ಪುರುಷರು ಸಹ ಅತ್ಯಾಚಾರಕ್ಕೊಳಗಾಗುತ್ತಾರಾ? ಕಾನೂನು ಈ ಬಗ್ಗೆ ಏನು ಹೇಳುತ್ತೆ?
ಹೆಣ್ಣುಮಕ್ಕಳಂತೆ ಗಂಡು ಮಕ್ಕಳು ಕೂಡಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಘಟನೆಗಳು ನಡೆದದ್ದುಂಟು. ಇತ್ತೀಚಿಗಷ್ಟೇ ಉತ್ತರ ಪ್ರದೇಶದ ದೇವರಿಯಾ ಎಂಬಲ್ಲಿ 15 ವರ್ಷದ ಬಾಲಕನ ಮೇಲೆ ಆತನ ಸ್ನೇಹಿತರಿಬ್ಬರು ಸೇರಿ ಅತ್ಯಾಚಾರ ನಡೆಸಿದ್ದಂತಹ ಆಘಾತಕಾರಿ ಘಟನೆ ನಡೆದಿತ್ತು. ಗಂಡು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳಿಗೆ ಶಿಕ್ಷೆಯೇನು? ಇದನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತಾ? ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು (women) ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು, ಲೈಂಗಿಕ ಕಿರರುಕುಳದ (physical abuse) ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಾನೂನು ಭಯವಿಲ್ಲದೆ ಇವರೆಲ್ಲಾ ಹೀಗೆ ಮೃಗೀಯ ರೀತಿ ನಡೆದುಕೊಳ್ಳುತ್ತಿದ್ದು, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ದೇಶಾದ್ಯಂತ ಕೂಗು ಕೇಳಿ ಬರುತ್ತಲೇ ಇವೆ. ಇನ್ನೂ ಮಹಿಳೆಯರಂತೆ ಗಂಡು ಮಕ್ಕಳು ಕೂಡಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇತ್ತೀಚಿಗಷ್ಟೇ ಉತ್ತರ ಪ್ರದೇಶದಲ್ಲಿ (Uttar Pradesh) ಇಂತಹ ಆಘಾತಕಾರಿ ಘಟನೆ ನಡೆದಿದ್ದು, 15 ವರ್ಷ ವಯಸ್ಸಿನ ಬಾಲಕನ ಮೇಲೆ ಆತನ ಸ್ನೇಹಿತರೇ ಅತ್ಯಾಚಾರ ಎಸಗಿದ್ದರು. ಹೀಗೆ ಗಂಡಸರ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ಅತ್ಯಾಚಾರವೆಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಾ? ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡೋಣ ಬನ್ನಿ.
ಪುರುಷರೂ ಕೂಡಾ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಒಂದಷ್ಟು ಘಟನೆಗಳು ನಡೆದಿವೆ. ಗಂಡಸರೂ ಕೂಡಾ ಈ ವಿಷಯದಲ್ಲಿ ಬಲಿಪಶುಗಳಾಗಿದ್ದಾರೆ ಆದರೆ ಈ ವಿಷಯದ ಬಗ್ಗೆ ಭಾರತೀಯ ಕಾನೂನಿನಲ್ಲಿ ಕಾನೂನು ಕ್ರಮಗಳ ಬಗ್ಗೆ ಒಂದಷ್ಟು ಜಟಿಲತೆ ಇದೆ. ಮತ್ತು ಈ ವಿಷಯದಲ್ಲಿ ಕಾನೂನು ಲಿಂಗ ತಟಸ್ಥವಾಗಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ಐಪಿಸಿ ಪ್ರಕಾರ, ‘ಅತ್ಯಾಚಾರ’ದ ಈ ವ್ಯಾಖ್ಯಾನವು ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ. ಅಂದರೆ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಥವಾ ಅವಳ ಒಪ್ಪಿಗೆ ಇಲ್ಲದೆ ಬಲವಂತವಾಗಿ ಲೈಂಗಿಕ ಸಂಬಂಧವನ್ನು ಹೊಂದಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ. ಆದರೆ ಗಂಡಸರನ್ನು, ತೃತೀಯ ಲಿಂಗಿಗಳನ್ನು ಬಲತ್ಕಾರ ಮಾಡಿದರೆ ಅಥವಾ ಅವರ ಒಪ್ಪಿಗೆಯಿಲ್ಲದೆ ದೈಹಿಕ ಸಂಬಂಧವನ್ನು ಹೊಂದಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಜೊತೆಗೆ ಅವರನ್ನು ಬಲಿಪಶುಗಳೆಂದು ಸಹ ಪರಿಗಣಿಸಲಾಗುವುದಿಲ್ಲ.
ಆದರೆ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಇಂತಹ ಪ್ರಕರಣಗಳನ್ನು ಅಸ್ವಾಭಾವಿಕ ಲೈಂಗಿಕತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಪುರುಷರ ವಿಷಯದಲ್ಲಿ ಇದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಪುರುಷ, ಸ್ತ್ರೀ ಅಥವಾ ಪ್ರಾಣಿಗಳೊಡನೆ ಬಲವಂತವಾಗಿ ದೈಹಿಕ ಸಂಭೋಗ ನಡೆಸಿದರೆ ಅದನ್ನು ಅಸ್ವಾಭಾವಿಕ ಲೈಂಗಿಕತೆ ಎಂದು ಪರಿಗಣಿಸಲಾಗುತ್ತದೆ. ಪೋಕ್ಸೊ ಕಾಯ್ದೆಯಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ ಮತ್ತು ಕಾನೂನಿನಡಿಯಲ್ಲಿ ದೌರ್ಜನ್ಯಕ್ಕೊಳಗಾದ ಹುಡುಗರನ್ನು ಬಲಿಪಶುಗಳೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಮದುವೆಯಾದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ?
ಐಪಿಸಿ ಸೆಕ್ಷನ್ 376 ರಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಅತ್ಯಾಚಾರವೆಂದು ಪರಿಗಣಿಸಲಾಗಿದೆ. ಆದರೆ ಸೆಕ್ಷನ್ 377 ನ್ನು ಬಿಎನ್‌ಎಸ್‌ನಲ್ಲಿ ಸೇರಿಸದ ಕಾರಣ ಪುರುಷರು ಮತ್ತು ತೃತೀಯ ಲಿಂಗಿಗಳ ಮೇಲಿನ ಲೈಂಗಿಕ ದೌರ್ಜ್ಯವನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಹೀಗೆ ಈ ವಿಷಯದಲ್ಲಿ ಕಾನೂನು ಲಿಂಗ ತಟಸ್ಥವಾಗಿಲ್ಲ. ಹಾಗಾಗಿ 2019 ರಲ್ಲಿ ನಡೆದ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್, “ಅತ್ಯಾಚಾರ ಕಾನೂನನ್ನು ಲಿಂಗ ತಟಸ್ಥಗೊಳಿಸಬೇಕು, ಪುರುಷರು ಮತ್ತು ತೃತೀಯ ಲಿಂಗಿಗಳಿಗೂ ಕೂಡಾ ರಕ್ಷಣೆ ಸಿಗಬೇಕು. ಸಮಾಜದ ಬದಲಾಗುತ್ತಿರುವ ಸ್ವರೂಪಕ್ಕೆ ಅನುಗುಣವಾಗಿ ಕಾನೂನುಗಳನ್ನು ಬದಲಾಯಿಸಬೇಕು ಎಂದು ಹೇಳಿತ್ತು.
ದೌರ್ಜನ್ಯದ ವಿಷಯದಲ್ಲಿ ಪುರುಷರು ಬಲಿಪಶುಗಳಾಗಿರುವ ನೈಜ ಕಥೆ:
2014 ರಲ್ಲಿ ದೆಹಲಿಯಲ್ಲಿ, ಒಬ್ಬ ಮಹಿಳೆ ಸ್ನೇಹಿತನಿಗೆ ಮಾದಕ ದ್ರವ್ಯ ನೀಡಿ, ಆತನೊಂದಿಗೆ ದೈಹಿಕ ಸಂಪರ್ಕ ಹೊಂದಿ ನಂತರ ಮದುವೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಳು. ಆದರೆ ಪ್ರಕರಣವನ್ನು ಅತ್ಯಾಚಾರ ಪ್ರಕರಣದಡಿಯಲ್ಲಿ ದಾಖಲಿಸಲಾಗಿಲ್ಲ. ಅದೇ ರೀತಿ 2016 ರಲ್ಲಿ, ಬೆಂಗಳೂರಿನ ಯುವಕನೊಬ್ಬ ಮಹಿಳೆಯೊಬ್ಬರು ತನಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದರು ಎಂದು ದೂರು ನೀಡಿದ್ದನು. ಈ ಕೇಸ್‌ಗೆ ಸಂಬಂಧಪಟ್ಟಂತೆ ಪೊಲೀಸರು ಕೇವಲ ಸೆಕ್ಷನ್ 377 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಲ್ಲಿ ಈ ಅತ್ಯಾಚಾರ ಕಾನೂನು ಲಿಂಗ ತಟಸ್ಥವಾಗಬೇಕು ಎಂದು ಹಲವಾರು ಸಲಹೆಗಳು ಮತ್ತು ಅರ್ಜಿಗಳು ಸಲ್ಲಿಕೆಯಾಗಿವೆ. 2013 ರ ನ್ಯಾಯಮೂರ್ತಿ ವರ್ಮಾ ಸಮಿತಿ ವರದಿ ಅತ್ಯಾಚಾರದ ವ್ಯಾಖ್ಯಾನವು ಲಿಂಗ ತಟಸ್ಥವಾಗಿರಬೇಕು. ಮಹಿಳೆಯರಂತೆ ಪುರುಷರು ಮತ್ತು ತೃತೀಯ ಲಿಂಗಿಗಳಿಗೂ ಸಮಾನ ಕಾನೂನು ಬರಬೇಕು, ಅವರಿಗೂ ರಕ್ಷಣೆ ಸಿಗಬೇಕು ಎಂದು ಸೂಚಿಸಿತ್ತು. ಹೀಗೆ ಅತ್ಯಾಚಾರ ಕಾನೂನುಗಳನ್ನು ಲಿಂಗ ತಟಸ್ಥಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಲೇ ಇವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ