ಅಬ್ಬಬ್ಬಾ ಚಳಿ..! ನೀವು ಸಾಕಿದ ಮುದ್ದಿನ ನಾಯಿಯ ಆರೋಗ್ಯ ನಿಮ್ಮ ಕೈಯಲ್ಲಿದೆ, ಮಕ್ಕಳಂತೆ ಆರೈಕೆ ಮಾಡಿ

ವಯಸ್ಸಾದ ಶ್ವಾನಗಳು, ಪುಟ್ಟ ಮರಿಗಳು, ಅದಾಗಲೇ ಕಿಡ್ನಿ, ಹೃದಯ, ಸಂದುನೋವಿನಂಥ ಕಾಯಿಲೆಗಳಿಂದ ಬಳಲುತ್ತಿರುವ ನಾಯಿಗಳಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಬರೀ ಸಾಕೋದಷ್ಟೇ ಅಲ್ಲ, ಮಗುವಿನಂತೆ ಪಾಲನೆ ಮಾಡಿ..ಚಳಿಯಿಂದ ರಕ್ಷಿಸಿ.

ಅಬ್ಬಬ್ಬಾ ಚಳಿ..! ನೀವು ಸಾಕಿದ ಮುದ್ದಿನ ನಾಯಿಯ ಆರೋಗ್ಯ ನಿಮ್ಮ ಕೈಯಲ್ಲಿದೆ, ಮಕ್ಕಳಂತೆ ಆರೈಕೆ ಮಾಡಿ
ಪ್ರಾತಿನಿಧಿಕ ಚಿತ್ರ
Lakshmi Hegde

| Edited By: sadhu srinath

Jan 05, 2021 | 5:51 PM

ಈಗಂತೂ ಚಳಿಗಾಲ.. ಚುಮುಚುಮು ಚಳಿಯಿಂದ ಪಾರಾಗಲು ನಾವು ಏನೇನೋ ಪ್ರಯೋಗಗಳನ್ನು ಮಾಡುತ್ತೇವೆ.. ಆರೋಗ್ಯ ರಕ್ಷಿಸಿಕೊಳ್ಳಲೂ ಸಾಕಷ್ಟು ಕಾಳಜಿ ವಹಿಸುತ್ತೇವೆ. ಧರಿಸುವ ಉಡುಪಿನಿಂದ ಹಿಡಿದು.. ತಿನ್ನುವ ಆಹಾರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಆದರೆ ಈ ಚಳಿಯಿಂದ ಪಾರಾಗಲು ನಮ್ಮನ್ನು ನಾವು ಕಾಳಜಿ ಮಾಡಿಕೊಂಡರೆ ಸಾಲದು.. ನಾವು ಸಾಕಿದ ಮುದ್ದಿನ ನಾಯಿಗಳನ್ನೂ ಆರೈಕೆ ಮಾಡಬೇಕು ಎಂಬ ಬಗ್ಗೆ ಲಕ್ಷ್ಯ ವಹಿಸಬೇಕು.

ಅಯ್ಯೋ.. ನಾಯಿಗಳಿಗೇನು ಮೈತುಂಬ ರೋಮ ಇರುತ್ತದೆ. ಚಳಿ ಅಷ್ಟೇನೂ ಬಾಧಿಸಲಾರದು ಎಂದು ನೀವು ಭಾವಿಸಿದರೆ ತಪ್ಪು. ಜರ್ಮನ್​ ಶೆಫರ್ಡ್​, ಹಸ್ಕಿ ತಳಿಯ ಶ್ವಾನಗಳಿಗೆ ಉದ್ದನೆಯ ರೋಮ ಮೈತುಂಬ ಇರುತ್ತದೆ. ಅವು ಚಳಿಯನ್ನು ಇಷ್ಟಪಡುತ್ತವೆ ಕೂಡ. ಆದರೆ ಒಂದು ಹಂತದ ಚಳಿಯವರೆಗೆ ಮಾತ್ರ ಇವು ಆರಾಮವಾಗಿ ಇರುತ್ತವೆ. ಅದರಾಚೆಗೆ ತಾಪಮಾನ ಕಡಿಮೆಯಾದರೆ ಈ ಶ್ವಾನಗಳಿಗೂ ಖಂಡಿತ ರಕ್ಷಣೆ ಬೇಕು.

ಅವೂ ಮಕ್ಕಳಂತೆ ! ಸಾಕಿದ ನಾಯಿಗಳೂ ಮನೆ ಮಕ್ಕಳಂತೆ ಆಗಿಬಿಡುತ್ತವೆ. ಅವರ ಪಾಲಕರಾದ ನಾವು ಕಾಲಕ್ಕೆ ತಕ್ಕಂತೆ ಅವುಗಳ ಕಾಳಜಿ ಮಾಡಲೇಬೇಕು. ಚಳಿಗಾಲದಲ್ಲಿ ವಾತಾವರಣದಲ್ಲಿ ಉಂಟಾಗುವ ಏರುಪೇರುಗಳು ನಾಯಿಗಳ ಆರೋಗ್ಯಕ್ಕೆ ಗಂಭೀರ ತೊಂದರೆಯನ್ನೇ ಉಂಟು ಮಾಡಬಲ್ಲದು.

ಮನೆಯಲ್ಲಿ ಶ್ವಾನಗಳನ್ನು ಸಾಕಿದವರು ಜವಾಬ್ದಾರಿಯಿಂದ ಅವುಗಳ ಆರೈಕೆ ಮಾಡಬೇಕು. ಚಳಿಗಾಲದಲ್ಲಿ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವ ಜತೆ, ಮೂಲಭೂತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ವಾಲ್ಥಮ್​ ಸೈಂಟಿಫಿಕ್ ಕಮ್ಯೂನಿಕೇಷನ್, ದಕ್ಷಿಣ ಏಷ್ಯಾ ಮ್ಯಾನೇಜರ್​ ಡಾ. ಕೆ.ಜಿ.ಉಮೇಶ್​.

ಏನು ಮಾಡಬಹುದು? ಅದೆಲ್ಲ ಸರಿ.. ಚಳಿಗಾಲದಲ್ಲಿ ನಮ್ಮ ನೆಚ್ಚಿನ ಪ್ರಾಣಿಗಳ ಆರೋಗ್ಯ ಕಾಪಾಡಲು ಏನು ಮಾಡಬಹುದು? ಅವುಗಳ ಆರೈಕೆ ಹೇಗೆ ಮಾಡಬಹುದು? ಇಲ್ಲಿವೆ ನೋಡಿ ತಜ್ಞರು ಸೂಚಿಸಿದ ಒಂದಷ್ಟು ಮಾರ್ಗಗಳು:

ಹೆಚ್ಚು ಆಹಾರ ಕೊಡಿ ಶ್ವಾನಗಳಿಗೆ ಚಳಿಗಾಲದಲ್ಲಿ ತುಸು ಜಾಸ್ತಿ ತಿನ್ನಲು ಕೊಡಿ. ಉಳಿದ ಕಾಲಗಳಿಗಿಂತ ಚಳಿಗಾಲದಲ್ಲಿ ನಾಯಿಗಳಿಗೆ ಹೆಚ್ಚಿಗೆ ತಿನ್ನಿಸಬೇಕು. ನಾಯಿಗಳಿಗೆ ಬೇಸಿಗೆಕಾಲಕ್ಕಿಂತ, ಚಳಿಗಾಲದಲ್ಲಿ ಶೇ.25ರಷ್ಟು ಜಾಸ್ತಿ ಶಕ್ತಿ ಬೇಕು. ಅದರಲ್ಲೂ ಕೆಲವು ಮನೆಯ ನಾಯಿಗಳು ಮನೆಯೊಳಗೆ ಆಡುವ ಜತೆ, ತಮ್ಮ ಪಾಲಕರೊಂದಿಗೆ ಹೊರಗೆ ಹೋಗಿ, ಭರ್ಜರಿ ಆಟವಾಡುತ್ತವೆ.. ದೇಹ ದಂಡಿಸುತ್ತವೆ. ಇಂಥ ನಾಯಿಗಳಿಗೆ ಚಳಿಗಾಲದಲ್ಲಿ ಹೆಚ್ಚಿನ ಶಕ್ತಿ ಬೇಕು.

ಹಾಗೇ ಹೆಚ್ಚು ಆಹಾರ ಕೊಡಬೇಕು ಎಂದು ಏನೇನನ್ನೋ ಕೊಡುವುದಲ್ಲ. ಅವುಗಳ ಮೈಗೆ ಕಸುವು ತುಂಬುವಂಥ ತಿಂಡಿ ಕೊಡಬೇಕು.. ಹಾಗೇ, ನೀವು ನಿಮ್ಮ ಪೆಟ್​ಗೆ ಕೊಡುತ್ತಿರುವ ಆಹಾರದಲ್ಲಿ ಸಮತೋಲಿತ ಪೋಷಕಾಂಶ ಇದೆ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ವಿಟಮಿನ್ ಡಿ ಅಂಶವನ್ನು ನೀಡಿ. ಇಷ್ಟಾದರೂ ನಾಯಿಗಳು ಚಳಿಗಾಲದಲ್ಲಿ ತೂಕ ಹೆಚ್ಚಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಯಾಕೆಂದರೆ, ಒಮ್ಮೆಲೇ ಶ್ವಾನಗಳ ತೂಕ ಹೆಚ್ಚಾದರೆ ಅವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ವ್ಯಾಯಾಮ ಬೇಕಪ್ಪಾ! ಬರೀ ನಾವಷ್ಟೇ ಅಲ್ಲ..ನಾವು ಸಾಕಿದ ನಾಯಿಗಳಿಗೂ ವ್ಯಾಯಾಮ ಮಾಡಿಸಬೇಕು. ಮನೆಯಲ್ಲಿ ಸಾಕಿದ ನಾಯಿಗಳು ಹೆಚ್ಚಾಗಿ ಕುಟುಂಬ ಸದಸ್ಯರ ಜತೆ ಆಟವಾಡುತ್ತವೆ..ಅಥವಾ ಆ ಮನೆಯಲ್ಲಿ ಇನ್ನೊಂದು ನಾಯಿಯೋ, ಬೆಕ್ಕೋ ಅಥವಾ ಬೇರಾವುದೋ ಪ್ರಾಣಿಯಿದ್ದರೆ ಅವುಗಳೊಂದಿಗೆ ಕೀಟಲೆ, ಆಟದಲ್ಲಿ ತೊಡಗಿಕೊಳ್ಳುತ್ತವೆ.. ಇಲ್ಲವೇ ಸಾಕುಪ್ರಾಣಿಗಳಿಗೆಂದೇ ಮನೆಯವರು ಒಂದಷ್ಟು ಆಟಿಕೆಗಳನ್ನು ತಂದಿಡುತ್ತಾರೆ. ಆದರೆ ಅವಕ್ಕೆ ತಮ್ಮಷ್ಟಕ್ಕೇ ತಮಗೆ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅದೂ ಕೂಡ ಪಾಲಕರಾದ ನಮ್ಮ ಜವಾಬ್ದಾರಿಯೇ ಆಗಿರುತ್ತದೆ. ಚಳಿಗಾಲದಲ್ಲಿ ನಾಯಿಗಳಿಗೆ ಹೆಚ್ಚು ತಿಂಡಿ ಕೊಡುವ ಜತೆ, ವ್ಯಾಯಾಮವನ್ನೂ ಮಾಡಿಸಿ. ನಿಮ್ಮ ಜತೆಗೆ ವಾಕಿಂಗ್​ಗೆ ಕರೆದುಕೊಂಡು ಹೋಗಿ.. ಅದರ ಹೊರತಾಗಿ ಕೆಲವು ಚಟುವಟಿಕೆಗಳನ್ನೂ ರೂಢಿಸಿಕೊಡಿ. ಇದರಿಂದ ಅವುಗಳ ದೇಹದಲ್ಲಿ ಕೆಲವು ಬದಲಾವಣೆಗಳಾಗುವ ಜತೆ, ಆರೋಗ್ಯವಂತವಾಗಿರುತ್ತವೆ.

ಒದ್ದೆ ಮೈಯಲ್ಲಿ ಇರಲು ಬಿಡಬೇಡಿ ಮನೆಯಲ್ಲಿ ಸಾಕಿದ ನಾಯಿಗಳು ಹೊರಗೆಲ್ಲ ಮಲಗುವುದು, ಮೈಯನ್ನು ಗಲೀಜು ಮಾಡಿಕೊಳ್ಳುವುದು ಕಡಿಮೆ. ಹಾಗಾಗಿ ಪ್ರತಿದಿನವೂ ಸ್ನಾನ ಮಾಡಿಸುವ ಅಗತ್ಯವೇನೂ ಇರುವುದಿಲ್ಲ. ಆದರೆ ಸ್ನಾನ ಮಾಡಿಸಿದ ದಿನ ಅವುಗಳ ಮೈಯನ್ನು ದಪ್ಪನೆಯ ಟವೆಲ್​ನಿಂದ ಸರಿಯಾಗಿ ಒರೆಸಬೇಕು. ರೋಮಗಳಲ್ಲಿ ನೀರಿನ ಅಂಶ ಉಳಿಯದಂತೆ ಎಚ್ಚರ ವಹಿಸಬೇಕು. ಬೇಸಿಗೆಯಲ್ಲಾದರೆ, ನಾಯಿಗಳ ಮೈಯನ್ನು ತೊಳೆದು, ಬಿಸಲಿನಲ್ಲಿ ಬಿಟ್ಟರೂ ಸ್ವಲ್ಪ ಹೊತ್ತಲ್ಲಿ ಒಣಗುತ್ತದೆ. ಆದರೆ ಚಳಿಗಾಲದಲ್ಲಿ ಹಾಗಲ್ಲ. ಮೊದಲೇ ತೇವದ ವಾತಾವರಣ ಇರುವುದರಿಂದ ಒದ್ದೆಮೈಯಲ್ಲಿ ಅವುಗಳನ್ನು ಬಿಡುವಂತಿಲ್ಲ. ಅದರಲ್ಲೂ ಒದ್ದೆ ಮೈನಲ್ಲೇ ಹೊರಗೆ ಹೋಗಲು ಬಿಡಲೇಬೇಡಿ. ಇನ್ನು ಚಳಿಗಾಲದಲ್ಲಿ ನಿಮ್ಮ ಪೆಟ್​ಗಳಿಗೆ ನೀರಿನಲ್ಲಿ ಸ್ನಾನ ಮಾಡಿಸುವ ಬದಲು, ಬೇಬಿಪೌಡರ್​ ಅಥವಾ ಜೋಳದ ಪಿಷ್ಟವನ್ನು ಹಾಕಿ ಮೈಯನ್ನು ಫ್ರೆಶ್​ ಆಗಿ ಇಡಬಹುದು.

ಸ್ವೆಟರ್ ಹಾಕಿ ಚಳಿಗಾಲದಲ್ಲಿ ನಾಯಿಗಳನ್ನು ಬಹುಕಾಲದವರೆಗೆ ಹೊರಗೆ ಇರಲು ಬಿಡಬೇಡಿ. ಅದರಲ್ಲೂ ಪುಟ್ಟ ಮರಿಗಳಾಗಿದ್ದರೆ ಆದಷ್ಟು ಮನೆಯಲ್ಲೇ ಬೆಚ್ಚಗೆ ಇರುವಂತೆ ನೋಡಿಕೊಳ್ಳಿ. ಯಾಕೆಂದರೆ ಅತಿಯಾದ ಚಳಿ ನಿಮ್ಮ ಮುದ್ದಿನ ನಾಯಿಯ ಪ್ರಾಣವನ್ನೇ ತೆಗೆದುಬಿಡಬಹುದು. ಇದು ಬೆಕ್ಕುಗಳಿಗೂ ಅನ್ವಯ. ಹಾಗೊಮ್ಮೆ ಹೊರಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಎದುರಾದರೆ ಒಂದು ಸ್ವೆಟರ್ ಹಾಕಿ. ಈಗಂತೂ ಸಾಕುಪ್ರಾಣಿಗಳಿಗಾಗಿಯೇ ಡ್ರೆಸ್​ಗಳು, ಸ್ವೆಟರ್​ಗಳು ಸಿಗುತ್ತವೆ. ನೀವೂ ಅದನ್ನು ಪ್ರಯೋಗ ಮಾಡಿ. ನಿಮ್ಮ ಶ್ವಾನ ಸೇಫ್​ ಆಗಿರುತ್ತದೆ..

ಯಾವುದಕ್ಕೂ ಆರೋಗ್ಯ ತಪಾಸಣೆ ಮಾಡಿಸಿಬಿಡಿ ನಾಯಿಗಳ ರೋಮಗಳು ಉದುರುವುದು- ಮತ್ತೆ ಹುಟ್ಟುವುದು ತೀರ ಸಾಮಾನ್ಯ ಪ್ರಕ್ರಿಯೆ. ಬೇಸಿಗೆಯಲ್ಲಿ ಅವುಗಳ ಮೈಮೇಲೆ ಹುಟ್ಟುವ ತೆಳುವಾದ ಕೂದಲು ಚಳಿಗಾಲದ ಪ್ರಾರಂಭದಲ್ಲಿ ಉದುರಿ, ಮತ್ತೆ ದಪ್ಪನೆಯ ರೋಮ ಹುಟ್ಟುತ್ತದೆ. ಹೀಗೆ ಮನೆಯಲ್ಲಿ ಸಾಕಿದ ನಾಯಿಗಳ ಕೂದಲು ಉದುರುವುದಕ್ಕೆ ನೀವು ಆತಂಕಪಡುವುದೇನೂ ಬೇಡ. ಆದರೂ ಈ ಹೊತ್ತಲ್ಲಿ ಕೆಲವು ಅಲರ್ಜಿಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಚಿಗಟಗಳು, ನೊಣ, ಬ್ಯಾಕ್ಟೀರಿಯಾ, ಯೀಸ್ಟ್​ಗಳಿಂದ ಸೋಂಕು ತಗುಲುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಯಾವುದಕ್ಕೂ ಒಮ್ಮೆ ವೈದ್ಯರ ಬಳಿ ತೋರಿಸುವುದು ಒಳ್ಳೆಯದು. ಅಲ್ಲದೆ, ಚಳಿಗಾಲದಲ್ಲಿ ನಾಯಿಗಳಲ್ಲಿ ಹಾರ್ಮೋನುಗಳಲ್ಲಿ ವ್ಯತ್ಯಾಸ ಆಗಬಹುದು. ಈ ಕಾರಣಕ್ಕೂ ಕೆಲವೊಮ್ಮೆ ಕೂದಲು ಉದುರಬಹುದು. ಹಾಗಾಗಿ ಎಚ್ಚರಿಕೆ ಇರಲಿ.

ಬೆಚ್ಚನೆ ಹಾಸಿಗೆ ವ್ಯವಸ್ಥೆ ಮಾಡಿ ಅತಿಯಾದ ಚಳಿ, ತೇವದ ವಾತಾವರಣಕ್ಕೆ ಮೈಯೊಡ್ಡುವ ಶ್ವಾನಗಳಲ್ಲಿ, ಅದರಲ್ಲೂ ಹಿಮಪಾತ ಆಗುವ ಪ್ರದೇಶಗಳಲ್ಲಿ ಇರುವ ನಾಯಿಗಳಿಗೆ ಹೃದಯದ ಸಮಸ್ಯೆ ಉಂಟಾಗಬಹುದು. ಅಲ್ಲದೆ, ಮೈಮೇಲೆ ಹುಣ್ಣುಗಳು ಏಳಬಹುದು. ಹಾಗಾಗಿ ಶ್ವಾನಗಳು ಮಲಗುವ ಸ್ಥಳಗಳನ್ನು ಆದಷ್ಟು ಬೆಚ್ಚಗಿಡಬೇಕು. ಈಗ ಸಾಕುಪ್ರಾಣಿಗಳಿಗಾಗಿ ತರಹೇವಾರಿ ಬೆಡ್​ (ಹಾಸಿಗೆ)ಗಳು ಲಭ್ಯ ಇವೆ. ಆದಷ್ಟು ಬೆಚ್ಚಗಿನ ಹಾಸಿಗೆಯ ವ್ಯವಸ್ಥೆಯನ್ನು ಮುದ್ದಿನ ಶ್ವಾನಗಳಿಗಾಗಿ ಸಿದ್ಧಪಡಿಸಬೇಕು. ಇಂಥ ಬೆಚ್ಚಗಿನ ಹಾಸಿಗೆಗಳು, ಹೊದಿಕೆಗಳಿಂದ ನಾಯಿಗಳು ಶೀತದಿಂದ ಪಾರಾಗುವ ಜತೆಗೆ, ಅವರಲ್ಲಿ ಕಾಣಿಸಿಕೊಳ್ಳುವ ಸಂದುನೋವು ಕೂಡ ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ವಯಸ್ಸಾದ ಶ್ವಾನಗಳು, ಪುಟ್ಟ ಮರಿಗಳು, ಅದಾಗಲೇ ಕಿಡ್ನಿ, ಹೃದಯ, ಸಂದುನೋವಿನಂಥ ಕಾಯಿಲೆಗಳಿಂದ ಬಳಲುತ್ತಿರುವ ನಾಯಿಗಳಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಬರೀ ಸಾಕೋದಷ್ಟೇ ಅಲ್ಲ, ಮಗುವಿನಂತೆ ಪಾಲನೆ ಮಾಡಿ..ಎಷ್ಟೇ ಚಳಿ ಬಿದ್ದರೂ ನಿಮ್ಮ ಮುದ್ದಿನ ಪ್ರಾಣಿಯ ಆರೋಗ್ಯ ಮತ್ತು ಮೂಡ್ ಸರಿಯಾಗಿರುವಂತೆ ನೋಡಿಕೊಳ್ಳಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada