ಕಟ್ಟಿದ ಮೂಗಿನ ಸಮಸ್ಯೆಗೆ ಮನೆಮದ್ದು ರಾಮಬಾಣ, ಇಲ್ಲಿದೆ ನೋಡಿ
ಮಳೆಗಾಲ, ಚಳಿಗಾಲ ಹೀಗೆ ಯಾವುದೇ ಋತುವಿನಲ್ಲಾದರೂ ಶೀತದ ಸಮಸ್ಯೆ ನಮ್ಮನ್ನು ಭಾದಿಸುತ್ತದೆ. ಇದು ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂದರೆ ಅನೇಕ ಸಂದರ್ಭದಲ್ಲಿ ಶೀತದ ಸಮಸ್ಯೆಯಿಂದ ಮೂಗು ಕಟ್ಟಿದಂತಾಗುತ್ತದೆ. ಇದರಿಂದ ಉಸಿರಾಡಲು ಕೂಡಾ ತೊಂದರೆಯಾಗುತ್ತದೆ. ಕಟ್ಟಿದ ಮೂಗಿನ ಸಮಸ್ಯೆಗೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ನಿರಂತರವಾಗಿ ಬದಲಾಗುತ್ತಿರುವ ಹವಾಮಾನ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಶೀತ ಮತ್ತು ಜ್ವರದ ಸಮಸ್ಯೆ ವರ್ಷವಿಡೀ ನಮ್ಮನ್ನು ಕಾಡುತ್ತಿರುತ್ತದೆ. ಅದರಲ್ಲೂ ಶೀತದಿಂದ ಮೂಗಿನಲ್ಲಿ ಸೋರುವಿಕೆ ಮತ್ತು ಮೂಗುಕಟ್ಟುವಿಕೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ಕಾರಣದಿಂದ ರಾತ್ರಿಯಿಡಿ ಉಸಿರಾಡಲು ಸಾಧ್ಯವಾಗದೆ ನಿದ್ದೆಗೆಡಬೇಕಾಗುತ್ತದೆ. ಕಟ್ಟಿದ ಮೂಗಿನ ಸಮಸ್ಯೆಯನ್ನು ಸೈನುಟಿಸ್ ಎಂದು ಕರೆಯಲಾಗುತ್ತದೆ. ಮತ್ತು ಸಾಮಾನ್ಯ ಭಾಷೆಯಲ್ಲಿ ಇದನ್ನು ಸೈನಸ್ ಎಂದು ಕರೆಯಲಾಗುತ್ತದೆ.
ಮೂಗುಗಟ್ಟುವಿಕೆಯ ಸಮಸ್ಯೆಗೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ತಲೆಯ ನೆತ್ತಿಯ (ತಲೆ ಬುರುಡೆ) ನರಗಳಲ್ಲಿ ಲೆಕ್ಕವಿಲ್ಲದಷ್ಟು ಸೂಕ್ಷ್ಮ ರಂಧ್ರಗಳಿವೆ. ಅದರ ಮೂಲಕ ಆಮ್ಲಜನಕವು ಮೆದುಳನ್ನು ತಲುಪುತ್ತದೆ. ಶೀತ ಮತ್ತು ಜ್ವರದ ಸಂದರ್ಭದಲ್ಲಿ ಈ ರಂಧ್ರಗಳಲ್ಲಿ ಕಫವು ತುಂಬಿರುತ್ತದೆ. ಇದರಿಮದಾಗಿ ವ್ಯಕ್ತಿಯು ಉಸಿರಾಡಲು ಕಷ್ಟಪಡುತ್ತಾನೆ. ಮತ್ತು ತಲೆಭಾರವನ್ನು ಅನುಭವಿಸುತ್ತಾನೆ. ಈ ಸ್ಥಿತಿಯನ್ನು ಸುನೈಟಿಸ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಒಬ್ಬ ವ್ಯಕ್ತಿಗೆ ಅತಿಯಾದ ಕಿರಿಕಿರಿಯನ್ನು ಉಂಟುಮಾಡುವುದರ ಜೊತೆಗೆ ಮೂಗಿನ ಮೂಲಕ ಉಸಿರಾಡಲು ಕೂಡಾ ಕಷ್ಟವಾಗುತ್ತದೆ. ಈ ಸಮಸ್ಯೆಗೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಕಟ್ಟಿದ ಮೂಗಿನ ಸಮಸ್ಯೆಯನ್ನು ಹೋಗಲಾಡಿಸುವ ಸುಲಭ ವಿಧಾನಗಳು:
ಹಬೆ (ಸ್ಟೀಮ್) ತೆಗೆದುಕೊಳ್ಳಿ:
ನೀವು ಕಟ್ಟಿದ ಮೂಗಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಬಯಸಿದರೆ, ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಮೂಗಿನಲ್ಲಿ ಸಂಗ್ರಹವಾಗಿರುವ ಲೋಳೆಗಳನ್ನು (ಸಿಂಬಳ) ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ನೀವು ಸ್ಟೀಮರ್ ನಿಂದ ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಅದರಿಂದ ಸ್ಟೀಮ್ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಬಿಸಿಯಾದ ಹಬೆಯು ಮೂಗಿನ ಮೂಲಕ ದೇಹದೊಳಗೆ ಹೋದಾಗ ಮುಚ್ಚಿಹೋದ ಮೂಗು ತೆರೆಯಲು ಸಹಾಯವಾಗುತ್ತದೆ.
ಇದನ್ನೂ ಓದಿ:
ಬಿಸಿ ನೀರಿನಿಂದ ಸ್ನಾನ ಮಾಡಿ:
ಹಬೆಯನ್ನು ತೆಗೆದುಕೊಳ್ಳುವುದರಿಂದ ನಿಮಗೆ ಅನುಕೂಲವಾಗದಿದ್ದರೆ, ನೀವು ಬಿಸಿ ನೀರಿನಿಂದ ಸ್ನಾನ ಕೂಡ ಮಾಡಬಹುದು. ಹೀಗೆ ಮಾಡುವುದರಿಂದ ಕಟ್ಟಿರುವ ಮೂಗು ತೆರೆಯುತ್ತದೆ. ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ಹೊರಬರುವ ಹಬೆಯು ಮೂಗಿನ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೂಗಿನ ಮೂಲಕ ಉಸಿರಾಡಲು ಅನುವು ಮಾಡಿಕೊಡುತ್ತದೆ.
ಬಿಸಿ ಚಹಾ ಅಥವಾ ಸೂಪ್ ಕುಡಿಯಿರಿ:
ಬಿಸಿ ಚಹಾ ಅಥವಾ ಬಿಸಿ ಬಿಸಿ ಸೂಪ್ ಕುಡಿಯುವಾಗ ಅದರ ಬಿಸಿ ಹಬೆ ಮೂಗಿನೊಳಗೆ ಪ್ರವೇಶಿಸುತ್ತದೆ. ಇದರಿಂದ ಕಟ್ಟಿಕೊಂಡ ಮೂಗು ತೆರೆಯುತ್ತದೆ ಹಾಗೂ ಉಸಿರಾಟವು ಕೂಡ ಸರಾಗವಾಗಿ ಸಾಗುತ್ತದೆ. ಅಲ್ಲದೆ ನೀವು ಬಿಸಿ ನೀರನ್ನು ಕೂಡ ಕುಡಿಯಬಹದು.
ಇದನ್ನೂ ಓದಿ: ಶೀತದಿಂದ ಮೂಗು ಕಟ್ಟಿದ್ದರೆ ಮಕ್ಕಳೂ ಕೂಡ ಹಬೆಯ ಸಹಾಯ ಪಡೆಯಬಹುದೇ? ವೈದ್ಯರು ಏನಂತಾರೆ?
ಜೇನು ತುಪ್ಪ ಮತ್ತು ಕರಿ ಮೆಣಸು:
ಜೇನು ತುಪ್ಪ ಮತ್ತು ಕರಿಮೆಣಸಿನ ಸೇವನೆಯು ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಪರಿಣಾಮಕಾರಿ ಮನೆಮದ್ದಾಗಿದೆ. ಇದಕ್ಕಾಗಿ ಎರಡು ಚಮಚ ಜೇನು ತುಪ್ಪಕ್ಕೆ ಎರಡು ಚಿಟಿಕೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ. ಇದು ನಿಮಗೆ ಕಟ್ಟಿದ ಮೂಗಿನ ಸಮಸ್ಯೆಯಿಂದ ಶೀಘ್ರ ಪರಿಹಾರ ಒದಗಿಸುತ್ತದೆ.
ಶುಂಠಿ ತುಳಸಿ ಟೀ ಸೇವಿಸಿ:
ಶುಂಠಿ ಮತ್ತು ತುಳಸಿ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿಫಗಲ್ ಗುಣಗಳಿವೆ. ಆದ್ದರಿಂದ ಶುಂಠಿ-ತುಳಸಿ ಚಹಾ ತಯಾರಿಸಿ ಕುಡಿಯಿರಿ. ಇದು ಸಿಂಬಳ (ಮ್ಯೂಕಸ್) ವನ್ನು ಸಡಿಲಗೊಳಿಸಲು ಮತ್ತು ಮೂಗು ತೆರೆದುಕೊಳ್ಳಲು ಸಹಾಯ ಮಾಡುತ್ತದೆ.
ವ್ಯಾಯಾಮ:
ನಿಮಗೆ ಕಟ್ಟಿದ ಮೂಗಿನ ಸಮಸ್ಯೆ ಭಾದಿಸಿದಾಗ ನೀವು ಉಸಿರಾಟದ ವ್ಯಾಯಾಮ ಮಾಡುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಬಹುದು. ಅದಕ್ಕಾಗಿ ನೀವು ಮೊದಲು ಆಳವಾದ ಉಸಿರನ್ನು ತೆಗೆದುಕೊಳ್ಳಿ, ತಲೆಯನ್ನು ಹಿಂದಕ್ಕೆ ತಿರುಗಿಸಿ ಮತ್ತು ಸ್ವಲ್ಪ ಸಮಯದವರೆಗೆ ಉಸಿರನ್ನು ಹಿಡಿದುಕೊಳ್ಳಿ. ಇದರ ನಂತರ ಮೂಗು ತೆರೆದುಕೊಳ್ಳುವ ಮೂಲಕ ಉಸಿರಾಡಲು ಸುಲಭವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ