World Heritage Day 2025: ಅಜಂತಾ ಎಲ್ಲೋರಾ ಗುಹೆಯಿಂದ ಹಂಪಿವರೆಗೆ; ಈ ಎಲ್ಲ ಸ್ಥಳಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು
ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳ ಮಹತ್ವವನ್ನು ಜನರಿಗೆ ತಿಳಿಸಲು, ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಅಗತ್ಯದ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸವೇನು? ವಿಶ್ವ ಪಾರಂಪರಿಕ ದಿನದ ಮಹತ್ವವೇನು ಹಾಗೂ ನಮ್ಮ ಭಾರತದಲ್ಲಿರುವ ಒಂದಷ್ಟು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ತಿಳಿಯಿರಿ.

ಭಾರತ (India) ಸೇರಿದಂತೆ ವಿಶ್ವದ ಹಲವೆಡೆ ಐತಿಹಾಸಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ನೈಸರ್ಗಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ತಾಣಗಳಿವೆ. ಇಂತಹ ಅಧ್ಬುತ ತಾಣಗಳ ರಕ್ಷಣೆಯ ಜವಬ್ದಾರಿಯನ್ನು ಯುನೆಸ್ಕೋ (UNESCO) ಹೊತ್ತಿದೆ. ಪ್ರಪಂಚದಾದ್ಯಂತ ಒಟ್ಟು 1199 ವಿಶ್ವ ಪರಂಪರೆಯ ತಾಣಗಳಿದ್ದು (World Heritage Sites), ಗತವೈಭವವನ್ನು ಸಾರುವ ಈ ಸ್ಮಾರಕ ಹಾಗೂ ಸ್ಥಳಗಳ ಕುರಿತು ಇಂದಿನ ಪೀಳಿಗೆಗೆ ತಿಳಿಸಲು, ಈ ಭವ್ಯ ಪರಂಪರೆಯ ಸಂರಕ್ಷಣೆ ಮತ್ತು ಪಾರಂಪರಿಕ ತಾಣಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ದಿನವನ್ನು (World Heritage Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಹಾಗೂ ನಮ್ಮ ಭಾರತದಲ್ಲಿರುವ ಒಂದಷ್ಟು ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ತಿಳಿಯಿರಿ .
ವಿಶ್ವ ಪಾರಂಪರಿಕ ದಿನದ ಇತಿಹಾಸ:
ಪ್ರಪಂಚದಾದ್ಯಂತದ ಪ್ರಸಿದ್ಧ ಕಟ್ಟಡಗಳು ಮತ್ತು ನೈಸರ್ಗಿಕ ತಾಣಗಳನ್ನು ಸಂರಕ್ಷಿಸುವ ಉದ್ದೇಶದಿಂದ 1982 ರಲ್ಲಿ, ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ICOMOS) ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿತು. ಮುಂದಿನ ವರ್ಷ, ಅಂದರೆ 1983 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು. ಈ ದಿನದಂದು, ಟುನೀಶಿಯಾದಲ್ಲಿ ಮೊದಲ ಬಾರಿಗೆ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಯಿತು. ಆ ನಂತರದಲ್ಲಿ ವಿಶ್ವ ಪರಂಪರೆಯ ದಿನವನ್ನು ಅಧಿಕೃತವಾಗಿ ಗುರುತಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಪಾರಂಪರಿಕ ದಿನದ ಮಹತ್ವ:
ನೈಸರ್ಗಿಕ ಭೂದೃಶ್ಯಗಳು, ಐತಿಹಾಸಿಕ, ಸಾಂಸ್ಕೃತಿಕ ಸ್ಮಾರಕಗಳು, ಪ್ರಾಚೀನ ಅವಶೇಷಗಳ ರಕ್ಷಣೆ ಮತ್ತು ಇವುಗಳ ಬಗ್ಗೆ ಜನರಿಗೆ ಜ್ಞಾನ ಮೂಡಿಸಲು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಈ ಸ್ಮಾರಕಗಳನ್ನು ರಕ್ಷಿಸಬೇಕೆಂಬುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಅಲ್ಲದೆ ಈ ದಿನ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಹಾಗೂ ಕಲಾವಿದರು ಸೇರಿದಂತೆ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿಸಲು ಕೊಡುಗೆ ನೀಡುವ ಜನರನ್ನು ಗುರುತಿಸಿ ಗೌರವಿಸಲಾಗುತ್ತದೆ.
ಇವು ನಮ್ಮ ಭಾರತದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು:
ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯಯವನ್ನು ಹೊಂದಿರುವ ನಮ್ಮ ಭಾರತದಲ್ಲಿ ಒಟ್ಟು 42 ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿವೆ.
ಆಗ್ರಾ ಕೋಟೆ:
ಈ ಕೋಟೆಯನ್ನು “ಆಗ್ರಾದ ಕೆಂಪು ಕೋಟೆ” ಎಂದೂ ಕರೆಯುತ್ತಾರೆ, ಇದು ಉತ್ತರ ಪ್ರದೇಶದ ಆಗ್ರಾ ನಗರದಲ್ಲಿದೆ. 1983 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಅಜಂತಾ ಗುಹೆಗಳು:
ಅನೇಕ ವೈಶಿಷ್ಟ್ಯ, ವಿಸ್ಮಯಗಳನ್ನು ಹೊತ್ತು ನಿಂತಿರುವ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಅಜಂತಾ ಗುಹೆಯನ್ನು 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.
ಎಲ್ಲೋರಾ ಗುಹೆಗಳು:
ಅದೇ ರೀತಿ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಎಲ್ಲೋರಾ ಗುಹೆಯನ್ನು ಸಹ 1983 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು.
ತಾಜ್ ಮಹಲ್:
ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ನಿರ್ಮಿಸಲಾದ ತಾಜ್ ಮಹಲ್ ಯಮುನಾ ನದಿಯ ದಡದಲ್ಲಿದೆ. 1983 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಮಹಾಬಲಿಪುರಂನಲ್ಲಿರುವ ಸ್ಮಾರಕಗಳು:
ಪಲ್ಲವ ರಾಜರು ನಿರ್ಮಿಸಿದ ಈ ದೇವಾಲಯಗಳ ಗುಂಪನ್ನು 1984 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಸೂರ್ಯ ದೇವಾಲಯ, ಕೊನಾರ್ಕ್:
ಕೊನಾರ್ಕ್‌ನ ಸೂರ್ಯ ದೇವಾಲಯವು ಭಾರತದ ಪೂರ್ವ ರಾಜ್ಯವಾದ ಒರಿಸ್ಸಾದಲ್ಲಿದೆ. 1984 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ:
ಇಲ್ಲಿ ಹೆಚ್ಚಾಗಿ ಒಂದು ಕೊಂಬಿನ ಘೇಂಡಾಮೃಗಗಳು ಕಂಡು ಬರುತ್ತವೆ. 1985 ರಲ್ಲಿ ಯುನೆಸ್ಕೋ ಈ ತಾಣವನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಹಂಪಿಯಲ್ಲಿರುವ ಸ್ಮಾರಕಗಳು:
ನಮ್ಮ ಕರ್ನಾಟಕದ ಇತಿಹಾಸ ಪ್ರಸಿದ್ಧ ತಾಣವಾಗಿರುವ ಹಂಪಿಯನ್ನು 1986 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಪಟ್ಟದಕಲ್ಲು:
ಚಾಲುಕ್ಯ ರಾಜವಂಶದ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಈ ಸ್ಮಾರಕಗಳು ಅಂದಿನ ಭವ್ಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಈ ತಾಣವನ್ನು 1987 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಸಾಂಚಿಯ ಬೌದ್ಧ ಸ್ತೂಪ:
ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಸಾಂಚಿಯಲ್ಲಿರುವ ಭೌದ್ಧ ಸ್ತೂಪವನ್ನು1989 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು.
ಕುತುಬ್ ಮಿನಾರ್, ದೆಹಲಿ:
13 ನೇ ಶತಮಾನದಲ್ಲಿ ದೆಹಲಿಯಲ್ಲಿ ನಿರ್ಮಿಸಲಾದ ಕುತುಬ್ ಮಿನಾರ್ ಅನ್ನು 1993 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ತಾಣವೆಂದು ಘೋಷಿಸಿತು.
ಇದನ್ನೂ ಓದಿ: ಗುಡ್ ಫ್ರೈಡೇ ಶುಭ ದಿನ ನಿಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಇದಲ್ಲದೆ, ಮಧ್ಯಪ್ರದೇಶದಲ್ಲಿರುವ ಖಜುರಾಹೊ ದೇವಾಲಯ, ಉತ್ತರ ಪ್ರದೇಶದಲ್ಲಿರುವ ಫತೇಪುರ್ ಸಿಕ್ರಿ, ಪಶ್ಚಿಮ ಬಂಗಾಳದ ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡದಲ್ಲಿರುವ ನಂದಾದೇವಿ ರಾಷ್ಟ್ರೀಯ ಉದ್ಯಾನವನ, ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ, ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳು, ಖಜುರಾಹೊದಲ್ಲಿರುವ ಸ್ಮಾರಕಗಳು, ಎಲಿಫೆಂಟಾ ಗುಹೆಗಳು, ಹುಮಾಯೂನನ ಸಮಾಧಿ, ಛತ್ರಪತಿ ಶಿವಾಜಿ ಟರ್ಮಿನಸ್ (ವಿಕ್ಟೋರಿಯಾ ಟರ್ಮಿನಸ್), ಜಂತರ್ ಮಂತರ, ಪಶ್ಚಿಮ ಘಟ್ಟಗಳು, ರಾಜಸ್ಥಾನದ ಬೆಟ್ಟದ ಕೋಟೆಗಳು, ನಳಂದ ವಿಶ್ವವಿದ್ಯಾಲಯ ಶಾಂತಿನಿಕೇತನ ಇವೆಲ್ಲಾ ನಮ್ಮ ಭಾರತದಲ್ಲಿರುವ ಪ್ರಮುಖ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾಗಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ