World Hypertension Day 2022: ಅಧಿಕ ರಕ್ತದೊತ್ತಡದ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬೇಡಿ

| Updated By: shivaprasad.hs

Updated on: May 17, 2022 | 8:14 AM

6 signs of high blood pressure: ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾಗಿರುವ ಡಾ.ನಾರಾಯಣ್ ಗಡ್ಕರ್ ಅವರು ಅಧಿಕ ರಕ್ತದೊತ್ತಡದ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

World Hypertension Day 2022: ಅಧಿಕ ರಕ್ತದೊತ್ತಡದ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬೇಡಿ
ಪ್ರಾತಿನಿಧಿಕ ಚಿತ್ರ
Follow us on

ಇಂದು (ಮೇ.17) ವಿಶ್ವ ಅಧಿಕ ರಕ್ತದೊತ್ತಡ (World Hypertension Day) ದಿನ. ರಕ್ತದೊತ್ತಡ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಸಕಾರಣವಿಲ್ಲದಿದ್ದರೂ ‘ಸೈಲೆಂಟ್ ಕಿಲ್ಲರ್’ ಎನ್ನಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡದ ಯಾವುದೇ ಗಮನಾರ್ಹ ಲಕ್ಷಣಗಳು ಕಾಣಿಸುವುದಿಲ್ಲ. ಒಂದು ವೇಳೆ ನೀವು ಕೆಲವೇ ರೋಗ ಲಕ್ಷಣ ಹೊಂದಿದ್ದರೂ ಕೂಡ ನೀವು ಅದನ್ನು ದಿನನಿತ್ಯ ಉಂಟಾಗುವ ದಣಿವು, ಕೆಲಸದ ಒತ್ತಡ ಎಂದು ತಳ್ಳಿಹಾಕುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಬಿಪಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಕೆಲವು ಸಂದರ್ಭಗಳಲ್ಲಿ ಇದು ಹೃದಯಾಘಾತ, ಪಾರ್ಶ್ವವಾಯು, ಸ್ಮರಣ ಶಕ್ತಿಯ ಸಮಸ್ಯೆಗಳು ಅಥವಾ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು. ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಾ ಗಂಭೀರ ಅಪಾಯಗಳು ಎದುರಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.

ಪ್ರಪಂಚದಾದ್ಯಂತ ಸುಮಾರು 113 ಕೋಟಿ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎನ್ನುತ್ತವೆ ವರದಿಗಳು. ಇದಕ್ಕೆ ತುತ್ತಾಗುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಅದಾಗ್ಯೂ, ಪ್ರತಿ 5 ಜನರಲ್ಲಿ ಒಬ್ಬರು ಮಾತ್ರ ಇದನ್ನು ಸಮರ್ಥವಾಗಿ ಎದುರಿಸುತ್ತಾರೆ. ಉಳಿದವರು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಯುವಕರಲ್ಲೂ ಇತ್ತೀಚೆಗೆ ಇದನ್ನು ನೋಡುತ್ತಿದ್ದೇವೆ.

‘‘ತೀವ್ರವಾದ ತಲೆನೋವು, ದೃಷ್ಟಿ ಮಂದವಾಗುವುದು, ಉಸಿರಾಟದ ತೊಂದರೆ, ವಿಶೇಷವಾಗಿ ಒತ್ತಾಯಪೂರ್ವಕವಾಗಿ ಉಸಿರಾಟ ಮಾಡುವಂತೆ ಆಗುವುದು, ಸುಲಭವಾಗಿ ಆಯಾಸಗೊಳ್ಳುವುದು ಮುಂತಾದವುಗಳು ಅಧಿಕ ರಕ್ತದೊತ್ತಡದ ಕೆಲವು ಸಾಮಾನ್ಯ ಲಕ್ಷಣಗಳು. ಇವುಗಳನ್ನು ನಾವು ನಿರ್ಲಕ್ಷಿಸಬಾರದು. ಅಧಿಕ ರಕ್ತದೊತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಗಂಭೀರ ತೊಡಕುಗಳನ್ನೂ ಉಂಟುಮಾಡಬಹುದು’’ ಎನ್ನುತ್ತಾರೆ ಡಾ. ರಾಜೇಶ್ ಬುಧಿರಾಜ. ಫರಿದಾಬಾದ್​ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ನಲ್ಲಿ ಇಂಟರ್ನಲ್ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಅವರ ಮಾತನ್ನು ಹಿಂದೂಸ್ತಾನ್ ಟೈಮ್ಸ್​ ಉಲ್ಲೇಖಿಸಿದೆ.

ಇದನ್ನೂ ಓದಿ
Summer Camp Sites: ಬೇಸಿಗೆ ರಜೆಯಲ್ಲಿ ಕ್ಯಾಂಪಿಂಗ್​ ಮಾಡಲು ಅತ್ಯುತ್ತಮ ಸ್ಥಳಗಳು ಇಲ್ಲಿವೆ ನೋಡಿ
ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ, ಮೆದಳು ಚುರುಕುಗೊಳ್ಳಲು ಮತ್ತು ಮುಟ್ಟಿನಿಂದಾಗುವ ಸಮಸ್ಯೆಗೂ ರಾಮಬಾಣ ತುಪ್ಪ: ಹೇಗೆ? ಇಲ್ಲಿದೆ ಓದಿ
Blood Pressure: ರಕ್ತದೊತ್ತಡವನ್ನು ಕಡಿಮೆ ಮಾಡುವ ಆಹಾರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸದಾ ಯಂಗ್ ಆಗಿ ಕಾಣಿಸಲು ಈ ಆಹಾರವನ್ನು ತಪ್ಪದೇ ಸೇವಿಸಿ

ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾಗಿರುವ ಡಾ.ನಾರಾಯಣ್ ಗಡ್ಕರ್ ಅವರು ಅಧಿಕ ರಕ್ತದೊತ್ತಡದ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

1. ಮೂಗಿನಲ್ಲಿ ರಕ್ತಸ್ರಾವ: ಮೂಗಿನಲ್ಲಿ ರಕ್ತಸ್ರಾವ ರಕ್ತದೊತ್ತಡದ ಕಾರಣದಿಂದಲೂ ಸಂಭವಿಸತ್ತದೆ. ನೀವು ಈ ಸಮಸ್ಯೆ ಎದುರಿಸುತ್ತಿದ್ದರೆ ವೈದ್ಯರನ್ನು ಕಾಣುವುದು ಒಳಿತು.

2. ತಲೆನೋವು: ನಿಮಗೆ ಯಾವಾಗಲೂ ತಲೆನೋವು ಬರುತ್ತಿದ್ದರೆ ನಿಮ್ಮ ರಕ್ತದೊತ್ತಡ ಹೆಚ್ಚಾಗಬಹುದು ಅಥವಾ ರಕ್ತದೊತ್ತಡ ಹೊಂದಿರುವ ಹೆಚ್ಚಿನ ಜನರು ತಲೆನೋವು ಹೊಂದಿರಬಹುದು. ಆದ್ದರಿಂದ, ಈ ಬಗ್ಗೆ ಜಾಗರೂಕರಾಗಿರಿ ಮತ್ತು ಸಕಾಲಿಕ ಚಿಕಿತ್ಸೆ ಪಡೆಯಿರಿ. ‘‘ತೀವ್ರವಾದ ತಲೆನೋವು ಅನುಭವಿಸುತ್ತಿರುವ ರೋಗಿಗಳು ಅದರಲ್ಲೂ ವಿಶೇಷವಾಗಿ ಆಕ್ಸಿಪಿಟಲ್ ಪ್ರದೇಶದಲ್ಲಿ (ತಲೆಬುರುಡೆಯ ಹಿಂಭಾಗದ ಭಾಗ) ತಮ್ಮ ಬಿಪಿಯನ್ನು ತಕ್ಷಣವೇ ಪರೀಕ್ಷಿಸಬೇಕು’’ ಎಂದು ಸಲಹೆ ನೀಡುತ್ತಾರೆ ವೊಕಾರ್ಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ನಲ್ ಮೆಡಿಸಿನ್ಸ್ ವಿಭಾಗದ ಡಾ. ಹನಿ ಸಾವ್ಲಾ.

3. ಆಯಾಸ: ನಿಮ್ಮ ಕಚೇರಿ ಕೆಲಸ ಅಥವಾ ಮನೆಕೆಲಸಗಳನ್ನು ಸುಲಭವಾಗಿ ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಏನೂ ಮಾಡದಿದ್ದರೂ ದಣಿದ ಅನುಭವವಾಗುತ್ತಿದೆಯೇ? ಇದು ಅಧಿಕ ರಕ್ತದೊತ್ತಡದ ಕಾರಣದಿಂದಾಗಿರಬಹುದು. ಆದ್ದರಿಂದ ಈ ಲಕ್ಷಣ ಹೊಂದಿದ್ದರೆ ವೈದ್ಯರಿಂದ ದಲಹೆ ಪಡೆಯಿರಿ.

4. ಉಸಿರಾಟದ ತೊಂದರೆ: ರಕ್ತದೊತ್ತಡ ಹೆಚ್ಚಾದಾಗ ಉಸಿರಾಡಲು ಕಷ್ಟಪಡಬಹುದು. ಇದು ಅಧಿಕ ರಕ್ತದೊತ್ತಡದ ಸಾಮಾನ್ಯ ಲಕ್ಷಣಗಳಲ್ಲಿ ಒಂದು.

5. ದೃಷ್ಟಿ ಮಸುಕಾಗುವುದು: ಅಧಿಕ ರಕ್ತದೊತ್ತಡವು ದೃಷ್ಟಿಯನ್ನು ಮಸುಕಾಗಿಸಬಹುದು. ‘‘ನಿಮ್ಮ ದೃಷ್ಟಿ ಕ್ಷೇತ್ರದಲ್ಲಿ ಕಪ್ಪು ಕಲೆಗಳು ಹೆಚ್ಚಾದರೆ ಅಥವಾ ದೃಷ್ಟಿ ಹಠಾತ್ ನಷ್ಟವಾದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’’ ಎಂದು ಹೇಳುತ್ತಾರೆ ಡಾ.ಸಾವ್ಲಾ.

6. ಎದೆ ನೋವು: ಒಬ್ಬರ ರಕ್ತದೊತ್ತಡ ಹೆಚ್ಚಾದಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಮೇಲೆ ತಿಳಿಸಲಾದ 6 ರೋಗಲಕ್ಷಣಗಳನ್ನು ನೀವು ಗಮನಿಸಿದರೆ ತಕ್ಷಣ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಉತ್ತಮ.

ವಿ.ಸೂ.: ಈ ಬರಹದಲ್ಲಿರುವ ವಿಚಾರಗಳನ್ನು ಮಾಹಿತಿಯ ಉದ್ದೇಶದಿಂದ ನೀಡಲಾಗಿದೆ. ಅನುಸರಿಸುವ ಮುನ್ನ ವೈದ್ಯರಿಂದ ಸಲಹೆಗಳನ್ನು ಪಡೆಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ