ಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಅಮ್ಮನ ಮಾತು ಕೇಳುವುದಿಲ್ಲ ಏಕೆ?
ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದನ್ನು ಅರಿಯುತ್ತಿದ್ದಂತೆ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವ ತಾಯಿ(Mother)ಯನ್ನು ಮಕ್ಕಳು ದೊಡ್ಡವರಾದಂತೆ ಮಾತು ಕೇಳುವುದನ್ನೇ ನಿಲ್ಲಿಸಿಬಿಡುತ್ತಾರೆ.
ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದನ್ನು ಅರಿಯುತ್ತಿದ್ದಂತೆ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವ ತಾಯಿ(Mother)ಯನ್ನು ಮಕ್ಕಳು ದೊಡ್ಡವರಾದಂತೆ ಮಾತು ಕೇಳುವುದನ್ನೇ ನಿಲ್ಲಿಸಿಬಿಡುತ್ತಾರೆ. ಜರ್ನಲ್ ನ್ಯೂರೋ ಸೈನ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಮಕ್ಕಳು ಪ್ರೌಢಾವಸ್ಥೆಗೆ ಬಂದ ಕೂಡಲೇ ತನ್ನ ತಾಯಿಯ ಮಾತನ್ನು ಕೇಳುವುದನ್ನೇ ಬಿಟ್ಟುಬಿಡುತ್ತಾರೆ. ಆ ಸಮಯದಲ್ಲಿ ಮಕ್ಕಳು ಅಮ್ಮನನ್ನು ಬಿಟ್ಟು ಸ್ನೇಹಿತರೊಂದಿಗೆ ಕಾಲ ಕಳೆಯಲು ಬಯಸುತ್ತಾರೆ.
ಈ ಸಂಶೋಧನೆಯನ್ನು ಸ್ಟ್ಯಾನ್ಫರ್ಡ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ್ದು, ಮಕ್ಕಳು ಕೆಲವು ಸಂದರ್ಭದಲ್ಲಿ ಸ್ವತಂತ್ರರಾಗಿರಲು ಬಯಸುತ್ತಾರೆ, ಅಮ್ಮನ ಮಾತುಗಳು ಕಿರಿ ಕಿರಿ ಎನಿಸಲು ಶುರುವಾಗುತ್ತದೆ. ಅವರು ಪ್ರಪಂಚಕ್ಕೆ ತೆರೆದುಕೊಳ್ಳಲು ಶುರು ಮಾಡುತ್ತಾರೆ.
ಮಕ್ಕಳು ತಾಯಿಯನ್ನು ದ್ವೇಷಿಸುತ್ತಿದ್ದಾರೆ ಎಂದರ್ಥವಲ್ಲ
ಮಕ್ಕಳು ತಾಯಿ ಮಾತನ್ನು ಆಲಿಸುತ್ತಿಲ್ಲ ಎಂದ ಮಾತ್ರಕ್ಕೆ ಆಕೆಯನ್ನು ದ್ವೇಷಿಸುತ್ತಾರೆ ಎಂದರ್ಥವಲ್ಲ, ಸುಮಾರು 12 ವರ್ಷದವರೆಗೆ ಮಗುವಿಗೆ ತಾಯಿಯೇ ಪ್ರಪಂಚವಾಗಿರುತ್ತದೆ, ಶಾಲೆ ಸೇರಿದಂತೆ ಇತರೆಡೆ ಇತರರೊಂದಿಗೆ ಹೆಚ್ಚು ಬೆರೆತಿರುವಿದಿಲ್ಲ ಅದೇ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಹೆಚ್ಚೆಚ್ಚು ಸ್ನೇಹಿತರಾಗುತ್ತಾರೆ, ಬೇರೆ ಬೇರೆ ವಿಷಯಗಳನ್ನು ಕಲಿಯಲು ಶುರು ಮಾಡುತ್ತಾರೆ ಹೀಗಾಗಿ ಅಮ್ಮನಿಂದ ಕೊಂಚ ಅಂತರ ಕಾಯ್ದುಕೊಂಡಿರುತ್ತಾರೆ.
ಮಕ್ಕಳು ದೊಡ್ಡವರಾದಂತೆ ದೈಹಿಕವಾಗಿ ಸ್ವತಂತ್ರವಾಗತೊಡಗಿದರೂ ಪ್ರೀತಿ, ಸಹಕಾರ, ಸೌಹಾರ್ದತೆಗಳು ಮುಂತಾದ ಧನಾತ್ಮಕ ಗುಣಗಳನ್ನು ಹೊಂದಲು ಸಾಮಾಜೀಕರಣ, ಶಾಲಾ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳ ಮಹತ್ವ, ಮುಂತಾದವುಗಳನ್ನು ಅರಿಯಲು ಮಗು ತಾಯಿಯನ್ನೇ ಅವಲಂಬಿಸುತ್ತಾನೆ.
ತಾಯಿಯೊಂದಿಗೆ ಕಡಿಮೆ ಸಮಯ ಕಳೆಯುತ್ತಾರೆ
ಮೊದಲು ದಿನದ ಇಪ್ಪತ್ತುನಾಲ್ಕೂ ಗಂಟೆಗಳೂ, ನಂತರ ದಿನದ 18 ಗಂಟೆಗಳೂ, ಅದರ ನಂತರ ದಿನದ ಹತ್ತು ಹನ್ನೆರಡು ಗಂಟೆಗಳೂ ಜೊತೆಗೇ ಇರುವುದರಿಂದ ಮಗು ಸಹಜವಾಗಿಯೇ ತಾಯಿಯ ಪ್ರಭಾವಕ್ಕೊಳಗಾಗುತ್ತದೆ.
ಕಾಲ ಬದಲಾಯಿತು. ಶಿಲಾಯುಗದಿಂದ ಈ ಆಧುನಿಕ ಡಿಜಿಟಲೈಜ್ಡ್ ಯುಗದ ವರೆಗೂ ಮನುಷ್ಯ ಪಯಣಿಸಿದ. ಆದರೆ ತಾಯಿಯ ಈ ಪಾತ್ರ ಮಾತ್ರ ಬದಲಾಗಲಿಲ್ಲ. ಅದೇ ಗರ್ಭ, ಅದೇ ಹೊಕ್ಕುಳ ಬಳ್ಳಿ.. ಆದರೂ ಜವಾಬ್ದಾರಿಗಳು ಬದಲಾದವು.
ಜಗತ್ತು ಬದಲಾಗುತ್ತಿದೆ
ಈಗ ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಅದರೊಂದಿಗೇ ತಾಯಿಯ ಸ್ವರೂಪವೂ ಕೂಡ ಬದಲಾಗುತ್ತಿದೆ. ಅದು ಕೇವಲ ಅಡುಗೆ ಮನೆಗೆ ಸೀಮಿತವಾಗುಳಿದಿಲ್ಲ. ಆಕೆ ಈಗ ಸಿದ್ಧಮಾದರಿಯ ತಾಯಿಯಾಗಿಯೂ ಉಳಿದಿಲ್ಲ. ಅವಳ ಪಾತ್ರ ಮೂಲಭೂತವಾಗಿಯೇ ಬದಲಾಗಿದೆ.
ಈಗಿನ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಆಧುನಿಕ ಹಾಗೂ ಪಾಶ್ಚಿಮಾತ್ಯ ಪದ್ಧತಿಯನ್ನು ಅನುಸರಿಸುವುದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಬ್ಬೊಂಟಿಗರಾಗಿ ಬೆಳೆಯುವುದು ಕೂಡ ರೂಢಿಯಾಗುತ್ತಿದೆ. ಮಗುವಿಗೆ ಒಮ್ಮೊಮ್ಮೆ ರಾತ್ರಿಯಲ್ಲಿ ಭಯವಾದರೂ ಅದು ಅದನ್ನು ಹತ್ತಿಕ್ಕಿಕೊಂಡು ಮಲಗಲು ಕಲಿಯುತ್ತದೆ.
ತಾಯಿ ಪ್ರೀತಿ ಅರಿಯುವಷ್ಟು ದೊಡ್ಡವರಾಗಿರುವುದಿಲ್ಲ
ಇಂಥ ಸಮಯದಲ್ಲಿ ಅದು ತಾಯಿಯ ಮಡಿಲನ್ನು ಬಯಸುವುದು ಸಹಜ. ತಾಯಿಯಾದವಳು ಮಗುವಿನ ಬೆಳವಣಿಗೆ, ಪಾಲನೆ ಪೋಷಣೆಗೆ ಪ್ರಪ್ರಥಮ ಆದ್ಯತೆ ಕೊಟ್ಟರೂ, ಆಕೆ ಹೃದಯದಲ್ಲಿ ಪ್ರೀತಿಯ ಸಾಗರವನ್ನೇ ಹೊಂದಿದ್ದರೂ ಅದನ್ನು ತಿಳಿಯುವಷ್ಟು ಅದು ಪ್ರಬುದ್ಧವಾಗಿರುವುದಿಲ್ಲ.
ಪೋಷಕರು ಎಂದಿಗೂ ಮಕ್ಕಳನ್ನು ಅವರ ಮನಸ್ಸಿಗೆ ನೋವಾಗುವ ಹಾಗೆ ಛೇಡಿಸುವುದು, ಆಡಿಕೊಳ್ಳುವುದು, ಇನ್ನೊಬ್ಬರ ಮುಂದೆ ನಿಂದಿಸುವುದು ಮಾಡಬೇಡಿ. ಇದರಿಂದ ಮಕ್ಕಳು ಮುಂದಿನ ದಿನಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲೂಬಹುದು.
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ