World Kidney Day 2023: ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಈ ಜೀವನಶೈಲಿ ರೂಢಿಸಿಕೊಳ್ಳಿ

|

Updated on: Mar 09, 2023 | 9:30 AM

ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಜೀವನಶೈಲಿಯನ್ನು ಬದಲಾಯಿಸಬೇಕಿದೆ ಎಂದು ಆರೋಗ್ಯ ತಜ್ಞರಾದ ಡಾ. ಮಹೇಶ್ ಪ್ರಸಾದ್ ಸಲಹೆ ನೀಡುತ್ತಾರೆ.

World Kidney Day 2023: ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಈ ಜೀವನಶೈಲಿ ರೂಢಿಸಿಕೊಳ್ಳಿ
World Kidney Day 2023
Image Credit source: Days Of The Year
Follow us on

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಕರಲ್ಲೇ ಮೂತ್ರಪಿಂಡದ ಸಮಸ್ಯೆಗಳು ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನಶೈಲಿ ಹಾಗೂ ಕಳಪೆ ಆಹಾರ ಪದ್ದತಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದರೆ ನಿಮ್ಮ ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಭಾರತದಲ್ಲಿ ಪ್ರತಿ ವರ್ಷ ಎರಡೂವರೆ ಲಕ್ಷ ಜನರು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಮೂರುವರೆ ಕೋಟಿ ಜನರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.

ಆದ್ದರಿಂದ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಜೀವನಶೈಲಿಯನ್ನು ಬದಲಾಯಿಸಬೇಕಿದೆ ಎಂದು ಆರೋಗ್ಯ ತಜ್ಞರಾದ ಡಾ. ಮಹೇಶ್ ಪ್ರಸಾದ್ ಸಲಹೆ ನೀಡುತ್ತಾರೆ.

ಸ್ಥೂಲಕಾಯತೆ:

ಆಧುನಿಕ ಜೀವನಶೈಲಿಯ ಒತ್ತಡದ ಜೀವನ ಹಾಗೂ ಕಳಪೆ ಆಹಾರ ಕ್ರಮ ಸ್ಥೂಲಕಾಯತೆಗೆ ಕಾರಣವಾಗಿಸುತ್ತದೆ. ಸ್ಥೂಲಕಾಯತೆಯು ಮೂತ್ರಪಿಂಡವನ್ನು ನೇರವಾಗಿ ಹಾನಿಗೊಳಿಸುತ್ತದೆ. ಇದು ಮಧುಮೇಹ, ಬಿಪಿ, ಹೆಚ್ಚಿನ ಲಿಪಿಡ್‌ಗಳು, ಇನ್ಸುಲಿನ್ ಪ್ರತಿರೋಧ ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ನಿಯಮಿತ ವ್ಯಾಯಾಮದ ಮೂಲಕ ಸ್ಥೂಲಕಾಯತೆಗೆ ಚಿಕಿತ್ಸೆ ನೀಡುವುದು ಮೂತ್ರಪಿಂಡದ ಕಾಯಿಲೆಯ ಪ್ರಾಥಮಿಕ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ.

ಹೆಚ್ಚು ನೀರಿನ ಸೇವನೆ:

ಬೇಸಿಗೆ ಆರಂಭವಾಗಿದೆ, ದೇಹ ನಿರ್ಜಲೀಕರಣಗೊಂಡು ಕಿಡ್ನಿ ಸ್ಟೋನ್​ನಂತಹ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ 2 ರಿಂದ 3 ಲೀ ವರೆಗೆ ನೀರು ಸೇವಿಸಿ. ಮೂತ್ರಪಿಂಡದಿಂದ ಸೋಡಿಯಂ ಮತ್ತು ಇತರ ವಿಷಗಳನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ, ಇದರಿಂದಾಗಿ ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ನಿಮಗಿದೆಯೇ?

ಉಪ್ಪು ಸೇವನೆ:

ರೆಡಿ-ಟು-ಈಟ್ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಹೆಚ್ಚಿನವು ಉಪ್ಪಿನೊಂದಿಗೆ ತುಂಬಿರುತ್ತವೆ. ಹೆಚ್ಚಿನ ಉಪ್ಪು ಮೂತ್ರಪಿಂಡದ ಕಾರ್ಯಚಟುವಟಿಕೆಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಧೂಮಪಾನ ಮತ್ತು ಮಧ್ಯಪಾನ:

ಧೂಮಪಾನ ಮತ್ತು ಮಧ್ಯಪಾನದ ಅಭ್ಯಾಸದಿಂದ ಕಿಡ್ನಿಗೆ ಹಾನಿಯುಂಟಾಗುತ್ತದೆ. ಧೂಮಪಾನವು ಮೂತ್ರಪಿಂಡದ ಜೀವಕೋಶದ ಕಾರ್ಸಿನೋಮವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಮೂತ್ರಪಿಂಡದ ಕ್ಯಾನ್ಸರ್​ನಂತಹ ಅಪಾಯವನ್ನು ತಂದೊಡ್ಡಬಹುದು. ಧೂಮಪಾನ ಮತ್ತು ಮಧ್ಯಪಾನ ಕೇವಲ ಮೂತ್ರಪಿಂಡ ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗವನ್ನು ನಿಧಾನವಾಗಿ ಹಾನಿಗೊಳಿಸುತ್ತಾ ಬರುತ್ತದೆ ಎಂದು ಡಾ. ಮಹೇಶ್ ಎಚ್ಚರಿಸುತ್ತಾರೆ.

ಆಧುನಿಕ ಜೀವನಶೈಲಿಯು ನಿದ್ರಾಹೀನತೆ, ಔಷಧ ದುರ್ಬಳಕೆ, ಕಲಬೆರಕೆ ಆಹಾರಗಳು, ಮಾಲಿನ್ಯ ಮತ್ತು ಒಂಟಿತನದಂತಹ ಇತರ ಸಮಸ್ಯೆಗಳನ್ನು ತಂದೊಡ್ಡಿದೆ. ಜೀವನಶೈಲಿ ಮಾರ್ಪಾಡು ಇಂದಿನ ಅಗತ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: