ಜಯ ಮಾರ್ತಾಂಡ ಮೊದಲ ಅಂಬಾರಿ ಹೊತ್ತ ಆನೆ! 45 ವರ್ಷ ಕಾಲ ದಸರಾದಲ್ಲಿ ಮಿಂಚಿತ್ತು!

ಮೈಸೂರು: ವಿಶ್ವವಿಖ್ಯಾತ ದಸರಾವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ. 9 ದಿನ ನವ ದೇವತೆಗಳ ಪೂಜೆ ಮಾಡಿ ಅರಮನೆಯಲ್ಲಿ ವಿವಿಧ ರೀತಿಯ ಪೂಜೆ ಕೈಂಕರ್ಯ, ನಾನಾ ರೀತಿಯ ಆಟಗಳು, ಖಾಸಗಿ ದರ್ಬಾರಿ, ಜಂಬೂ ಸವಾರಿ ಹೀಗೆ ಅನೇಕ ಕಾರ್ಯಕ್ರಮಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತೆ.

ಇದನ್ನು ವೀಕ್ಷಿಸಲು ವಿದೇಶಗಳಿಂದ ಜನ ಬರ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ದಸರಾವನ್ನು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಆಚರಿಸಲಾಗುತ್ತಿದೆ. ಹಾಗಿದ್ರೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ದಸರಾ ಆಚರಣೆ ಹೇಗಿತ್ತು ಅನ್ನೋದನ್ನ ನೋಡೋದಾದ್ರೆ.

ಟಿಪ್ಪು ಆಡಳಿತಾವಧಿಯಲ್ಲಿ ದಸರಾ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿತ್ತು. ಟಿಪ್ಪುವಿನ ಮರಣದ ನಂತರ ದಸರಾ ವೈಭವ ಮತ್ತೆ ಮರುಕಳಿಸಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ದಸರಾಗೆ ಮರು ಜೀವ ನೀಡಿದ್ದರು. ಬ್ರಿಟಿಷರ ಕಾಲದಲ್ಲೆ ದಸರಾ ಆಚರಣೆ ಭರ್ಜರಿಯಾಗಿ ಸಾಗುತ್ತಿತ್ತು. ಆದರೆ ಮರದ ಅರಮನೆ ಬೆಂಕಿಗೆ ಆಹುತಿಯಾದ ಬಳಿಕ 1910ರಲ್ಲಿ ಹೊಸ ಅರಮನೆಯಲ್ಲಿ ದಸರಾ ಆಚರಣೆ ಮಾಡಲಾಯಿತು.

ದಸರಾವನ್ನು ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ, ಜನಮುಖಿ ಕಾರ್ಯಕ್ರಮವೆಂದು ಆಚರಿಸಲಾಗುತ್ತಿತ್ತು. ಇನ್ನು ದೇಶದಲ್ಲೇ ಅತಿ ಧೀರ್ಘ ಕಾಲ ಆಡಳಿತ ನಡೆಸಿದ ರಾಜರು ಯದುವಂಶದ ಅರಸರು. ಇವರು 1399 ರಿಂದ 1947ರ ವರೆಗೆ ಆಳ್ವಿಕೆ ನಡೆಸಿದ್ದಾರೆ. ಬರೊಬ್ಬರಿ 548 ವರ್ಷಗಳ ಕಾಲ ಆಳ್ವಿಕೆ ನಡೆದಿದೆ.

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳ ವಿವರ:
ಜಯ ಮಾರ್ತಾಂಡ, ವಿಜಯ ಬಹದ್ದೂರ್ ನಂಜುಂಡ, ರಾಮಪ್ರಸಾದ್, ಮೋತೀಲಾಲ್, ಸುಂದರ್ ರಾಜ್, ಐರಾವತ, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ, ಅರ್ಜುನ, ಬಲರಾಮ ಮತ್ತೆ ಅರ್ಜುನ ಹೀಗೆ ದಸರಾ ಜಂಬು ಸವಾರಿ ನಡೆದು ಬಂದಿದೆ. ಜಯ ಮಾರ್ತಾಂಡ ಆನೆ ಮೊದಲ ಮೈಸೂರ ದಸರಾ ಅಂಬಾರಿ ಹೊತ್ತ ಆನೆ.

ಇದು ಪಿರಿಯಾ ಪಟ್ಟಣದ ಬೆಟ್ಟದಪುರ ಬಳಿ ಮೈಸೂರು ಅರಸರಿಗೆ ಸೆರೆ ಸಿಕ್ಕಿತ್ತು. ಇನ್ನು ವಿಶೇಷ ಅಂದ್ರೆ ಇದು ಸತತ 45 ವರ್ಷಗಳ ಕಾಲ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿತ್ತು. ಜಯ ಮಾರ್ತಾಂಡ ಆನೆ ಅಂದ್ರೆ ರಾಜ ಕೃಷ್ಣದೇವರಾಯ ಒಡೆಯರ್​ಗೆ ಅತ್ಯಂತ ಪ್ರೀತಿ ಪಾರ್ತವಾದ ಆನೆ. ಹೀಗಾಗಿ ಅರಮನೆಯ ದ್ವಾರವೊಂದಕ್ಕೆ ಇದೇ ಆನೆಯ ಹೆಸರಿಡಲಾಗಿದೆ.

ಅಂಬಾರಿ ಹೊತ್ತ ಐರಾವತ ಹಾಲಿವುಡ್ ಚಿತ್ರದಲ್ಲಿ ನಟನೆ:
ಇನ್ನೊಂದು ವಿಶೇಷ ಅಂದ್ರೆ ಮೈಸೂರು ದಸರೆಯ ಅಂಬಾರಿ ಹೊತ್ತ ಐರಾವತ ಆನೆ ದಿ ಎಲಿಫೆಂಟ್ ಬಾಯ್ ಅನ್ನೋ ಹಾಲಿವುಡ್ ಚಿತ್ರದಲ್ಲಿ ನಟಿಸಿತ್ತು. ಐರಾವತ ಆನೆಯ ಮಾವುತ ಮೈಸೂರ್ ಸಾಬು ಅನ್ನೋ 7 ವರ್ಷದ ಬಾಲಕ ಕೂಡ ಚಿತ್ರದಲ್ಲಿ ನಟಿಸಿದ್ದ. ಮತ್ತು ಬಿಳಿಗಿರಿ ಆನೆ, ಅಂಬಾರಿ ಹೊತ್ತ ಆನೆಗಳಲ್ಲೇ ಅತ್ಯಂತ ಬಲಿಷ್ಠ ಮತ್ತು ದೈತ್ಯ ಆನೆ.

ಇದು 7000 ಕೆಜಿ , 10.5 ಅಡಿ ಎತ್ತರವಿತ್ತು. ಅಲ್ಲದೆ ಮೈಸೂರು ಮಹಾರಾಜರನ್ನ ಹೊತ್ತೋಯ್ದ ಕಟ್ಟ ಕಡೆಯ ಆನೆ ಇದಾಗಿದೆ. ಹಾಗೂ ಡಾ.ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರದಲ್ಲಿ ನಟಿಸಿದ್ದ ಆನೆ ಕೂಡ ಅಂಬಾರಿ ಹೊತ್ತ ರಾಜೇಂದ್ರ ಎಂಬ ಹೆಸರಿನ ಆನೆ. ಇದು ಕನ್ನಡ ಚಿತ್ರದಲ್ಲಿ ನಟಿಸಿತ್ತು.

ಜಯ ಮಾರ್ತಾಂಡ ಆನೆ ಬಳಿಕ ಧೀರ್ಘ ಕಾಲ ಅಂಬಾರಿಯನ್ನ ಹೊತ್ತಿದ್ದ ಕೀರ್ತಿ ದ್ರೋಣ ಆನೆಗೆ ಸಲ್ಲುತ್ತದೆ. ಇದು ಸುಮಾರು 18 ವರ್ಷಗಳ ಅಂಬಾರಿ ಹೊತ್ತಿತ್ತು. 1981ರಿಂದ 1997ರ ವರೆಗೆ ನಿರಂತರವಾಗಿ ಅಂಬಾರಿಗೆ ಬೆನ್ನುಕೊಟ್ಟಿದೆ. ದ್ರೋಣ ಆನೆ ಪ್ರಸಿದ್ಧ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಎಂಬ ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಿತ್ತು. ನಂತರ 1999ರಲ್ಲಿ ಅರ್ಜುನ ಆನೆ ಮೊದಲ ಬಾರಿಗೆ ಅಂಬಾರಿಯ ಜವಾಬ್ದಾರಿಯನ್ನು ಹೊತ್ತಿತ್ತು.

ಬಳಿಕ ಆಕಸ್ಮಿಕವಾಗಿ ಮಾವುತನನ್ನ ಕೊಂದ ಹಿನ್ನೆಲೆಯಲ್ಲಿ ದಸರಾ ಉತ್ಸವದಿಂದ ದೂರ ಉಳಿದಿತ್ತು. ಸದ್ಯ 2012ರಲ್ಲಿ ಮತ್ತೆ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಿದ್ದು ಸತತ ಮೂರು ಬಾರಿ ಅರ್ಜುನ ಅಂಬಾರಿ ಹೊತ್ತು ರಾಜ ಬೀದಿಗಳಿಗೆ ರಾಜ ವೈಭವವನ್ನು ತಂದಿದ್ದ. 2020ರಲ್ಲಿ ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ ದಸರಾ ಅಂಬಾರಿ ಹೊರಲಿದೆ. ಇದಕ್ಕೆ ಸಕಲ ಸಿದ್ಧತೆ, ತಯಾರಿಗಳು ನಡೆದಿವೆ.

Related Tags:

Related Posts :

Category:

error: Content is protected !!