Ganapati Bhat Hasanagi : ಅಲ್ಲಿ ಹಬೆಯಾಡುವ ಅಡಿಕೆ ಹರವುತ್ತಿರುವ ಈ ಗಂಧರ್ವ ಕಾಣಸಿಗುತ್ತಿದ್ದರು

Hindustani Classical Music : ‘21 ರ ಹಸಿವಯದಲ್ಲಿ ಅವರ ಮನೆಗೆ ಕಾಲಿಟ್ಟ ನನ್ನನ್ನು ಸಂದರ್ಭಕ್ಕೆ ತಕ್ಕಂತೆ ಫ್ರೆಂಡ್, ಫಿಲಾಸಫರ್, ಗೈಡ್ ಆಗಿ ಪರೋಕ್ಷವಾಗಿ ಪೊರೆದಿದ್ದಾರೆ. ಯಾವ ಶಾಸ್ತ್ರೀಯ ಚೌಕಟ್ಟಿಗೂ ಒಗ್ಗದ ನನ್ನಂಥವಳನ್ನು ನನ್ನ ಪಾಡಿಗೆ ಹರಿಯಲು ಬಿಟ್ಟಿದ್ದಾರೆ. ಸಂಬಂಧ ಬಂಧನವಾಗದಂತೆ ತೀವ್ರವಾಗಿ ಬದುಕುವುದನ್ನು ಅವರಿಂದ ಕಲಿತಿದ್ದೇನೆ. ಸಂಗೀತದ ತಾಂತ್ರಿಕ ಕಟ್ಟಡದ ಅರಿವಿಲ್ಲದ ನನ್ನಂಥವಳಿಗೆ ಅವರ ಹಾಡುಗಳು ಎಂದೂ ಬತ್ತದ ಭಾವ ನದಿ.’ ಡಾ. ಗೀತಾ ವಸಂತ

Ganapati Bhat Hasanagi : ಅಲ್ಲಿ ಹಬೆಯಾಡುವ ಅಡಿಕೆ ಹರವುತ್ತಿರುವ ಈ ಗಂಧರ್ವ ಕಾಣಸಿಗುತ್ತಿದ್ದರು
ಪಂಡಿತ್ ಗಣಪತಿ ಭಟ್ಟ ಮತ್ತು ಡಾ. ಗೀತಾ ವಸಂತ
Follow us
ಶ್ರೀದೇವಿ ಕಳಸದ
|

Updated on:Dec 12, 2021 | 10:15 AM

Ganapati Bhat Hasanagi : ಮುಂದೆ ನಾನು ಗಣಪತಿ ಭಟ್ಟರ ಸೊಸೆಯಾಗಿ ಅವರ ಕುಟುಂಬದ ಭಾಗವಾದಾಗ ಅವರ ಮನುಷ್ಯ ಸಹಜ ತಳಮಳಗಳ ಲೋಕವೊಂದು ಬಿಚ್ಚಿಕೊಂಡಿತು. ಕಲಾಸೃಷ್ಟಿಯ ಹಿಂದಿರುವ ಬೇಯುವಿಕೆ, ತಳಮಳಗಳ ಝಳವನ್ನು ಹತ್ತಿರದ ಅನುಭವದಲ್ಲಿ ಕಾಣುವಂತಾಯಿತು. ಪ್ರತೀ ಕಾರ್ಯಕ್ರಮವನ್ನೂ ಒಂದು ಧ್ಯಾನವಾಗಿ ಧರಿಸುವುದು ಎಷ್ಟು ಮುಖ್ಯವೋ ಅದನ್ನು ಆಯೋಜಕರ ದೃಷ್ಟಿಯಲ್ಲಿ ಯಶಸ್ವಿಯಾಗಿಸುವದೂ ಅಷ್ಟೇ ಮುಖ್ಯವಾಗಿರುತ್ತಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ಅವರ ಚಪ್ಪಾಳೆ ವಾಹ್ವಾಹ್​ಗಳ ಸದ್ದಿನ ನಡುವೆಯೂ ಶಬ್ದದೊಳಗಿನ ನಿಶ್ಯಬ್ದವನ್ನು ಮುಟ್ಟಿಬರುವ ಸವಾಲು ಇದ್ದೇ ಇರುತ್ತಿತ್ತು. ಈ ಇಹಪರಗಳೆರಡರ ಒತ್ತಾಸೆಯನ್ನೂ ಅವರು ಒಂದಾಗಿಸಿ ನಿಭಾಯಿಸುತ್ತಿದ್ದ ಪರಿ ಅದ್ಭುತವೆನಿಸುತ್ತಿತ್ತು. ಇದ್ದಲ್ಲೇ ಇದ್ದು ಮೀರುವುದು ಅವರ ಬದುಕಿನ ಫಿಲಾಸಫಿಯೇ ಆಗಿತ್ತೆಂಬುದು ಆಮೇಲೆ ಅರಿವಾಗುತ್ತಾ ಹೋಯಿತು. ಡಾ. ಗೀತಾ ವಸಂತ, ಕವಿ, ಲೇಖಕಿ

*

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಪಂ. ಗಣಪತಿ ಭಟ್ಟ ಹಾಸಣಗಿ ಅವರಿಗೆ 70 ತುಂಬಿದ ಸಂದರ್ಭದಲ್ಲಿ ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಈ ಬೆಳಗ್ಗೆ 9.45ಕ್ಕೆ ಅಣ್ಣಾಜಿರಾವ ಶಿರೂರ ರಂಗಮಂದಿರದಲ್ಲಿ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಪ್ರಯುಕ್ತ ಡಾ. ಗೀತಾ ವಸಂತ ಅವರ ಆಪ್ತಬರಹ ನಿಮ್ಮ ಓದಿಗೆ.

*

ಬಾದರವಾ ಬರಸನ ಲಾಗೆ… ಹನಿದುಂಬಿದ ಮೋಡವು ಧುಮ್ಮಿಕ್ಕಲು ಕಾದಿರುವ ಕ್ಷಣವೊಂದರ ತೀವ್ರತೆಯನ್ನು ನಿಧಾನವಾಗಿ ಎದೆಯೊಳಗಿಳಿಯುವಂತೆ ಮಾಡಿದ ಮಾಂತ್ರಿಕ ಸ್ವರವೊಂದು ಎಳೆವಯದಲ್ಲಿ ತುಂಬ ಕಾಡಿತ್ತು. ಪಶ್ಚಿಮ ಘಟ್ಟಗಳ ನಿಗೂಢ ಮೌನ, ಆಳ ಕಣಿವೆಗಳ ಗಹನತೆ, ನದಿಗಳ ರಭಸ, ಮುಂದೆ ಸಮುದ್ರದ ಅಗಾಧತೆಯಲ್ಲಿ ಲೀನವಾಗುವ ಪರಿಪಕ್ವತೆ ಎಲ್ಲವನ್ನೂ ಆ ಮೋಡದಲ್ಲಿರುವ ಹನಿ ಒಳಗೊಂಡಂತಿತ್ತು. ಅಣುವೊಂದು ಮಹತ್ತನ್ನು ಅಡಗಿಸಿಟ್ಟುಕೊಳ್ಳುವಂತೆ. ಸಣ್ಣ ಕಂಪನವೊಂದು ವಿಸ್ತರಿಸುತ್ತಾ ಬ್ರಹ್ಮಾಂಡವನ್ನೇ ವ್ಯಾಪಿಸುವ ಅಲೌಕಿಕ ವಿದ್ಯಮಾನವೊಂದು ನಮ್ಮ ಇಂದ್ರಿಯಗಳ ಮಿತಿಯಾಚೆಗೆ ದಿನಂಪ್ರತಿ ಸಂಭವಿಸುತ್ತಲೇ ಇರುತ್ತದೆ. ನಾದದ ಅಖಂಡತೆಯಲ್ಲಿ ಮೀಯುವ ಇಂಥ ಸ್ವಪ್ನಸದೃಶ ಅನುಭೂತಿಯನ್ನು ಕ್ಷಣಿಕವಾಗಿಯಾದರೂ ಸೃಜಿಸುವ ಶಕ್ತಿ ಸಂಗೀತಕ್ಕಿದೆಯೆಂಬುದು ಅಸ್ಪಷ್ಟವಾಗಿ ಅನಿಸುತ್ತಿದ್ದ ಕಾಲವದು. ಇಂಥ ಕ್ಷಣಗಳನ್ನು ಸೃಜಿಸುವ ವ್ಯಕ್ತಿ ಹೇಗಿರಬಹುದೆಂಬ ಕುತೂಹಲವನ್ನು ತುಂಬಿತ್ತು.

ಕಲಾವಿದ ಸ್ವಪ್ನಲೋಕದವನಾಗಿರದೇ ಇದೇ ಮಣ್ಣ ಮನುಷ್ಯನಾಗಿರುತ್ತಾನೆ. ಈ ನೆಲದ ಎಲ್ಲ ಶಕ್ತಿ ಹಾಗೂ ದೌರ್ಬಲ್ಯಗಳೇ ಅವನನ್ನೂ ರೂಪಿಸುತ್ತವೆ. ಆದರೆ ಕಲೆಯು ಮಾರ್ಪಡಿಸುವ ಜಗತ್ತಿನಲ್ಲಿ ಆತ ಯಕ್ಷ ಕಿನ್ನರ ಗಂಧರ್ವನಂತೆ ಕಂಗೊಳಿಸುತ್ತಾನೆ. ಹಾಗೆ ವೇದಿಕೆಯೊಂದರಲ್ಲಿ ನಾನು ಗಣಪತಿ ಭಟ್ ಹಾಸಣಗಿಯವರನ್ನು ನೋಡಿದ್ದು. ನೆಲದಲ್ಲಿ ನಿಂತು ನಕ್ಷತ್ರ ನೋಡುವ ಬೆರಗಿನಲ್ಲಿ. ದೊಡ್ಡ ದೊಡ್ಡ ಅಲಂಕಾರಿಕ ಪದಗಳಲ್ಲಿ ನಿರೂಪಕರು ಅವರನ್ನು ಪರಿಚಯಿಸಿದ್ದರು. ಆಮೇಲೆ ಅನೇಕರು ಮಾತಾಡಿಸಲು ಮುಗಿಬೀಳುವುದು, ಕಾಲಿಗೆರಗುವುದು ಇವೆಲ್ಲ ಸೋಜಿಗವೆನಿಸಿತ್ತು. ಶಾಸ್ತ್ರೀಯ ಸಂಗೀತ, ಗುರು ಶಿಷ್ಯ ಪರಂಪರೆ‌ ಎಂಬೆಲ್ಲ ಮಾತುಗಳ ಅನುರಣನ ಅಲ್ಲಿತ್ತು. ಶಾಲು, ಹಾರ, ಪೇಟ, ಪ್ರಶಸ್ತಿಗಳ ಲೌಕಿಕ ಜಗತ್ತಿನಲ್ಲಿ ಕಲಾವಿದರಲ್ಲಿರುವ ಅಲೌಕಿಕ ಜಗತ್ತೊಂದು ಮುಚ್ಚಿಹೋಗುವುದಿಲ್ಲವೇ ಅನಿಸಿತ್ತು ಆಗ. ನಾದ ನದಿಯೊಂದು ತನ್ನೊಳಗೆ ಹರಿಯಲು ಅನುವು ಮಾಡಿಕೊಟ್ಟು ಕಲೆಯ ಸೃಷ್ಟಿಯನ್ನು ತನ್ನೊಳಗೆ ಬೆಳೆಸಿ ಹಿಗ್ಗುವ ಶ್ರೋತ್ರು ಎಲ್ಲೋ ಸದ್ದಿಲ್ಲದೇ ಎದ್ದುಹೋಗುತ್ತಾನೆ. ಇದು ಶಬ್ದಾಡಂಬರದ ಜಗತ್ತಲ್ಲ ಅನಿಸಿತ್ತು.  ಏಕಾಂತ ಹಾಗೂ ಲೋಕಾಂತಗಳ ನಡುವೆ ಹೊಯ್ದಾಡುವ ಸೂಕ್ಷ್ಮ ಮನಸ್ಸಿನ ತಳಮಳ ಮುಂದೆ ನನಗೆ ಅವರಲ್ಲಿ ಪ್ರತ್ಯಕ್ಷವಾಗಿ ಕಾಣುವ ಕಾಲ ಬಂತು…

ಭಟ್ಟರ ಸುರೀಲೀ ಸ್ವರದಲ್ಲಿ ಕೇಳಿದ ಸಪನೋ ಮೆ ಆಯಾ ಪಿಯರವಾ … ಮೋರಾ ಮನ ಲುಭಾಯೋ ಸಾವರಿಯಾ… ಲೇಜಾ ಸಂದೇಸವಾ ಮೋರೆ ಪ್ರಾಣ ಪಿಯಾ ಕೋ… ಮುಂತಾದ ಚೀಜುಗಳು ದಿವ್ಯ ಪ್ರೇಮವೊಂದರ ಮಧುರ ಆಲಾಪವನ್ನು ಸೃಜಿಸುತ್ತಿದ್ಧವು. ಪ್ರೇಮವು ಅದ್ಯಾವ ಉತ್ಕಟ ಕ್ಷಣಗಳಲ್ಲಿ ಭಕ್ತಿಯ ಭಾವಾರ್ದೃತೆ ತಲುಪಿತೋ ಎಂಬುದು ಗೊತ್ತೇ ಆಗದಂತೆ ಅಲ್ಲೊಂದು ಭಾವವಿಕಾಸವು ಸಂಭವಿಸಿರುತ್ತಿತ್ತು. ತೇರೋ ಹೀ ಧ್ಯಾನ ಧರತ ಹೂಂ ಹೇ ಕರತಾರ… ಎಂದು ಧ್ಯಾನಲೀನವಾಗುವ ಸ್ವರಗಳು, ಕಂಡು ಕಂಡು ನೀ ಎನ್ನ ಕೈ ಬಿಡುವರೇ… ಎಂಬಲ್ಲಿ ಮಗುವಿನ ಆರ್ತಭಾವ ತಾಳುತ್ತಿದ್ದವು. ಎಷ್ಟೆಲ್ಲ ಭಾವಗಳು ಸಂಚರಿಸುವಂತೆ ಮಾಡುವ ಈ ಸ್ವರಸಂಚಾರಿಯ ಕುರಿತು ಗೌರವಬೆರೆತ  ಅಭಿಮಾನವಿತ್ತು. ಆದರೆ ನಾನೆಂದೂ ಅವರನ್ನು ಮಾತನಾಡಿಸಲಿಲ್ಲ. ನನ್ನ ಭಾವಜಗತ್ತನ್ನು ಹಿಗ್ಗಿಸಿಕೊಳ್ಳಲು ಬೇಕಾದ ಭಾವಗಳನ್ನು ಸುಮ್ಮನೆ ಹೀರಿಕೊಂಡಿದ್ದೆ.

70th birthday celebrations of Pandit Ganapati Bhat Hasanagi in Dharwad Kannada writer-poet Geeta Vasant penned her thoughts

1981 ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಣಗಿ ಬಾಳಪ್ಪ ಅವರ ನಿರ್ದೆಶನದಲ್ಲಿ ನಡೆದ ಕನ್ನಡ ರಂಗಗೀತೆಗಳ ಕಾರ್ಯಕ್ರಮದಲ್ಲಿ ಬಿಜ್ಜಳನ ಪಾತ್ರದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿ.

ಮುಂದೆ ನಾನು ಗಣಪತಿ ಭಟ್ಟರ ಸೊಸೆಯಾಗಿ ಅವರ ಕುಟುಂಬದ ಭಾಗವಾದಾಗ ಅವರ ಮನುಷ್ಯ ಸಹಜ ತಳಮಳಗಳ ಲೋಕವೊಂದು ಬಿಚ್ಚಿಕೊಂಡಿತು. ಕಲಾಸೃಷ್ಟಿಯ ಹಿಂದಿರುವ ಬೇಯುವಿಕೆ, ತಳಮಳಗಳ ಝಳವನ್ನು ಹತ್ತಿರದ ಅನುಭವದಲ್ಲಿ ಕಾಣುವಂತಾಯಿತು. ಪ್ರತೀ ಕಾರ್ಯಕ್ರಮವನ್ನೂ ಒಂದು ಧ್ಯಾನವಾಗಿ ಧರಿಸುವುದು ಎಷ್ಟು ಮುಖ್ಯವೋ ಅದನ್ನು ಆಯೋಜಕರ ದೃಷ್ಟಿಯಲ್ಲಿ ಯಶಸ್ವಿಯಾಗಿಸುವದೂ ಅಷ್ಟೇ ಮುಖ್ಯವಾಗಿರುತ್ತಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ಅವರ ಚಪ್ಪಾಳೆ ವಾಹ್ವಾಹ್​ಗಳ ಸದ್ದಿನ ನಡುವೆಯೂ ಶಬ್ದದೊಳಗಿನ ನಿಶ್ಯಬ್ದವನ್ನು ಮುಟ್ಟಿಬರುವ ಸವಾಲು ಇದ್ದೇ ಇರುತ್ತಿತ್ತು. ಈ ಇಹಪರಗಳೆರಡರ ಒತ್ತಾಸೆಯನ್ನೂ ಅವರು ಒಂದಾಗಿಸಿ ನಿಭಾಯಿಸುತ್ತಿದ್ದ ಪರಿ ಅದ್ಭುತವೆನಿಸುತ್ತಿತ್ತು. ಇದ್ದಲ್ಲೇ ಇದ್ದು ಮೀರುವುದು ಅವರ ಬದುಕಿನ ಫಿಲಾಸಫಿಯೇ ಆಗಿತ್ತೆಂಬುದು ಆಮೇಲೆ ಅರಿವಾಗುತ್ತಾ ಹೋಯಿತು.

ಹಾಸಣಗಿ ಎಂಬ ಚಿಕ್ಕ ಊರಿನ ಗಣಪತಿ ಭಟ್ಟರು ಇಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿಶ್ವಕ್ಕೆ ವಿಸ್ತರಿಸಿರುವ ಹೆಸರು. ಶಿರಸಿ ಸಿದ್ದಾಪುರ ಯಲ್ಲಾಪುರ ಸೀಮೆಯ ದಟ್ಟ ಕಾಡು ಕಣಿವೆಗಳ ನಡುವೆ ಅಡಿಕೆ ತೋಟಗಳ ಶೈತ್ಯದಲ್ಲಿ ಮಲಗಿರುವ ಪುಟ್ಟ ಗ್ರಾಮಗಳ  ಜಗತ್ತನ್ನು ಅವರು ಬದುಕಿಗೆ ಆಧಾರವಾಗಿ ಇರಿಸಿಕೊಂಡವರು. ಯಕ್ಷಗಾನ ತಾಳಮದ್ದಳೆಗಳ ಸಾಂಸ್ಕೃತಿಕ ಜಗತ್ತಿಗೆ ಶಾಸ್ತ್ರೀಯ ಸಂಗೀತವನ್ನು ಪಸರಿಸಿದರು. ಸಂಗೀತ ಜಗತ್ತಿನ ಸ್ಪರ್ಧೆ, ಹಣ ಹಾಗೂ ಜನಪ್ರಿಯತೆಯ ಪ್ರಲೋಭನೆಯಿಂದ ಅವರು ಸದಾ ದೂರವೇ ಉಳಿದರು. ಹಳ್ಳಿ ಹುಡುಗನೊಬ್ಬನ ಸಂಕೋಚ ತುಂಬಿದ ಸತ್ವಶಾಲಿ ವ್ಯಕ್ತಿತ್ವವನ್ನು ಅವರು ಸದಾ ಕಾಪಿಟ್ಟುಕೊಂಡರು. ನಗರದ ಭ್ರಮೆಗಳಲ್ಲಿ ಪೊಳ್ಳಾಗದೇ ಉಳಿಯುವುದು ಅವರಿಗೆ ಸಾಧ್ಯವಾಯಿತು. ಈ ಪರಿಸರದ ಮೌನ ಹಾಗೂ ಅವರು ಸಿದ್ಧಿಸಿಕೊಂಡ ಆಂತರಿಕ ಮೌನಗಳು ಅವರನ್ನು ಅಂತರ್ಮುಖಗೊಳಿಸುತ್ತ ಸ್ವಾಯತ್ತ ಚಿಂತನೆಗಳುಳ್ಳ ಅನನ್ಯ ವ್ಯಕ್ತಿತ್ವವಾಗಿಸಿದೆಯೆನಿಸುತ್ತದೆ. ಆದರೆ ಈ ಸಿದ್ಧಿಯ ಹಿಂದೆ ಅವರ ತಳಮಳಗಳ ಕಾಲವೊಂದು ಇದ್ದೇ ಇತ್ತು. ಕುಟುಂಬಕ್ಕೆ ಸಂಬಂಧಿಸಿದ ಅಡಿಕೆ ಕೃಷಿಯನ್ನೂ ಅವರು ನಿಭಾಯಿಸಬೇಕಿತ್ತು. ಕೊನೆಕೊಯ್ಲಿನ ಚಳಿಮುಂಜಾವುಗಳಲ್ಲಿ ಬಿದಿರು ತಟ್ಟಿಯ ಮೇಲೆ ಬೆಂದು ಹಬೆಯಾಡುವ ಅಡಿಕೆ ಹರವುತ್ತಲೋ, ಒಣಗಿದ ಕೆಂಪಡಿಕೆಯನ್ನು ಆರಿಸಿ ವಿಂಗಡಿಸುತ್ತಲೋ ಇರುವ ಈ ಗಂಧರ್ವ ಕಾಣಸಿಗುತ್ತಿದ್ದರು!

ಇಲ್ಲಿ ಈ ನೆಲದ ಮನುಷ್ಯನೇ ಆಗಿರುವುದು ಸಹಜವಿತ್ತು. ಅನಿವಾರ್ಯವೂ ಆಗಿತ್ತು. ಕಲಾಸೃಷ್ಟಿಯ ತಳಮಳಗಳು ಹಾಗು ಬದುಕಿನ ಜವಾಬ್ದಾರಿಗಳು, ಸಂಬಂಧಗಳನ್ನು ಪೋಷಿಸಿಕೊಂಡು ಹೋಗುವ ಸೂಕ್ಷ್ಮತಲ್ಲಣಗಳು ಎಲ್ಲವನ್ನೂ ನಿಭಾಯಿಸಲು ಹೆಣಗುವ ಮನುಷ್ಯಲೋಕದ ಸಿಕ್ಕುಗಳಲ್ಲಿ ಸಿಕ್ಕ ಸಾಮಾನ್ಯ ಮನುಷ್ಯನ ಅಸಾಮಾನ್ಯ ಸವಾಲು ಅವರ ಮುಂದಿತ್ತು. ಏಕಾಕಿತನ, ವ್ಯಗ್ರತೆ, ಅಸಹಾಯಕತೆ ಎಲ್ಲವನ್ನೂ ದಾಟಿ ದಡಮುಟ್ಟುವ ಸಾಮರ್ಥ್ಯದಿಂದ ಅವರು ಗೆದ್ದರು. “ಅಬಮೋರೆ ನಯ್ಯಾ ಪಾರ ಕರೋ” ಎಂದೋ ..” ತೇಲಿಸೋ ಇಲ್ಲ ಮುಳುಗಿಸೋ” ಎಂದೋ ಅವರು ಹಾಡುತ್ತಿದ್ದರೆ ಎಲ್ಲರ ಪಾಡುಗಳಿಗೂ ಧ್ವನಿ ಸಿಕ್ಕಂತಾಗುತ್ತಿತ್ತು. ಬಹುಶಃ ಹಾಡಿನ ಬಲದಿಂದಲೇ ಅವರು ಭವ ದಾಟಿದರು. ಎಲ್ಲರನ್ನೂ ಅವರವರ ಮಟ್ಟಕ್ಕಿಳಿದು ಅರ್ಥಮಾಡಿಕೊಳ್ಳುವ ತಾಯ್ತನದ ಮನೋಭಾವ ಹಾಗೂ ಎಲ್ಲರೂ ಮುಖ್ಯರೆನ್ನುವ ಜೀವಪರ ಧೋರಣೆಗಳು ಅವರನ್ನು ಗೆಲ್ಲಿಸಿದವು.

ಆಲಿಸು ಗಮನಿಸು ಸ್ಪಂದಿಸು ಎಂಬ ಜೀವಸ್ವರಗಳನ್ನು ಸದಾ ಎದೆಯಲ್ಲಿಟ್ಟುಕೊಂಡ ಮೌನಿ ಹಾಗೂ ಮೃದುಹೃದಯಿಯಾಗಿ ಅವರು ನನಗೆ ಕಂಡಿದ್ದಾರೆ. ಮೂಡಿಯಾಗಿ ಚಿಪ್ಪಿನಲ್ಲಿ ಹುದುಗುವ ಹಾಗೂ ಲಹರಿಯಿದ್ದಾಗ ತನ್ನನ್ನು ತೆರೆದುಕೊಳ್ಳುವ ಅವರ ಶೈಲಿ ಸದಾ ರಹಸ್ಯಮಯತೆಯನ್ನು ಕಾಯ್ದುಕೊಂಡಿದೆ. ಸಿದ್ಧ  ತೀರ್ಮಾನಗಳಿಗೆ ಬಗ್ಗದೇ ಸದಾ ಹೊಸ ತಿರುವುಗಳಿಂದ ಚಕಿತಗೊಳಿಸುವ ಕಾವ್ಯ ಮತ್ತು ಸಂಗೀತದಂತೆ ಅವರು ಭಾಸವಾಗುತ್ತಾರೆ. ಆದ್ದರಿಂದ ನನಗವರು ಗೊತ್ತು ಅನ್ನಲಾರೆ. ಅಪರೂಪದ ಅಪ್ಪನಾಗಿ, ತಮ್ಮ ಪತ್ನಿಯನ್ನು ಗೌರವಿಸುವ ಪತಿಯಾಗಿ, ಕಾಳಜಿ ವಾತ್ಸಲ್ಯ ತುಂಬಿದ ಅಜ್ಜನಾಗಿ ಅವರ ಕುಟುಂಬ ಪ್ರೇಮ ಮಾದರಿಯಾದುದು. ತಮ್ಮ ಇರುವಿಕೆಯಿಂದಲೇ ಶಿಷ್ಯರನ್ನು ಪ್ರಭಾವಿಸುವ ಗುರುವಾಗಿಯೂ ಅರಿವಿನ ಸಂವಹನಕ್ಕೆ ಅವರು ಮಾದರಿ. ಸಾಹಿತ್ಯ ರಂಗಭೂಮಿಗಳ ಒಡನಾಟ ಅವರೊಳಗಿನ ಜಿಜ್ಞಾಸುವನ್ನು ಎಚ್ಚರವಾಗಿಟ್ಟಿದೆ. ಅವರನ್ನು ಡೆಮಾಕ್ರೆಟಿಕ್ ಮನೋಭಾವದ ಸರಳ ಬದುಕಿನ ಲಯವರಿತ ಮನುಷ್ಯ ಹಾಗೂ ಕಲಾವಿದರನ್ನಾಗಿರಿಸಿದೆ. 21 ರ ಹಸಿವಯದಲ್ಲಿ ಅವರ ಮನೆಗೆ ಕಾಲಿಟ್ಟ ನನ್ನನ್ನು ಸಂದರ್ಭಕ್ಕೆ ತಕ್ಕಂತೆ ಫ್ರೆಂಡ್ ಫಿಲಾಸಫರ್ ಗೈಡ್ ಆಗಿ ಪರೋಕ್ಷವಾಗಿ ಅವರು ಪೊರೆದಿದ್ದಾರೆ. ಯಾವ ಶಾಸ್ತ್ರೀಯ ಚೌಕಟ್ಟಿಗೂ ಒಗ್ಗದ ನನ್ನಂಥವಳನ್ನು ನನ್ನ ಪಾಡಿಗೆ ಹರಿಯಲು ಬಿಟ್ಟಿದ್ದಾರೆ. ಸಂಬಂಧ ಬಂಧನವಾಗದಂತೆ ತೀವ್ರವಾಗಿ ಬದುಕುವದನ್ನು ನಾನು ಅವರಿಂದ ಕಲಿತಿದ್ದೇನೆ. ಸಂಗೀತದ ತಾಂತ್ರಿಕ ಕಟ್ಟಡದ ಅರಿವಿಲ್ಲದ ನನ್ನಂಥವಳಿಗೆ ಅವರ ಹಾಡುಗಳು ಎಂದೂ ಬತ್ತದ ಭಾವ ನದಿ.

ಇಂದು ಎಪ್ಪತ್ತು ಸಾರ್ಥಕ ವರ್ಷಗಳನ್ನು ದಾಟಿದ ಗಣಪತಿ ಭಟ್ಟರು ನಮ್ಮೊಂದಿಗಿದ್ದಾರೆ. ಮನೆಯ ಎಲ್ಲರ ಭಾವಕೇಂದ್ರವನ್ನು ಕಟ್ಟುವ ಸೂತ್ರಸ್ವರವಾಗಿ ಒಳಗಿದ್ದಾರೆ. ಮಾಗಿದ ಸ್ವರವೊಂದು ತನ್ನ ಒಳಗನ್ನು ಬೆಳಗಿಕೊಳ್ಳುತ್ತಲೇ  ಅಸಂಖ್ಯ ಭಾವಕೋಶಗಳನ್ನು ಬೆಳಗುವುದು ಸಂಗೀತದ ಸೋಜಿಗ. ಆದರೆ ಕಲಾವಿದನನ್ನು ಬಿಟ್ಟು ಕಲೆಯಿಲ್ಲ. ಅವನ ಲೋಕದೃಷ್ಟಿ ಹಾಗೂ ಭಾವಶಕ್ತಿಗಳು ಹಿಗ್ಗಿದಂತೆ ಕಲೆಯ ಶಕ್ತಿ ಹಾಗೂ ಪರಿಣಾಮಗಳೂ ಹಿಗ್ಗುತ್ತವೆ. ಒಬ್ಬ ಗುರುವಾಗಿ ಅವರ ವಿಶಿಷ್ಟತೆ ಇಲ್ಲಿಯೇ ಕಾಣುತ್ತದೆ. ಸಂಗೀತವನ್ನು ವೃತ್ತಿಯಾಗಿಸಿಕೊಳ್ಳದೇ  ಸ್ವಭಾವವಾಗಿ ಹಿಗ್ಗಿಸಿ ಕೊಂಡದ್ದನ್ನು ಕಾಣುವಾಗ ಕಲೆ ಇರಬೇಕಾದುದು ಹೀಗೆಯೇ ಅಲ್ಲವೇ ಎಂದೆನಿಸುತ್ತದೆ.  ಈ ಸಹವಾಸದ ಕಾವಲ್ಲಿ ಬದುಕುವ ಕಲೆಯೊಂದು ಮೆಲ್ಲಗೆ ವಿಕಸಿಸುತ್ತದೆ. ಮೋಡ ಮಳೆಯ ಹದಕ್ಕೆ ಬಂದಮೇಲೆ ತಳಮಳಗಳೆಲ್ಲ ಹರಿದುಹೋಗುತ್ತವೆ. ನಾದ ನದಿಯೊಂದು ಕಲಕಲನೆ ಹರಿಯುತ್ತದೆ. *

ಗೀತಾ ವಸಂತ ಅವರ ಈ ಬರಹವನ್ನೂ ಓದಿ : Ramanavami : ಯಕ್ಷಗಾನದ ವೇಷ ಕಳಚಿದಂತೆ ವೇಷ ಕಳಚಬಹುದೇ ರಾಮ?

Published On - 9:34 am, Sun, 12 December 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ