Ernest Hemingway : ‘ಬರೆಯುವುದು ಏಕಾಂಗಿತನದ ಜೀವನ, ಬರೆಯುವುದನ್ನು ಯಾವ ಸಂಘ ಸಂಸ್ಥೆಗಳೂ ಕಲಿಸಲಾರವು’
Writer : ದಿಟ್ಟ ಗುಣ ಪಡೆದಿದ್ದ ಹೆಮಿಂಗ್ವೆ ತೀವ್ರ ಸಂಕೋಚದ ವ್ಯಕ್ತಿಯಾಗಿದ್ದ. ಎಂದೂ ಭಾಷಣವನ್ನೇ ಮಾಡದ ಹೆಮಿಂಗ್ವೆ ನೊಬೆಲ್ ಪ್ರಶಸ್ತಿ ಬಂದಾಗ, ಸ್ಟಾಕ್ಹೋಂಗೆ ಹೋಗಿ ಭಾಷಣ ಮಾಡುವುದರಿಂದ ತಪ್ಪಿಸಿಕೊಳ್ಳಲು ವಿಮಾನಾಪಘಾತದ ಗಾಯಗಳ ನೆವವೊಡ್ಡಿ ಪಾರಾದ.
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಅಮೆರಿಕದ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ಬದುಕಿನ ಪ್ರಸಂಗ ಪಿ. ಲಂಕೇಶ ಅವರ ‘ಟೀಕೆ ಟಿಪ್ಪಣಿ’ಯಿಂದ.
*
ಒಮ್ಮೆ ಇದ್ದಕ್ಕಿದ್ದಂತೆ ಕೀನ್ಯಾದ ಅರಣ್ಯಕ್ಕೆ ಶಿಕಾರಿಗೆಂದು ಹೋದ ಹೆಮಿಂಗ್ವೆ ವಿಮಾನಾಪಘಾತದಲ್ಲಿ ಸಿಕ್ಕಿಹಾಕಿಕೊಂಡ. ಆತ ಸತ್ತಿರುವುದಾಗಿ ಜಗತ್ತಿನ ವೃತ್ತಪತ್ರಿಕೆಗಳು ಬರೆದು ಸಂತಾಪಸೂಚಕ ಲೇಖನ ಬರೆದವು. ಆದರೆ ಹೆಮಿಂಗ್ವೆ ಗಾಯಗೊಂಡು ಬದುಕಿದ್ದ. ಅವನನ್ನು ಕಾಡಿನ ಮಧ್ಯದಿಂದ ಕರೆತರಲು ಹೋದ ಪುಟ್ಟ ವಿಮಾನದಲ್ಲಿ ಬರುತ್ತಿದ್ದಾಗ ಅದಕ್ಕೂ ಅಪಘಾತವಾಗಿ ಬೆಂಕಿ ಹತ್ತಿಕೊಂಡುಬಿಟ್ಟಿತು. ಎರಡನೆಯ ಸಲ ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಬದುಕಿದ ಹೆಮಿಂಗ್ವೆ ನಿಧಾನಕ್ಕೆ ಸುಧಾರಿಸಿಕೊಂಡರೂ ದೈಹಿಕ ನೋವಿನೊಂದಿಗೆ ಮಾನಸಿಕ ಆಘಾತ ಅನುಭವಿಸಿದ್ದ. ಆಮೇಲೆ ಆತ ಬರೆದದ್ದು ತಣ್ಣನೆಯ ಶೈಲಿಯ, ಭಾವಗೀತೆಯ ಮಾಧುರ್ಯವನ್ನುಳ್ಳ ‘ಓಲ್ಡ್ಮ್ಯಾನ್ ಅಂಡ್ ದಿ ಸೀ’ ಇದಕ್ಕೆ ಕೂಡಲೇ ಅಮೆರಿಕಾದ ಶ್ರೇಷ್ಠ ಪುಲಿಟ್ಜರ್ ಪ್ರಶಸ್ತಿ ಮತ್ತು 1954 ರಲ್ಲಿ ನೊಬೆಲ್ ಬಹುಮಾನ ದೊರೆತವು.
ದಿಟ್ಟ ಗುಣ ಪಡೆದಿದ್ದ ಹೆಮಿಂಗ್ವೆ ತೀವ್ರ ಸಂಕೋಚದ ವ್ಯಕ್ತಿಯಾಗಿದ್ದ. ಎಂದೂ ಭಾಷಣವನ್ನೇ ಮಾಡದ ಹೆಮಿಂಗ್ವೆ ತೀವ್ರ ಸಂಕೋಚದ ವ್ಯಕ್ತಿಯಾಗಿದ್ದ. ಸ್ಟಾಕ್ಹೋಂಗೆ ಹೋಗಿ ಭಾಷಣ ಮಾಡುವುದರಿಂದ ತಪ್ಪಿಸಿಕೊಳ್ಳಲು ವಿಮಾನಾಪಘಾತದ ಗಾಯಗಳ ನೆವವೊಡ್ಡಿ ಪಾರಾದ. ಆತ ನೊಬೆಲ್ ಬಹುಮಾನ ಪಡೆಯುವುದಕ್ಕಾಗಿ ಕಳಿಸಿದ ಚಿಕ್ಕ ಹೇಳಿಕೆಯೊಂದರಲ್ಲಿ ಹೀಗೆ ಬರೆದಿದ್ದ ; ‘ನನಗೆ ಭಾಷಣ ಕಲೆ ಗೊತ್ತಿಲ್ಲವಾದ್ದರಿಂದ, ನಿರರ್ಗಳವಾಗಿ ಅನ್ನಿಸಿದ್ದನ್ನು ಹೇಳಲಾರೆನಾದ್ದರಿಂದ ತಾವು ನನಗೆ ನೀಡಿರುವ ನೊಬೆಲ್ ಬಹುಮಾನಕ್ಕಾಗಿ ಹೀಗೆ ಕೃತಜ್ಞತೆ ಹೇಳಬಯಸುತ್ತೇನೆ. ಈ ನೊಬೆಲ್ ಬಹುಮಾನವನ್ನು ಪಡೆಯದಿರುವ ನನಗಿಂತ ಶ್ರೇಷ್ಠ ಲೇಖಕರನ್ನು ಬಲ್ಲ ನಾನು ಅತ್ಯಂತ ವಿನಯದಿಂದ ಇದನ್ನು ಸ್ವೀಕರಿಸುತ್ತಿದ್ದೇನೆ. ಆ ಲೇಖಕರ ಪಟ್ಟಿಯನ್ನು ಇಲ್ಲಿ ಕೊಡುವುದಿಲ್ಲ. ನನ್ನ ಪರವಾಗಿ ಬಹುಮಾನ ಸ್ವೀಕರಿಸುತ್ತಿರುವ ನನ್ನ ದೇಶದ ರಾಯಭಾರಿಯನ್ನು ನನ್ನ ಹೃದಯದಲ್ಲಿರುವುದನ್ನೆಲ್ಲ ಭಾಷಣವಾಗಿ ಹೇಳುವಂತೆ ಕೇಳಿಕೊಳ್ಳಲಾರೆ.
ಬರೆಯುವುದು ಏಕಾಂಗಿತನದ ಜೀವನ, ಬರೆಯುವುದನ್ನು ಯಾವ ಸಂಘ ಸಂಸ್ಥೆಗಳೂ ಕಲಿಸಲಾರವು. ಸಾಹಿತಿ ಜನತೆಯ ಗೌರವ ಸಂಪಾದಿಸಿ ಮೆರೆಯತೊಡಗಿದಂತೆಲ್ಲ ಆತನ ಕಲೆ ನಶಿಸುತ್ತಾ ಹೋಗುತ್ತದೆ. ಯಾಕೆಂದರೆ ಸಾಹಿತಿ ಒಬ್ಬನೇ ಕೂತು ಅನಂತತೆಯನ್ನು ಎದುರಿಸುತ್ತಾನೆ ಅಥವಾ ಎದುರಿಸುವುದರಲ್ಲಿ ವಿಫಲನಾಗುತ್ತಾನೆ. ಉತ್ತಮ ಸಾಹಿತಿಗೆ ಪ್ರತಿಯೊಂದು ಹೊಸ ಕೃತಿಯೂ ಹೊಸ ಆರಂಭ. ತನ್ನನ್ನೇ ಮೀರುವ ಕ್ರಿಯೆ. ಆತ ಯಾರೂ ಬರೆಯದೇ ಇದ್ದ ಅನನ್ಯ ಸೃಷ್ಟಿಗಾಗಿ ಪ್ರಯತ್ನಿಸಬೇಕಾಗುತ್ತದೆ; ಯಾರ ನೆರವೂ ಇಲ್ಲದೆ ಸೃಷ್ಟಿಸಬೇಕಾಗುತ್ತದೆ. ಸಾಹಿತಿಯಾದವನು ತನಗನ್ನಿಸಿದ್ದನ್ನು ಸಾಹಿತ್ಯವಾಗಿ ಬರೆಯಬೇಕು, ಮಾತನಾಡುತ್ತಾ ಹೋಗಬಾರದು. ಆದ್ದರಿಂದ ಇಷ್ಟು ಮಾತ್ರ ಹೇಳಿದ್ದೇನೆ. ನಿಮಗೆ ಕೃತಜ್ಞ.’
ಇಷ್ಟೇ ಹೆಮಿಂಗ್ವೆ ಹೇಳಿದ್ದು. ತರುವಾಯದ ಕತೆ ಸರಳವಾಗಿದೆ. ಆತ ಸದಾ ಕುಡಿದು, ಕುಪ್ಪಳಿಸಿ, ಪ್ರೇಮಿಸಿ ಶಿಕಾರಿ ಮಾಡಿ, ಧ್ಯಾನಿಸಿ- ಯಾವುದೇ ಒಬ್ಬ ಪುರೋಹಿತ, ವಿಮರ್ಶಕ, ಪಂಡಿತ, ಮಾರ್ಗದರ್ಶಕನ ಹಂಗಿಲ್ಲದೆ ಬದುಕಿದ ಮನುಷ್ಯ. ನೊಬೆಲ್ ಬಹುಮಾನ ಸಿಕ್ಕೊಡನೆ ಜನ ಆತನ ಸಂದರ್ಶನಕ್ಕಾಗಿ, ಫೋಟೋಗಳಿಗಾಗಿ ಹಸ್ತಾಕ್ಷರಕ್ಕಾಗಿ, ಸ್ನೇಹಕ್ಕಾಗಿ ಪೀಡಿಸತೊಡಗಿದರು. ಇದರಿಂದ ರೋಸಿಹೋದ ಹೆಮಿಂಗ್ವೆ ಹುಚ್ಚನಂತೆ ಬಚ್ಚಿಟ್ಟುಕೊಳ್ಳತೊಡಗಿದ. ಜನರ ಮೇಲೆ ರೇಗಿ ತೊಲಗಿಸತೊಡಗಿದ, ಏಕಾಂತದಲ್ಲಿ ಬರೆಯಲೆತ್ನಿಸಿದ. ಆದರೆ ಅವನ ದೇಹ ದುರ್ಬಲವಾಗತೊಡಗಿತ್ತು. ಕಣ್ಣು ಮಬ್ಬಾಗತೊಡಗಿದ್ದವು ; ವಿಮಾನಾಪಘಾತದಲ್ಲಿ ಆದ ಮೂತ್ರಪಿಂಡದ ಗಾಯ ಮಾಯಲೇ ಇಲ್ಲ. ಮತ್ತೆ ಯೂರೋಪ್, ಆಫ್ರಿಕಾಕ್ಕೆ ಹೋಗಿ ಹೊಸ ಜೀವ ಪಡೆಯಲು ಯತ್ನಿಸಿದ. ‘ನಾನೆಂಥ ವ್ಯಾಮೋಹಿ ಗೊತ್ತ, ಮದುವೆಯೇ ಆಗಕೂಡದೆಂದು ಸು್ಮನಿದ್ದೆ- ಒಮ್ಮೆ ಮದುವೆಯಾದ ಮೇಲೆ ಮತ್ತೆ ಎರಡು ಸಲ ಮದುವೆಯಾಗಬೇಕಾಯಿತು. ಮಕ್ಕಳು ಬೇಡವೆಂದಿದ್ದೆ. ಮೊದಲ ಮಗು ಕಂಡು ಎಷ್ಟು ರೋಮಾಂಚಿತನಾದೆನೆಂದರೆ ಅನೇಕ ಮಕ್ಕಳನ್ನು ಪಡೆದೆ.’ ಅಂದ ಹೆಮಿಂಗ್ವೆ.
ನೊಬೆಲ್ ಬಹುಮಾನ ಹೆಮಿಂಗ್ವೆಯನ್ನು ಮುಟ್ಟಲೇ ಇಲ್ಲ. ದಿನದಿನಕ್ಕೆ ಆತನ ದಿಗ್ಭ್ರಮೆ, ನೋವು, ನಿರಾಶೆ ಹೆಚ್ಚಾದವು. ಸಿಡುಕು, ಆತುರ, ಹಠಮಾರಿತನ ಬೆಳೆದವು; ತನ್ನನ್ನು ನೋಡಿಕೊಂಡ ಹೆಮಿಂಗ್ವೆಯೇ ಬೆಸರಗೊಂಡ. ಅವನಿಗಾಗ 62 ವರ್ಷ. ‘ಒಬ್ಬ ಮನುಷ್ಯ ಬದುಕಿರುವ ಉದ್ದೇಶವಾದರೂ ಏನು? ಆರೋಗ್ಯದಿಂದ ಇರುವುದಕ್ಕಾಗಿ. ಕೆಲಸ ಮಾಡುವುದಕ್ಕಾಗಿ, ಗೆಳೆಯರೊಂದಿಗೆ ಭೋಜನ ಮತ್ತು ಮಧ್ಯಪಾನಕ್ಕಾಗಿ, ಹಾಸಿಗೆಯಲ್ಲಿ ಸುಖಿಸುವುದಕ್ಕಾಗಿ. ಅದೊಂದೂ ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಹೇಳೋದು ಅರ್ಥವಾಗುತ್ತಿದೆಯೇ, ಅಯ್ಯೋ ದೇವರೇ ನಿನಗೆ ಅರ್ಥವಾಗುತ್ತಿದೆಯೇ? ಒಂದೂ ಸಾಧ್ಯವಾಗುತ್ತಿಲ್ಲ.’
1961ರಲ್ಲಿ, ತನ್ನ ಅರವತ್ತೆರಡನೆ ವಯಸ್ಸಿನಲ್ಲಿ ಹೆಮಿಂಗ್ವೆ ತನ್ನ ಹಣೆಗೆ ತನ್ನ ಕೋವಿಯನ್ನಿಟ್ಟು ಗುಂಡುಹಾರಿಸಿ ನೆಲಕ್ಕೊರಗಿದ.
ಅಮೀರ್ಬಾಯಿ ಕರ್ನಾಟಕಿಯ ಬದುಕಿನ ಪ್ರಸಂಗ : Uttara Karnataka : ‘ನಾವು ಉತ್ತರ ಕರ್ನಾಟಕದ ಮಂದಿ ನಮಗ ಕಾಂಪ್ರೊಮೈಸ್ ಮಾಡ್ಕೊಳ್ಳಲಿಕ್ಕೆ ಬರೂದಿಲ್ಲ’
Published On - 8:51 am, Mon, 6 December 21