ಜಗತ್ತಿನಲ್ಲಿ ಶಾಂತಿ, ಅಹಿಂಸೆಯ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದೇ ರಾಷ್ಟ್ರ ಪಿತ ಮಹಾತ್ಮ ಗಾಂಧಿ. ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಅಹಿಂಸೆಯನ್ನು ಪ್ರತಿಪಾದಿಸುತ್ತ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ವ್ಯಕ್ತಿ. ಹೀಗಾಗಿ ಭಾರತದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಶಾಂತಿ ಮತ್ತು ಅಹಿಂಸೆ ಪ್ರತಿಪಾದಕರಾದ ಮಹಾತ್ಮ ಗಾಂಧಿಯವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಅಕ್ಟೋಬರ್ 2 ರಂದು ಗಾಂಧಿಜಯಂತಿ ದಿನವನ್ನು ಆರಿಸಲಾಗುತ್ತದೆ. ಮಹಾತ್ಮ ಗಾಂಧಿಯವರು ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ. ಇದೇ ದಿನವನ್ನು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಹೋರಾಟ ನಡೆಸಿದರೂ ಅವರ ಮೂಲತತ್ವವು ಅಹಿಂಸೆಯನ್ನು ಉತ್ತೇಜಿಸುವುದಾಗಿತ್ತು. ಗಾಂಧಿ ಅವರು ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರು ಕೂಡ ಆಗಿ ತನ್ನ ತತ್ವ ಸಿದ್ದಾಂತಗಳಿಂದಲೇ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಟದ ನೇತೃತ್ವ ವಹಿಸಿದ್ದ ಗಾಂಧೀಜಿಯವರ ಹೋರಾಟದ ಹಾದಿಯಲ್ಲಿ ಅವರ ಸಿದ್ಧಾಂತಗಳು ಮತ್ತು ಹೋರಾಟಗಳು 1947 ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದಲ್ಲಿ ತಿರುವು ನೀಡಿತು. ಹೀಗಾಗಿ ಮಹಾತ್ಮಾ ಗಾಂಧೀಜಿಯವರು ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ.
2004ರ ಜನವರಿಯಲ್ಲಿ ಇರಾನಿಯನ್ ನೊಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನದ ಪ್ರಸ್ತಾಪವಿಟ್ಟರು. ಮುಂಬೈಯ ವರ್ಲ್ಡ್ ಸೋಶಿಯಲ್ ಫಾರಂನ ಹಿಂದಿ ಶಿಕ್ಷಕರಿಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ಯಾರೀಸ್ನಲ್ಲಿ ಪಾಠ ಮಾಡುತ್ತಿದ್ದಾಗ ಈ ಕಲ್ಪನೆಯೊಂದು ಬಂದಿತ್ತು. ತದನಂತರದಲ್ಲಿ ಜನವರಿ 2007ರಲ್ಲಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲು ಕರೆ ನೀಡಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 2 ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ ತತ್ವಗಳು ಮತ್ತು ಅವರ ಅಹಿಂಸಾತ್ಮಕ ಪ್ರತಿಭಟನೆಗಳನ್ನು ಗೌರವಿಸುವುದು ಈ ದಿನದ ಉದ್ದೇಶವಾಗಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಗಾಂಧಿಯವರ ಕೊಡುಗೆಗಳನ್ನು ನೆನೆದು, ಅವರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ ಶಾಲಾ, ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಗುತ್ತದೆ. ಅದಲ್ಲದೇ, ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾರ್ಥನೆ ಸೇವೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದಾದ್ಯಂತದ ನಾಯಕರು ಮಹಾತ್ಮ ಗಾಂಧಿಯವರ ಸಮಾಧಿಯನ್ನು ಹೊಂದಿರುವ ನವದೆಹಲಿಯ ರಾಜ್ ಘಾಟ್‌ನಲ್ಲಿ ಗೌರವ ಸಲ್ಲಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ