Navarathri 2023 : ಕರಾವಳಿ ಕರ್ನಾಟಕದ ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ ಪ್ರಮುಖ ಆಕರ್ಷಣೆ, ಇದರ ವಿಶೇಷತೆಗಳೇನು?
ನವರಾತ್ರಿ ಹಬ್ಬ ಆರಂಭವಾಗಿದೆ. 9 ದಿನಗಳ ಕಾಲ ನವದುರ್ಗೆಯರನ್ನು ಪೂಜಿಸಲಾಗುವ ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿವಿಧೆಡೆ ಹಲವು ಸಂಪ್ರದಾಯಗಳ ಪ್ರಕಾರ ಆಚರಿಸಲಾಗುತ್ತದೆ. ಅದೇ ರೀತಿ ಕರಾವಳಿ ಕರ್ನಾಟಕದಲ್ಲೂ ನವರಾತ್ರಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿನ ನವರಾಥ್ರಿಯ ಪ್ರಮುಖ ಆಕರ್ಷಣೆಯೆಂದರೆ ಪಿಲಿ ನಲಿಕೆ (ಹುಲಿ ಕುಣಿತ). ಈ ಹುಲಿವೇಷದ ವಿಶೇಷತೆಯ ಬಗ್ಗೆ ತಿಳಿಯೋಣ.
ನವರಾತ್ರಿ ಹಬ್ಬ ಆರಂಭವಾಗಿದೆ. ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬವನ್ನು ವಿವಿಧ ಕಡೆ ವಿವಿಧ ಸಂಪ್ರದಾಯಗಳ ಪ್ರಕಾರ ಆಚರಿಸಲಾಗುತ್ತದೆ. ಅದೇ ರೀತಿ ಕರಾವಳಿ ಕರ್ನಾಟಕ ಅಂದರೆ ತುಳುನಾಡಿನಲ್ಲಿ ಕೂಡಾ ಬಹಳ ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿನ ದಸರಾದ ಪ್ರಮುಖ ಆಕರ್ಷಣೆಯೆಂದರೆ ಪಿಲಿ ನಲಿಕೆ (ಹುಲಿ ಕುಣಿತ). ತುಳುನಾಡಿನ ಸಂಪ್ರದಾಯಿಕ ನೃತ್ಯವಾದ ಹುಲಿವೇಷದ ವಿಶೇಷತೆಯ ಬಗ್ಗೆ ತಿಳಿಯೋಣ.
ಪಿಲಿ ವೇಷ (ಹುಲಿ ವೇಷ) ತುಳುನಾಡಿನ ಸಾಂಪ್ರದಾಯಿಕ ನೃತ್ಯ. ವಿಶೇಷವಾಗಿ ಕೃಷ್ಣಜನ್ಮಾಷ್ಟಮಿ, ಗಣೇಶೋತ್ಸವ ಮತ್ತು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹುಲಿವೇಷವನ್ನು ಪ್ರದರ್ಶಿಸಲಾಗುತ್ತದೆ. ನವರಾತ್ರಿ ಹಬ್ಬ ಎಂದರೆ ದುರ್ಗಾದೇವಿಯ ಹಬ್ಬ. ಈ ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ವಾಹನ ಸಿಂಹ ಅಥವಾ ಹುಲಿ. ಆದ್ದರಿಂದ ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುವ ಜಗನ್ಮಾತೆ ದುರ್ಗಾದೇವಿಗೆ ಗೌರವವನ್ನು ಸಲ್ಲಿಸಲು ಹುಲಿವೇಷವನ್ನು ಧರಿಸಲಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಎಲ್ಲರೂ ಹುಲಿವೇಷವನ್ನು ಧರಿಸುತ್ತಾರೆ.
ಹುಲಿ ಕುಣಿತದ ಸಂಪ್ರದಾಯ ಹೇಗೆ ಆರಂಭವಾಯಿತು?
ನವರಾತ್ರಿಯ ಹಬ್ಬದಲ್ಲಿನ ಹುಲಿವೇಷ ಪ್ರದರ್ಶನದ ಇತಿಹಾಸ ನೋಡುವುದಾದರೆ, ಇಲ್ಲಿನ ಜನರ ನಂಬಿಕೆಯ ಪ್ರಕಾರ ಬಹಳ ವರ್ಷಗಳ ಹಿಂದೆ ಒಬ್ಬ ಬಾಲಕನಿಗೆ ದೈಹಿಕ ಸಮಸ್ಯೆಯ ಕಾರಣ ಕಾಲುಗಳಿದ್ದರೂ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಆತನ ಮನೆಯರು ಮಂಗಳಾದೇವಿ ದೇವಿ ದೇವಾಲಯಕ್ಕೆ ಹೋಗಿ ನಮ್ಮ ಮಗು ಗುಣಮುಖವಾಗಿ ನಡೆಯಲು ಪ್ರಾರಂಭಿಸಿದರೆ, ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಆತನಿಗೆ ಹುಲಿವೇಷವನ್ನು ಹಾಕಿ, ಪಿಲಿ ನಲಿಕೆಯ ಕಾಣಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥಿಸುತ್ತಾರೆ. ನಂತರ ಶೀಘ್ರದಲ್ಲೇ ಆತ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸುತ್ತಾನೆ. ಮತ್ತು ಮನೆಯರು ದೇವರಿಗೆ ಕೊಟ್ಟ ಮಾತಿನಂತೆ ನವರಾತ್ರಿಯ ಸಂದರ್ಭದಲ್ಲಿ ಹರಕೆ ರೂಪದಲ್ಲಿ ಮಗುವಿಗೆ ಹುಲಿವೇಷವನ್ನು ಹಾಕಿಸಿ ದೇವಾಲಯಕ್ಕೆ ಕರೆದುಕೊಂಡು ಬರುತ್ತಾರೆ. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಸ್ಥಳೀಯ ಯುವರಿದಂದ ಹಿಡಿದು ಪುಟ್ಟ ಮಕ್ಕಳವರಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಧರಿಸುತ್ತಾರೆ.
ದೇಹವನ್ನು ದಂಡಿಸಿ ಅಪಾರ ಶ್ರದ್ದೆ ದೃಢತೆಯಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ವಿ ಹುಲಿವೇಷಧಾರಿ ಆಗೋಕೆ ಸಾಧ್ಯ. ಅದೊಂದು ಅಪ್ಪಟ ಕಲೆ. ಎಲ್ಲರಿಗೂ ಈ ಕಲೆ ಸಿದ್ಧಿಸುವುದಿಲ್ಲ. ಹುಲಿವೇಷ ಹಾಕೋದು ಅಷ್ಟು ಸುಲಭದ ಮಾತಲ್ಲ. ಹುಲಿ ವೇಷ ಹಾಕಲು ತಾಳ್ಮೆ ಮತ್ತು ಅಷ್ಟೇ ಶ್ರಮಪಡಬೇಕಾಗುತ್ತದೆ. ಏಕೆಂದರೆ ವೇಷಧಾರಿಯ ಮೈಮೇಲೆ ಬಣ್ಣ ಬಳಿದ ನಂತರ ಆ ಬಣ್ಣ ಒಣಗುವವರೆಗೂ ನಿಂತಿರಬೇಕು. ಮೈಮೇಲೆ ಹುಲಿ ಪಟ್ಟಿ, ಮುಖದ ಮೇಲೆ ಹುಲಿಯ ರೂಪ ಹೀಗೆ 5 ರಿಂದ 6 ಗಂಟೆಗಳ ಕಾಲ ಬಣ್ಣ ಬಿಡಿಸಲು ನಿಂತಿರಬೇಕು. ಈ ಸಂದರ್ಭದಲ್ಲಿ ಅವರು ಎರಡು ಕೈಗಳನ್ನು ಕಂಬಕ್ಕೆ ಆಧಾರವಾಗಿಟ್ಟುಕೊಂಡು ನಿಂತಿರುತ್ತಾರೆ. ಇಷ್ಟೇ ಅಲ್ಲದೆ ಈ ಬಣ್ಣದ ಉರಿ ನಿಧಾನವಾಗಿ ಏರತೊಡಗುತ್ತದೆ. ಈ ಬಣ್ಣದ ಉರಿ ಮತ್ತು ರಾತ್ರಿಯಿಡಿ ನಿದ್ದೆಗೆಡುವ ಕಾರಣ ಹುಲಿವೇಷಧಾರಿಗಳ ಕಣ್ಣು ಕೆಂಪಾಗಿರುತ್ತದೆ.
ಇದನ್ನೂ ಓದಿ: ಹುಲಿವೇಷದವರ ಜೊತೆ ಸೇರಿ ಡ್ಯಾನ್ಸ್ ಮಾಡಿದ ಉಡುಪಿಯ ಬಾಲಕಿ; ಈ ಮುದ್ದಾದ ವಿಡಿಯೋ ಮಿಸ್ ಮಾಡಬೇಡಿ
ಹುಲಿವೇಷಧಾರಿಗಳಿಗೆ ಬಣ್ಣವನ್ನು ಹಚ್ಚುವ ಪದ್ಧತಿ:
ಹಿಂದಿನ ಕಾಲದಲ್ಲಿ ಹಬ್ಬಕ್ಕೆ ಒಂದು ತಿಂಗಳು ಅಥವಾ ಒಂದು ವಾರಕ್ಕೆ ಮುಂಚೆ ಅರಶಿನ, ಇದ್ದಿಲು ಎಲ್ಲವನ್ನು ಒಟ್ಟಿಗೆ ಸೇರಿಸಿ ಅರೆದು, ಮತ್ತು ಆ ಬಣ್ಣಕ್ಕೆ ಶೈನಿಂಗ್ ಬರಲು ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಕುದಿಸಿ ಬಣ್ಣವನ್ನು ತಯಾರಿಸುತ್ತಿದ್ದರು. ಈ ಬಣ್ಣ ವಿಪರೀತ ಉರಿಯನ್ನು ಹೊಂದಿತ್ತು. ಅಷ್ಟೇ ಅಲ್ಲ ಈ ಬಣ್ಣ ಅಷ್ಟು ಸುಲಭವಾಗಿ ಮಾಸುತ್ತಿರಲಿಲ್ಲ. ಆದರೆ ಈಗ ಸ್ಪ್ರೇ ಇತ್ಯಾದಿ ಸುಲಭ ವಿಧಾನದ ಮೂಲಕ ಬಣ್ಣ ಹಚ್ಚಲಾಗುತ್ತದೆ.
ಹುಲಿವೇಷದಲ್ಲಿ ಚಿಟ್ಟೆ ಹುಲಿ ಮತ್ತು ಪಟ್ಟೆ ಹುಲಿ ಎಂಬ ಎರಡು ಪ್ರಕಾರದ ಹುಲಿಗಳಿವೆ. ಚಿಟ್ಟೆ ಹುಲಿಯ ದೇಹದ ಮೇಲೆ ಚಿರತೆಯ ಮೈ ಮೇಲೆ ಕಂಡುಬರುವ ಚುಕ್ಕಿಯಾಕಾರವನ್ನು ಬಿಡಿಸಲಾಗುತ್ತದೆ. ಪಟ್ಟೆ ಹುಲಿಗೆ ಹುಲಿಯ ಮೇಲಿರುವ ಪಟ್ಟೆ ಅಥವಾ ಗೆರೆಗಳ ಆಕಾರವನ್ನು ಬಿಡಿಸಲಾಗುತ್ತದೆ. ಇತ್ತೀಚಿಗೆ ಕರಿ ಪಿಲಿ ಕೂಡಾ ಬಾರಿ ಹೆಸರುವಾಸಿಯಗಿದೆ. ಕಪ್ಪು ಬಣ್ಣದ ಹುಲಿ ವೇಷಧಾರಿಗೆ ಕಪ್ಪುಬಣ್ಣವನ್ನು ಹಾಕಿ ಅದರ ಮೇಲೆ ಬಿಳಿ ಬಣ್ಣದ ಚುಕ್ಕೆಗಳನ್ನು ಬಿಡಿಸಲಾಗುತ್ತದೆ. ಮೊದಲು ಕೈಕಾಲು ದೇಹಕ್ಕೆ ಬಣ್ಣವನ್ನು ಹಚ್ಚಲಾಗುತ್ತದೆ. ಬಣ್ಣ ಹಚ್ಚಿದ ತಕ್ಷಣ ವೇಷಧಾರಿಯ ಮೈಮೇಲೆ ರೋಮವನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ಕುರಿಯ ರೋಮವನ್ನು ತಂದು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಳಿಕ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ. ಈ ಕುರಿಯ ರೋಮವನ್ನೇ ಬಣ್ಣ ಹಾಕಿದ ತಕ್ಷಣವೇ ಹುಲಿವೇಷಧಾರಿಯ ಮೈಮೇಲೆ ಸಿಂಪಡಿಸಲಾಗುತ್ತದೆ. ಹಿಂದಿನ ಕಾಲದಲ್ಲೆಲ್ಲಾ ರಾತ್ರಿಯಿಂದ ಬೆಳಗ್ಗಿನವರೆಗೆ ವೇಷಧಾರಿಗಳಿಗೆ ಬಣ್ಣ ಹಚ್ಚಲಾಗುತ್ತಿತ್ತು. ಆದರೆ ಇಂದು ಸ್ಪ್ರೇ ಇತ್ಯಾದಿ ಸೌಲಭ್ಯಗಳಿರುವ ಕಾರಣ 2 ರಿಂದ 3 ಗಂಟೆಯ ಒಳಗೆ ಬಣ್ಣ ಹಚ್ಚಲಾಗುತ್ತದೆ. ಮೈ ಮೇಲೆ ಬಣ್ಣ ಹಚ್ಚಿದ ನಂತರ ಕೊನೆಯಲ್ಲಿ ಮುಖವರ್ಣಿಕೆಯನ್ನು ಬಿಡಿಸಲಾಗುತ್ತದೆ. ಈ ಮುಖವರ್ಣಿಕೆಯೇ ಹುಲಿವೇಷಧಾರಿಯ ಕಳೆಯನ್ನು ಹೆಚ್ಚಿಸುತ್ತದೆ.
ಇನ್ನೂ ಕೊನೆಯಲ್ಲಿ ಹುಲಿವೇಷಧಾರಿಗಳಿಗೆ ಬಿಳಿ ಬಣ್ಣದ ಜೆಟ್ಟಿ ಉಡುಪನ್ನು ಸೊಂಟಕ್ಕೆ ಕಟ್ಟಲಾಗುತ್ತದೆ. ಇದು ಸುಮಾರು ಆರು ಇಂಚು ಅಗಲ ಮತು 12 ರಿಂದ 14 ಅಡಿ ಉದ್ದವನ್ನು ಹೊಂದಿರುತ್ತದೆ. ಅದನ್ನು ಹುಲಿಯ ಬಾಲದ ರೀತಿಯಲ್ಲಿ ಕಟ್ಟಲಾಗುತ್ತದೆ. ಹೀಗೆ ಹುಲಿವೇಶಧಾರಿಗಳೆಲ್ಲ ಸಿದ್ಧವಾದ ನಂತರ ಹುಲಿ ಕುಣಿತಕ್ಕೆ ಅಣಿಯಾಗುವ ಮೊದಲು “ಲೋಬನ ಸೇವೆ”ಯನ್ನು ಮಾಡಲಾಗುತ್ತದೆ. ಹಾಗೂ ಹುಲಿವೇಷಧಾರಿಗೆ ದೃಷ್ಟಿ ತಾಕಬಾರದೆಂದು ಅವರ ಗುರುಗಳು ಪ್ರತಿಯೊಬ್ಬರ ಕೈಗೂ ಕಪ್ಪುದಾರವನ್ನು ಕೂಡ ಕಟ್ಟುತ್ತಾರೆ. ಹಾಗೂ ಹುಲಿ ವೇಷದಾರಿಗಳಿಗೆ ಅವರ ಗುರುಗಳೇ ಕೊನೆಯಲ್ಲಿ ಹುಲಿವೇಷಧಾರಿಗಳ ತಲೆಗೆ ಹುಲಿಯ ಟೋಪಿಯನ್ನು ಕಟ್ಟುತ್ತಾರೆ. ಅಲ್ಲದೆ ಅವರ ಕೈ ತೋಳುಗಳಿಗೆ ನಿಂಬೆ ಮತ್ತು ನಮಿಲುಗರಿಯನ್ನು ಕೂಡಾ ಕಟ್ಟಲಾಗುತ್ತದೆ. ಹಿಂದಿನ ಕಾಲದಲ್ಲಿ ನಿಂಬೆ ಮತ್ತು ನವಿಲು ಗರಿ ಕಟ್ಟುವ ಪದ್ದತಿ ಹೆಚ್ಚು ರೂಢಿಯಲ್ಲಿತ್ತು.
ಹೀಗೆ ಲೋಬನ ಸೇವೆಯ ನಂತರ ಮನೆಮನೆಗಳಿಗೆ ಹೋಗಿ ಹಾಗೂ ನಗರದ ಬೀದಿಗಳಲ್ಲಿ ಹುಲಿವೇಷಧಾರಿಗಳು ತಾಸೆ (ಡೊಳ್ಳು) ಯ ಸದ್ದಿಗೆ ನೃತ್ಯ ಮಾಡುತ್ತಾರೆ. ಪಿಲಿ ನಲಿಕೆಯಲ್ಲಿ ಪ್ರಮುಖವಾದುದು ಪೌಲಾ ಕುಣಿತ. ಅಂದರೆ ತಾಸೆಯ ಸದ್ದಿಗೆ ಸರಿಯಾಗಿ ಹೆಜ್ಜೆಗಳನ್ನು ಹಾಕುವುದು ಎಂದರ್ಥ.
ಹುಲಿ ಕುಣಿತ ಸಮಯದಲ್ಲಿ ವಿವಿಧ ತಂಡಗಳ ಹುಲಿವೇಷಧಾರಿಗಳು ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ ತಟ್ಟೆಯಿಂದ ನಾಣ್ಯಗಳನ್ನು ಎತ್ತಿಕೊಳ್ಳುವುದು , ಸೋಡಾ ಬಾಟಲಿಯ ಮುಚ್ಚಳವನ್ನು ತೆರೆಯುವುದು, ಅಕ್ಕಿ ಮುಡಿ (ಮೂಟೆ) ಯನ್ನು ಬಾಯಿಯನ್ನು ಕಚ್ಚಿ ಮೇಲಕ್ಕೆತ್ತುವುದು ಈ ರೀತಿಯ ಹಲವು ಸಾಹಸಗಳನ್ನು ಕೂಡಾ ಪ್ರದರ್ಶಿಸುತ್ತಾರೆ. ಅಲ್ಲದೆ ರಿವರ್ಸ್ ಸ್ಲಿಪ್ ಮತ್ತು ಫಾರ್ವರ್ಡ್ ಸ್ಲಿಪ್ ಸೇರಿದಂತೆ ಹಲವು ಇತರೆ ಸಾಹಸಗಳನ್ನು ಹುಲಿವೇಷಾಧಾರಿಗಳು ಮಾಡುತ್ತಾರೆ. ಈ ರೀತಿಯ ಸಾಹಸಗಳಿಗೆ ಕಲಿ ಪಿಲಿ ವೇಷಧಾರಿಗಳು ತುಂಬಾ ಹೆಸರುವಾಸಿ. ಇನ್ನು ಅಪ್ಪೆ ಪಿಲಿ (ತಾಯಿ ಹುಲಿ) ತಂಡಕ್ಕೆ ಹೆಚ್ಚುವರಿ ಆಕರ್ಷಣೆಯಾಗಿದೆ. ಸಾಮಾನ್ಯವಾಗಿ ಧರಣಿ ಮಂಡಲ ಮಧ್ಯದೊಳಗೆ ಹಾಡಿನ ತಾಳಕ್ಕೆ ತಾಸೆ ಬಡಿಯಲಾಗುತ್ತದೆ. ಈ ಹಾಡಿನ ತಾಳ ಆರಂಭವಾದಾಗ ಅಪ್ಪೆ ಪಿಳಿ ನೃತ್ಯಕ್ಕ ಪ್ರವೇಶಿಸುತ್ತದೆ. ಹೀಗೆ ಪಿಲಿ ನಲಿಕೆ ಸೇವೆ ನಡೆಯುತ್ತದೆ.
ಇಂದು ಹುಲಿ ವೇಷ ಕಲಾಸೇವೆಯ ಜೊತೆಗೆ ಸಮಾಜಸೇವೆಯ ಗುರಿಯನ್ನು ಹೊಂದಿದೆ. ತಮಗೆ ಕಾಣಿಕೆಯಾಗಿ ಬಂದಂತಹ ಹಣವನ್ನು ಅಗತ್ಯವಿರುವ ಜನರಿಗೆ ಸಹಾಯಧನದ ರೂಪದಲ್ಲಿ ನೀಡುತ್ತಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ತುಳುನಾಡಿನ ಹಲವೆಡೆ ಪಿಲಿನಲಿಕೆ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗುತ್ತದೆ. ಘಟಾನುಘಟಿ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಈ ಸ್ಪರ್ಧೆಯನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.
ಪಿಲಿ ನಲಿಕೆ ಒಂದು ದಿನದ ಆಟವಲ್ಲ. ನವರಾತ್ರಿಯ ಒಂಬತ್ತು ದಿನ ಹುಲಿ ಕುಣಿತ ಇರುತ್ತದೆ. ಅದರಲ್ಲೂ ಕೊನೆಯ ದಿನ ದೇವರ ಮೆರವಣಿಗೆಯಲ್ಲಿ ಹುಲಿ ಕುಣಿತದ ಅಬ್ಬರ ನೋಡುವುದೇ ಚೆಂದ. ಕೊನೆಯ ದಿನ ಶಾರದ ದೇವಿಯ ವಿಸರ್ಜನೆಯ ನಂತರವೇ ವೇಷಧಾರಿಗಳ ಜಳಕ. ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಥವಾ ತೆಂಗಿನಕಾಯಿಯ ಹಾಲನ್ನು ಮೈಗೆ ಹಾಕಿಕೊಂಡು ಹಾಕಿಕೊಂಡು ಅರ್ಧ ಅಥವಾ ಮುಕ್ಕಾಲು ಗಂಟೆಯ ಬಳಿಕ ಸ್ನಾನ ಮಾಡುವ ಮೂಲಕ ಮೈ ಮೇಲಿನ ಬಣ್ಣವನ್ನು ತೆಗೆಯಲಾಗುತ್ತದೆ. ಇದು ಕೇವಲ ನೃತ್ಯವಲ್ಲ ಇಲ್ಲಿನ ಜನರ ನಂಬಿಕೆ ಮತ್ತು ಸಂಪ್ರದಾಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Mon, 16 October 23