ನವದೆಹಲಿ: ಕೊರೊನಾ ವೈರಸ್ ಬಂದ ನಂತರದಲ್ಲಿ ಬಹುತೇಕರ ಆಲೋಚನೆಗಳು ಬದಲಾಗಿವೆ. ಈ ಮೊದಲು ಶಾಪಿಂಗ್ಗೆ ಪ್ರಾಮುಖ್ಯತೆ ನೀಡುತ್ತಿದ್ದ ಅನೇಕರು, ಈಗ ಮನೆಯಿಂದ ಹೊರ ಬೀಳೋಕೆ ಭಯ ಬೀಳುತ್ತಿದ್ದಾರೆ. ಇದೇ ಕಾರಣಕ್ಕೆ, ಆನ್ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಆದರೆ, ಕೊರೊನಾ ವೈರಸ್ ಎಂಬುದು ಗ್ರಾಹಕರ ಆಲೋಚನೆಯನ್ನು ಬದಲಿಸಿದೆ ಎಂದು ವರದಿಯೊಂದು ಹೇಳಿದೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಅವರು ಹೇಳುವ ಪ್ರಕಾರ, ಜನರ ಶಾಪಿಂಗ್ ವರ್ತನೆ ಬದಲಾಗಿದೆ. ಹೀಗಾಗಿ ಗ್ರಾಹಕರ ಬಳಕೆ ಕಡಿಮೆ ಆಗಿದ್ದು, ಇದು ಮೊದಲಿನ ಸ್ಥಿತಿಗೆ ಮರಳಲು ಎರಡು ವರ್ಷಗಳೇ ಹಿಡಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.
2028ರ ವೇಳೆಗೆ ಭಾರತದಲ್ಲಿ ಮನೆಯ ಬಳಕೆ ಖರ್ಚು ಒಟ್ಟು 300 ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಗುರಿ ತಲುಪಲು 2030 ಆಗಬಹುದು ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿಯಲ್ಲಿ ಹೇಳಿದೆ.
ಒಂದು ಮನೆಯ ಸರಾಸರಿ ಆದಾಯ 2030ರ ವೇಳೆಗೆ 7.3 ಲಕ್ಷ ತಲುಪಲಿದೆ. ಕೊರೊನಾಗೂ ಮೊದಲು ಅಂದಾಜಿಸಿದ್ದಕ್ಕಿಂತ ಶೇ. 7-8 ರಷ್ಟು ಕಡಿಮೆ ಆಗಿದೆ. ಸಾಕಷ್ಟು ಉದ್ಯಮಗಳು ನೆಲಕಚ್ಚಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ.
ಸದ್ಯ, ಸಾಕಷ್ಟು ಭಾರತೀಯರು ಹಣವನ್ನು ಉಳಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಕೊರೊನಾ ವೈರಸ್ನಿಂದ ಅನೇಕರಿಗೆ ಕಚೇರಿಗೆ ತೆರಳದೆ ಮನೆಯಿಂದಲೇ ಕೆಲಸ ಮಾಡುತ್ತಾರೆ. ಹೀಗಾಗಿ, ಅವರು ಶಾಪಿಂಗ್ ಕಡಿಮೆ ಮಾಡಿದ್ದಾರೆ. ಇದೇ ಟ್ರೆಂಡ್ ಕೆಲ ವರ್ಷ ಭಾರತದಲ್ಲಿ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.