ಅನ್ನ ದಾನ೦ ಸಮ೦ ದಾನ೦ ತ್ರಿಲೋಕೇಷು ನ ವಿಧತೇ. ಇದು ವೇದೋಕ್ತಿ. ಎ೦ದರೆ ಅನ್ನದಾನಕ್ಕೆ ಸಮನಾದ ದಾನವು ಬೇರೊ೦ದಿಲ್ಲ. ಇದು ಅತ್ಯ೦ತ ಶ್ರೇಷ್ಠ ದಾನ. ಇದನ್ನು ನಿಮಗೆ ಏಕೆ ಹೇಳುತ್ತಿದ್ದೇನೆಂದರೆ ಇಂದು ಇಂದು ಆಹಾರ ಪೋಲು ತಡೆ ದಿನ ( Stop Food Waste Day). ಹೌದು.. ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಆಹಾರ ಕೂಡ ಐಷಾರಾಮಿ ಆಗಿ ಮಾರ್ಪಟ್ಟಿದೆ. ಹಾಗೇ ಆಹಾರದ ಕೊರತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಒಂದು ಕಡೆ ತಿನ್ನಲು ಏನೇನೂ ಸಿಗದೆ ಪರಿತಪಿಸುವ ಜನರು, ಬೇಡುವ ಮಂದಿಯನ್ನು ನೋಡುತ್ತೇವೆ. ಇನ್ನೊಂದೆಡೆ ತಟ್ಟೆ ತುಂಬ ಆಹಾರ ಹಾಕಿಕೊಂಡು ಚೆಲ್ಲುವವರನ್ನು ನೋಡುತ್ತೇವೆ. ಸಾಮಾನ್ಯವಾಗಿ ನಿತ್ಯದ ಜೀವನದಲ್ಲಿ ನಮಗೆ ಇದರ ಬಗ್ಗೆ ಕಲ್ಪನೆಯೇ ಇರುವುದಿಲ್ಲ. ದೊಡ್ಡದೊಡ್ಡ ಸಮಾರಂಭ, ಮದುವೆಗಳಲ್ಲಿ ಸಿಕ್ಕಾಪಟೆ ಅಡುಗೆ ಮಾಡಿ ಕೊನೆಗೆ ಅದು ಹೆಚ್ಚಾಯಿತೆಂದು ಪೋಲು ಮಾಡುವುದೆಲ್ಲ ಸಾಮಾನ್ಯವಾಗಿಬಿಟ್ಟಿದೆ. ಆದರೆ ಆಹಾರ ಪೋಲು ಮಾಡುವುದು ಸರಿಯಲ್ಲ. ಆಹಾರ ಕೊರತೆ ಎಂಬುದೊಂದು ಸ್ಥಿತಿ ಬಂದರೆ ತಿನ್ನಲು ಅದೆಷ್ಟು ಕಷ್ಟಪಡಬೇಕು ಎಂಬ ಅರಿವು ಆಗುತ್ತದೆ. ಹಾಗಾಗಿಯೇ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅಷ್ಟಕ್ಕೂ ಈ ಆಹಾರ ಪೋಲು ತಡೆ ದಿನ ಹೇಗೆ ಆಚರಣೆಗೆ ಬಂತು? ಎನ್ನುವುದು ಈ ಕೆಳಗಿನಂತಿದೆ ನೋಡಿ.
ಇದನ್ನೂ ಓದಿ: ಆರೋಗ್ಯಕರವೆಂದು ತೋರುವ 5 ಸಾಮಾನ್ಯ ಆಹಾರಗಳ ಕರಾಳ ಮುಖ; ಇಂದೇ ಇವುಗಳನ್ನು ಸೇವಿಸುವುದನ್ನು ನಿಲ್ಲಿಸಿ
ಆಹಾರ ಪೋಲು ತಡೆ ದಿನ ಇದೊಂದು ಅಂತಾರಾಷ್ಟ್ರೀಯ ದಿನಾಚರಣೆಯಾಗಿದ್ದು, 2017ರಿಂದ ಪ್ರತಿವರ್ಷ ಈ ದಿನ ಆಚರಿಸಲಾಗುತ್ತದೆ. ಅಂದಹಾಗೇ ಮೊಟ್ಟಮೊದಲು 2017ರಲ್ಲಿ ಇದನ್ನು ಪ್ರಾರಂಭಿಸಲಾಯ್ತು. ಇದು ಅಂತಾರಾಷ್ಟ್ರೀಯ ದಿನವಾಗಿದ್ದು, ಆಹಾರ ಸೇವೆಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಕಂಪಾಸ್ ಗ್ರೂಪ್ ಇದನ್ನು ಪ್ರಾರಂಭಿಸಿದ್ದು, ಪ್ರತಿ ವರ್ಷ ಏಪ್ರಿಲ್ 27 ರಂದು ಆಚರಿಸಲಾಗುತ್ತದೆ. ಕಂಪಾಸ್ ಗ್ರೂಪ್. ಇದೊಂದು ಬ್ರಿಟಿಷ್ ಬಹುರಾಷ್ಟ್ರೀಯ ಒಪ್ಪಂದದ ಆಹಾರ ಸೇವಾ ಕಂಪನಿಯಾಗಿದ್ದು, ಪ್ರಧಾನ ಕಚೇರಿ ಇಂಗ್ಲೆಂಡ್ನ ಚೆರ್ಟ್ಸೆಯಲ್ಲಿದೆ. ಆಹಾರಗಳು ವ್ಯರ್ಥವಾಗುವುದನ್ನು ತಡೆಯುವ ಉದ್ದೇಶವನ್ನಿಟ್ಟುಕೊಂಡು, ಜನರಲ್ಲಿ ಆಹಾರ ಪೋಲು ಮಾಡಬಾರದು ಎಂಬ ಅರಿವು ಮೂಡಿಸುವ ಸಲುವಾಗಿ ಶುರುವಾದ ಆಚರಣೆ ಇದಾಗಿದೆ. ಈ ಕಂಪಾಸ್ ಗ್ರೂಪ್, ತಮ್ಮಲ್ಲಿ ಕೆಲಸ ಮಾಡುವ ಎಲ್ಲ ಚೆಫ್ಗಳಿಗೂ ಮೊದಲು ಕಲಿಸುವುದೇ ಆಹಾರ ಪೋಲು ತಡೆಯುವ ಮಾರ್ಗಗಳನ್ನು. ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಆಹಾರ ವ್ಯರ್ಥದ ವಿರುದ್ಧದ ಹೋರಾಟದಲ್ಲಿ ಕ್ರಮಕೈಗೊಳ್ಳುವ ಗುರಿಯನ್ನು Stop Food Waste Day ಹೊಂದಿದೆ. ಕಂಪಾಸ್ ಗುಂಪು ಆಹಾರ ವ್ಯರ್ಥ ಕಾರ್ಯಾಚರಣೆಯನ್ನು ನಿಲ್ಲಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಲು ತ್ಯಾಜ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಟ್ರ್ಯಾಕ್ ಮಾಡುವುದು ಮತ್ತು ಕಡಿಮೆ ಮಾಡುವುದು ಹೇಗೆ ಎನ್ನುವುದನ್ನು ಕಲಿಸುತ್ತದೆ.
ಜಗತ್ತು ಎಷ್ಟೇ ಮುಂದುವರೆದಿದ್ದರೂ ಸಹ ಇನ್ನೂ ಹಲವಾರು ದೇಶಗಳಲ್ಲಿ ಜನರು ಆಹಾರವಿಲ್ಲದೇ ಜೀವನ್ಮರಣಗಳ ಮಧ್ಯ ಹೋರಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಾವು ಸೇವಿಸುವ ಆಹಾರ ಪೋಲಾಗದಂತೆ ತಡೆಯುವುದು ಒಂದು ಕ್ರಮ. ಆದ್ರೆ, ನಮ್ಮಲ್ಲಿಂದು ದೊಡ್ಡಸ್ತಿಕೆಗೋ, ಆಡಂಬರಕ್ಕೋ ಅಥವಾ ತಿಳಿವಳಿಕೆಯ ಕೊರೆತೆಯಿಂದಲೋ ಆಹಾರವನ್ನು ಚೆಲ್ಲುವವರೇ ಹೆಚ್ಚು. ಅಹಾರಕ್ಕಾಗಿ ಪರಿತಪಿಸುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಅರೆಹೊಟ್ಟೆಯಲ್ಲೋ, ಖಾಲಿ ಹೊಟ್ಟೆಯಲ್ಲೋ ನೀರು ಕುಡಿದು ಮಲಗುವವರು ಎಷ್ಟೋ. ಇನ್ನೊಂದೆಡೆ ಆಹಾರ ತಿನ್ನುವುದಕ್ಕಿಂತ ವ್ಯರ್ಥ ಮಾಡುವುದೇ ಹೆಚ್ಚಾಗ್ಬಿಟ್ಟಿದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಆಹಾರ ವೇಸ್ಟ್ ಮಾಡುವುದು. ಮದ್ವೆ, ಮುಂಜಿ, ಸಭೆ-ಸಮಾರಂಭಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ಹೆಚ್ಚಾಗಿ ಕಾಣುತ್ತೇವೆ. ಮನಸ್ಸಿಗೆ ಬಂದಷ್ಟು ಹಾಕಿಸಿಕೊಂಡು ಕೊನೆಗೆ ತಿನ್ನಲಾಗದೇ ಬಿಸಾಡುತ್ತಾರೆ.
ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಆಹಾರ ಕೂಡ ಐಷಾರಾಮಿ ಆಗಿ ಮಾರ್ಪಟ್ಟಿದೆ. ಆಹಾರದ ಕೊರತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಆದ್ದರಿಂದ ನಾವು ಆಹಾರ ವ್ಯರ್ಥವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು. ಈ ಆಹಾರ ವೇಸ್ಟ್ ಮಾಡಬಾರದು ಎನ್ನುವ ದೃಷ್ಟಿಯಿಂದ ಜಾಗೃತಿ ಮೂಡಿಸಲು Stop Food Waste Day ಎನ್ನುವ ದಿನವನ್ನು ಪ್ರತಿ ವರ್ಷ ಏಪ್ರಿಲ್ 27ರಂದು ಆಚರಿಸಲಾಗುತ್ತದೆ.
ಕೊನೆಯದಾಗಿ ಹೇಳುವುದೇನೆಂದರೆ ಆಹಾರ ಪೋಲು ಎಂಬುದು ಈಗ ಜಾಗತಿಕ ಸಮಸ್ಯೆಯಾಗಿ ಬೆಳೆದುನಿಂತಿದೆ. ನಾವಿದನ್ನು ಈಗಲೇ ಸರಿ ಪಡಿಸಿಕೊಳ್ಳದೆ ಹೋದರೆ ಮುಂದೆ ಪರಿತಪಿಸಬೇಕಾಗುತ್ತದೆ. ನೀವು ಸಹ ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಜಾಗೃತಿ ಮೂಡಿಸಿ ಸ್ಟಾಪ್ ಫುಡ್ ವೇಸ್ಟೇಜ್ ಡೇ ಆಚರಿಸಿ. ನಿಮ್ಮ ಮನೆಯ ಹಾಗೂ ಸುತ್ತಮುತ್ತಲಿನ ಆಹಾರ ವ್ಯರ್ಥವನ್ನು ಕಡಿಮೆ ಮಾಡಲು ನೀವೂ ಪ್ರಯತ್ನಿಸಿ.
ದಾನೆ ದಾನೆ ಪೇ ಲಿಖಾ ಹೈ ಖಾನೆ ವಾಲೆ ಕಾ ನಾಮ್ ಎನ್ನುವ ಜನಜನಿತ ಮಾತೊಂದು ಹಿಂದಿಯಲ್ಲಿದೆ. ತಿನ್ನುವ ಪ್ರತಿ ಅಗುಳಿನ ಮೇಲೆಯೂ ತಿನ್ನುವನ ಹೆಸರು ಬರೆದಿದೆ ಎನ್ನುವುದು ಇದರ ಅರ್ಥ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಿರೋ ಎನ್ನುವುದು ನಿಮಗೆ ಬಿಟ್ಟಿದ್ದು.
Published On - 8:12 am, Thu, 27 April 23