World Soil Day 2022: ಕರ್ನಾಟಕದಲ್ಲಿ ಎಷ್ಟು ತರಹದ ಮಣ್ಣು ಇದೆ ? ಇಲ್ಲಿ ಯಾವ ಬೆಳೆ ಸೂಕ್ತ ಇಲ್ಲಿದೆ ಮಾಹಿತಿ
ನಮ್ಮ ಮುಂದಿನ ಪೀಳಿಗೆಗೆ ಫಲತ್ತಾದ ಮಣ್ಣನ್ನು ಉಳಿಸಲು ವಿಶ್ವ ಮಣ್ಣಿನ ದಿನದಂದು ಮಣ್ಣಿನ ಕುರಿತಾದ ಕೆಲವು ಆಸ್ತಿದಾಯಕ ಮಾಹಿತಿಗಳು ಇಲ್ಲಿವೆ
International Soil Conservation Day: ಮಣ್ಣು ಸರ್ವ ಜೀವ ಸಂಕುಲಕ್ಕೆ ಜೀವದಾತ. ಮಣ್ಣು ಅನಾದಿ ಕಾಲದಿಂದಲೂ ಪ್ರಾಣಿ ಸಂಕುಲಕ್ಕೆ ಎಲ್ಲವನ್ನೂ ಒದಗಿಸುತ್ತಾ ಬಂದಿದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಮಣ್ಣಿನ ಮೇಲೆ ಅವಲಂಬನೆಯಾಗಿದೆ. ಆದರೆ ಈಗ 21ನೇ ಶತಮಾನದಲ್ಲಿ ಮನುಷ್ಯ ಪ್ರಾಣಿ ಮಿತಿ ಮೀರಿ ಮಣ್ಣನ್ನು ಹಾಳು ಮಾಡುತ್ತಿದ್ದಾನೆ. ಮಣ್ಣಿನಿಂದ ಅಮೃತ ಉಂಡು ಮಣ್ಣಿಗೆ ವಿಷ ಉಣಿಸುತ್ತಿದ್ದಾನೆ. ಮಣ್ಣಿಗು ಕೂಡ ಜೀವ ಇದೆ ಎಂಬುವುದನ್ನೇ ಮರತೇ ಹೋಗಿದ್ದಾನೆ.
ಹೀಗಾಗಿ ಪ್ರತಿ ವರ್ಷ ಡಿಸೆಂಬರ್ 5 ರಂದು ಇಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ. ಈ ಮೂಲಕ ಮಣ್ಣಿಗು ಜೀವವಿದೆ. ಮಣ್ಣನ್ನು ಉಳಿಸುವುದು ನಮ್ಮ ಕರ್ತವ್ಯವೆಂದು ಅರಿಯಬೇಕಾಗಿದೆ. ಹೀಗಾಗಿ ಇಂದು ನಮ್ಮ ಮಣ್ಣಿನ ಮಹತ್ವ, ಪ್ರಾಮುಖ್ಯತೆ ಬಗ್ಗೆ ತಿಳಿಯೋಣ.
ಕರ್ನಾಟಕದಲ್ಲಿ ಎಷ್ಟು ತರಹದ ಮಣ್ಣು ಇದೆ ? ಅಲ್ಲಿ-ಎಂತಹ ಬೆಳೆ ಸೂಕ್ತ?
ಕರ್ನಾಟಕದ ಕೃಷಿ ವಲಯಗಳು
ಕರ್ನಾಟಕದಲ್ಲಿ 10 ಕೃಷಿ ವಲಯಗಳಾಗಿ ವಿಂಗಡಿಸಲಾಗಿದೆ. ಈ 10 ಕೃಷಿ ವಲಯಗಳನ್ನು 4 ಪಾಯಿಂಟ್ಸ್ ಆಧಾರದ ಮೇಲೆ ವಿಂಗಡಿಸಲಾಗಿದೆ. 1. ಹವಾಮಾನ 2. ಮಣ್ಣು 3. ಮೇಲ್ಮೈ ಲಕ್ಷಣ 4. ಬೆಳೆ ಪದ್ಧತಿ ಅಥವಾ ಜೀವ ವೈದ್ಯತೆ ಆಧಾರದ ಮೇಲೆ ವಿಂಡಣೆ ಮಾಡಲಾಗುತ್ತದೆ. ಈ ವಲಯಗಳನ್ನು ತಾಲೂಕು ಗಡಿರೇಖೆ ಆಧಾರದ ಮೇಲೆ ವಿಂಗಡಿಸಲಾಗುತ್ತದೆ.
10 ಕೃಷಿ ವಲಯಗಳು
- ಈಶಾನ್ಯ ಅರೆ ಮಲೆನಾಡು (North Eastern Transition Zone) ಈಶಾನ್ಯ ಅರೆ ಮಲೆನಾಡು ಪ್ರದೇಶದಲ್ಲಿ 830 ರಿಂದ 890 ಮಿಲಿ ಮೀಟರ್, ಶೇ 63ರಷ್ಟು ಮಳೆಯಾಗುತ್ತದೆ. ಬೀದರ್ ಬೆಳಗಾವಿ ಜಿಲ್ಲೆಗಳನ್ನು ಈಶಾನ್ಯ ಅರೆ ಮಲೆನಾಡು ಪ್ರದೇಶ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಕಪ್ಪು ಮಣ್ಣು, ಮಧ್ಯಮದ ಆಳವಾದ ಕಪ್ಪು ಮಣ್ಣು, ಜೇಡಿ ಮಣ್ಣು ಮತ್ತು ಜಂಬಿಟ್ಟಿಗೆ ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಸಾಮಾನ್ಯವಾಗಿ ಬೇಳೆಕಾಳು, ಜೋಳ, ಎಣ್ಣೆ ಕಾಳು, ಸಜ್ಜೆ, ಹತ್ತಿ ಮತ್ತು ಕಬ್ಬನ್ನು ಬೆಳೆಯುತ್ತಾರೆ.
- ಈಶಾನ್ಯ ಒಣ ವಲಯ ( North Eastern dry Zone ) ಈಶಾನ್ಯ ಒಣ ವಲಯ ಪ್ರದೇಶದಲ್ಲಿ ಹಿಂಗಾರಿನಲ್ಲಿ 633.2 ರಿಂದ 806.6 ಮಿಲಿ ಮೀಟರ್, ಶೇ 55 ರಷ್ಟು ಹಿಂಗಾರು ಮಳೆಯಾಗುತ್ತದೆ. ಈ ಪ್ರದೇಶದ ಎಲ್ಲ ತಾಲೂಕುಗಳಲ್ಲಿ ಸಾಮಾನ್ಯವಾಗಿ 300 ರಿಂದ 450 ಮಿಮೀ ಮಳೆಯಾಗುತ್ತದೆ. ಈ ಪ್ರದೇಶ ಆಳವಾದ ಅಥವಾ ಅತಿ ಆಳವಾದ ಕಪ್ಪು ಮಣ್ಣನ್ನು ಒಳಗೊಂಡಿದೆ. ಈ ಮಣ್ಣಿನಲ್ಲಿ ಸಾಮಾನ್ಯವಾಗಿ ಹಿಂಗಾರು ಜೋಳ, ಸಜ್ಜೆ, ಬೇಳೆಕಾಳು, ಎಣ್ಣೆ ಕಾಳು (ಶೇಂಗಾ, ಸುರೇಪಾನ, ಕಡಲೆ, ಸೂರ್ಯಕಾಂತಿ, ಹುಚ್ಚೆಳ್ಳು, ಎಳ್ಳು, ಹರಳು ಹಾಗೂ ಸಾಸಿವೆ) ಬೆಳೆಗಳನ್ನು ಮತ್ತು ಹತ್ತಿಯನ್ನು ಬೆಳೆಯಲಾಗುತ್ತದೆ.
- ಉತ್ತರ ಒಣ ವಲಯ (Northern Dry zone) ಉತ್ತರ ಒಣ ವಲಯ ಪ್ರದೇಶದಲ್ಲಿ ಹಿಂಗಾರಿನಲ್ಲಿ 464.5 ರಿಂದ 785.7 ಮಿಲಿ ಮೀಟರ್, ಶೇ 52 ರಷ್ಟು ವಾರ್ಷಿಕ ಮಳೆಯಾಗುತ್ತದೆ. ವಿಜಯಪುರ, ಬೆಳಗಾವಿಯ ಕೆಳ ಪ್ರದೇಶವನ್ನು ಉತ್ತರ ವಣವಲಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿ ಮಧ್ಯಮ ಅಥವಾ ಆಳವಾದ ಕಪ್ಪು ಮಣ್ಣು ದೊರೆಯುತ್ತದೆ. ಈ ಮಣ್ಣಿನಲ್ಲಿ ಜೇಡಿ ಮಣ್ಣು ಹೆಚ್ಚಾಗಿ ಕೂಡಿಕೊಂಡಿರುತ್ತದೆ. ಈ ಮಣ್ಣಿನಲ್ಲಿ ಸಾಮಾನ್ಯವಾಗಿ ಹಿಂಗಾರು ಜೋಳ, ಮೆಕ್ಕೆಜೋಳ, ಕಡ್ಲೆಕಾಯಿ, ಹತ್ತಿ, ಗೋದಿ, ಕಬ್ಬು ಮತ್ತು ತಂಬಾಕನ್ನು ಬೆಳೆಯಲಾಗುತ್ತದೆ.
- ಮಧ್ಯದ ಒಣ ವಲಯ (Central Dry Zone) ಮಧ್ಯದ ಒಣ ವಲಯ ಪ್ರದೇಶದಲ್ಲಿ ಮುಂಗಾರಿನಲ್ಲಿ 453.5 ರಿಂದ 717.7 ಮಿಲಿ ಮೀಟರ್, ಶೇ 55 ರಷ್ಟು ವಾರ್ಷಿಕ ಮಳೆಯಾಗುತ್ತದೆ. ದಾವಣಗೆರೆ, ಚಿತ್ರದುರ್ಗ ಸುತ್ತಮುತ್ತಲಿನ ಪ್ರದೇಶವನ್ನು ಮಧ್ಯದ ವಣವಲಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣು, ಕಪ್ಪು ಮಣ್ಣು ಕಂಡು ಬರುತ್ತದೆ. ಈ ಮಣ್ಣಿನಲ್ಲಿ ಸಾಮಾನ್ಯವಾಗಿ ರಾಗಿ, ಜೋಳ, ಬೇಳೆ ಕಾಳು ಮತ್ತು ಎಣ್ಣೆ ಕಾಳು (ಶೇಂಗಾ, ಸುರೇಪಾನ, ಕಡಲೆ, ಸೂರ್ಯಕಾಂತಿ, ಹುಚ್ಚೆಳ್ಳು, ಎಳ್ಳು, ಹರಳು ಹಾಗೂ ಸಾಸಿವೆ) ಬೆಳೆಗಳನ್ನು ಬೆಳೆಯುತ್ತಾರೆ.
- ಪೂರ್ವ ಒಣ ವಲಯ (Eastern dry zone) ಪೂರ್ವ ಒಣ ವಲಯ ಪ್ರದೇಶದಲ್ಲಿ ಮುಂಗಾರಿನಲ್ಲಿ 679.1 ರಿಂದ 888.9 ಮಿಲಿ ಮೀಟರ್, ಶೇ 50 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನ ಮೂರು ತಾಲೂಕುಗಳನ್ನು ಮಧ್ಯದ ವಣವಲಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿ ಕೆಂಪು ಗೋಡು ಮಣ್ಣು, ಜಂಬಿಟ್ಟಿಗೆ ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ರಾಗಿ, ಭತ್ತ, ಬೇಳೆ ಕಾಳುಗಳು, ಮೆಕ್ಕೆಜೋಳ ಮತ್ತು ಎಣ್ಣೆ ಕಾಳುಗಳನ್ನು (ಶೇಂಗಾ, ಸುರೇಪಾನ, ಕಡಲೆ, ಸೂರ್ಯಕಾಂತಿ, ಹುಚ್ಚೆಳ್ಳು, ಎಳ್ಳು, ಹರಳು ಹಾಗೂ ಸಾಸಿವೆ) ಬೆಳೆಗಳನ್ನು ಬೆಳೆಯಲಾಗುತ್ತದೆ.
- ದಕ್ಷಿಣ ಒಣ ವಲಯ (Southern dry zone) ದಕ್ಷಿಣ ಒಣ ವಲಯ ಪ್ರದೇಶದಲ್ಲಿ ಮುಂಗಾರಿನಲ್ಲಿ 670.6 ರಿಂದ 888.6 ಮಿಲಿ ಮೀಟರ್, ಶೇ 60 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಮಂಡ್ಯ, ಮೈಸೂರಿನ ಎರಡರಿಂದ ಮೂರು ತಾಲೂಕು ಮತ್ತು ಚಾಮರಾಜನಗರ ಪ್ರದೇಶಗಳನ್ನು ದಕ್ಷಿಣ ವಣವಲಯ ಪ್ರದೇಶ ಎಂದು ಗುರುತಿಸಲಾಗಿದೆ. ಮರಳು ಮಿಶ್ರಿತ ಗೋಡ ಮಣ್ಣು, ಕೆಂಪು ಗೋಡ ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಭತ್ತ, ರಾಗಿ, ಬೇಳೆಕಾಳು, ಜೋಳ ಮತ್ತು ತಂಬಾಕು ಬೆಳೆಗಳನ್ನು ಬೆಳೆಯಲಾಗುತ್ತದೆ. ತಂಬಾಕನ್ನು ಮೈಸೂರು ಗ್ರಾಮಾಂತರ ಭಾಗದಲ್ಲಿ ಬೆಳೆಯಲಾಗುತ್ತದೆ.
- ದಕ್ಷಿಣ ಅರೆ ಮಲೆನಾಡು (Southern Transition Zone) ದಕ್ಷಿಣ ಅರೆ ಮಲೆನಾಡು ಮುಂಗಾರಿನಲ್ಲಿ 611.7 ರಿಂದ 1053.9 ಮಿಲಿ ಮೀಟರ್, ಶೇ 61 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಹಾಸನ ಮತ್ತು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಪ್ರದೇಶಗಳನ್ನು ದಕ್ಷಿಣ ಅರೆ ಮಲೆನಾಡು ಪ್ರದೇಶ ಎಂದು ಗುರುತಿಸಲಾಗಿದೆ. ಮರಳು ಮಿಶ್ರಿತ ಕೆಂಪು ಮಣ್ಣು, ಕೆಂಪು ಗೋಡ ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಭತ್ತ, ರಾಗಿ, ಬೇಳೆಕಾಳು, ಜೋಳ ಮತ್ತು ತಂಬಾಕು ಬೆಳೆಗಳನ್ನು ಬೆಳೆಯಲಾಗುತ್ತದೆ.
- ಉತ್ತರ ಅರೆ ಮಲೆನಾಡು (Northern transition zone) ಉತ್ತರ ಅರೆ ಮಲೆನಾಡು ಮುಂಗಾರಿನಲ್ಲಿ 619.4 ರಿಂದ 1302.3 ಮಿಲಿ ಮೀಟರ್, ಶೇ 61 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಪ್ರದೇಶಗಳನ್ನು ಉತ್ತರ ಅರೆ ಮಲೆನಾಡು ಪ್ರದೇಶ ಎಂದು ಗುರುತಿಸಲಾಗಿದೆ. ಮಧ್ಯದ ಕಪ್ಪು ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಭತ್ತ, ಜೋಳ, ಶೇಂಗಾ, ಬೇಳೆಕಾಳು, ಕಬ್ಬು, ತಂಬಾಕು ಬೆಳೆಗಳನ್ನು ಬೆಳೆಯಲಾಗುತ್ತದೆ.
- ಮಲೆನಾಡು/ಮಳೆನಾಡು (Hilly zone) ಮಲೆನಾಡು/ಮಳೆನಾಡು ಮುಂಗಾರಿನಲ್ಲಿ 904.4 ರಿಂದ 3695.1 ಮಿಲಿ ಮೀಟರ್, ಶೇ 71 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಸಕಲೇಶಪುರ, ಚಿಕ್ಕಮಗಳೂರು ಕೆಲವು ಭಾಗಗಳನ್ನು ಮಲೆನಾಡು/ಮಳೆನಾಡು ಪ್ರದೇಶ ಎಂದು ಗುರುತಿಸಲಾಗಿದೆ. ಮರಳು ಮಿಶ್ರಿತ ಕೆಂಪು ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಭತ್ತ ಬೇಳೆಕಾಳುಗಳನ್ನು ಬೆಳೆಯಲಾಗುತ್ತದೆ.
- ಕರಾವಳಿ ಪ್ರದೇಶ (Coastal Zone) ಕರಾವಳಿ ಪ್ರದೇಶ ಮುಂಗಾರಿನಲ್ಲಿ 3010.9 ರಿಂದ 4694.4 ಮಿಲಿ ಮೀಟರ್, ಶೇ 80 ರಷ್ಟು ವಾರ್ಷಿಕ ಮಳೆಯಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಕರಾವಳಿ ಪ್ರದೇಶ ಎಂದು ಗುರುತಿಸಲಾಗಿದೆ. ಕೆಂಪು ಜಂಬಿಟ್ಟಿಕ್ಕೆ ಮಣ್ಣು, ಮೆಕ್ಕಲು ಮಣ್ಣು ಕಾಣ ಸಿಗುತ್ತದೆ. ಈ ಮಣ್ಣಿನಲ್ಲಿ ಭತ್ತ, ಬೇಳೆಕಾಳುಗಳು ಮತ್ತು ಕಬ್ಬನ್ನು ಬೆಳೆಯಲಾಗುತ್ತದೆ.
ಕರ್ನಾಟಕದಲ್ಲಿ 6 ವಿವಿಧ ಬಣ್ಣದ ಮಣ್ಣುಗಳನ್ನು ನೋಡಬಹುದಾಗಿದೆ 1. ಕಪ್ಪು ಮಣ್ಣು 2. ಜಂಬಿಟ್ಟಿಗೆ ಮಣ್ಣು 3. ಕೆಂಪು ಮಣ್ಣು 4. ಮೆಕ್ಕಲು ಮಣ್ಣು 5. ಅರಣ್ಯ ಮಣ್ಣು (ಹೆಚ್ಚು ಫಲವತ್ತೆಯಿಂದ ಕೂಡಿದ ಭೂಮಿ) 6. ಕರಾವಳಿಯ ಮೆಕ್ಕಲು ಮಣ್ಣು ಎಂದು ವಿಭಾಗಿಸಲಾಗಿದೆ.
ಲೇಖನ: ಆರ್ ಕೃಷ್ಣ ಮೂರ್ತಿ (ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ ಕೃಷಿ ಕಾಲೇಜು ಜಿಕೆವಿಕೆ ಪ್ರೊಫೆಸರ್ ಮತ್ತು ಸ್ಕೀಮ್ ಹೆಡ್) ಮತ್ತು ಡಾ ಮಂಜುನಾಥ ಎಂ ಹೆಚ್ (ಕೃಷಿಶಾಸ್ತ್ರಜ್ಞ, ಯುಎಎಸ್ ಜಿಕೆವಿಕೆ ಬೆಂಗಳೂರು)
Published On - 10:04 am, Mon, 5 December 22