Anger Management : ಯಾಕೆ ಅವನಿಗೆ ಸಿಟ್ಟು ಬರಸ್ತೀಯಾ?
‘ಎಂಟು ಪ್ರಶ್ನೆಗಳ ಪೈಕಿ ನಾಲ್ಕು ಪ್ರಶ್ನೆಗಳಿಗೆ ಹೌದು ಎನ್ನುವುದು ನಿಮ್ಮ ಉತ್ತರವಾದರೆ, ನಿಮ್ಮ ವ್ಯಕ್ತಿತ್ವಕ್ಕೆ ನೀವು ಮಾಲೀಕರಲ್ಲ ಎಂದರ್ಥ! ಜಗದೀಶನಾಡುವ ಗೊಂಬೆಯಾಟವಯ್ಯಾ ಎಂದ ಹಾಗೆ ನಿಮ್ಮನ್ನು ಯಾರುಯಾರೋ ತಮಗೆ ಬೇಕಾದ ಹಾಗೆ ಆಡಿಸುತಿದ್ದಾರೆ ಎಂದರ್ಥ. ಅದನ್ನು ಗುರುತಿಸಿ, ನೀವು ಯಾಕೆ ಅಷ್ಟರ ಮಟ್ಟಿಗೆ ಪರಾವಲಂಬಿಯಾಗಿರಬಹುದು ಎನ್ನುವ ಕಾರಣ ಕಂಡುಕೊಂಡರೆ, ಅವರು ನಿಮ್ಮ ಮೇಲೆ ಹೊಂದಿರುವ ನಿಯಂತ್ರಣವನ್ನು ಕಡಿಮೆ ಮಾಡಿಕೊಂಡು ನಿಮ್ಮತನವನ್ನು ಪ್ರತಿಪಾದಿಸಿಕೊಳ್ಳಬಹುದು.‘ ಆರ್. ಶ್ರೀನಾಗೇಶ್
ಆತ್ಮನಿರೀಕ್ಷೆ ಎಂದರೆ ನಿಮ್ಮಲ್ಲಿಯ ಕೌಶಲಗಳು, ಬುದ್ಧಿವಂತಿಕೆ ಹಾಗೂ ಕೊರತೆಗಳನ್ನು ಗುರುತಿಸುವುದು. ಆತ್ಮಮೌಲ್ಯ ಎಂದರೆ ನಿಮ್ಮ ವ್ಯಕ್ತಿತ್ವಕ್ಕೆ ನೀವೇ ಒಂದು ಬೆಲೆ ಕಟ್ಟುವುದು. ನಿಮ್ಮ ವ್ಯಕ್ತಿತ್ವಕ್ಕೆ ನೀವು ಬೆಲೆ ಕಟ್ಟಿದಾಗ ಅನ್ಯರ ವ್ಯಕ್ತಿತ್ವಕ್ಕೂ ಬೆಲೆ ಕಟ್ಟುವಿರಿ. ಆಗ ಇತರರ ಪ್ರಚೋದನೆಯ ನಡುವೆಯೂ ನಿಮ್ಮ ಸಹನೆಯನ್ನು ತಹಬಂದಿಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ.
ಗಂಡ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ ಎಂದೋ, ಚೀರಾಡಿ ಅಸಭ್ಯವಾಗಿ ನಿಂದಿಸಿದ ಎಂದೋ ಸೊಸೆ ತನ್ನ ಅತ್ತೆಗೆ ದೂರಿದಾಗ ಅನೇಕ ಅತ್ತೆಯರು ಕೇಳುವ ಪ್ರಶ್ನೆ, ‘ನೀನು ಅವನಿಗೆ ಸಿಟ್ಟು ಬರಸೋದು ಯಾಕೆ?’
‘ಅಯ್ಯೋ, ನಾನೆಷ್ಟು ಅನುಭವಿಸಿದ್ದೀನಿ, ಗೊತ್ತಾ? ಅವರಪ್ಪ ನನ್ನನ್ನು ಅದೆಷ್ಟು ಹೊಡೆದಿದ್ದಾರೆ ಅಂತ ನನಗೇ ಗೊತ್ತು. ನೀನೂ ಹಾಗೇ ಅನುಭವಿಸಬೇಕು, ಅಷ್ಟೆ.’ ಎಂದು ಸೊಸೆಗೇ ಬುದ್ಧಿ ಹೇಳುವ ಅತ್ತೆಯರೂ ಇದ್ದಾರೆ.
‘ಅಂಕಲ್, ನನಗೆ ಮೊದಲಿನಿಂದಲೂ ಸಿಟ್ಟು ತಡೆಯಕ್ಕಾಗಲ್ಲ. ಕೈಗೆ ಸಿಕ್ಕಿದ್ದನ್ನ ಎಸೆದು ಬಿಡ್ತೇನಿ. ನಮ್ಮ ಅಪ್ಪ ಅಮ್ಮನ ಮನೆಯಲ್ಲಿದ್ದಾಗಲೂ ಅಷ್ಟೆ. ಅವರು ಅದಕ್ಕೆ ಹೊಂದಿಕೊಂಡಿದ್ದಾರೆ. ಗಂಡನ ಮನೆಯವರು ಅಷ್ಟಕ್ಕೇ ಬೀದಿ ರಂಪ ಮಾಡ್ತಾರೆ. ಸ್ವಲ್ಪ ಹೊತ್ತು ಬಿಟ್ಟರೆ, ನಾನು ಸರಿ ಹೋಗಿಬಿಡ್ತೀನಿ. ಬಿಡಲ್ಲ. ಅದಕ್ಕೆ ದೊಡ್ಡ ಯುದ್ಧಗಳೇ ನಡೆದು ಹೋಗತ್ತೆ ಮನೆಯಲ್ಲಿ.’ ಒಬ್ಬ ಸೊಸೆ ಹೇಳಿಕೊಂಡ ಸ್ವಪರಿಚಯ!
ದೂರ್ವಾಸನೇ ಇವನು ಎಂದು ಮಗುವಿನ ಕೋಪದ ವರ್ತನೆಯನ್ನು ಹಲವು ಪೋಷಕರು ವರ್ಣಿಸುವುದೂ ಉಂಟು. ಕೋಪ ಮತ್ತು ಅಳು ಎರಡೂ ಭಾವುಕತೆಯ ಅತಿರೇಕದ ಮುಖಗಳು ಎನ್ನಬಹುದು. ಮೊದಲನೆಯದು ಶಕ್ತಿ ಪ್ರದರ್ಶನವಾದರೆ, ಎರಡನೆಯದು ಅಸಹಾಯಕತೆಯ ಪ್ರದರ್ಶನ. ಎರಡೂ ಗುಣಗಳು ಆನುವಂಶಿಕವಾಗಿ ಮೂಡಬಹುದು, ಪರಿಸ್ಥಿತಿ ಅದನ್ನು ಪ್ರೇರೇಪಿಸಬಹುದು. ಕೋಪ ಮನೆಮಂದಿಗೆ ತೊಂದರೆ ಉಂಟು ಮಾಡುವುದು. ಅಳು ಸ್ವಂತ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು. ಹೆಂಡತಿಯ ಮೇಲೆ ಹಲ್ಲೆ ಎಸಗುತ್ತಿದ್ದ ಪತಿಯೊಬ್ಬನನ್ನು ಆಪ್ತಸಮಾಲೋಚಕಿ ಯಾಕೆ ಹೀಗೆ ಮಾಡುತ್ತೀಯ ಎಂದು ಕೇಳಿದಾಗ, ‘ಅವಳು ನನ್ನನ್ನು ಅಷ್ಟು ಸಿಟ್ಟಿಗೆಬ್ಬಿಸುತ್ತಾಳೆ’ ಎಂದು ಗಂಡ ಉತ್ತರಿಸುವನು.
‘ಆಕೆ ಅಷ್ಟೊಂದು ಶಕ್ತಿವಂತಳಾ’ ಎಂದು ಆಪ್ತಸಮಾಲೋಚಕಿ ಮರುಪ್ರಶ್ನೆ ಹಾಕಿದಾಗ ಅವನಿಗೆ ಧಿಗ್ಭ್ರಮೆಯಾಗುವುದು. ಹೊಡೆದು ಅವಳನ್ನು ಸುಮ್ಮನಾಗಿಸುತ್ತಿದ್ದ ತನ್ನ ಶಕ್ತಿ ಕುರಿತು ಹೆಮ್ಮೆ ಪಡುತ್ತಿದ್ದ ಅವನಿಗೆ ಅವಳೇ ಹೆಚ್ಚು ಶಕ್ತಿವಂತಳು ಎನ್ನುವ ಸಂದೇಶ ದೊರಕಿದಾಗ ಅವನ ಅಹಮಿಕೆಗೆ ದೊಡ್ಡ ಆಘಾತವಾಗುತ್ತದೆ. ‘ನಿನ್ನ ಮನಸ್ಸನ್ನು ನಿನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ಶಕ್ತಿ ನಿನಗೆ ಇಲ್ಲ ಎಂದು ನೀನೇ ಒಪ್ಪಿಕೊಂಡ ಹಾಗೆ ಆಯಿತಲ್ಲವೇ? ಅವಳು ನಿನ್ನನ್ನು ಸಿಟಿಗೆಬ್ಬಿಸಬಹುದು. ಆದರೆ ಸಿಟ್ಟು ಬಂದಾಗ ನಿನ್ನ ನಡೆವಳಿಕೆ ಹೇಗಿರಬೇಕು ಎನ್ನುವುದು ನಿನ್ನ ನಿಯಂತ್ರಣದಲ್ಲಿರುತ್ತದೆ. ಸಿಟ್ಟು ಬಂದಾಗ ನಿನ್ನನ್ನು ನೀನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾರೆ ಎಂದರೆ, ನಿಜವಾಗಿಯೂ ನೀನು ಆಂತರಿಕವಾಗಿ ತುಂಬ ದುರ್ಬಲ ವ್ಯಕ್ತಿ.’ -ಇದು ಆ ಆಪ್ತಸಮಾಲೋಚಕಿ ಅವನಿಗೆ ಹೇಳಿದ ಮಾತುಗಳು.
ಅನೇಕ ವೇಳೆ ಮಕ್ಕಳ ನಡೆವಳಿಕೆಗಳನ್ನು ಕುರಿತು ನಾವು ಹಿರಿಯರು ಮಾತನಾಡಿಕೊಳ್ಳುವಾಗ ನಮಗೇ ಅರಿವಿಲ್ಲದೆ ಆ ನಡೆವಳಿಕೆಯನ್ನು ಪ್ರೇರೇಪಿಸುತ್ತೇವೆ. ಅಯ್ಯೋ, ಅವನಿಗೆ ಸಿಟ್ಟು ಬಂದರೆ ಹಿಡಿಯಕ್ಕಾಗಲ್ಲ. ಅವನು ರಚ್ಚೆ ಹಿಡಿದರೆ ಕೇಳಿದ್ದು ಸಿಗೋತನಕ ಸುಮ್ಮನಾಗೊಲ್ಲ. ಸಿಟ್ಟು ಮಾಡಿಕೊಂಡಾಗ ಅವನ ಮುಖ ನೋಡಬೇಕು, ಎಷ್ಟು ಚೆಂದ ಕಾಣತ್ತೆ ಗೊತ್ತಾ? ಇಂತಹ ಮಾತುಗಳನ್ನು ಮಗುವಿನ ಎದುರಿಗೆ ನಾವು ಮಾತನಾಡಿದರೆ, ಆ ನಡೆವಳಿಕೆ ಸರಿ ಎನ್ನುವ ಉತ್ತೇಜನ ಮಗುವಿಗೆ ಸಿಗುವುದು. ಅನುವಂಶಿಕವಾಗಿ ಬಂದಿದ್ದರೂ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಪ್ರೇರೇಪಿಸುವುದು ಸಾಧ್ಯವಿದೆ. ಮನೆಯ ‘ಯಜಮಾನ’ ಮುಂಗೋಪಿಯಾಗಿದ್ದರೆ, ಮಗುವಿನ ಮೇಲೆ ಅದು ಖಂಡಿತ ಪರಿಣಾಮ ಬೀರುವುದು. ಆತ ಹೆಂಡತಿಯ ಮೇಲೆ, ಮಕ್ಕಳ ಮೇಲೆ ಮೇಲಿಂದ ಮೇಲೆ ದೈಹಿಕ ಹಲ್ಲೆ ಎಸಗುತ್ತಿದ್ದರೆ, ಇದು ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವುದು. ಇಂತಹ ಮಕ್ಕಳು ಮುಂದೆ ಕಾನೂನಿನ ಜೊತೆ ಸಂಘರ್ಷಕ್ಕೆ ಸಿಗುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು.
ಆ ರೀತಿ ಬೆಳೆದವನೊಬ್ಬ ದೊಡ್ಡವನಾಗುತ್ತ ಸ್ವಯಂ ಹಲ್ಲೆಕೋರನಾಗಿ ಪರಿವರ್ತಿತನಾದುದನ್ನು ಕಂಡಿದ್ದೇನೆ. ಕೆಲವು ಮಕ್ಕಳು ಒಂದು ಹಂತದವರೆಗೆ ತಂದೆಯ ಹಲ್ಲೆಯನ್ನು ಸಹಿಸಿಕೊಳ್ಳುವರು, ಅವರು ಒಂದು ವಯಸ್ಸಿಗೆ ಬಂದ ಮೇಲೆ ತಂದೆಯ ಮೇಲೆ ಅದೇ ಅಸ್ತ್ರವನ್ನು ಬಳಸುವರು. ಆದರೆ ಪರಿಣಾಮ ಏನಾಗಬಹುದು ಎಂದು ಯೋಚಿಸುವ ವ್ಯವಧಾನ ಇರದವರಿಗೆ ಇಷ್ಟೆಲ್ಲ ದೂರಗಾಮೀ ಚಿಂತನೆಯೂ ಬರುವುದಿಲ್ಲ! ನನ್ನ ಮನೆಯಲ್ಲಿ ನಿನಗೆ ಜಾಗವಿಲ್ಲ ಎಂದು ತಡರಾತ್ರಿಯಲ್ಲಿ ಹೆಂಡತಿಯನ್ನು ಹೊರಹಾಕಿದ ಗಂಡಂದಿರಿದ್ದಾರೆ, ಸೊಸೆಯನ್ನು ಓಡಿಸಿದ ಮಾವಂದಿರಿದ್ದಾರೆ, ಮಗಳಿಗೆ ಬಾಗಿಲು ತೆರೆಯದ ಅಪ್ಪಂದಿರೂ ಇದ್ದಾರೆ. ಪ್ರತಿ ಘಟನೆಯನ್ನು ಪ್ರತ್ಯೇಕವಾಗಿ ವಿಶ್ಲೇಷಿಸದ ಹೊರತು ಅಂತಹ ಪರಿಸ್ಥಿತಿಗೆ ನಿಜವಾದ ಕಾರಣಕರ್ತರು ಯಾರು ಎಂದು ನಿರ್ಧರಿಸುವುದು ಕಷ್ಟ. ಅಂದಮೇಲೆ ಇವರು ತಪ್ಪಿತಸ್ಥರು ಎಂಬ ನಿರ್ಣಯಕ್ಕೆ ಬರುವುದೂ ಕಷ್ಟವೇ.
ಕಾನೂನಿನ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಈ ರೀತಿ ಏಕಾಏಕಿ ತಡರಾತ್ರಿ ಮನೆಯಿಂದ ಹೊರಗೆ ದೂಡುವ ಅಧಿಕಾರ ಯಾರಿಗೂ ಇಲ್ಲ. ಹೆಂಡತಿಗೆ ತನ್ನ ಗಂಡನ ಮನೆಯಲ್ಲಿರುವ ಹಕ್ಕಿದೆ. ಮಗಳಿಗೂ ತನ್ನ ಅಪ್ಪನ ಮನೆಯಲ್ಲಿರುವ ಹಕ್ಕಿದೆ. ಆ ಹಕ್ಕನ್ನು ಕಸಿಯಬೇಕಾದರೆ ಪ್ರಬಲ ಕಾರಣಗಳಿರಬೇಕೇ ಹೊರತು, ತನ್ನ ಅಹಮಿಕೆಯ ಹಿನ್ನೆಲೆಯಲ್ಲಿ ಹಾಗೆ ಮಾಡಲು ಬರದು ಎನ್ನುವುದನ್ನು ಮಾತ್ರ ನಾನು ಈ ಹಂತದಲ್ಲಿ ಪ್ರತಿಪಾದಿಸುತ್ತಿದ್ದೇನೆ. ಹಾಗೆಯೇ ತಂದೆಯ ಮನೆಯಲ್ಲಿ ಅದಕ್ಕೆ ಉತ್ತೇಜನ ಅಥವಾ ಬೆಂಬಲ ಸಿಗುತ್ತಿತ್ತು ಎನ್ನುವ ಕಾರಣಕ್ಕೆ ಸೊಸೆ ಅತ್ತೆಮನೆಯಲ್ಲಿಯೂ ಅದೇ ರೀತಿಯ ಉತ್ತೇಜನ ಅಥವ ಬೆಂಬಲವನ್ನು ನಿರೀಕ್ಷಿಸಲಾಗದು. ಈಗ ಮುಖ್ಯ ವಿಷಯಕ್ಕೆ ಬರೋಣ.
ಸಿಟ್ಟು ಬಂದಾಗ ನಾವು ಏನು ಮಾಡುತ್ತೇವೆಯೋ, ನಮಗೇ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ನಾವು ನಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಕೇ? ನಿಯಂತ್ರಣಾ ಕೇಂದ್ರ ಆಂತರಿಕವಾಗಿದೆಯೋ, ಹೊರಗೆ ಇದೆಯೋ ಎಂದು ಅರಿಯಬಹುದು. ನಿಮ್ಮ ವ್ಯಕ್ತಿತ್ವವನ್ನು ನಿಯಂತ್ರಿಸುವವರು ಯಾರು? ಈ ಪ್ರಶ್ನೆಗೆ ಉತ್ತರವನ್ನು ಕೆಲವು ಪ್ರಶ್ನೆಗಳ ಮೂಲಕ ನೀವೇ ಪರೀಕ್ಷೆ ಮಾಡಿಕೊಳ್ಳಬಹುದು.
• ಬೇರೆಯವರ ಹೇಳಿಕೆಗಳನ್ನು ಆಧರಿಸಿ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಾ?
• ಅನೇಕರಿಗೆ ನಿಮ್ಮನ್ನು ಕಂಡರೆ ಆಗದು ಎಂದು ನಿಮಗೆ ಭಾಸವಾಗುತ್ತದೆಯೇ?
• ನಿಮ್ಮ ಅದೃಷ್ಟ ಚೆನ್ನಾಗಿಲ್ಲ ಎಂಬ ಹತಾಶ ಭಾವನೆ ಪದೇಪದೆ ಬರುತ್ತದೆಯೇ?
• ನನ್ನ ಬಾಲ್ಯ ಉತ್ತಮವಾಗಿರಲಿಲ್ಲ, ನಾನೇನು ಮಾಡಕ್ಕೆ ಆಗತ್ತೆ ಎಂದು ನಿಮ್ಮ ವೈಫಲ್ಯವನ್ನು ಸಮರ್ಥಿಸಿಕೊಳ್ಳುವಿರಾ?
• ಪರರ ಏಳಿಗೆ ಕಂಡರೆ ಅಸೂಯಾ ಭಾವನೆಯಿಂದ ಅವರ ಮೇಲೆ ಸಿಟ್ಟು ಬರುವುದೇ?
• ದೇವರು ನನಗೆ ತುಂಬ ಅನ್ಯಾಯ ಮಾಡಿದ ಎಂದು ನಿಮಗೆ ಆಗಾಗ ಅನಿಸುವುದೇ?
• ಹಣಬಲ ಅಥವ ಗಾಡ್‍ಫಾದರ್ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ನಂಬುವಿರಾ?
• ನನ್ನ ಮಾತಿಗೆ ಯಾರು ಬೆಲೆ ಕೊಡ್ತಾರೆ ಎಂಬ ಹತಾಶ ಭಾವನೆ ನಿಮ್ಮನ್ನು ಕಾಡುವುದೇ?
ಮೇಲಿನ 8 ಪ್ರಶ್ನೆಗಳ ಪೈಕಿ ನಾಲ್ಕು ಪ್ರಶ್ನೆಗಳಿಗೆ ಹೌದು ಎನ್ನುವುದು ನಿಮ್ಮ ಉತ್ತರವಾದರೆ, ನಿಮ್ಮ ವ್ಯಕ್ತಿತ್ವಕ್ಕೆ ನೀವು ಮಾಲೀಕರಲ್ಲ ಎಂದರ್ಥ! ಜಗದೀಶನಾಡುವ ಗೊಂಬೆಯಾಟವಯ್ಯಾ ಎಂದ ಹಾಗೆ ನಿಮ್ಮನ್ನು ಯಾರುಯಾರೋ ತಮಗೆ ಬೇಕಾದ ಹಾಗೆ ಆಡಿಸುತ್ತಿದ್ದಾರೆ ಎಂದರ್ಥ. ಅದನ್ನು ಗುರುತಿಸಿ, ನೀವು ಯಾಕೆ ಅಷ್ಟರ ಮಟ್ಟಿಗೆ ಪರಾವಲಂಬಿಯಾಗಿರಬಹುದು ಎನ್ನುವ ಕಾರಣ ಕಂಡುಕೊಂಡರೆ, ಅವರು ನಿಮ್ಮ ಮೇಲೆ ಹೊಂದಿರುವ ನಿಯಂತ್ರಣವನ್ನು ಕಡಿಮೆ ಮಾಡಿಕೊಂಡು ನಿಮ್ಮತನವನ್ನು ಪ್ರತಿಪಾದಿಸಿಕೊಳ್ಳಬಹುದು.
ಆರಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಅತ್ಯಂತ ತುರ್ತಾಗಿ ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ನಿಯಂತ್ರಣಕ್ಕೆ ತಂದುಕೊಳ್ಳಬೇಕು. ವಿ. ಕೃ. ಗೋಕಾಕ ತಮ್ಮ ಒಂದು ಪದ್ಯದಲ್ಲಿ ಬರೆದ ಹಾಗೆ ‘ಐ ಆ್ಯಮ್ ದಿ ಮಾನಾರ್ಕ್ ಆಫ್ ಆಲ್ ಐ ಸರ್ವೇ’ ಎಂದು ಘೋಷಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು. ಆತ್ಮಾವಲೋಕನ ಆತ್ಮನಿರೀಕ್ಷೆ ಮತ್ತು ಆತ್ಮಮೌಲ್ಯಗಳು ಇದಕ್ಕೆ ನೆರವಾಗುತ್ತವೆ. ಆತ್ಮಾವಲೋಕನ ಎಂದರೆ ನಿಮ್ಮನ್ನು ನೀವು ಪರಾಮರ್ಶಿಸಿ ನೋಡಿಕೊಳ್ಳುವುದು. ಯಾರ ಪ್ರಭಾವವೂ ಇಲ್ಲದೆ, ಸ್ವತಂತ್ರವಾಗಿ.
ಆತ್ಮನಿರೀಕ್ಷೆ ಎಂದರೆ ನಿಮ್ಮಲ್ಲಿಯ ಕೌಶಲಗಳು, ಬುದ್ಧಿವಂತಿಕೆ ಹಾಗೂ ಕೊರತೆಗಳನ್ನು ಗುರುತಿಸುವುದು. ಆತ್ಮಮೌಲ್ಯ ಎಂದರೆ ನಿಮ್ಮ ವ್ಯಕ್ತಿತ್ವಕ್ಕೆ ನೀವೇ ಒಂದು ಬೆಲೆ ಕಟ್ಟುವುದು. ನಿಮ್ಮ ವ್ಯಕ್ತಿತ್ವಕ್ಕೆ ನೀವು ಬೆಲೆ ಕಟ್ಟಿದಾಗ ಅನ್ಯರ ವ್ಯಕ್ತಿತ್ವಕ್ಕೂ ಬೆಲೆ ಕಟ್ಟುವಿರಿ. ಆಗ ಇತರರ ಪ್ರಚೋದನೆಯ ನಡುವೆಯೂ ನಿಮ್ಮ ಸಹನೆಯನ್ನು ತಹಬಂದಿಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ.
ಮನುಷ್ಯ ಸಂಘಜೀವಿ. ಒಬ್ಬನೇ ಖಂಡಿತ ಬಾಳಲಾರ. ಆದುದರಿಂದ ನಮ್ಮ ಜೀವನದಲ್ಲಿ ಅನ್ಯರು ಅನಿವಾರ್ಯವಾಗುತ್ತಾರೆ. ಇವರೊಡನೆ ವ್ಯವಹರಿಸುವಾಗ ನಿರೀಕ್ಷೆಗಳು, ಭ್ರಮನಿರಸನಗಳು ಎರಡೂ ಎದುರಾಗುತ್ತವೆ. ಅವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಮದುವೆಯಾದಾಗ ಬಾಳಸಂಗಾತಿಯ ವ್ಯಕ್ತಿತ್ವಕ್ಕೆ ಬೆಲೆ ಕೊಡುವುದು, ಭಾವನೆಗಳಿಗೆ ಗೌರವ ಕೊಡುವುದು ಎರಡೂ ಬಹುಮುಖ್ಯ. ಸೊಸೆಯನ್ನು ಮನೆಯ ಮಗಳು ಎಂದು ಅತ್ತೆ ಮಾವಂದಿರೂ, ಅವರನ್ನು ತನ್ನ ತಂದೆ ತಾಯಿಯರಂತೆಯೇ ಎಂದು ಸೊಸೆಯೂ ಗೌರವಿಸಬೇಕು. ದೊಡ್ಡವರ ಸಂಘರ್ಷಗಳು ನಡೆವಳಿಕೆಗಳು ಮಕ್ಕಳ ಮೇಲೆ ಪರಿಣಾಮ ಬೀರುವುದು ಎಂಬುದನ್ನು ನೆನಪಿಟ್ಟುಕೊಂಡು ತಮ್ಮ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡರೆ, ಆಗ ಮಕ್ಕಳು ಉತ್ತಮ ಪ್ರಜೆಗಳಾಗಿ ಪೋಷಕರಿಗೆ ಮತ್ತು ಅವರ ಪೋಷಕರಿಗೆ ಹೆಮ್ಮೆ ಎನಿಸುವ ಬದುಕನ್ನು ಜೀವಿಸುವರು. ಇದು ಆ ಮಕ್ಕಳ ಹಕ್ಕು!
ಇದನ್ನೂ ಓದಿ : ಪೋಷಕರೇ ಇದು ನುಡಿ ಎಂಬ ನಿಮ್ಮದೇ ಮುತ್ತಿನ ಹಾರ