ಮನೆಯ ಬಜೆಟ್ ರಚನೆ ಹೇಗಿರಬೇಕು? ಹಣಕಾಸು ನಿರ್ವಹಣೆ ಯಾರು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಪುರುಷರಿಗಿಂತ ಮಹಿಳೆಯರು ಮನೆಯ ಖರ್ಚು ವೆಚ್ಚ ಹಾಗೂ ಹಣಕಾಸನ್ನು ನಿರ್ವಹಿಸಿಕೊಂಡು ಹೋಗುವುದರಲ್ಲಿ ನಿಪುಣರು. ಎಲ್ಲರಿಗೂ ತಿಳಿದಿರುವಂತೆ ಗೃಹಿಣಿಯರು ಮನೆ ಖರ್ಚನ್ನು ಸಮರ್ಥವಾಗಿ ನಿಭಾಯಿಸುವುದರ ಹಣ ಉಳಿತಾಯ ಕಡೆಗೂ ಗಮನ ಹರಿಸುತ್ತಾರೆ. ಹಾಗಾದ್ರೆ ಮನೆಯಲ್ಲಿ ಹಣಕಾಸನ್ನು ನಿರ್ವಹಿಸುತ್ತಿರುವವವರು ಯಾರು? ಮನೆಯ ಬಜೆಟ್ ಯಾವ ರೀತಿ ಮಂಡಿಸಿದ್ರೆ ಮನೆ ನಿರ್ವಹಣೆ ಮಾಡುವ ಜೊತೆ ಜೊತೆಗೆ ಭವಿಷ್ಯಕ್ಕಾಗಿ ದುಡ್ಡು ಕೂಡಿಡಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಮ್ಮ ಕುಟುಂಬದಲ್ಲಿ ಪ್ರೀತಿಗೇನು ಕೊರತೆಯಿಲ್ಲ ಖುಷಿಯಾಗಿದ್ದೇವೆ ಎಂದು ಹೇಳುವುದನ್ನು ಕೇಳಿರಬಹುದು. ಪ್ರೀತಿಯೊಂದಿದ್ದ ಮಾತ್ರ ಸಂಸಾರ ಸುಲಭವಾಗಿ ಸಾಗಲು ಸಾಧ್ಯವಿಲ್ಲ. ಹಣಕಾಸಿನ ಸ್ಥಿತಿಯೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮನೆಯ ಖರ್ಚು ವೆಚ್ಚಗಳ ಬಗ್ಗೆ ದಂಪತಿಗಳಲ್ಲಿ ಒಬ್ಬರಾದರೂ ಗಮನವಹಿಸಬೇಕು. ವಾರ್ಷಿಕ ಬಜೆಟ್ ರಚಿಸಿ ಹಣಕಾಸಿನ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಮಾತ್ರ ಮುಂದಿನ ಭವಿಷ್ಯ ಸುಗಮವಾಗಿ ಸಾಗಲು ಸಾಧ್ಯ. ಆದರೆ ಹೆಚ್ಚಿನ ಮನೆಯಲ್ಲಿ ಹೆಣ್ಣು ಹಣಕಾಸಿನ ನಿರ್ವಹಣೆ ಮಾಡುತ್ತಾರೆ. ಬೇಕು ಬೇಡ, ಉಳಿತಾಯಕ್ಕೆ ಸಂಬಂಧಪಟ್ಟಂತೆ ಬಜೆಟ್ ರಚಿಸುತ್ತಾರೆ. ಹಾಗಾದ್ರೆ ಈ ರೀತಿ ಕೆಲವು ಸಲಹೆಗಳು ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯವಾಗುತ್ತದೆ. ನಿಮ್ಮ ಮನೆಯಲ್ಲೂ ಕೂಡ ತಿಂಗಳಿಗೆ ಒಮ್ಮೆ ಮಾಸ ಬಜೆಟ್ ಮಂಡನೆ ಮಾಡಿ. ಅಲ್ಲಿ ಈ ವರ್ಷದ ಯೋಜನೆ, ಮುಂದಿನ ಯೋಜನೆ, ಈ ತಿಂಗಳು ಆಗಿರುವ ಖರ್ಚುಗಳ ಬಗ್ಗೆ ಚರ್ಚಿಸಿ. ಮನೆಯ ಎಲ್ಲರಿಗೂ ನಿಮ್ಮ ಖರ್ಚು, ವೆಚ್ಚದ ಬಗ್ಗೆ ತಿಳಿದಿರಲಿ. ಅವುಗಳನ್ನು ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ನೋಡಿ.
* ಬಜೆಟ್ ರಚಿಸಲು ಹಿಂದೆ ಮುಂದೆ ಯೋಚಿಸದಿರಿ : ದಂಪತಿಗಳಿಬ್ಬರಲ್ಲಿ ಯಾರು ಬಜೆಟ್ ರಚಿಸುವುದು ಎನ್ನುವ ಗೊಂದಲ ಮೂಡಬಹುದು. ಹಣಕಾಸು ನಿರ್ವಹಣೆ ಹಾಗೂ ಉಳಿತಾಯದಂತಹ ವಿಚಾರದಲ್ಲಿ ಮಹಿಳೆಯರನ್ನು ಯಾರು ಕೂಡ ಮೀರಿಸಲಾಗದು. ಹೀಗಾಗಿ ಗೃಹಿಣಿಯರೇ ಬಜೆಟ್ ರಚಿಸುವತ್ತ ಗಮನ ಹರಿಸಿ. ಹಿಂದೆ ಮುಂದೆ ಯೋಚಿಸದೆ ಬಜೆಟ್ ರಚಿಸಲು ಮುಂದಾಗಿ, ಇದು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯಕವಾಗಿದೆ.
* ಬಜೆಟ್ ರಚಿಸಿ : ಬಜೆಟ್ ರಚಿಸುವಾಗ ಮುಖ್ಯವಾಗಿ ನೋಡಬೇಕಾದ ಅಂಶ ಆದಾಯದ ಮೂಲ. ಹೌದು, ತಿಂಗಳ ಸಂಬಳ ಹಾಗೂ ಮನೆ ಖರ್ಚಿನ ಲೆಕ್ಕಚಾರದ ಮೇಲೆ ಒಂದು ಬಜೆಟ್ ರಚಿಸುವುದು ಬಹಳ ಮುಖ್ಯವಾಗುತ್ತದೆ. ಪ್ರತಿ ತಿಂಗಳು ಪಾವತಿಸುವ ಬಿಲ್, ಮನೆ ಸಾಮಾನಿನ ಖರ್ಚು, ಓಡಾಟದ ಖರ್ಚು ಎಲ್ಲ ಬರೆದಿಟ್ಟುಕೊಂಡಿರಿ. ಇದು ಹಣಕಾಸಿನ ಪರಿಸ್ಥಿತಿಯ ಕುರಿತು ನಿಮಗೆ ಸಮಗ್ರ ನೋಟ ಸಿಗುತ್ತದೆ. ಮತ್ತೆ ನೀವು ಎಲ್ಲೆಲ್ಲಿ ಖರ್ಚು ಕಡಿಮೆ ಮಾಡಬಹುದು ಎಂದು ತಿಳಿಯುತ್ತದೆ. ಈ ಎಲ್ಲವನ್ನು ತಲೆಯಲ್ಲಿಟ್ಟು ಕೊಂಡು ಯಾವುದಕ್ಕೆ ಎಷ್ಟು ಖರ್ಚು ಹಾಗೂ ಉಳಿತಾಯ ಮಾಡಬೇಕೆಂದು ಒಟ್ಟಾರೆ ಬಜೆಟ್ ರಚಿಸುವುದು ಮುಖ್ಯ.
* ವೈಯಕ್ತಿಕ ಮತ್ತು ಹಣಕಾಸಿನ ಗುರಿಗಳನ್ನು ತಿಳಿದಿರಲಿ : ಸಂಸಾರವೆಂದ ಮೇಲೆ ಖರ್ಚು ವೆಚ್ಚಗಳು ದುಪ್ಪಟ್ಟಾಗುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ಪ್ರತಿ ತಿಂಗಳ ಸಂಪಾದನೆ ಎಷ್ಟು, ಎಷ್ಟು ಉಳಿತಾಯ ಮಾಡುತ್ತೀರಿ. ನಿಮ್ಮ ಬ್ಯಾಂಕ್ ಖಾತೆಗಳು, ಹೂಡಿಕೆಗಳು, ಉಳಿದ ಆದಾಯದ ಮೂಲಗಳು, ಸಾಲದ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಮುಖ್ಯ. ತಿಂಗಳಿಗೆ ಇಂತಿಷ್ಟು ಹಣವನ್ನು ಉಳಿತಾಯ ಮಾಡುವತ್ತ ಗಮನ ಕೊಡಿ. ಇದು ಬಜೆಟ್ ರಚಿಸಲು ಹಾಗೂ ಹಣಕಾಸಿನ ಗುರಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ.
* ಮನೆಯ ಖರ್ಚುವೆಚ್ಚಗಳನ್ನು ಹಂಚಿಕೊಳ್ಳಿ : ಈಗಿನ ಕಾಲದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು. ಗಂಡ ಹೆಂಡತಿಯರಿಬ್ಬರೂ ಉದ್ಯೋಗಕ್ಕೆ ತೆರಳುತ್ತಾರೆ. ಹೀಗಾಗಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ ಮನೆಯ ಖರ್ಚುಗಳು ಒಬ್ಬರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮನೆಯ ಖರ್ಚು ವೆಚ್ಚದಲ್ಲಿ ಸಮಾನ ಹಂಚಿಕೆ ಮಾಡಿಕೊಳ್ಳಿ. ಯಾವಾಗ, ಯಾರು ಎಷ್ಟು ಖರ್ಚು ಮಾಡಬೇಕು ಈ ಬಗ್ಗೆ ಇಬ್ಬರೂ ಮುಕ್ತವಾಗಿ ಚರ್ಚಿಸಿ. ಇದು ಹಣಕಾಸನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದಂತೆ ಆಗುತ್ತದೆ.
* ಊಟದ ಪ್ಲಾನಿಂಗ್ ಇರಲಿ : ಕೆಲವರು ಹೆಚ್ಚು ಅಡುಗೆ ಮಾಡಿ ಸುಮ್ಮನೆ ಬಿಸಾಡುತ್ತಾರೆ. ಇದು ಊಟ ತಿಂಡಿ ವಿಚಾರದಲ್ಲಿ ಸುಮ್ಮನೆ ಖರ್ಚು ಮಾಡಿದಂತೆ ಆಗುತ್ತದೆ. ಹೀಗಾಗಿ ಒಂದು ವಾರ ಮೊದಲೇ ಈ ವಾರಕ್ಕೆ ಏನೇನು ಮಾಡಬೇಕು ಎಂಬುದರ ಪಟ್ಟಿ ಮಾಡಿಕೊಳ್ಳಿ. ಬೇಕಾಗಿರುವ ಸಾಮಗ್ರಿ ಖರೀದಿ ಅಗತ್ಯವಿರುವಷ್ಟೇ ಅಡುಗೆ ಮಾಡಿ. ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ತಂದು ಹಾಳು ಮಾಡುವುದಾಗಲಿ, ಹೆಚ್ಚು ಅಡುಗೆ ಬಿಸಾಡುವುದಾಗಲಿ ಮಾಡಬೇಡಿ.
ಇದನ್ನೂ ಓದಿ: ಗಂಡು ಮಕ್ಕಳೇ ಈ ರೀತಿ ಪರ್ಫೆಕ್ಟ್ ಆಗಿ ಬಟ್ಟೆ ಖರೀದಿ ಮಾಡಿದ್ರೆ ಸ್ಟೈಲಿಶ್ ಆಗಿ ಕಾಣ್ತಿರಾ
* ಯುಟಿಲಿಟಿ ವೆಚ್ಚ ಕಡಿಮೆ ಮಾಡುವತ್ತ ಗಮನ ಕೊಡಿ : ಕೆಲವರಿಗೆ ನೋಡಿದ್ದನ್ನು ಖರೀದಿ ಮಾಡುವ ಗುಣವಿರುತ್ತದೆ. ಅದರಲ್ಲಿಯೂ ಗೃಹಿಣಿಯರು ಅಡುಗೆ ಮನೆಗೆ ಸಂಬಂಧಪಟ್ಟಂತೆ ಸಾಮಗ್ರಿಗಳನ್ನು ಹೆಚ್ಚುವರಿಯಾಗಿ ಖರೀದಿ ಮಾಡುತ್ತಾರೆ. ಹೀಗಾಗಿ ಅವಶ್ಯವಿದ್ದಷ್ಟೇ ಬಳಸುವುದು ಹಾಗೂ ಖರೀದಿ ಮಾಡುವುದು ಬಹಳ ಮುಖ್ಯ. ಹೊಸತು ಕಂಡಾಗಲೆಲ್ಲಾ ಖರೀದಿ ಮಾಡುವ ಅಭ್ಯಾಸ ಸಲ್ಲ. ತಿಂಗಳ ಅಥವಾ ವರ್ಷದ ಬಜೆಟ್‌ನಲ್ಲಿ ಈ ರೀತಿ ಕಡಿಮೆ ಹಣ ವಿನಿಯೋಗಿಸಿದರೆ ಉಳಿತಾಯವು ಹೆಚ್ಚಾಗುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚು ಗಮನ ಕೊಡುವುದು ಮುಖ್ಯ.
* ತುರ್ತು ನಿಧಿಯಿರಲಿ : ತುರ್ತು ನಿಧಿಯನ್ನು ಕೂಡಿಟ್ಟು ಇಡುವುದರಲ್ಲಿ ಗೃಹಿಣಿಯರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಕೆಲ ಮಹಿಳೆಯರು ಅಡುಗೆ ಮನೆಯ ಡಬ್ಬಿಗಳಲ್ಲಿ ಹಣ ಎತ್ತಿಟ್ಟು ಉಳಿತಾಯ ಮಾಡುತ್ತಾರೆ. ಕಷ್ಟದ ಸಮಯದಲ್ಲಿ ಈ ಹಣವನ್ನು ಬಳಸಿಕೊಳ್ಳುವುದೇ ಹೆಚ್ಚು. ಆದರೆ ದಂಪತಿಗಳಿಬ್ಬರೂ ಒಂದಿಷ್ಟು ಹಣ ವನ್ನು ತುರ್ತು ನಿಧಿಯಾಗಿ ಇಡುವುದು ಮುಖ್ಯ. ಬಜೆಟ್ ರಚನೆಯ ವೇಳೆ ಈ ಬಗ್ಗೆ ಗಮನ ಹರಿಸುವುದು ಮುಖ್ಯ. ಆಸ್ಪತ್ರೆ, ಔಷಧಿ ಇಂತಹ ಖರ್ಚುಗಳು ಬಂದಾಗ ಈ ಹಣವು ಉಪಯೋಗಕ್ಕೆ ಬರುತ್ತದೆ.
* ಸಾಲವನ್ನು ಜಾಣತನದಿಂದ ನಿಭಾಯಿಸಿ : ಮನೆ ಅಥವಾ ಮದುವೆಗಾಗಿ ಮಾಡಿದ ಸಾಲವಿದ್ದರೆ ಅದನ್ನು ಆದಷ್ಟು ಬೇಗನೇ ಪಾವತಿಸಿದರೆ ಒಳ್ಳೆಯದು. ಈ ಸಾಲಗಳು ಭವಿಷ್ಯಕ್ಕೆ ಹೊರೆಯಾಗದಿರಲಿ. ಅದಲ್ಲದೇ, ಮುಂಬರುವ ದಿನಗಳಲ್ಲಿ ಮನೆ ಅಥವಾ ಕಾರು ಖರೀದಿಸುವ ಯೋಜನೆಯಿದ್ದರೆ ಆದಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಯುವತ್ತ ಗಮನ ಕೊಡಿ. ಕಾರಣವಿಲ್ಲದೇ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕದಿರಿ.
* ಮಕ್ಕಳ ಶಿಕ್ಷಣಕ್ಕಾಗಿ ಒಂದಿಷ್ಟು ಮೊತ್ತ ಕೂಡಿಸಿಡಿ : ಈಗಿನ ಕಾಲದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎನ್ನುವುದಿರುತ್ತದೆ. ಅದಕ್ಕೆ ಹಣವು ಅಷ್ಟೇ ಬೇಕಾಗುತ್ತದೆ. ಹೀಗಾಗಿ ವಾರ್ಷಿಕ ಅಥವಾ ತಿಂಗಳ ಬಜೆಟ್ ನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಉಳಿತಾಯ ಮಾಡಿ. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಹೊರೆಯನ್ನು ಕಡಿಮೆ ಮಾಡಿದ್ದಂತಾಗುತ್ತದೆ.
* ನಿವೃತ್ತಿ ನಂತರದ ಜೀವನಕ್ಕಾಗಿ ಹಣ ಉಳಿತಾಯವಿರಲಿ : ನಿವೃತ್ತಿ ಹೊಂದಿದ ಬಳಿಕ ಕೈಯಲ್ಲಿ ಹಣವಿರಬೇಕು. ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ಕೊಳ್ಳುವುದಕ್ಕಿಂತ ತಮ್ಮ ಮುಂದಿನ ಜೀವನದ ದಾರಿಯನ್ನು ನಾವೇ ಕಂಡುಕೊಳ್ಳುವುದು ಒಳ್ಳೆಯದು. ನಿವೃತ್ತಿ ನಂತರದಲ್ಲಿ ದೈನಂದಿನ ವೆಚ್ಚ, ಆರೋಗ್ಯ ವೆಚ್ಚ ಭರಿಸಲು ಸ್ವಲ್ಪ ಹಣ ಉಳಿತಾಯ ಮಾಡುವುದು ಅತ್ಯಗತ್ಯ. ಕೆಲಸದಲ್ಲಿದ್ದreಉದ್ಯೋಗಿಗಳ ಭವಿಷ್ಯ ನಿಧಿ, ಪಿಪಿಎಫ್ ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸೇರಿದಂತೆ ಹೀಗೆ ವಿವಿಧ ರೀತಿ ಉಳಿತಾಯ ಮಾಡುವುದು ವೃದ್ಧಾಪ್ಯದಲ್ಲಿ ಪ್ರಯೋಜನಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ