ಸಾಂದರ್ಭಿಕ ಚಿತ್ರ
ಕರುಳು ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಜೀವನಶೈಲಿಗೆ ಹಾಗೂ ಆಹಾರಕ್ಕೆ ಸಂಬಂಧಿಸಿದ ಅನೇಕ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಹೊಟ್ಟೆ ಹಾಗೂ ಕರುಳಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆರೋಗ್ಯ ತಜ್ಞರು ಸಾಮಾನ್ಯವಾಗಿ ಕರುಳಿನ ಆರೋಗ್ಯದ ಬಗ್ಗೆ ಗಮನ ಹರಿಸಲು ಸಲಹೆ ನೀಡುತ್ತಾರೆ. ಏಕೆಂದರೆ ನಮ್ಮ ದೇಹ ಮತ್ತು ಮೆದುಳಿಗೆ ಸಂಬಂಧಿಸಿದ ಶೇಕಡಾ 90%ರಷ್ಟು ಕಾಯಿಲೆಗಳು ನಮ್ಮ ಜೀರ್ಣಕ್ರಿಯೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿವೆ. ಕರುಳಿನ ಆರೋಗ್ಯವು ಹದಗೆಟ್ಟಾಗ, ಜೀರ್ಣಕ್ರಿಯೆಯು ತೊಂದರೆಗೊಳಗಾಗುತ್ತದೆ ಮತ್ತು ಇದರಿಂದ ಅನೇಕ ಕಾಯಿಲೆಗಳು ಭಾದಿಸುವಂತಹ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಸಹ ನಿಮ್ಮ ಕರುಳಿನ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಬಯಸಿದರೆ ಈ ಕೆಲವು ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ತಪ್ಪುಗಳಿಂದ ದೂರವಿರುವುದು ಮುಖ್ಯ.
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಲವು ತಪ್ಪುಗಳನ್ನು ಎಂದಿಗೂ ಮಾಡಬೇಡಿ:
ಆಹಾರಕ್ಕೆ ಸಂಬಂಧಿಸಿದಂತೆ ತಪ್ಪು ಆಯ್ಕೆ:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾಡುವ ದೊಡ್ಡ ತಪ್ಪುಗಳಲ್ಲಿ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವುದು ಕೂಡಾ ಒಂದಾಗಿದೆ. ಅನಾರೋಗ್ಯಕರ ಆಹಾರಗಳು ನಮ್ಮ ಕರುಳಿನ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಕಡಿಮೆ ಫೈಬರ್, ಹೆಚ್ಚಿನ ಕೊಬ್ಬು, ಸಂಸ್ಕರಿಸಿದ ಆಹಾರ, ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರ ಇವೆಲ್ಲವೂ ಹೊಟ್ಟೆಗೆ ಹಾಗೂ ಕರುಳಿಗೆ ತುಂಬಾ ಹಾನಿಕಾರಕವಾಗಿದೆ. ಇಂತಹ ವಸ್ತುಗಳು ಹೊಟ್ಟೆಯಲ್ಲಿನ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲವನ್ನು ಹಾಳುಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಹೊಟ್ಟೆಯ ಆರೋಗ್ಯವನ್ನು ಸುಧಾರಿಸಲು ನೀವು ಸಮತೋಲಿತ ಆಹಾರಗಳನ್ನು ಸೇವನೆ ಮಾಡುವುದು ಮುಖ್ಯ. ಆದ್ದರಿಂದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಫ್ರೋಟೀನ್ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ.
ಫೈಬರ್ ಕೊರತೆ:
ಕರುಳನ್ನು ಆರೋಗ್ಯಕರವಾಗಿಡಲು ಫೈಬರ್ ಪೋಷಕಾಂಶವು ಬಹಳ ಮುಖ್ಯವಾಗಿದೆ. ಇದು ಕರುಳಿನ ಚಲನೆ ಮತ್ತು ಮಲಬದ್ಧತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಅನೇಕ ಜನರು ಫೈಬರ್ನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದು ನಮ್ಮ ಕರುಳಿಗೆ ಅಪಾಯಕಾರಿ ಎಂದು ಸಾಬೀತಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಫೈಬರ್ ಅಂಶಗಳಲ್ಲಿ ಸಮೃದ್ಧವಾಗಿರುವ ಧಾನ್ಯಗಳು, ಕಾಳುಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡಿ.
ಅಸಮರ್ಪಕ ಜಲಸಂಚಯನ:
ನಿರ್ಜಲೀಕರಣದ ಕಾರಣದಿಂದಲೂ ಕರುಳಿನ ಆರೋಗ್ಯ ಹದಗೆಡುತ್ತದೆ. ಹೌದು ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ಕರುಳಿನ ಆರೋಗ್ಯವನ್ನು ಸುಧಾರಿಸಲು ಜಲಸಂಚಯನವು ತುಂಬಾ ಮುಖ್ಯವಾಗಿದೆ. ಹಾಗಿರುವಾಗ ನೀವು ದಿನಕ್ಕೆ ಕನಿಷ್ಟ 8 ಲೋಟ ನೀರು ಕುಡಿಯುವುದು ಬಹಳ ಮುಖ್ಯ.
ಒತ್ತಡ ಮತ್ತು ಆತಂಕ:
ಒತ್ತಡ ಮತ್ತು ಆತಂಕವೂ ಕೂಡ ಹೊಟ್ಟೆಯ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಕ್ಕಾಗಿ ನೀವು ಒತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ ಮತ್ತು ಯೋಗವನ್ನು ಮಾಡುವುದು ಮುಖ್ಯವಾಗಿದೆ.
ಸಾಕಷ್ಟು ನಿದ್ರೆ ಮಾಡದಿರುವುದು:
ಸಾಕಷ್ಟು ನಿದ್ರೆ ಮಾಡದಿರುವುದು ಕೂಡ ನಿಮ್ಮ ಕರುಳು ಮತ್ತು ಒಟ್ಟಾರೆ ದೇಹಾರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಸಮರ್ಪಕ ನಿದ್ರೆಯಿಂದಾಗಿ ಕರುಳಿನ ಉತ್ತಮ ಬ್ಯಾಕ್ಟೀರಿಯಾದ ಸಮತೋಲನವು ತೊಂದರೆಗೊಳಗಾಗುತ್ತದೆ. ಆದ್ದರಿಂದ ನೀವು 7 ರಿಂದ 8 ಗಂಟೆಗಳ ಪೂರ್ಣ ನಿದ್ರೆ ಪಡೆಯುವುದು ಬಹಳ ಮುಖ್ಯ.