ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಅದುವೇ ಜಂತು ಹುಳದ ಸಮಸ್ಯೆಯಾಗಿದೆ. ಹುಳುಗಳು ಪರಾವಲಂಬಿ ಜೀವಿಗಳಾಗಿದ್ದು, ಆಹಾರ ಮತ್ತು ಉಳಿವಿಗಾಗಿ ಮಾನವ ಕರುಳಿನಲ್ಲಿ ವಾಸಿಸುತ್ತವೆ. ಹುಳುಗಳು ಮಾನವ ದೇಹಕ್ಕೆ ಮೀಸಲಾದ ಪೋಷಕಾಂಶಗಳನ್ನು ಸೇವಿಸಿ ಬದುಕುವುದರಿಂದ, ಮಕ್ಕಳಿಗೆ ಹೊಟ್ಟೆನೋವು, ಬೇಧಿ, ನೆಗಡಿ ಜ್ವರ ಇಂತಹ ಮತ್ತಿತರ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಈ ಸಮಸ್ಯೆಯು ಅತಿಯಾದರೆ ರಕ್ತಹೀನತೆ, ಅಪೌಷ್ಟಿಕತೆ, ದೈಹಿಕ ಮತ್ತು ಮಾನಸಿಕ ಅಸಮತೋಲನಕ್ಕೂ ಕಾರಣವಾಗಬಹುದು. ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುವ ಈ ಜಂತುಗಳ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 10 ರಂದು ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆ.ಈ ದಿನವು ಒಂದರಿಂದ ಹತ್ತೊಂಬತ್ತು ವರ್ಷದೊಳಗಿನ ಶಾಲಾ ವಯಸ್ಸಿನ ಮಕ್ಕಳಲ್ಲಿ ಜಂತುಹುಳು ನಿವಾರಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಫೆಬ್ರವರಿ 2015 ರಲ್ಲಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಭಾಗವಾಗಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಶ್ವಾನ ಪ್ರಿಯರನ್ನು ಒಂದು ಕ್ಷಣ ಭಯಪಡಿಸುವ ವಿಶ್ವದ ಅಪಾಯಕಾರಿ ಶ್ವಾನಗಳಿವು
ಪ್ರತಿ ಆರು ತಿಂಗಳಿಗೊಮ್ಮೆ ಒಂದು ವರ್ಷದಿಂದ ಹತ್ತೊಂಬತ್ತು ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಜಂತುಹುಳ ನಿವಾರಣಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಈ ದಿನದಂದು ಸಮಸ್ಯೆಯಿಂದ ಮಕ್ಕಳನ್ನು ಮುಕ್ತರನ್ನಾಗಿ ಮಾಡುವಡುವ ಉದ್ದೇಶವನು ಹೊಂದಿದೆ. ಹೀಗಾಗಿ ಈ ದಿನದಂದು ಜಂತು ಹುಳು ನಿವಾರಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆಗುತ್ತದೆ. ಒಂದರಿಂದ ಹತ್ತೊಂಬತ್ತು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ, ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಾರ್ಷಿಕವಾಗಿ ಜಂತುಹುಳುವಿನ ಮಾತ್ರೆಗಳನ್ನು ನೀಡಲಾಗುತ್ತದೆ. ಜಾಗೃತಿ ಮೂಡಿಸುವ ಸಲುವಾಗಿ ಅಂಗನವಾಡಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸೇರಿದಂತೆ ಇನ್ನಿತ್ತರ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ