Summer Tips : ಎಸಿ ಬೇಕಿಲ್ಲ, ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ಇಲ್ಲಿದೆ ನೈಸರ್ಗಿಕ ಮಾರ್ಗಗಳು
ಸೂರ್ಯನ ಕಿರಣಗಳು ನೆತ್ತಿಯನ್ನು ಸುಡುತ್ತಿದೆ, ಬಿಸಿಲಿನ ಧಗೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊರಗೆ ಓಡಾಡಲು ಬಿಡಿ, ಮನೆಯೊಳಗೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ಎಸಿ ಇದ್ದವರೂ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಾರೆ. ಆದರೆ ಏರ್ ಕಂಡೀಶನರ್ ಬಳಕೆ ಮಾಡದೇನೆ ಮನೆಯನ್ನು ತಂಪಾಗಿಸಿಕೊಳ್ಳಬಹುದು. ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ತಾಜಾ ಹಾಗೂ ತಂಪಾಗಿಸಿ ನೆಮ್ಮದಿಯಾಗಿ ನಿದ್ರಿಸಲು ಈ ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಇಷ್ಟು ದಿನ ಚಳಿ ಚಳಿ ಎನ್ನುತ್ತಿದ್ದವರು ಏನು ಬಿಸಿಲು ಹೊರಗೆ ಹೋಗಲು ಮನೆಯೊಳಗೆ ಇರಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೌದು, ಈ ಬಾರಿ ಬಿಸಿಲಿಗೆ ತೀವ್ರತೆ ಹೆಚ್ಚಿದೆ. ಈ ಬಿಸಿಗೆ ಫ್ಯಾನ್ ಹಾಕಿದರೂ ಏನು ಪ್ರಯೋಜನವಿಲ್ಲ. ಏನೇ ಮಾಡಿದರೂ ಉರಿ ಸೆಕೆಯನ್ನು ತಡೆಯಲು ಆಗುತ್ತಿಲ್ಲ. ಮನೆಯೊಳಗೇ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಹೀಗಾಗಿ ಹೆಚ್ಚಿನವರು ಮನೆಗಳಿಗೆ ಎಸಿ (Air Conditioner) ಅಳವಡಿಕೆ ಮಾಡುತ್ತಿದ್ದಾರೆ. ಆದರೆ ಆರ್ಥಿಕವಾಗಿ ಸಶಕ್ತರಲ್ಲದವರು ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಬಹುದು. ಒಂದು ರೂಪಾಯಿ ಖರ್ಚು ಮಾಡದೇ ಬಜೆಟ್ ಸ್ನೇಹಿಯಾಗಿ ಮನೆಯನ್ನು ತಂಪಾಗಿರಿಸಲು ಈ ವಿಧಾನ ಅಳವಡಿಸಿಕೊಳ್ಳಬಹುದು.
- ಬಿದಿರಿನ ಪರದೆಗಳು ಅಥವಾ ಖುಸ್ ಮ್ಯಾಟ್‌ಗಳಿಗೆ ಆದ್ಯತೆ ನೀಡಿ : ಶಾಖವನ್ನು ಹಿಡಿದಿಟ್ಟುಕೊಳ್ಳುವ ಪರದೆಗಳನ್ನು ತೆಗೆದುಹಾಕಿ ಬಿದಿರಿನ ಬ್ಲೈಂಡ್‌ಗಳು ಅಥವಾ ಖುಸ್ ಮ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಮನೆಯನ್ನು ತಂಪಾಗಿರಿಸಲು ಖುಸ್ ಮ್ಯಾಟ್‌ಗಳ ಮೇಲೆ ನೀರನ್ನು ಹಾಕಿ, ಮನೆಯೊಳಗೆ ಬರುವ ಗಾಳಿಯನ್ನು ನೈಸರ್ಗಿಕವಾಗಿ ತಂಪಾಗಿಸುವುದರೊಂದಿಗೆ ಮಣ್ಣಿನ ಪರಿಮಳವನ್ನು ಹೊರಸೂಸುತ್ತವೆ.
- ಸೂಕ್ತ ಲೈಟ್‌ಗಳನ್ನು ಬಳಕೆ ಇರಲಿ : ಮನೆಯಲ್ಲಿ ಬಳಕೆ ಮಾಡುವ ಬಲ್ಬ್ ಅಥವಾ ಲೈಟ್‌ಗಳು ಹೆಚ್ಚಿನ ಶಾಖವನ್ನು ಹೊರಸೂಸುತ್ತವೆ. ಈ ಲೈಟ್ ಗಳು ಬೆಳಕು ನೀಡುವ ಬದಲಿಗೆ ಮನೆಯ ಒಳ ವಾತಾವರಣವನ್ನು ಹೆಚ್ಚು ಬಿಸಿಯಾಗಿಸುತ್ತದೆ. ಹೀಗಾಗಿ ಎಲ್ ಇಡಿ ಬಲ್ಬ್‌ಗಳನ್ನು ಬಳಕೆ ಮಾಡುವುದು ಉತ್ತಮ. ಅದಲ್ಲದೇ ಹೆಚ್ಚು ಶಾಖವನ್ನು ಹೊರಸೂಸುವ ವಿದ್ಯುತ್ ಉಪಕರಣಗಳ ಬಳಕೆ ಆದಷ್ಟು ತಪ್ಪಿಸಿ, ಈ ಮೂಲಕ ಮನೆಯನ್ನು ತಂಪಾಗಿಸುವತ್ತ ಗಮನ ಕೊಡಿ.
- ನೈಸರ್ಗಿಕ ಗಾಳಿ ಮನೆಯೊಳಗೆ ಬರುವಂತೆ ಇರಲಿ : ತಾಜಾ ಗಾಳಿಯು ಒಳಗೆ ಬರುವಂತೆ ಮಾಡಲು ಬೆಳಿಗ್ಗೆ ಬೇಗನೇ ಕಿಟಕಿಯನ್ನು ತೆರೆಯಿರಿ. ಸಂಜೆಯ ವೇಳೆ 7 ರಿಂದ ಒಂಬತ್ತು ಗಂಟೆಯವರೆಗೆ ಕಿಟಕಿಗಳನ್ನು ತೆರೆದಿರಿ. ಗರಿಷ್ಠ ಶಾಖವಿರುವ ಸಮಯದಲ್ಲಿ ,ಬಿಸಿ ಗಾಳಿಯು ಒಳಗೆ ಬರದಂತೆ ಕಿಟಕಿಗಳನ್ನು ಮುಚ್ಚಿಡಿ. ಈ ರೀತಿ ಸಲಹೆ ಪಾಲಿಸಿದ್ರೆ ಮನೆಯನ್ನು ತಂಪಾಗಿರಿಸಿಕೊಳ್ಳಬಹುದು.
- ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಬಳಸಿ : ಬೇಸಿಗೆಯಲ್ಲಿ ಸುಡುವ ಸೂರ್ಯನ ಬಿಸಿಲಿನಲ್ಲಿ ಕಪ್ಪು ಬಣ್ಣದ ಬಟ್ಟೆ, ಬೆಡ್ ಶೀಟ್ ಬಳಕೆ ಆದಷ್ಟು ತಪ್ಪಿಸಿ. ತಿಳಿ ಬಣ್ಣದ ಹತ್ತಿ ಬೆಡ್‌ಶೀಟ್‌ಗಳು, ಕುಶನ್ ಕವರ್‌ಗಳು ಮತ್ತು ಪರದೆಗಳಂತಹ ಕಡಿಮೆ ಶಾಖ-ಹೀರಿಕೊಳ್ಳುವ ಬಟ್ಟೆಗಳನ್ನು ಆರಿಸಿಕೊಳ್ಳಿ. ಇದು ಶಾಖವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಈ ಮೂಲಕ ಮನೆಯನ್ನು ತಾಜಾ ಹಾಗೂ ಗಾಳಿಯಾಡುವಂತೆ ಮಾಡುತ್ತದೆ.
- ನೈಸರ್ಗಿಕ ತಂಪಾಗಿಸುವ ಒಳಾಂಗಣ ಸಸ್ಯಗಳನ್ನು ಬೆಳೆಸಿ: ನೀವು ಮನೆಯ ಒಳಾಂಗಣ ಅಥವಾ ಬಾಲ್ಕನಿಯಲ್ಲಿ ಸಣ್ಣ ಪುಟ್ಟ ಸಸ್ಯಗಳನ್ನು ಇಟ್ಟಿರುವುದನ್ನು ನೋಡಿರಬಹುದು. ಅಲೋವೆರಾ, ಅಡಿಕೆ, ತಾಳೆ ಗಿಡಗಳು, ಜರಿಗಿಡ, ಮನಿ ಪ್ಲಾಂಟ್ ನಂತಹ ಸಸ್ಯಗಳ ಗಾಳಿಯನ್ನು ಶುದ್ಧೀಕರಿಸುತ್ತದೆ. ಈ ಸಸ್ಯಗಳು ಗಾಳಿಯಲ್ಲಿನ ವಿಷವನ್ನು ಹೀರಿಕೊಂಡು ಮನೆಯನ್ನು ತಂಪಾಗಿರಿಸುತ್ತದೆ. ಹೀಗಾಗಿ ಮನೆಯ ಬಾಲ್ಕನಿಯಲ್ಲಿ ಹಾಗೂ ಹೊರಭಾಗದಲ್ಲಿ ವಿವಿಧ ಹೂಗಿಡ, ಬಳ್ಳಿಗಳನ್ನು ಬೆಳೆಸಿ ಈ ಮೂಲಕ ನೈಸರ್ಗಿಕವಾಗಿ ತಂಪಾದ ವಾತಾವರಣ ಸೃಷ್ಟಿಸಿಕೊಳ್ಳಿ.
- ಮಣ್ಣಿನ ಮಡಕೆಗಳನ್ನು ಬಳಸಿ : ಬೇಸಿಗೆಯಲ್ಲಿ ಮಣ್ಣಿನ ಮಡಕೆಗಳಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಮಣ್ಣಿನ ಮಡಕೆಗಳಲ್ಲಿ ನೀರನ್ನು ಸಂಗ್ರಹಿಸುವುದರಿಂದ ಅದು ನೈಸರ್ಗಿಕವಾಗಿ ತಂಪಾಗಿರುತ್ತದೆ. ಹೀಗಾಗಿ ರೆಫ್ರಿಜರೇಟರ್ ಬಳಸುವ ಅಗತ್ಯವಿಲ್ಲ. ಅದಲ್ಲದೇ, ಕಿಟಕಿಗಳು ಅಥವಾ ಬಾಲ್ಕನಿಗಳ ಬಳಿ ನೀರು ತುಂಬಿದ ಮಣ್ಣಿನ ಮಡಕೆಗಳನ್ನು ಇಡುವುದರಿಂದ ಸುತ್ತಮುತ್ತಲಿನ ಗಾಳಿಯನ್ನು ತಂಪಾಗಿಸಿ, ಹಿತವಾದ ಅನುಭವವನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ