ಇವರು ಕ್ರಿಸ್​ಮಸ್​ ಸಂತ ಅಲ್ಲ.. ನಿರಾಶ್ರಿತರಿಗೆ ಬೆಚ್ಚನೆಯ ಹೊದಿಕೆ ನೀಡುವ ದೇವದೂತ

ಡಿಸೆಂಬರ್ ಬಂದ್ರೆ ಸಾಕು ಚಳಿ ಹೆಚ್ಚಾಗಿ ರಾತ್ರಿ ಮನೆಯಿಂದ ಹೊರಗೆ ಬರೋಕೆ ಕಷ್ಟವಾಗುತ್ತೆ. ಇಂತಹ ಸಂದರ್ಭದಲ್ಲೂ ನಿರ್ಗತಿಕರು ಸೇರಿ ಕೆಲವರು ಬೀದಿ ಬದಿ ಮಲಗಿ ಜೀವನ ಸಾಗಿಸ್ತಾರೆ. ಇಂತವರಿಗೆ ಯಾರೋ‌ ಬಂದು ಹೊದಿಕೆ ಹೊದಿಸಿ ಹೋದರೆ ಹೇಗಿರುತ್ತೆ? ಇಂತಹ ಕೆಲಸವನ್ನ ಮೈಸೂರಿನ ಯುವಕರ ತಂಡವೊಂದು ಸದ್ದಿಲ್ಲದೆ ಮಾಡ್ತಿದೆ.

  • ದಿಲೀಪ್ ಚೌಡಹಳ್ಳಿ
  • Published On - 13:47 PM, 18 Dec 2020
ಇವರು ಕ್ರಿಸ್​ಮಸ್​ ಸಂತ ಅಲ್ಲ.. ನಿರಾಶ್ರಿತರಿಗೆ ಬೆಚ್ಚನೆಯ ಹೊದಿಕೆ ನೀಡುವ ದೇವದೂತ
ಬೀದಿ ಬದಿ ಮಲಗುವ ಜನರಿಗೆ ಉಚಿತವಾಗಿ ಹೊದಿಕೆ‌‌ ಹೊದಿಸುತ್ತಿರುವ ಯುವಕರು

ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ನಿರಾಶ್ರಿತರಿಗೆ ನೆರವಾಗುವ ಕಾಯಕ ಸದ್ದಿಲ್ಲದೆ ನಡೆಯುತ್ತಿದೆ. ಹೌದು, ನಗರದ KMPK ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ಹಾಗೂ ಸೂರಿಲ್ಲದೆ ಬೀದಿಬದಿ ಮಲಗುವವರಿಗೆ ಉಚಿತವಾಗಿ ಹೊದಿಕೆ‌‌ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಈ ಸಂಸ್ಥೆ ಇಂತಹ ಮಹತ್ತರವಾದ ಕೆಲಸ ಮಾಡಿಕೊಂಡು ಬಂದಿದೆ.

ಅಂದ ಹಾಗೆ, ಈ ಟ್ರಸ್ಟ್​ನವರು ಪ್ರತಿ ವರ್ಷ ನಿರಾಶ್ರಿತರಿಗೆ ಹೊದಿಕೆ ನೀಡುತ್ತಾ ಬಂದಿದ್ದು ತಾವು ಪ್ರಾರಂಭಿಸಿದ ಮೊದಲ ವರ್ಷ ಈ ಕಾರ್ಯಕ್ರಮವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಬಳಿಕ 2ನೇ ವರ್ಷಕ್ಕೆ, ಹೊದಿಕೆ ನೀಡುವ ಕಾರ್ಯವನ್ನ ಎರಡು ದಿನಕ್ಕೆ ವಿಸ್ತರಿಸಲಾಗಿತ್ತು.

ತದ ನಂತರ, ಮೂರನೇ ವರ್ಷ ಮೂರು ದಿನಕ್ಕೆ‌ ವಿಸ್ತರಿಸಲಾಗಿತ್ತು. ಆದ್ರೆ, ನಾಲ್ಕನೇ ವರ್ಷ ಸ್ನೇಹಿತರು ಹೆಚ್ಚಾದ ಕಾರಣ ಬರೋಬ್ಬರಿ 600ಕ್ಕೂ ಹೆಚ್ಚು ಹೊದಿಕೆ ಹಂಚುತ್ತಿದ್ದಾರೆ. ಈ ಕೆಲಸ ನಮಗೆ ತೃಪ್ತಿ ತಂದಿದ್ದು, ನಾಲ್ಕನೇ ವರ್ಷದ ಅಂಗವಾಗಿ 15 ದಿನ ಈ‌ ಕೆಲಸ ಮಾಡ್ತಿದ್ದೇವೆ. ಅವಶ್ಯಕತೆ ಬಿದ್ದರೆ, ಮತ್ತಷ್ಟು ಹೊದಿಕೆ ನೀಡ್ತೇವೆ ಎಂದಿದ್ದಾರೆ.

ಇದಕ್ಕಾಗಿ ನಿತ್ಯವೂ ಟ್ರಸ್ಟ್‌ನ ಸದಸ್ಯರು ರಾತ್ರಿ 9.30ರಿಂದ ಮಧ್ಯರಾತ್ರಿ 12 ಗಂಟೆವರೆಗೆ ನಗರದಾದ್ಯಂತ ನಿರಾಶ್ರಿತರಿಗೆ ಹೊದಿಕೆ ನೀಡ್ತಿದ್ದಾರೆ. ಇದಕ್ಕಾಗಿ ಎಲ್ಲ ಸದಸ್ಯರು ನೆರವಾಗಿದ್ದು, ಮುಂದೆ ಮತ್ತಷ್ಟು ಜನಪರ ಕೆಲಸ ಮಾಡ್ತೀವಿ ಎಂದು ಸಂಸ್ಥೆಯ ಸದಸ್ಯರು ತಿಳಿಸಿದ್ದಾರೆ.

ಒಟ್ಟಾರೆ, ರಸ್ತೆಯಲ್ಲಿ, ಲಾರಿಗಳ ಕೆಳಗೆ, ಫುಟ್​​ಪಾತ್​​ನಲ್ಲಿ ಜೀವನ ಸಾಗಿಸುವ ಜನರಿಗೆ KMPK ಟ್ರಸ್ಟ್ ಮಾನವೀಯತೆಯ ಜೊತೆಗೆ ಬೆಚ್ಚನೆಯ ಹೊದಿಕೆ ನೀಡಿ, ನೆಮ್ಮದಿಯಾಗಿ ನಿದ್ದೆ ಮಾಡುವಂತೆ ಮಾಡ್ತಿದೆ. ಇವರ ಈ ಕಾರ್ಯ ಹೀಗೆ ಮುಂದುವರಿಯಲಿ, ಕಷ್ಟ ಎಂದವರಿಗೆ ನೆರವಾಗಲಿ ಅನ್ನೋದು ಎಲ್ಲರ ಆಶಯ.

ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಬ್ಯಾನ್ಡ್​​ ನೋಟುಗಳು ಪತ್ತೆ..