ್ಕಮಕ್ಕಳನ್ನು ಸಂತೃಪ್ತಿ ಪಡಿಸುವುದರಿಂದ ನೆಮ್ಮದಿ ಸಿಗಲಿದೆ.

ಮೀನ ರಾಶಿ: ಈ ರಾಶಿಯವರಿಗೆ ಶುಭಫಲ ದೊರಕಲಿದೆ. ಆದರೆ, ಯಶಸ್ಸು ನಿಧಾನಗತಿಯಲ್ಲಿ ಸಿಗಲಿದೆ. ಆತುರದ ನಿರ್ಧಾರ ಬೇಡ. ಕೀರ್ತಿ, ಪ್ರಶಂಸೆ, ಸನ್ಮಾನ, ವಿದೇಶ ಪ್ರಯಾಣ ಯೋಗವಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. ಅನಿರೀಕ್ಷಿತವಾಗಿ ಹಣ ಬರಲಿದೆ. ವಿದ್ಯಾರ್ಥಿಗಳಿಗೆ, ಹೆಣ್ಣುಮಕ್ಕಳಿಗೆ ಸಾಧನೆ ಮಾಡೋಕೆ ಶುಭಕಾಲ. ಆಗಸ್ಟ್, ಸೆಪ್ಟಂಬರ್‌ನಲ್ಲಿ ಜಾಗರೂಕರಾಗಿರಿ. ಹೊಟ್ಟೆ ನೋವು ಬರುವ ಸಾಧ್ಯತೆ ಇದೆ. ಆಹಾರದಲ್ಲಿ ಹಿತಮಿತ ಇರಲಿ. ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿರುವವರಿಗೆ, ಭೂಮಿ ಮಾರುವವರಿಗೆ, ಟ್ರಾವೆಲ್ ಏಜೆನ್ಸಿಯವರಿಗೆ ಶುಭವಾಗಲಿದೆ. ಕುಟುಂಬ ನಿರ್ವಹಣೆ, ಮನೆಕಾರ್ಯ, ವಿವಾಹ ಕಾರ್ಯಗಳು ಸಾಂಗವಾಗಿ ನೆರವೇರಲಿವೆ.

ನೆಮ್ಮದಿಗಾಗಿ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ಚೆಂಡು ಹೂವಿನ ಹಾರವನ್ನು 3 ಗುರುವಾರ ಮುನೇಶ್ವರನಿಗೆ ನೀಡಿ. ಮುನೇಶ್ವರ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಿ. ದೇವಾತಾರಾಧನೆ, ಅನ್ನದಾನ ಮಾಡಿ. ವಿದ್ಯಾರ್ಥಿಗಳಿಗೆ, ಮಕ್ಕಳಿಗೆ, ಅಂಧರಿಗೆ, ವೃದ್ಧರಿಗೆ ಸಹಾಯ ಮಾಡಿ. ವಿವಾಹ ಕಾರ್ಯಗಳಿಗೆ ನೆರವಾಗಿ. ಕಪ್ಪು ಬಟ್ಟೆಯನ್ನು ಧರಿಸಬೇಡಿ. ಒಳ್ಳೆಯದನ್ನು ಆಲೋಚಿಸಿದರೆ ಖಂಡಿತಾ ಒಳಿತಾಗುತ್ತದೆ.

ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ- 99728 48937

ಹೊಸ ವರ್ಷ 2021ರ ಫಲಾಫಲ: ಯಾವ ರಾಶಿಯವರಿಗೆ ಏನು ಲಾಭ? ವಿವರಿಸಿದ್ದಾರೆ ಎಸ್‌.ಕೆ.ಜೈನ್

Follow us on

Related Stories

Most Read Stories

Click on your DTH Provider to Add TV9 Kannada