AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breastfeeding: ಸ್ತನ್ಯಪಾನದ ಕುರಿತಾದ ತಪ್ಪು ಕಲ್ಪನೆಗಳಿವು

ಮಗುವಿಗೆ ಎದೆಹಾಲು ಬಹಳ ಅತ್ಯಗತ್ಯವಾದ ಆಹಾರ. ಸ್ತನ್ಯಪಾನವೆಂಬುದು ಸುಲಭದ ಪ್ರಯಾಣವಲ್ಲ. ಇದು ಏರಿಳಿತಗಳಿಂದ ಕೂಡಿರುತ್ತದೆ. ಮಗು ಸರಿಯಾಗಿ ಎದೆಹಾಲು ಕುಡಿಯದಿದ್ದಾಗ ಅಥವಾ ಮಗುವಿಗೆ ಬೇಕಾದಷ್ಟು ಹಾಲು ಉತ್ಪಾದನೆಯಾಗದಿದ್ದಾಗ ಅದು ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತದೆ. ಈ ಸ್ತನ್ಯಪಾನದ ಬಗ್ಗೆ ಅನೇಕರಲ್ಲಿ ಹಲವು ತಪ್ಪುಕಲ್ಪನೆಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Breastfeeding: ಸ್ತನ್ಯಪಾನದ ಕುರಿತಾದ ತಪ್ಪು ಕಲ್ಪನೆಗಳಿವು
ಸ್ತನ್ಯಪಾನ
ಸುಷ್ಮಾ ಚಕ್ರೆ
|

Updated on: Feb 10, 2024 | 3:46 PM

Share

ತಾಯಿಯ ಎದೆಹಾಲು (Breast Milk) ಅಮೃತಕ್ಕೆ ಸಮಾನ. ಎದೆಹಾಲು ಕುಡಿಯುವುದರಿಂದ ಮಕ್ಕಳ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. 6 ತಿಂಗಳವರೆಗೆ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲ ಅಂಶವನ್ನೂ ಎದೆಹಾಲೇ ಪೂರೈಕೆ ಮಾಡುತ್ತದೆ. ಆದರೆ, ಸ್ತನ್ಯಪಾನದ (Breastfeeding) ಸುತ್ತ ಹಲವಾರು ವಿಚಿತ್ರವಾದ ಕತೆಗಳಿವೆ, ತಪ್ಪು ಕಲ್ಪನೆಗಳಿವೆ. ಈ ತಪ್ಪುಗ್ರಹಿಕೆಗಳು ತಾಯಂದಿರಲ್ಲಿ ಚಡಪಡಿಕೆ ಮತ್ತು ಅತಿಯಾದ ಆಲೋಚನೆಯನ್ನು ಉಂಟುಮಾಡುತ್ತವೆ. ಸ್ತನ್ಯಪಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಹಳ ಸಾಮಾನ್ಯವಾಗಿವೆ. ಆದರೆ, ಅವೆಲ್ಲ ದೊಡ್ಡ ಸಂಗತಿಯೇನಲ್ಲ. ಎದೆಹಾಲು ಕುಡಿಸುವುದರ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳಿವು.

ತಪ್ಪುಕಲ್ಪನೆ 1: ಸ್ತನ್ಯಪಾನದಿಂದ ನೋವುಂಟಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಅನೇಕ ಮಹಿಳೆಯರು ತಮ್ಮ ಸ್ತನ್ಯಪಾನ ಪ್ರಯಾಣದ ಮೊದಲ ಕೆಲವು ದಿನಗಳಲ್ಲಿ ತೊಂದರೆ ಹಾಗೂ ನೋವನ್ನು ಅನುಭವಿಸುತ್ತಾರೆ. ಏಕೆಂದರೆ ಅವರಿಗೆ ಸ್ತನ್ಯಪಾನ ಹೊಸದಾಗಿರುತ್ತದೆ. ಅವರ ದೇಹ ಅದಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಅವರು ಸರಿಯಾದ ರೀತಿಯಲ್ಲಿ ಮಗುವಿಗೆ ಹಾಲುಣಿಸಿದರೆ ಆ ಮಗು ಅದಕ್ಕೆ ಬೇಗ ಹೊಂದಿಕೊಳ್ಳುತ್ತದೆ. ಆಗ ನೋಯುತ್ತಿರುವ ಮೊಲೆತೊಟ್ಟುಗಳ ಸಮಸ್ಯೆಯನ್ನು ತಡೆಯಬಹುದು. ಆದರೂ ನಿಮಗೆ ನೋವು ಕಾಣಿಸಿಕೊಂಡರೆ ವೈದ್ಯರಸಲಹೆ ಪಡೆಯಿರಿ.

ಇದನ್ನೂ ಓದಿ: ಎದೆಹಾಲು ಕುಡಿಸುವುದರಿಂದ ತಾಯಂದಿರ ಆರೋಗ್ಯಕ್ಕೂ ಇದೆ ಉಪಯೋಗ!

ತಪ್ಪುಕಲ್ಪನೆ 2: ಸ್ತನ್ಯಪಾನ ಮಾಡುವ ಮೊದಲು ನಿಮ್ಮ ಮೊಲೆತೊಟ್ಟುಗಳನ್ನು ತೊಳೆಯಬೇಕು.

ಇದು ತಪ್ಪು ಮಾಹಿತಿ ಮತ್ತು ದೊಡ್ಡ ತಪ್ಪು ಕಲ್ಪನೆ. ಹಾಲುಣಿಸುವ ಮೊದಲು ನಿಮ್ಮ ಮೊಲೆತೊಟ್ಟುಗಳನ್ನು ತೊಳೆಯುವ ಅಗತ್ಯವಿಲ್ಲ. ಶಿಶುಗಳು ಜನಿಸಿದಾಗ, ಅವರು ತಮ್ಮ ತಾಯಂದಿರನ್ನು ಅವರ ವಾಸನೆ ಮತ್ತು ಸ್ಪರ್ಶದಿಂದ ಗುರುತಿಸುತ್ತಾರೆ. ಹೀಗಾಗಿ ಅವರು ತಮ್ಮ ತಾಯಿಯ ವಾಸನೆ ಮತ್ತು ಶಬ್ದಕ್ಕೆ ಒಗ್ಗಿಹೋಗಿರುತ್ತಾರೆ. ಮೊಲೆತೊಟ್ಟುಗಳು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಅದರ ವಾಸನೆಯಿಂದಾಗಿ ಮಗುವಿಗೆ ಮೊಲೆತೊಟ್ಟು ಎಲ್ಲಿದೆ ಎಂದು ಗುರುತಿಸಲು ಸುಲಭವಾಗುತ್ತದೆ. ಇದು ಮಗುವಿಗೆ ಮಾತ್ರ ಅನುಭವಕ್ಕೆ ಬರುವ ಸಂಗತಿಯಾಗಿದೆ.

ತಪ್ಪು ಕಲ್ಪನೆ 3: ಸ್ತನ್ಯಪಾನ ಮಾಡುವ ತಾಯಂದಿರು ಔಷಧಿಗಳನ್ನು ತೆಗೆದುಕೊಳ್ಳುವ ಹಾಗಿಲ್ಲ.

ಹಾಲುಣಿಸುವ ತಾಯಂದಿರು ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದೇನಿಲ್ಲ. ಆದರೆ, ವೈದ್ಯರ ಬಳಿ ತಪಾಸಣೆಗೆ ಹೋದಾಗ ನೀವು ಸ್ತನ್ಯಪಾನ ಮಾಡುತ್ತಿದ್ದೀರಿ ಎಂದು ನಿಮ್ಮ ವೈದ್ಯರಿಗೆ ತಿಳಿಸುವುದು ಅಗತ್ಯ. ಅವರು ಅದಕ್ಕೆ ತಕ್ಕದಾಗಿರುವ ಔಷಧಿಗಳನ್ನೇ ನೀಡುತ್ತಾರೆ. ನೀವು ಮೆಡಿಕಲ್ ಶಾಪ್​ನಲ್ಲಿ ಔಷಧಿ ಖರೀದಿಸುವಾಗ ಔಷಧಿಗಳ ಮೇಲೆ ಬರೆದಿರುವ ಸೂಚನೆಗಳನ್ನು ಓದಿಕೊಳ್ಳಿ. ನಿರ್ದಿಷ್ಟ ಸಮಯದಲ್ಲಿ ಮತ್ತು ನಿರ್ದಿಷ್ಟ ಡೋಸೇಜ್​ನಲ್ಲಿ ಔಷಧಿಗಳನ್ನು ತೆಗೆದುಕೊಳ್ಳಿ.

ತಪ್ಪುಕಲ್ಪನೆ 4: ನಿಮಗೆ ಅನಾರೋಗ್ಯ ಉಂಟಾಗಿದ್ದರೆ ಸ್ತನ್ಯಪಾನ ಮಾಡಬಾರದು.

ತಾಯಂದಿರು ತಮ್ಮ ಮಗುವಿಗೆ ಅನಾರೋಗ್ಯ ಉಂಟಾದಾಗ ಹಾಲುಣಿಸಬಹುದೇ ಅಥವಾ ಬೇಡವೇ? ಎಂಬುದು ಆ ತಾಯಂದಿರು ಯಾವ ರೀತಿಯ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಸರಿಯಾದ ಚಿಕಿತ್ಸೆಯನ್ನು ಪಡೆಯಿರಿ, ಸರಿಯಾಗಿ ತಿನ್ನಿರಿ ಮತ್ತು ಸಾಕಷ್ಟು ದ್ರವವನ್ನು ಸೇವಿಸಿ. ತಾಯಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ಮಗುವಿಗೆ ಕೆಲವು ರೋಗಗಳು ಹರಡುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ತಪ್ಪುಕಲ್ಪನೆ 5: ಬಹುತೇಕ ತಾಯಂದಿರು ಸಾಕಷ್ಟು ಹಾಲು ಉತ್ಪಾದಿಸಲು ಸಾಧ್ಯವಿಲ್ಲ.

ಬಹುತೇಕ ಎಲ್ಲಾ ತಾಯಂದಿರು ತಮ್ಮ ಶಿಶುಗಳಿಗೆ ಸರಿಯಾದ ಪ್ರಮಾಣದ ಹಾಲನ್ನು ಉತ್ಪಾದಿಸುತ್ತಾರೆ. ಸ್ತನ್ಯಪಾನ ಉತ್ಪಾದನೆಯು ಮಗುವನ್ನು ಎದೆಗೆ ಎಷ್ಟು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತೀರಿ, ಎಷ್ಟು ಸಮಯಕ್ಕೊಮ್ಮೆ ಹಾಲುಣಿಸುತ್ತೀರಿ ಮತ್ತು ಹಾಲುಣಿಸುವ ಸಮಯದಲ್ಲಿ ಮಗು ಎಷ್ಟು ಚೆನ್ನಾಗಿ ಹಾಲನ್ನು ಕುಡಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಲುಣಿಸುವ ಸಮಯದಲ್ಲಿ ತಾಯಂದಿರಿಗೆ ತಮ್ಮ ಕುಟುಂಬದವರಿಂದ ಬೆಂಬಲ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಈ ವೇಳೆ ತಾಯಂದಿರು ಕೂಡ ಉತ್ತಮ ಆಹಾರ ಸೇವಿಸಬೇಕಾಗುತ್ತದೆ. ಹೆಚ್ಚು ನೀರು ಕುಡಿಯಬೇಕಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ