ಉತ್ತರದ ಕೇದಾರನಾಥದಿಂದ ದಕ್ಷಿಣದ ರಾಮೇಶ್ವರದವರೆಗೆ… ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಎಂಟು ಶಿವ ದೇವಾಲಯಗಳಿವು
ಭಾರತದಲ್ಲಿ ವಿಜ್ಞಾನಕ್ಕೆ, ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ಡುವ ಅದೆಷ್ಟೋ ಅದ್ಭುತ, ಅಚ್ಚರಿಯ ತಾಣಗಳಿವೆ, ದೇವಾಲಯಗಳಿವೆ. ಅದೇ ರೀತಿ ಇಂದಿನ ಆಧುನಿಕ ತಂತ್ರಜ್ಞಾನ, ಜಿಪಿಎಸ್‌ನಂತಹ ಉಪಕರಣಗಳನ್ನು ಬಳಸದೆ ಶತಮಾನಗಳಷ್ಟು ಹಿಂದೆಯೇ ನಮ್ಮ ಪೂರ್ವಜರು ಉತ್ತರದ ಕೇದಾರನಾಥದಿಂದ ದಕ್ಷಿಣದ ರಾಮೇಶ್ವರದವರೆಗೆ ಒಂದೇ ರೇಖಾಂಶದಲ್ಲಿ ಎಂಟು ಶಿವ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ನಿಜಕ್ಕೂ ಇದು ಅದ್ಭುತವೇ ಸರಿ ಎಂದು ಭಾಸವಾಗುತ್ತದೆ.

ಶತಮಾನಗಳಷ್ಟು ಹಿಂದೆಯೇ ನಮ್ಮ ಹಿರಿಯರು ಹೀಗಿರುವ ಅತ್ಯಾಧುನಿಕ ಸೌಲಭ್ಯ, ತಂತ್ರಜ್ಞಾನಗಳು ಇಲ್ಲದೆಯೇ ಕೇವಲ ತಮ್ಮ ಶಕ್ತಿ, ಸಾಮಾರ್ಥ್ಯ, ವಾಸ್ತುಜ್ಞಾನ, ಅದ್ಭುತ ಜ್ಞಾನ ಮತ್ತು ಬುದ್ಧಿಶಕ್ತಿಯ ಮೂಲಕವೇ ವಿಜ್ಞಾನಕ್ಕೂ ನಿಲುಕದ ಅದೆಷ್ಟೋ ಅದ್ಭುತ ದೇವಾಲಯಗಳನ್ನು, ಕೌತುಕದ ತಾಣಗಳನ್ನು ನಿರ್ಮಾಣ ಮಾಡಿದ್ದಾರೆ. ಅದೇ ಅದ್ಭುತ, ಅಚ್ಚರಿ, ವೈಭವವನ್ನು ಉಳಿಸಿಕೊಂಡ ಶತಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾದ ಹಲವಾರು ದೇವಾಲಯಗಳು, ಸ್ಮಾರಕಗಳು ನಮ್ಮ ಭಾರತದಲ್ಲಿದೆ. ಇಂತಹ ಪರಮಾಶ್ಚರ್ಯಗಳಲ್ಲಿ 8 ಪ್ರಾಚೀನ ಶಿವ ದೇವಾಲಗಳು (Ancient Shiva Temples) ಕೂಡಾ ಇದೆ. ಉತ್ತರದ ಕೇದಾರನಾಥದಿಂದ (Kedarnath) ದಕ್ಷಿಣದ ರಾಮೇಶ್ವರದವರೆಗೆ (Rameshwaram) ಒಂದೇ ರೇಖಾಂಶದಲ್ಲಿ (Longitude) ನೆಲೆಗೊಂಡಿರುವ ಈ ಶಿವ ದೇವಾಲಯಗಳನ್ನು ಅತ್ಯಾಧುನಿಕ ತಂತ್ರಜ್ಞಾನ, ಜಿಪಿಎಸ್‌ನಂತಹ ಉಪಕರಣವನ್ನು ಬಳಸದೆ ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ನಕ್ಷೆಯನ್ನು ಬಳಸಿ ನಿರ್ಮಾಣ ಮಾಡಲಾಗಿದೆ. 12 ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆ ಗೊತ್ತಿರಬಹುದಲ್ವಾ, ಆದ್ರೆ ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಪ್ರಾಚೀನ ಶಿವ ದೇವಾಲಯಗಳು ಯಾವುವುದು ಎಂಬುದು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಪ್ರಾಚೀನ ಶಿವ ದೇವಾಲಯಗಳು:
4000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾದ ಈ 8 ದೇವಾಲಯಗಳು 79° ರೇಖಾಂಶದಲ್ಲಿವೆ ಮತ್ತು ಉತ್ತರದ ಕೇದಾರನಾಥದಿಂದ ದಕ್ಷಿಣದಲ್ಲಿ ರಾಮೇಶ್ವರಂವರೆಗೆ ಭಾರತದಾದ್ಯಂತ ಹಾದು ಹೋಗುವ ನೇರ ರೇಖೆಯಲ್ಲಿ 8 ಎಂಟು ದೇವಾಲಯಗಳ ನಿರ್ಮಾಣ ಮಾಡಲಾಗಿದೆ. ಈ ರೇಖೆಯನ್ನು “ಶಿವ-ಶಕ್ತಿ ರೇಖಾ” ಎಂದು ಕರೆಯಲಾಗುತ್ತದೆ. ಈ ರೇಖೆ ಕೇದಾರನಾಥದಿಂದ ಪ್ರಾರಂಭವಾಗಿ ರಾಮೇಶ್ವರಂನಲ್ಲಿ ಕೊನೆಗೊಳ್ಳುತ್ತದೆ. ಈ 8 ಶಿವ ದೇವಾಲಯಗಳನ್ನು ವಿಭಿನ್ನ ಕಾಲಘಟ್ಟದಲ್ಲಿ, ಬೇರೆ ಬೇರೆ ತಲೆಮಾರಿನವರು ನಿರ್ಮಿಸಿದ್ದರೂ ಕೂಡಾ ಇವುಗಳನ್ನು 79° ರೇಖಾಂಶದಲ್ಲಿ ನಿಖರವಾಗಿ ನಿರ್ಮಿಸಲಾಗಿದೆ. ಇದು ನಮ್ಮ ಪೂರ್ವಜರ ಅದ್ಭುತ ಜ್ಞಾನ ಬುದ್ಧಿವಂತಿಕೆ ಮತ್ತು ಖಗೋಳ ನಿಖರತೆಯ ಜ್ಞಾನ ಎಂದರೆ ತಪ್ಪಾಗಲಾರದು.
ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ 8 ಶಿವ ದೇವಾಲಯಗಳು ಯಾವುವು?
ಉತ್ತರಾಖಂಡ್‌ನ ಕೇದಾರನಾಥ ದೇವಾಲಯ (79.0669°), ಆಂಧ್ರಪ್ರದೇಶದ ಶ್ರೀಕಾಳಹಸ್ತಿ ದೇವಾಲಯ (79.7037°), ತಮಿಳುನಾಡಿನ ಕಾಂಚಿಯ ಏಕಾಂಬರೇಶ್ವರ ದೇವಸ್ಥಾನ (79.7036°), ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅಣ್ಣಾಮಲೈಯಾರ್ ದೇವಸ್ಥಾನ (79.0747°), ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಾಲಯ (79.6954°), ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನ 79.3129°, ತೆಲಂಗಾಣದ ಕಾಲೇಶ್ವರಂ ದೇವಾಲಯ (79.9067°) ಈ ಎಂಟು ದೇವಾಲಯಗಳು ಒಂದೇ ರೇಖಾಂಶದಲ್ಲಿ ನೆಲೆಗೊಂಡಿವೆ.
ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಗಂಡ ಬದುಕಿರುವಾಗ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಯಾವಾಗ?
ಇದಲ್ಲದೆ, ಈ 8 ದೇವಾಲಯಗಳಲ್ಲಿ ಐದು ದೇವಾಲಯಗಳು ಪಂಚಭೂತಗಳ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸಂಕೇತಿಸುತ್ತದೆ. ಶ್ರೀ ಕಾಳಹಸ್ತಿಯ ಶಿವಲಿಂಗವು ಗಾಳಿಯನ್ನು ಪ್ರತಿನಿಧಿಸಿದರೆ, ತಿರುವನೈಕಾವಲ್‌ನಲ್ಲಿರುವ ಜಂಬುಕೇಶ್ವರ ದೇವಾಲಯದ ಲಿಂಗವು ನೀರನ್ನು ಪ್ರತಿನಿಧಿಸುತ್ತದೆ. ಅಣ್ಣಾಮಲೈಯಾರ್‌ನ ಶಿವಲಿಂಗವು ಅಗ್ನಿಯನ್ನು ಪ್ರತಿನಿಧಿಸುತ್ತದೆ. ಕಾಂಚೀಪುರಂನಲ್ಲಿರುವ ಏಕಾಂಬರೇಶ್ವರ ದೇವಸ್ಥಾನದ ಲಿಂಗವು ಭೂಮಿಯನ್ನು ಪ್ರತಿನಿಧಿಸುತ್ತದೆ. ಚಿದಂಬರಂನ ನಿರಾಕಾರ ಶಿವಲಿಂಗವು ಆಕಾಶದ ಅಂಶವನ್ನು ಪ್ರತಿನಿಧಿಸುತ್ತದೆ.
ಈ ಎಲ್ಲಾ ಶಿವ ದೇವಾಲಯಗಳನ್ನು ಯಾವುದೇ ಉಪಗ್ರಹ, ತಂತ್ರಜ್ಞಾನ, ಜಿಪಿಎಸ್ ಅಸ್ತಿತ್ವದಲ್ಲಿರದ ಯುಗದಲ್ಲಿ ಅಂದರೆ ಸುಮಾರು 4000 ವರ್ಷಗಳ ಹಿಂದೆಯೇ ಯೋಗ ವಿಜ್ಞಾನವನ್ನು ಬಳಸಿಕೊಂಡು ಅಕ್ಷಾಂಶ ಮತ್ತು ರೇಖಾಂಶದ ನಿಖರವಾದ ಅಳತೆಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ನಿರ್ಮಿಸಲಾಗಿದ್ದರೂ ಕೂಡಾ ಈ ದೇವಾಲಯಗಳನ್ನು ನಿಖರವಾದ ಸ್ಥಳಗಳಲ್ಲಿ ಹೇಗೆ ನಿರ್ಮಾಣ ಮಾಡಲಾಯಿತು ಇಂದಿಗೂ ಅಚ್ಚರಿಯಾಗಿಯೇ ಉಳಿದಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Mon, 28 April 25