ಹಣವನ್ನು ಕೊಟ್ಟು ಉತ್ಪನ್ನಗಳನ್ನು ಖರೀದಿಸುವಾಗ ಹೆಚ್ಚಿನ ಲಾಭವನ್ನು ಗಳಿಸುವ ಸಲುವಾಗಿ ಕೆಲವು ಮಾರಾಟಗಾರರು ಹೆಚ್ಚಿನ ಶುಲ್ಕವನ್ನು ವಿಧಿಸಿ ಗ್ರಾಹಕರನ್ನು ವಂಚಿಸುತ್ತಾರೆ. ಹೀಗಾಗಿ ನಾವೆಲ್ಲರೂ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗಿದೆ. ಕೆಲವೊಮ್ಮೆ ಮಾರಾಟಗಾರರಿಂದ ಆಗುವ ವಂಚನೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆಗೆ ಡಿಸೆಂಬರ್ 24 ರಂದು ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿತು. ಉತ್ಪಾದಕರು ಅಥವಾ ಮಾರಾಟಗಾರರಿಂದಾಗುವ ಮೋಸ, ವಂಚನೆ, ಶೋಷಣೆಗಳಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಕಾಯಿದೆ ಜಾರಿಗೆ ಬಂದಿದೆ. ಅಂದಿನಿಂದ ಈ ದಿನದ ನೆನಪಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗ್ರಾಹಕರ ಹಕ್ಕುಗಳ ಬಗ್ಗೆ ಹಾಗೂ ಅವರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಾರಾಟಗಾರರಿಂದ ಗ್ರಾಹಕರಿಗೆ ಆಗುವ ವಂಚನೆಗಳಿಂದ ರಕ್ಷಿಸುವ ಸಲುವಾಗಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನವನ್ನು ದೇಶಾದ್ಯಂತ ವಿವಿಧ ಗ್ರಾಹಕ ಸಂಘಟನೆಗಳು ಆಚರಿಸುತ್ತವೆ. ಅದಲ್ಲದೇ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮಗಳು, ಸೆಮಿನಾರ್, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಇದನ್ನೂ ಓದಿ: ಮುಖದ ಆಕಾರ ಹೇಳುತ್ತೆ ನಿಮ್ಮ ನಿಜವಾದ ವ್ಯಕ್ತಿತ್ವ
ಗ್ರಾಹಕರ ಹಕ್ಕುಗಳನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ರಕ್ಷಿಸಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯೂ ದೋಷಪೂರಿತ ಸರಕುಗಳು, ವ್ಯಾಪಾರದಲ್ಲಿ ಮೋಸ, ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಈ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸುರಕ್ಷತೆಯ ಹಕ್ಕು, ಆಯ್ಕೆ ಮಾಡುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಕೇಳುವ ಹಕ್ಕು, ಪರಿಹಾರ ಹುಡುಕುವ ಹಕ್ಕು ಮತ್ತು ಗ್ರಾಹಕ ಶಿಕ್ಷಣದ ಹಕ್ಕುಗಳು ಸೇರಿದಂತೆ ಒಟ್ಟು ಆರು ಹಕ್ಕುಗಳು ಸೇರಿವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ