ಶ್ರೀಗಂಧದ ಗಿಡ ನೆಡುವ ಸರಿಯಾದ ಕ್ರಮ ಹಾಗೂ ರಕ್ಷಣೆಯ ಕುರಿತು ಮಾಹಿತಿ ಇಲ್ಲಿದೆ
ಶ್ರೀಗಂಧದ ಕೃಷಿಗೆ ಸಂಬಂಧಿಸಿದಂತೆ ಗಿಡವನ್ನು ನೆಡುವ ಸರಿಯಾದ ಕ್ರಮ, ಅದರ ರಕ್ಷಣೆಯ ಕುರಿತು ಉತ್ತಮ ಮಾಹಿತಿಯನ್ನು ಟಿವಿ9 ಡಿಜಿಟಲ್ನೊಂದಿಗೆ ಸಾಗರದ ಪರಿಸರವಾದಿಗಳು ಹಾಗೂ ಕೃಷಿ ತಜ್ಞರಾದ ಆನೆಗುಳಿ ಸುಬ್ಬರಾವ್ ಹಂಚಿಕೊಂಡಿದ್ದಾರೆ.
ಶ್ರೀಗಂಧದ ಸಸಿ ಬೆಳೆಸುವುದು ತುಂಬಾ ಕಷ್ಟದ ಕೆಲಸ, ಜೊತೆಗೆ ಅದು ಬೆಳೆದರೆ ಅದರ ರಕ್ಷಣೆಯ ಜವಾಬ್ದಾರಿ ಇನ್ನೂ ಕಷ್ಟ ಎಂದು ಹೇಳುವವರು ಸಾಕಷ್ಟಿದ್ದಾರೆ. ಆದರೆ ಶ್ರೀಗಂಧದ ಗಿಡವನ್ನು ನೆಡುವ ಸರಿಯಾದ ಕ್ರಮಗಳು, ಅದರ ರಕ್ಷಣೆ ಜೊತೆಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳಿವೆ ಎಂದು ತಿಳಿದುಕೊಂಡು ಶ್ರೀಗಂಧದ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಉತ್ತಮ ಮಾಹಿತಿಯನ್ನು ಟಿವಿ9 ಡಿಜಿಟಲ್ನೊಂದಿಗೆ ಸಾಗರದ ಪರಿಸರವಾದಿಗಳು ಹಾಗೂ ಕೃಷಿ ತಜ್ಞರಾದ ಆನೆಗುಳಿ ಸುಬ್ಬರಾವ್ ಹಂಚಿಕೊಂಡಿದ್ದಾರೆ.
ಸುಬ್ಬರಾವ್ರವರು ಹೇಳುವಂತೆ ಅರೆ ಮಲೆನಾಡುಗಳಲ್ಲಿ ಸಮೃದ್ಧವಾಗಿ ಶ್ರೀಗಂಧದವನ್ನು ಬೆಳೆಸಬಹುದಾಗಿದೆ. ಶ್ರೀಗಂಧವು ಸಂಘ ಜೀವಿ, ಜೊತೆಗೊಂದು ಗಿಡ ಇದ್ರೆ, ಅಂದರೆ ಬೀಜದೊಂದಿಗೆ ದ್ವಿದಳ ಧಾನ್ಯ ಹಾಕಿದ್ರೆ ಮಾತ್ರ ಬೀಜ ಮೊಳಕೆ ಒಡೆಯುತ್ತದೆ ಎಂದು ಶ್ರೀಗಂಧದ ಕೃಷಿಯನ್ನು ಪ್ರಾರಂಭಿಸುವವರಿಗೆ ಸಲಹೆ ನೀಡುತ್ತಾರೆ. ಜೊತೆಗೆ ರಕ್ಷಣೆಗೆ ಸಂಬಂಧಪಟ್ಟಂತೆ ಈ ಹಿಂದೆ ಶ್ರೀಗಂಧವನ್ನು ಎಲ್ಲೇ ಬೆಳೆದರೂ ಕೂಡ ಅದು ಸರ್ಕಾರಿ ಅಧೀನಕ್ಕೆ ಒಳಪಡುತ್ತಿತ್ತು. ಆದರೆ ಕರ್ನಾಟಕ ಸರ್ಕಾರವು 2001ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ನಿಯಾಮಾವಳಿ 1969ಕ್ಕೆ ಸೂಕ್ತ ತಿದ್ದುಪಡಿಯನ್ನು ತಂದು ಶ್ರೀಗಂಧ ಮರದ ಮಾಲೀಕತ್ವವನ್ನು ಅದರ ಬೆಳೆದ ಮಾಲೀಕರಿಗೆ ನೀಡಿದೆ ಎಂದು ಹೇಳುತ್ತಾರೆ.
ಶ್ರೀಗಂಧದ ಬೆಳೆಗೆ ಸರಿಯಾದ ವಾತಾವರಣ:
ಶ್ರೀಗಂಧ ಬೆಳೆಯಲು ಸಾಕಷ್ಟು ಸೂರ್ಯನ ಬೆಳಕು, ಮಧ್ಯಮ ಮಳೆ, ಶುಷ್ಕ ವಾತಾವರಣವಿರುವ ಸ್ಥಳ ತುಂಬಾ ಅಗತ್ಯವಾಗಿದೆ. 12-30 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ವಾರ್ಷಿಕ ಮಳೆಯು 850-1200 ಮಿಲಿಮೀಟರ್ (33-47 ಇಂಚು) ವ್ಯಾಪ್ತಿಯಲ್ಲಿರಬೇಕು. ಮರದ ಎತ್ತರಕ್ಕೆ ಸಂಬಂಧಿಸಿದಂತೆ 360 ಮತ್ತು 1350 ಮೀಟರ್ (1181-4429 ಅಡಿ) ಅಗತ್ಯವಿರುತ್ತದೆ. 8 ರಿಂದ 10 ಅಡಿಗಳ ಅಂತರದಲ್ಲಿ ಶ್ರೀಗಂಧ ಸಸಿ ನೆಡಬೇಕು. ಮೂರು ಅಡಿ ಆಳದ ಗುಂಡಿಯಲ್ಲಿ ಸಸಿ ನಾಟಿ ಮಾಡಬೇಕು. ಸಸಿ ನೆಟ್ಟು ಎರಡು ಅಡಿ ಮಾತ್ರ ಗುಂಡಿಯನ್ನು ಸಾವಯವ ಗೊಬ್ಬರದಿಂದ ಮುಚ್ಚಬೇಕು. ಶ್ರೀಗಂಧ ಆರಂಭದಲ್ಲಿ ಪರಾವಲಂಬಿಯಾಗಿದ್ದು ಪಕ್ಕದಲ್ಲೇ ತೊಗರಿ ಅಥವಾ ನುಗ್ಗೆ ಗಿಡ ನೆಡಬೇಕು. ಸಸಿ ನೆಡುವಾಗ 1.5 ಅಡಿ ಆಳ ಮತ್ತು ಅಗಲ ಬರುವಂತೆ ಚಚ್ಚೌಕದ ಗುಂಡಿ ನಿರ್ಮಿಸಿ ಮರದ ದರಗಲೆಲೆ, ಸಗಣಿ ಗೊಬ್ಬರ ಹಾಗೂ ಕಾಡಿನಿಂದ ತಂದ ಕಪ್ಪು ಗೋಡು ಮಣ್ಣು, ವರ್ಟಿಸೋಲ್ ಒಂದು ರೀತಿಯ ಜೇಡಿಮಣ್ಣಿನಿಂದ ಸಮೃದ್ಧವಾಗಿರುವ ಕಪ್ಪು ಮಣ್ಣು ಬೇಕಾಗುತ್ತದೆ.
ಶ್ರೀಗಂಧದ ಬೀಜ ಮೊಳಕೆ ಪ್ರಕ್ರಿಯೆ:
ಶ್ರೀಗಂಧದ ಬೀಜಗಳನ್ನು 24 ಗಂಟೆಗಳ ಕಾಲ ನೆನೆಸಿಡಿ. ನಂತರ ಸೂರ್ಯನ ಬಿಸಿಲಿಗೆ ಒಣಗಲು ಬಿಡಿ. ಒಂದು ದಿನದ ಬೀಜದಲ್ಲಿ ಬಿರುಕು ಬಿಡುವುದನ್ನು ಕಾಣಬಹುದು. ಈಗ ಮೊಳಕೆ ಒಡೆಯಲು ಪ್ರಾರಂಭಿಸಿದೆ ಎಂದರ್ಥ. ಮೊಳಕೆ ಬಂದ ಕೂಡಲೇ ನೇರವಾಗಿ ನೆಲದಲ್ಲಿ ನೆಡುವ ಬದಲು ಕೆಲವು ದಿನಗಳ ವರೆಗೆ ಚಿಕ್ಕದ್ದಾಗಿ ಡಬ್ಬಗಳಲ್ಲಿ ನೆಡುವುದು ಮುಖ್ಯ.
ಇದನ್ನೂ ಓದಿ: ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಶ್ರೀಗಂಧದ ಮರವು ಸ್ಥಿರವಾದ ಸಾರಜನಕವನ್ನು ಉತ್ಪಾದಿಸುವ ಮತ್ತೊಂದು ಸಸ್ಯದ ಜೊತೆಗೆ ಬೆಳೆದರೆ ಮಾತ್ರ ಬೆಳೆಯುತ್ತದೆ, ಒಂದು ರೀತಿಯ ನೈಸರ್ಗಿಕ ಗೊಬ್ಬರ. ಶ್ರೀಗಂಧದ ಮರವು ತನಗೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವ ಸಲುವಾಗಿ ತನ್ನ ಬೇರಿನ ವ್ಯವಸ್ಥೆಯನ್ನು ಇನ್ನೊಂದು ಮರದೊಂದಿಗೆ ಸಂಪರ್ಕಿಸುತ್ತದೆ. ಆದ್ದರಿಂದ ಪ್ರತೀ ಬಾರಿ ಶ್ರೀಗಂಧದ ಗಿಡವನ್ನು ನೆಡುವಾಗ ಹತ್ತಿರದಲ್ಲಿ ಅಂದರೆ 1.6-2 ಮೀಟರ್ (5.2-6.5 ಅಡಿ) ಅಂತರದಲ್ಲಿ ಇನ್ನೊಂದು ಮರ ಇರುವುದು ಅಗತ್ಯ. ಹತ್ತಿರದ ಮರಗಳೊಂದಿಗೆ ಶ್ರೀಗಂಧದವು ಬೇರಿನೊಂದಿಗೆ ತನ್ನ ಬೆಳವಣೆಗೆಗೆ ಬೇಕಾಗುವ ಪೋಷಣೆಯನ್ನು ತೆಗೆದುಕೊಳ್ಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:32 am, Tue, 28 February 23