ತಂತ್ರಜ್ಞಾನಗಳು ಮುಂದುವರೆಯುತ್ತಿದ್ದಂತೆ ಸಂಬಂಧಗಳ ಬೆಲೆ ಕಡಿಮೆಯಾಗುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳು ಸಂಬಂಧಗಳಿಗಿಂತ ಹೆಚ್ಚಾಗಿ ತಂತ್ರಜ್ಞಾನದ ಕಡೆ ಒಲವು ತೋರಿಸುತ್ತಿರುವುದು ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣ(Social Media) ಗಳಲ್ಲಿ ಸಕ್ರಿಯವಾಗಿದ್ದು, ಅವರ ಜೀವನದ ಪ್ರತಿಯೊಂದು ನೋವು ನಲಿವುಗಳನ್ನು ತಮ್ಮ ಖಾತೆಗಳ ಮೂಲಕ ಹಂಚಿಕೊಳ್ಳುವುದನ್ನು ದೈನಂದಿನ ಜೀವನಕ್ರಮದಲ್ಲಿ ರೂಢಿಸಿಕೊಂಡಿದ್ದಾರೆ. ಜೊತೆಗೆ ವೀಡಿಯೋ ಗೇಮ್‌ಗಳಲ್ಲಿ ದಾಸರಾಗಿರುವುದನ್ನು ಕಾಣಬಹುದು.
ಭಾರತದಲ್ಲಿ 40 ಪ್ರತಿಶತದಷ್ಟು ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲಿ 9 ರಿಂದ 17 ರ ನಡುವಿನ ವಯಸ್ಸಿನ ಮಕ್ಕಳು ವೀಡಿಯೊ ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಯಾಗಿದ್ದಾರೆ ಎಂದು ಸ್ವತಃ ಪೋಷಕರೇ ಒಪ್ಪಿಕೊಂಡಿದ್ದಾರೆ.
ಕೋವಿಡ್ ನಂತರದ ದಿನಗಳಲ್ಲಿ ಆನ್‌ಲೈನ್ ಕಲಿಕೆಯು ಆರಂಭವಾಗಿದ್ದು, ಇದರಿಂದಾಗಿ ಪ್ರತಿಯೊಂದು ಮಗುವೂ ಕೂಡ ಮೊಬೈಲ್ ಫೋನ್ ಬಳಸುವುದು ಅನಿವಾರ್ಯವಾಗಿದೆ. ಜೊತೆಗೆ ಸಂಕ್ರಾಮಿಕ ರೋಗ ಹರಡುವ ಭಯದಿಂದ ಮಕ್ಕಳನ್ನು ಹೊರಗಡೆ ಎಲ್ಲೂ ಬಿಡದೇ ಮನೋರಂಜನೆಗಾಗಿ ಕೈಯಲ್ಲಿ ಒಂದು ಫೋನ್ ಕೊಟ್ಟು ಮನೆಯೊಳಗಡೆಯೇ ಬಂಧಿಯಾಗಿಸಿದ್ದಾರೆ. ಇದು ಪೋಷಕರೇ ತಮ್ಮ ಮಕ್ಕಳನ್ನು ಸಮಸ್ಯೆಯತ್ತ ತಳ್ಳುತ್ತಿರುವಂತೆ ಆಗಿಬಿಟ್ಟಿದೆ.
ಸಾಂಕ್ರಾಮಿಕ ಸಮಯದಲ್ಲಿ ಫೋನ್ ಗಳ ಅತಿಯಾದ ಬಳಕೆ ಮತ್ತು ಆನ್‌ಲೈನ್ ಶಾಲಾ ಚಟುವಟಿಕೆಯ ಮೂಲಕ ಸುಲಭವಾಗಿ ಪ್ರವೇಶಿಸುವುದು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮ, ವೀಡಿಯೊಗಳು ಮತ್ತು ಗೇಮಿಂಗ್‌ಗೆ ವ್ಯಸನಿಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ಹೆಚ್ಚಿನ ಪೋಷಕರು ನಂಬುತ್ತಾರೆ ಎಂದು ಸಮೀಕ್ಷೆಯೊಂದು ತೋರಿಸಿದೆ. ಸಮೀಕ್ಷೆಯ ಪ್ರಕಾರ 68 ರಷ್ಟು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿನ ಬಳಕೆಯ ವಯೋಮಿತಿಯನ್ನು 13 ರಿಂದ 15 ವರ್ಷಕ್ಕೆ ಏರಿಸಬೇಕು ಎಂದು ಹೇಳಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ ಅಧ್ಯಯನವು 10 ವರ್ಷ ವಯಸ್ಸಿನ ಮಕ್ಕಳು ಶೇಕಡಾ 37.8ರಷ್ಟು ಮಕ್ಕಳು ಫೇಸ್‌ಬುಕ್ ಖಾತೆಯನ್ನು ಹೊಂದಿದ್ದರೆ, ಶೇಕಡಾ 24.3ರಷ್ಟು ಮಕ್ಕಳು ಇನ್ಸ್ಟಾ ಗ್ರಾಮ್ ಖಾತೆಯನ್ನು ಹೊಂದಿದ್ದಾರೆ ಎಂದು ತೋರಿಸಿದೆ.
ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆ ನಿದ್ರೆ, ಕಿರಿಕಿರಿ, ಒತ್ತಡ, ಆತಂಕ, ಖಿನ್ನತೆ ಮತ್ತು ಏಕಾಗ್ರತೆಯ ತೊಂದರೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಹೆಚ್ಚಿನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಖಾತೆ ತೆರೆಯಲು ಕನಿಷ್ಠ ವಯಸ್ಸು 13 ಎಂದು ನಿಗದಿಪಡಿಸಿವೆ.
ಇದನ್ನು ಓದಿ: ಹದಿಹರೆಯದವರ ಮಾನಸಿಕ ಆರೋಗ್ಯವನ್ನು ಕಾಪಾಡಲು ಇಲ್ಲಿದೆ ಸೂಕ್ತ ಸಲಹೆ
ಆದ್ದರಿಂದ ಪ್ರತಿಯೊಂದು ಪೋಷಕರೂ ಮಕ್ಕಳ ಬಳಸುವ ಮೊಬೈಲ್ ಫೋನ್ ಸಮಯವನ್ನು ನಿಗದಿಪಡಿಸಬೇಕಿದೆ. ಪ್ರತಿ ದಿನ 2ರಿಂದ ಮೂರು ಗಂಟೆಗಳ ವರೆಗೆ ಸಮಯವನ್ನು ನಿಗದಿ ಪಡಿಸಬೇಕು. ವೀಡಿಯೋ ಗೇಮ್‌ಗಳಲ್ಲಿ ಮಕ್ಕಳನ್ನು ಪ್ರೇರೇಪಿಸುವ ಬದಲು ಆದಷ್ಟು ನಿಮ್ಮ ಬಿಡುವಿನ ಸಮಯದಲ್ಲಿ ಅವರನ್ನು ಹೊರಗಡೆ ಕರೆದುಕೊಂಡು ಹೋಗಬೇಕು. ನಿಮ್ಮ ಮಕ್ಕಳಿಗೆ ನೀವು ಆದಷ್ಟು ಸಮಯ ಕೊಡುವುದು ಅತ್ಯಂತ ಅಗತ್ಯವಾಗಿದೆ. ಇದರಿಂದಾಗಿ ಅವರ ಮಾನಸಿಕ ಸ್ಥಿತಿಯನ್ನು ಆರೋಗ್ಯಗೊಳಿಸಬಹುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: