ಆಗಾಗ ಅರುಂಧತಿ : ಹಾಸ್ಟೆಲ್ಲು ಕೋಚಿಂಗು ಲೈಬ್ರರಿ ಹೀಗೆ ದಿನಗಳು ಉರುಳುತ್ತಲೇ ಇದ್ದವು. ನನ್ನ ತಲೆಯಲ್ಲಿ ಮಾತ್ರ, ಅದು ಎಂದು ಕೆ-ಸೆಟ್ ಎಕ್ಸಾಮಿನ ದಿನ ಬರುತ್ತದೆ? ಅದೆಂದು ತಲೆಯಲ್ಲಿ ಇದ್ದಬದ್ದ ಉತ್ತರಗಳನ್ನೆಲ್ಲ ತಡಕಾಡಿ ಅಲ್ಲಿ ಸರಿಯುತ್ತರ ಗುರುತುಮಾಡಿ ಬರುತ್ತೇನೆ? ಅದೆಂದು ಉತ್ತರಗಳನ್ನು ಪ್ರಶ್ನೆಗಳನ್ನು ಚೆಕ್ ಮಾಡುತ್ತೇನೆ? ಇವೇ ಮೊದಲಾದ ಪ್ರಶ್ನೆಗಳು ನನ್ನ ತಲೆಯಲ್ಲಿ ಓಡುತ್ತಿದ್ದವು. ಏಕೆಂದರೆ ಕೋಚಿಂಗ್ ಹೋಗುವ ದಾರಿಯಲ್ಲಿ ಹಾಗೂ ಕೋಚಿಂಗ್ನಲ್ಲಿಯೂ ನೇರವಾಗಿ ಬರದೆ ಪರ್ಯಾಯವಾಗಿ ಬರುವ ಪ್ರೇಮ ಪ್ರಸ್ತಾಪಗಳ ಬಗ್ಗೆ ನನಗೆ ತುಂಬಾ ಭಯವಿತ್ತು. ಏಕೆಂದರೆ ನಾನು ಮೊದಲೇ ಭಯದಿಂದ ಹೆಜ್ಜೆಹಾಕುವವಳು; ಮನೆಯಲ್ಲಿ ದಾಯಾದಿ ಕಲಹ, ಸಂಬಂಧಿಕರ ಮತ್ಸರ, ಕ್ಲಾಸಿನಲ್ಲಿ, ಹಾಸ್ಟೆಲ್ಲಿನಲ್ಲಿಕಾಡಾಟಗಳು. ಹೀಗಿದ್ದಾಗ ಈ ಭಯವನ್ನು ನಿವಾರಿಸಿಕೊಳ್ಳುವ ಭರದಲ್ಲಿ ಯಾರದಾದರೂ ಪಾಶಕ್ಕೆ ನಾನು ಬಿದ್ದುಬಿಟ್ಟರೆ? ಹೀಗಾಗಿ ನಾನು ಇನ್ನಷ್ಟು ಗಟ್ಟಿಗೊಳ್ಳಬೇಕಾಯಿತು. ಈ ಗಟ್ಟಿಗೊಳ್ಳುವ ಭರದಲ್ಲೇ ಮುಸಲ್ಮಾನನಾದ ಆ ಪ್ರೊಫೆಸರ್ನನ್ನು ಇನ್ನಷ್ಟು ಆರಾಧ್ಯಮೂರ್ತಿಯಾಗಿ ಚಿತ್ರಿಸಿಕೊಳ್ಳಬೇಕಾಯಿತು ಎಂದು ಈ ಹಿಂದೆ ಹೇಳಿದ್ದೆ.
(ಸತ್ಯ 6)
ಈಗವ ನನ್ನ ಸಿಹಿಯಾದ ಶತ್ರು! ಏಕೆಂದರೆ ಆತ ಎಂದೆಂದೂ ತಿರುಗಿ ಬರುವುದಿಲ್ಲ, ವಿದೇಶಕ್ಕೆ ಹಾರಿದ್ದಾನೆ. ಅವನೆಂದೂ ನನ್ನ ಪ್ರೇಮಿ ಆಗಲು ಸಾಧ್ಯವೇ ಇಲ್ಲ. ನನಗಿದೇ ಬೇಕಾಗಿದ್ದುದು. ಏಕೆಂದರೆ ನನಗೆ ಚೆನ್ನಾಗಿ ಗೊತ್ತಿದೆ. ಒಬ್ಬ ವ್ಯಕ್ತಿ ವಿರಹದಲ್ಲಿಯೇ ಅತ್ಯುನ್ನತವಾದುದನ್ನು ಸಾಧಿಸುತ್ತಾನೆ, ಅದಕ್ಕೆ ಮಾದರಿ ರಾಧೆ (ಮಥುರೆಯ ರಾಜನಾದರೂ ಕೃಷ್ಣ ರಾಜನೆನೆಸಿಕೊಳ್ಳಲೇ ಇಲ್ಲ, ಆದರೆ ಬರಿಯ ಗೋಪಿಕಾಸ್ತ್ರೀ ಆದರೂ ರಾಧೆ, ತನ್ನ ಮೌನ ಹಾಗೂ ವಿರಹಗಳಿಂದ ರಾಧಾರಾಣಿ ಎಂದು ಲೋಕದೆಲ್ಲೆಡೆ ಮಾನ್ಯತೆ ಪಡೆದಳು. ನಾನು ಈ ಬಗ್ಗೆ ಒಂದು ಕವನ ಬರೆದು ಸ್ಟೇಟಸ್ಗೆ ಹಾಕಿದಾಗ ಅವನದನ್ನು ನೋಡಿದ್ದ. ಲವ್ ಈಸ್ ನಾಟ್ ಮೈ ಕಪ್ ಆಪ್ ಟೀ ಎಂಬ ಸ್ಟೇಟಸ್ ಹಾಕಿದಾಗ ಆತನಿಗೆ ನಖಶಿಖಾಂತ ಉರಿದಿತ್ತು ಎನಿಸುತ್ತದೆ. ಏಕೆಂದರೆ ಆ ವಾಕ್ಯವನ್ನು ಆತ ವರ್ಷಗಳ ನಂತರ ನನಗೆ ಯಾರಿಂದ ಹೇಳಿಸಿದ ಎಂಬುದನ್ನು ಮುಂದಿನ ಕಂತಿನಲ್ಲಿ ಹೇಳುವೆ.
ನನಗೆ ಸನಿಹಕ್ಕಿಂತ ವಿರಹದ ಅವಶ್ಯಕತೆ ತುಂಬಾ ಇತ್ತು. ಇಂತಹ ಕಠಿಣ ವಿರಹವನ್ನು ನೀಡುವವನು ಅವನು ಮಾತ್ರ ಹೊರತು ಇನ್ನಾರೂ ಆಗಿರಲಾರರು. ಏಕೆಂದರೆ ಚಿಕ್ಕ ಹುಡುಗನಿಂದ ಹಿಡಿದು ಮುದುಕರವರೆಗೆ ಎಲ್ಲೆಡೆ ಲಂಪಟ ಗಂಡಸರು. ನನಗನಿಸುತ್ತದೆ ಇದಕ್ಕೆ ಆತನು ಕೂಡ ಹೊರತಾಗಿರಲಾರ. ಆತನ ಇನ್ಸ್ಟಾಗ್ರಾಂ ಅಕೌಂಟ್ ನೋಡಿದಾಗ ನಾನು ಬೆಚ್ಚಿಬಿದ್ದು ಬೆವೆತುಹೋಗಿದ್ದೆ. ಅಂತಹದ್ದನ್ನೆಲ್ಲ ಆತ ಹಿಂಬಾಲಿಸಿದ್ದ! ನನ್ನ ಹಿಂದೆ ಆತ ಎಷ್ಟು ಕತ್ತಿ ಮಸೆದರೂ ನನ್ನ ಮುಂದೆ ತುಂಬ ಸಭ್ಯನಾಗಿಯೇ ನಡೆದುಕೊಳ್ಳುತ್ತಿದ್ದ. ಆತನ ಪ್ರತಿ ಸಂದೇಶವು ಸಭ್ಯತೆಯಿಂದಲೇ ಕೂಡಿರುತ್ತಿತ್ತು. ಏಕೆಂದರೆ ಉಳಿದವರೊಡನೆ ಮಾಡಿದಂತೆ ನನ್ನ ಜೊತೆ ಮಾಡಿದರೆ ನಾನು ಹೇಗೆ ಅವನ ಮಾನ ಹರಾಜು ಹಾಕುತ್ತೇನೆಂದು ಅವನಿಗೆ ಗೊತ್ತಿತ್ತು. ಆದ್ದರಿಂದ ನಾನು ಒಂದು ಮುಂದೆ ಇಟ್ಟರೆ, ಎರಡು ಹೆಜ್ಜೆ ಹಿಂದೆ ಹೋಗುವ ಗಂಡಸನ್ನೇ ಮನಸಲ್ಲಿ ಇಟ್ಟುಕೊಳ್ಳಬೇಕಾಗಿತ್ತು. ಆಗ ನಮ್ಮ ಮುಂದೆ ಬೇಕುಬೇಕಂತಲೇ ಸುಳಿದಾಡುವ, ನಮ್ಮನ್ನು ಕೆಣಕುವ ಗಂಡಸರಿಗೆ ಎದೆಯಲ್ಲಿ ಜಾಗವಿಲ್ಲದಂತಾಗುತ್ತದೆ. ಆಗ ನಮ್ಮ ಗಮನ ಕೂಡ ಸಾಧನೆಯ ಕಡೆ ಹೊರಳಿರುತ್ತದೆ. ಇಲ್ಲದಿದ್ದರೆ ಮನಸ್ಸು ಹೃದಯ ಎರಡೂ ಇಂಗುತಿಂದ ಮಂಗನಂತೆ ಆಗುತ್ತವೆ. ಈ ಕಾರಣದಿಂದಲೇ ಎನಿಸುತ್ತದೆ ಕ್ಲಾಸಿನ ಹುಡುಗರು ನನ್ನ ಮುಂದೆ ಎಷ್ಟೇ ಜಿಗಿದಾಡಿದರು ಅದೆಷ್ಟೇ ಥೈಥೈ ಲಾಗ ಹಾಕಿ ಕುಣಿದರೂ ನಾನು ಯಾರನ್ನೂ ತಿರುಗಿ ನೋಡದುದು. ಅದು ಅವರಿಗೆ ಇನ್ನಷ್ಟು ಕೋಪ ತರಿಸುತ್ತಿತ್ತು.
ನಾನು ಸೆಮಿನಾರ್ನಲ್ಲಿ ಪೇಪರ್ ಪ್ರೆಸೆಂಟೇಷನ್ ಮಾಡುವಾಗ, ಶೇಕ್ಸ್ಪಿಯರನ ನಾಟಕದ ಪಾತ್ರಗಳನ್ನು ಪರಿಚಯಿಸುವಾಗ ಮತ್ತು ಅದರಲ್ಲಿ ಬಂದ ಸ್ವಗತವನ್ನು ಪದವಿಯಲ್ಲಿದ್ದಾಗ ಬರೆದ ಕವನ ಸಂಕಲನದಲ್ಲಿ ಅನುವಾದ ಮಾಡಿದ್ದೆ ಎಂದು ತಿಳಿದಾಗ, ಪ್ರಾಧ್ಯಾಪಕರು ಒಮ್ಮೆ ನಿನ್ನ ಕವನ ಹಾಗೂ ನಾಟಕದಲ್ಲಿರುವ ಮೋನೋಲಾಗ್ ಎರಡನ್ನೂ ಓದು ಎಂದು ಹೇಳಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದರು. ವಾರದಿಂದ ಸೆಮಿನಾರ್ ಕುರಿತು ತಯಾರಿ ನಡೆಸಿದ್ದ ನಾನು ಅದು ಮುಗಿಯುತ್ತಲೇ ದೊಡ್ಡ ನಿಟ್ಟುಸಿರು ಬಿಟ್ಟಿದ್ದೆ. ಆದರೆ ಅದನ್ನು ವಿಡಿಯೋ ಮಾಡಿದ ಕ್ಲಾಸ್ಮೇಟ್ ಒಬ್ಬ ಬ್ಲೂಟೂತ್ನಿಂದ ನನ್ನ ಮೊಬೈಲಿಗೆ ವಿಡಿಯೋ ಹಾಕಿದ. ಆತನಿಗೆ ಅಲ್ಲಿಯೇ ಧನ್ಯವಾದ ತಿಳಿಸಿದೆ. ಆದರೆ ಹಾಸ್ಟೆಲ್ ಹುಡುಗಿಯರಿಗೆ ಅದೆಷ್ಟು ಅಸೂಯೆ! ಇದೆಲ್ಲವನ್ನೂ ಗಮನಿಸಿದ ಅವರು, ಅದೊಂದು ಪ್ರಮಾದ ಎಂಬಂತೆ ಆಡಿಕೊಂಡರು. ಆಗ ನಾನು ನನ್ನೊಳಗೆ ಮತ್ತಷ್ಟು ಇಳಿಯುತ್ತ ಹೋದೆ. ಯಾರೊಡನೆಯೂ ಮಾತನಾಡದಂತೆ ಎಚ್ಚರವಹಿಸುತ್ತ ಬಂದೆ. ತಾವಾಗಿಯೇ ನನ್ನನ್ನು ಯಾರಾದರೂ ಮಾತಾಡಿಸಿದರೆ ನಾನು ಮಾತನಾಡಬಾರದು, ಮಾತನಾಡಿದರೆ ಮತ್ತೆ ನನ್ನ ಘನತೆಗೆ ಧಕ್ಕೆ ಎಂದುಕೊಂಡೆ. ಆ ಕ್ಲಾಸ್ಮೇಟ್ನೊಂದಿಗೆ ಮಾತನ್ನೂ ನಿಲ್ಲಿಸಿಬಿಟ್ಟೆ. ಅವ ಅಂದುಕೊಂಡಿರಬಹುದು ಈಕೆಗೆ ಎಷ್ಟು ಸೊಕ್ಕು ಅಂತೆಲ್ಲ. ಹಾಗಂತ ಈ ಹುಡುರೇನು ಕಮ್ಮಿಯಲ್ಲ. ಇದಾದ ನಂತರ ಮತ್ತೆ ನಾ ನನ್ನ ಮನಸ್ಸಿನಲ್ಲಿ ಆ ಮೇಧಾವಿ ಪ್ರೊಫೆಸರ್ನನ್ನೇ ಧ್ಯಾನಿಸತೊಡಗಿದೆ.
ಇದನ್ನೂ ಓದಿ : ಋತುವಿಲಾಸಿನಿ: ಹನೀ, ಈ ನಶೆಗಾಗಿಯೇ ಇಡೀ ಲೋಕ ಹಪಹಪಿಸುತ್ತಿದೆ
ಆ ದಿನ ಹಾಸ್ಟೆಲ್ಲಿನವರೊಡನೆ ಹಾಸ್ಟೆಲ್ಲಿನ ದಾರಿ ಹಿಡಿಯುವಾಗ ಊಟದ ಸಮಯವಾಗಿದ್ದರೂ ನಾನು ‘ನನಗೆ ಸ್ವಲ್ಪ ಚಹಾ ಬೇಕು ಎಂದು ಕ್ಯಾಂಟೀನಿನತ್ತ ನಡೆದೆ’ ಅವರೆಲ್ಲರಿಗೂ ತಿಳಿದಿತ್ತು ನಾನು ಚಹಾ ಪ್ರಿಯಳೆಂದು. ಅವರೇ ನನಗೆ ಎಷ್ಟೋ ಬಾರಿ ಕೇಳಿದ್ದರು, ‘ಅಯ್ಯೋ ನೀನು ಎಷ್ಟು ಚಹಾ ಕುಡಿಯುತ್ತೀಯಾ?’ ನಿನ್ನ ತಲೆ ಅಷ್ಟು ಗರಂ ಆಗಿರುತ್ತದೆಯೇ?’ ನಾನು ಎಷ್ಟೋ ಬಾರಿ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ, ಸುತ್ತುಕಡೆ ನಿಮ್ಮಂಥವರು ಸುತ್ತುವರಿದರೆ ಇನ್ನೇನಾಗುತ್ತದೆ? ಜಗತ್ತಿನಲ್ಲಿ ನನಗೆ ಖುಷಿ ಕೊಟ್ಟದ್ದು ಚಹಾ ಹಾಗೂ ಪೆನ್ನು ಪೇಪರ್ ಮಾತ್ರ. ಉಳಿದಂತೆ ಎಲ್ಲರೂ ಕೊಟ್ಟದ್ದು ನೋವೆ ಎಂದು.
ಕ್ಯಾಂಟೀನಿಗೆ ಜಿಗಿದವಳೇ ಬ್ಯಾಗನ್ನು ಟೇಬಲ್ ಮೇಲಿಟ್ಟು ಗದ್ದಕ್ಕೆ ಕೈಯ್ಯೂರಿ ಒಬ್ಬಳೇ ಕುಳಿತೆ; ಅಬ್ಬಾ ಈ ಏಕಾಂತದಲ್ಲಿ ಅದೆಂಥ ಸುಖವಿದೆ ಈಗ ಚಹಾ ಹೀರುತ್ತಾ ನಾನು ಮಾಡಿದ ಸೆಮಿನಾರನ್ನು ನೆನಪಿಸಿಕೊಳ್ಳುವುದೇ ಚೆಂದ ನನಗೆ. ನಾನು ಬಿಎ ಮೊದಲನೇ ಸೆಮಿಸ್ಟರ್ನಲ್ಲಿ ಅಲ್ಲವೇ ಇಂಗ್ಲಿಷ್ ಪದ್ಯವನ್ನು ಕನ್ನಡದಲ್ಲಿ ಅನುವಾದಿಸಿದ್ದು. ಅದನ್ನು ಡಿಗ್ರಿ ಕೊನೆಯ ವರ್ಷದಲ್ಲಿ ಕವನ ಸಂಕಲನದಲ್ಲಿ ಪ್ರಕಟಿಸಿದ್ದು. ಆದರೆ ಅದನ್ನು ಯೂನಿವರ್ಸಿಟಿಯಲ್ಲಿ ಓದುವ ಸುಖ ಸೌಭಾಗ್ಯ ದೊರೆಯಿತು. ಆದರೆ ಎಲ್ಲಾ ಸಂಕಷ್ಟಗಳೂ ನನಗೇ ಏಕೆ? ಈ ಸೆಮಿನಾರಿನ ವಿಡಿಯೋವನ್ನು ನಾನು ಯಾರಿಗೂ ಕಳಿಸಬಾರದೆ? ನನಗೆ ನಾನೇ ಹಾಕಿಕೊಂಡ ನಿಯಮ. ಹಾಗಿದ್ದರೆ, ನನ್ನ ಹಿತೈಷಿಗಳು ಯಾರೂ ಇಲ್ಲವೆ?
ಹೀಗಿರುವಾಲೇ ಕೊರೊನಾ ಉಲ್ಬಣಿಸಿತು. ಎಲ್ಲರೂ ಗಂಟುಮೂಟೆ ಕಟ್ಟಿಕೊಂಡು ಊರಿಗೆ ದೌಡಾಯಿಸತೊಡಗಿದರು. ನನಗೆ ಮಾತ್ರ ಮೈಯೆಲ್ಲ ಉರಿಯೋದಕ್ಕೆ ಪ್ರಾರಂಭವಾಯಿತು. ಏಕೆಂದರೆ ಈಗಾಗಲೇ ಇಂಟರ್ನಲ್ಲುಗಳನ್ನು ಚೀರಾಡಿ ಬೋರಾಡಿ ಹತ್ತು ಹಲವು ಸ್ಟ್ರೈಕ್ಗಳನ್ನು ಮಾಡಿ ಮುಂದೆ ಹಾಕಿಸಿದ್ದರು. ಈಗ ಕೆ-ಸೆಟ್ ಎಕ್ಸಾಮ್ ಮುಂದೆ ಹಾಕಿಸಲು ನೋಡಿದರೆ, ನಾನು ಈಗ ಓದಿರೋದೆಲ್ಲ ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗಾಗುತ್ತದೆ ಎಂದು ಮನಸ್ಸಿನಲ್ಲಿಯೇ ಅವರನ್ನೂ ಶಪಿಸಿದೆ. ಅದೆಷ್ಟು ಖುಷಿಯಿಂದ ಕೂಗುತ್ತಾರವರು ಹಾಸ್ಟೆಲ್ಲಿನ ವಿಂಗಿನ ತುಂಬೆಲ್ಲ, ಊಟ ಮಾಡುವಾಗ ಓಡಾಡುವಾಗೆಲ್ಲ, ‘ಈ ಸಲಾ ಎಕ್ಸಾಮ್ ಇಲ್ಲ. ಮತ್ತೆ ಸ್ಟ್ರೈಕ್ ಮಾಡಿದ್ದಾರೆ. ಸುಮ್ಮನೆ ಯಾಕೆ ಓದುತ್ತೀರಿ ಎಂದು ನನ್ನ ಕಡೆ ನೋಡೋದು’. ನನಗೆ ಇದೆಲ್ಲ ರೋಸಿಹೋಗಿತ್ತು.
ಬರಬರುತ್ತ ಒಂದೊಂದೇ ವಿಂಗ್ ಖಾಲಿಯಾಗತೊಡಗಿದವು. ನನ್ನ ವಿಂಗಿನಲ್ಲಿ ನಾನೊಬ್ಬಳೇ ಉಳಿದೆ. ಬೇರೆ ವಿಂಗಿನಲ್ಲಿ ಉಳಿದ ಒಂದಿಬ್ಬರು ಪಾಪದವರು. ಮನೆಯಲ್ಲಿ ಅಣ್ಣನ ಹೆಂಡತಿ ಕಾಡುತ್ತಾಳೆ ಎಂದೋ ಬಡತನ ಇದೆ ಎಂಬುದಾಗಿಯೂ ಅವರು ಅಲ್ಲೇ ಇದ್ದರು. ಆದರೆ ನಾನು? ಬಂಗಲೆ ಇದ್ದು ತಂದೆತಾಯಿಗೆ ಒಬ್ಬಳೇ ಮಗಳು ಆಗಿಯೂ ಕೂಡ ನನಗೇ ನನ್ನ ಹಾಸ್ಟೆಲ್ಲೇ ಸ್ವರ್ಗವಾಗಿತ್ತು. ಅಕಸ್ಮಾತ್ ಆ ಸುತ್ತೋಲೆ ಬಾರದೇ ಇದ್ದಿದ್ದರೆ, ಹಾಸ್ಟೆಲ್ಲಿನಲ್ಲಿ ನಾನು ಒಬ್ಬಳೇ ಇರಬೇಕಾಗಿ ಬಂದಿದ್ದರೂ ಕೂಡ ಅಲ್ಲಿಯೇ ಇರುತ್ತಿದ್ದೆ ಹೊರತು ಮನೆಗೆ ಬರುತ್ತಿರಲಿಲ್ಲ. ಊರಿನಲ್ಲಿ ದಾಯಾದಿಗಳ ಅದೇ ಯಾದವೀ ಕಲಹಗಳು. ಹೆಣ ಬೀಳಿಸುವ ಮಟ್ಟಕ್ಕೆ.
ನಾನು ಒಮ್ಮೆ ಮನೆಗೆ ಬಂದಾಗ, ಮನೆಯಲ್ಲಿ ನನ್ನ ತಂದೆಯ ಇನ್ನೊಬ್ಬ ಹೆಂಡತಿಯ ಮಗ ಸ್ವತಃ ತಂದೆಗೇ ಹೊಡೆದಿದ್ದು ನೋಡಿ ದಂಗಾಗಿ ಹೋಗಿದ್ದೆ. ಅದಾದ ನಂತರ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯವಿದ್ದರೂ, ತಂದೆ ತಾಯಿ ಕೈತುಂಬಾ ಹಣ ಕೊಡಲು ಮುಂದೆ ಬಂದರೂ ನನಗೆ ಅದ್ಯಾವುದೂ ಬೇಡ. ಮತ್ತವರ ಜೊತೆಯೂ ಇರುವುದು ಬೇಡ ಎನ್ನಿಸಿತು. ನಾನು ಸ್ವತಂತ್ರಳಾಗಬೇಕು ಅದೆಷ್ಟು ಸ್ವತಂತ್ರಳೆಂದರೆ ನನ್ನ ತಂದೆ ತಾಯಿಗೆ ಅಂಟಿಕೊಳ್ಳದಷ್ಟು. ನೀರು ಹಾಗೂ ಪಾದರಸ ಅಂಟಿಕೊಳ್ಳುತ್ತವೆಯೇ? ಹಾಗೆ! ಈ ಹಾಳಾದ ಕೊರೊನಾ ಇಲ್ಲದಿದ್ದರೆ ಕೆ-ಸೆಟ್ ಪರೀಕ್ಷೆ ಮುಗಿಯುತ್ತಿತ್ತು. ಪಿ.ಎಚ್ಡಿ ಸೀಟು ಸಿಕ್ಕು ಹಾಸ್ಟೆಲ್ ಸುಲಭವಾಗಿ ದಕ್ಕುತ್ತಿತ್ತು. ಇನ್ನೆಂದಿಗೂ ಊರಿಗೆ ಹೋಗುವ ಹಾಗೂ ಆ ಶ್ರೀಮಂತ ಅವಿವೇಕಿ ತಂದೆ ತಾಯಿಯ ಮುಂದೆ ಕೈಚಾಚುವ ಪ್ರಮೇಯವೇ ಬರುತ್ತಿರಲಿಲ್ಲ! ನಾನಾಯಿತು ನನ್ನ ಪುಸ್ತಕ ಪ್ರಪಂಚವಾಯಿತು ಏಕಾಂತವಾಯಿತು ಎಂದು ಜುಮ್ಮೆಂದು ಇದ್ದುಬಿಡಬಹುದಿತ್ತು. ಇದೆಲ್ಲ ಕನಸಿ ಪುಳಕಗೊಂಡಿದ್ದೂ ಇದೆ. ಆದರೆ ಅದೆಲ್ಲ ಈಗ ವ್ಯರ್ಥ.
ಇದನ್ನೂ ಓದಿ : ಅಮಾರೈಟ್ : ‘ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಖರೀದಿಸಬಹುದು’
ಏಪ್ರಿಲ್ 23 ರಂದು ಶೇಕ್ಸ್ಪಿಯರನ ಹುಟ್ಟುಹಬ್ಬ. ಸರ್ಕಾರದಿಂದ ಸುತ್ತೋಲೆ ಬಂದೇಬಿಟ್ಟಿತು, ಸಾಯಂಕಾಲದೊಳಗೆ ಹಾಸ್ಟೆಲ್ಗೆ ಬೀಗ ಹಾಕಬೇಕೆಂದು. ಆ ಸುತ್ತೋಲೆಯನ್ನು ತಾಯಿಗೆ ಫಾರ್ವರ್ಡ್ ಮಾಡಿದ ಆರು ಗಂಟೆಯೊಳಗೆ ಆಕೆ ಬಾಡಿಗೆ ಕಾರಿನಲ್ಲಿ ನನ್ನ ಹಾಸ್ಟೆಲ್ ಮುಂದೆ ಬಂದು ನಿಂತಿದ್ದಳು. ಒಳಗೆ ಬಂದ ಆಕೆ ಹೂಂ ಹಾಂ ಎಂದು ಹಾಸ್ಟಲ್ಲಿನ ವಿಂಗಿನಲ್ಲಿ ಬೀಗ ಹಾಕಿದ ಎಲ್ಲ ರೂಮುಗಳನ್ನು ನೋಡುತ್ತಾ ಬೆಚ್ಚಿಬಿದ್ದು ಉದ್ಗರಿಸಿದಳು, ‘ಒಬ್ಬಳೇ ಇದ್ದಿಯಾ? ಎಲ್ರೂ ಹೋಗಿದಾರಾ? ಮೊದಲೇ ಯಾಕೆ ಹೇಳಲಿಲ್ಲ? ಏನು ಊಟ ಮಾಡ್ತಿದ್ದೆ ದಿನಾಲು? ನನ್ನನ್ನು ಕ್ಷಮಿಸು. ಆ ಮಹಿಳಾ ಜಾಗೃತಿ ಸಂಘಕ್ಕೂ ನನ್ನನ್ನೇ ಅಧ್ಯಕ್ಷೆ ಮಾಡಿದ್ರು. ಆಫೀಸಿನ ಒಕ್ಕೂಟಕ್ಕೂ ನನ್ನನ್ನೇ ಅಧ್ಯಕ್ಷೆಯನ್ನಾಗಿಸಿದರು. ತುಂಬಾ ತುಂಬಾ ಓಡಾಟ ನಿಂಗೆ ಫೋನ್ ಮಾಡೋಕೆ ಆಗ್ಲಿಲ್ಲ’. ನಾನು ಆಕೆಗೇನೂ ಉತ್ತರಿಸಲಿಲ್ಲ. ಆದರೆ ಮನಸ್ಸಿನಲ್ಲಿ, ‘ಎಲ್ಲಾ ಅರಿಷಡ್ವರ್ಗಗಳನ್ನು ಮೂಟೆ ಕಟ್ಟಿ ಸನ್ಯಾಸಿನಿಯಂತೆ ಇಲ್ಲಿ ಬದುಕುತ್ತಾ, ಭಗೀರಥ ಪ್ರಯತ್ನ ಮಾಡುತ್ತಿದ್ದೀನಿ. ಹಾಗಾಗಿ ನನಗೆ ಫೋನ್ ಮಾಡುವ ಅವಶ್ಯಕತೆಯಿಲ್ಲ ನಿನಗೆ, ನಾನು ಕೂಡ ಯಾರೊಂದಿಗಾದರೂ ಬೈಕಿನಲ್ಲಿ ಸುತ್ತಾಡುವುದು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುವುದು ಮಾಡಿದ್ದರೆ ನಿನಗೆ ಅವಶ್ಯಕತೆ ಬೀಳುತ್ತಿತ್ತು ಆಗಾಗ ನನ್ನನ್ನು ಎಚ್ಚರಿಸಲು!’ ಹೀಗೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಎಲ್ಲ ಸಾಮಾನನ್ನು ಕಾರಿನಲ್ಲಿಟ್ಟು, ಹಾಸ್ಟೆಲಿನ ಮುಂದಿದ್ದ ಚಿಕ್ಕಗಿಡಗಳನ್ನು ಮನೆಗೆ ತೆಗೆದುಕೊಂಡು ಬರಲು, ಮಂಗನಂತೆ ಹರಿಯುತ್ತಿದ್ದ ಆಕೆಯನ್ನು ಜಗ್ಗಿ ಎಳೆದುಕೊಳ್ಳಲು ಹರಸಾಹಸ ಪಡಬೇಕಾಯಿತು.
ಅದೇನೋ ನನಗೆ ತಿಳಿದಿಲ್ಲ, ಊಟವಿಲ್ಲದಿದ್ದರೂ ಹಾಸ್ಟೆಲ್ಲಿನ ರೂಮು ಮಳೆ ಬಂದಾಗ ಸೋರುತ್ತಿದ್ದರೂ, ಹಾಸ್ಟೆಲಿನ ಹುಡುಗಿಯರು ಕಾಡುತ್ತಿದ್ದರೂ ಹಾಸ್ಟೆಲ್ ಎಂದರೆ ಕಡುಪ್ರೀತಿ ನನಗೆ. ನನಗೆ ಚೆನ್ನಾಗಿ ಗೊತ್ತಿತ್ತು ಊರಲ್ಲಿರುವ ನನ್ನ ಅರಮನೆಯಲ್ಲಿ ತೂಗುಗತ್ತಿ ನನ್ನ ತಲೆಯ ಮೇಲೆ ಹೇಗೆ ತೂಗುತ್ತಿರುತ್ತದೆ ಎಂದು. ಹಾಸ್ಟೆಲ್ಲಿನ ಗೇಟಿನಲ್ಲಿ ಕಾಯಲು ವಾಚ್ಮ್ಯಾನ್ ಮುದುಕನಾದರೂ ಆದರೆ ಮನೆಯಲ್ಲಿ?!
ಹಾಗಾದರೆ ಹಾಸ್ಟೆಲ್ನಿಂದ ಊರಿಗೆ ಬಂದ ಮೇಲೆ ತಲೆಯ ಮೇಲೆ ತೂಗುಗತ್ತಿ ತೂಗಾಡಿತೇ? ಅದೆಂಥದ್ದಾಗಿತ್ತು? ಮುಂದಿನ ಕಂತಿನಲ್ಲಿ ನಿರೀಕ್ಷಿಸಿ.
(ಮುಂದುವರಿಕೆ ಅರುಂಧತಿ ಬರೆದಾಗ)
ಪ್ರತಿಕ್ರಿಯೆಗಾಗಿ : tv9kannadadigital@mail.com
ಈ ಅಂಕಣದ ಎಲ್ಲಾ ಬರಹಗಳನ್ನು ಇಲ್ಲಿ ಓದಿ : https://tv9kannada.com/tag/aagaaga-arundhathi
Published On - 3:55 pm, Tue, 10 May 22