Literature : ಅಭಿಜ್ಞಾನ : ಭರ್ತೃಹರಿಗೆ ರೋಮಾಂಚನದಿಂದ ಕೂದಲು ನಿಮಿರೆದ್ದರೆ, ಬೌದ್ಧರಿಗೆ ಮಹಾ ಮುಜುಗರ

Language : ‘ಭಾಷೆ ಎನ್ನುವುದು ದೈವೀಲೀಲೆ ಅಲ್ಲ. ಮಾನವ ರೂಢಿಯ ಒಂದು ವಿಚಿತ್ರ ಶಿಸ್ತು ಅದು. ಸಸ್ಸೂರ್ ಭಾಷೆಯ ಬಗ್ಗೆ ಹೇಳಿದ ನಿಲುವಿಗೆ ತುಂಬ ಆಪ್ತವಾಗಿತ್ತು ಅದು. ಭಾಷೆಯಲ್ಲಿ ಯಾದೃಚ್ಛಿಕತೆಯದೇ ನಿರ್ಣಾಯಕ ಪಾತ್ರ, ಯಾದೃಚ್ಛಿಕತೆಗೆ ಶಿಸ್ತಿದೆ, ವಿಚಿತ್ರ ತಿಕ್ಕಲುತನವೂ ಇದೆ. ಇದೇ ರೂಢಿ. ಅವಿಚಾರ, ಅತರ್ಕಗಳು ಅಲ್ಲಿ ತರ್ಕವಾಗಿ ಬಿಡುತ್ತವೆ.’ ಡಿ. ಆರ್. ನಾಗರಾಜ್

Literature : ಅಭಿಜ್ಞಾನ : ಭರ್ತೃಹರಿಗೆ ರೋಮಾಂಚನದಿಂದ ಕೂದಲು ನಿಮಿರೆದ್ದರೆ, ಬೌದ್ಧರಿಗೆ ಮಹಾ ಮುಜುಗರ
ವಿಮರ್ಶಕ ಡಿ. ಆರ್. ನಾಗರಾಜ್
Follow us
|

Updated on:Jan 11, 2022 | 2:42 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ವಿಮರ್ಶಕ ಡಿ. ಆರ್. ನಾಗರಾಜ ಅವರ ‘ಸಾಹಿತ್ಯ ಕಥನ’ ದಿಂದ

*

ಭಾಷೆ ಎಂಬುದರ ಉಗಮದ ಬಗ್ಗೆ ಯೋಚಿಸಿದಷ್ಟೂ ಭರ್ತೃಹರಿಗೆ ರೋಮಾಂಚನದಿಂದ ಕೂದಲು ನಿಮಿರೆದ್ದರೆ, ಬೌದ್ಧರಿಗೆ ಮಹಾ ಮುಜುಗರ. ಶಬ್ದ ಬ್ರಹ್ಮ ಎಂಬ ಕಲ್ಪನೆಯೇ ಅವರಿಗೆ ಸಮಸ್ಯಾತ್ಮಕ. ಶಬ್ದವನ್ನು ದಾಟಿದರೆ ಮಾತ್ರ ಬ್ರಹ್ಮ ಅಥವಾ ಶೂನ್ಯಕ್ಕೆ (ಇವೆರಡೂ ಒಂದೇ, ರಾಮಚಂದ್ರ ಗಾಂಧಿ ಪ್ರಕಾರ) ಪ್ರವೇಶ. ಭಾಷೆಯಲ್ಲಿ ದಿವ್ಯದ ವಿಸ್ತಾರವಿಲ್ಲ. ಅದರಾಚೆಗೆ ನಡೆದರೆ ಮಾತ್ರ ದಿವ್ಯಜ್ಞಾನದ ಪ್ರಾರಂಭ. ಮಾನವ ಮನಸ್ಸಿಗೆ ಸದಾ ವಿಕಲ್ಪವನ್ನು ಸೃಷ್ಟಿಸುವ ದುರ್ಗುಣವಿದೆ. ಪ್ರಪಂಚ ಎಂದರೇನೇ ನಿರಂತರ ಬೌದ್ಧಿಕ ಚಿತ್ರ ಸೃಷ್ಟಿ. ಭಾಷೆ ಈ ವಿಕಲ್ಪ ಸೃಷ್ಟಿಯ ಮಾಧ್ಯಮ. ಭಾಷೆ ಎನ್ನುವುದು ಮಣ್ಣು. ಆ ಮಣ್ಣಿನಿಂದ ಮನುಷ್ಯನ ಮನಸ್ಸು ಸಾವಿರ ಸುತ್ತಿನ ಕೋಟೆ ಕಟ್ಟಿ ಕಟ್ಟಿ ಆತ ಅಲ್ಲೇ ಸುತ್ತಿ ಸಾಯುವಂತೆ ಮಾಡುತ್ತದೆ. ಈ ಮಣ್ಣಿನ ಕೋಟೆ ಧೂಳಾಗದೆ ಆತ ಮುಕ್ತಿಯ ಬಯಲನ್ನು ಸೇರಲಾರ. ಭಾಷೆ ಎಂಬ ಬಲೆಯಲ್ಲಿ ಸಿಕ್ಕಿಬಿದ್ದ ಇಲಿ ಮಾನವ. ಬೌದ್ಧರಲ್ಲಿ ನಾಗಾರ್ಜುನ, ದಿನ್ನಾಗ ಈ ರೀತಿಯ ನೇತ್ಯಾತ್ಮಕ ದೃಷ್ಟಿಕೋನವನ್ನು ಅತ್ಯಂತ ತೀವ್ರವಾಗಿ ಮಂಡಿಸುತ್ತಿದ್ದರು. ಭರ್ತೃಹರಿಯ ಭಾಷಿಕ ತನ್ಮಯತೆಗೆ ಒಂದು ರೀತಿಯ ಶಕ್ತಿ ಇದೆ. ಆದರೆ, ಬೌದ್ಧಮೀಮಾಂಸಕರ ನೇತ್ಯಾತ್ಮಕ ತರ್ಕಕ್ಕೆ ಅದನ್ನು ಭಂಗಿಸುವ ಶಕ್ತಿ ಇದೆ. ಭರ್ತೃಹರಿ ವಿಹ್ವಲವಾಗುತ್ತಿದ್ದ ಗಳಿಗೆಗಳು ಇವೇ ಇರಬೇಕು. ಆದರೆ ಈ ಸಂದೇಹಗಳನ್ನು ದಾಟಿ ಮತ್ತೆ ಶಬ್ದಬ್ರಹ್ಮನ ಶ್ರದ್ದೆಗೆ ಭರ್ತೃಹರಿ ವಾಪಸಾಗುತ್ತಿದ್ದ.

ಬೌದ್ದರ ಮಟ್ಟಿಗೆ ಭಾಷೆ ಎನ್ನುವುದು ಬರೀ ರೂಢಿಯ ಸೃಷ್ಟಿ, ಭಾಷೆ ಎನ್ನುವುದು ಉಳಿದ ಸಂಪ್ರದಾಯಗಳ ಹಾಗೆ ಒಂದು ಸಂಪ್ರದಾಯ ಅಷ್ಟೆ. ಭಾಷೆಗೆ ದೈವೀ ಅಸ್ತಿತ್ವ ಕೊಡುವ ಮೂಲಕ ಒಂದು ಬಗೆಯ ಭಕ್ತಿಕಾವ್ಯ ಮೀಮಾಂಸೆಗೂ ಭರ್ತೃಹರಿ ವೇದಿಕೆ ಸಿದ್ಧ ಮಾಡಿದ. ಮಾಧ್ಯಮ, ವೈಖರಿ, ಪಶ್ಯಂತಿಗಳ ವರ್ಗಿಕರಣದಿಂದಾಗಿ ಒಂದು ಬಗೆಯ ಸಂಕೀರ್ಣ ಶಿಷ್ಟತೆಯನ್ನು ಭರ್ತೃಹರಿ ಭಾಷಾ ಮೀಮಾಂಸೆಗೆ ನೀಡಿದ. ಆದರೆ ಬೌದ್ಧರಿಗೆ ಪದಾರ್ಥ ಮತ್ತು ಪದಗಳ ಸಂಬಂಧ ಏನಿದ್ದರೂ ರೂಢಿನಿಯಂತ್ರಿತ ಅಷ್ಟೆ, ಅವರ ಪ್ರಕಾರ ಭರ್ತೃಹರಿ ರೀತಿಯ ತನ್ಮಯತೆಗೆ ಕಾರಣವೇ ಇಲ್ಲ. ಭಾಷೆ ಎನ್ನುವುದು ದೈವೀಲೀಲೆ ಅಲ್ಲ. ಮಾನವ ರೂಢಿಯ ಒಂದು ವಿಚಿತ್ರ ಶಿಸ್ತು ಅದು. ಸಸ್ಸೂರ್ ಭಾಷೆಯ ಬಗ್ಗೆ ಹೇಳಿದ ನಿಲುವಿಗೆ ತುಂಬ ಆಪ್ತವಾಗಿತ್ತು ಅದು. ಭಾಷೆಯಲ್ಲಿ ಯಾದೃಚ್ಛಿಕತೆಯದೇ ನಿರ್ಣಾಯಕ ಪಾತ್ರ, ಯಾದೃಚ್ಛಿಕತೆಗೆ ಶಿಸ್ತಿದೆ, ವಿಚಿತ್ರ ತಿಕ್ಕಲುತನವೂ ಇದೆ. ಇದೇ ರೂಢಿ. ಅವಿಚಾರ, ಅತರ್ಕಗಳು ಅಲ್ಲಿ ತರ್ಕವಾಗಿ ಬಿಡುತ್ತವೆ.

ಭರ್ತೃಹರಿ ಮತ್ತು ಬೌದ್ಧ ಮೀಮಾಂಸಕರಾದ ದಿನ್ನಾಗ ಇತ್ಯಾದಿಗಳ ನಡುವಣ ಪ್ರಮುಖ ವ್ಯತ್ಯಾಸ ಇರುವುದು ಅವರುಗಳು ಅನುಕ್ರಮವಾಗಿ ಭಾಷೆಯ ಪಾರಲೌಕಿಕ ಮತ್ತು ರೂಪಕಾತ್ಮಕ ಸ್ವರೂಪವನ್ನು ಒತ್ತಿ ಹೇಳಿದ್ದರಲ್ಲಿ, ಅದರಲ್ಲೂ ದಿನ್ನಾಗ ಭರ್ತೃಹರಿಯ ವಿಚಾರಗಳಿಗೆ ಅನೇಕ ರೀತಿಗಳಲ್ಲಿ ಋಣಿಯಾಗಿದ್ದ. ವೇದಾಂತಿಯಾಗಿದ್ದ ಭರ್ತೃಹರಿ, ಬೌದ್ಧರಾಗಿದ್ದ ದಿನ್ನಾಗ, ಧರ್ಮಕೀರ್ತಿಗಳ ನಡುವೆ ಮಿಲನ, ಪರಿವರ್ತನೆ ಮತ್ತು ಭಿನ್ನತೆಗಳ ಒಂದು ತ್ರಿಕೋನ ನಿರ್ಮಾಣವಾಗಿತ್ತು. ಅವರು ಕಾಲದ ದೃಷ್ಟಿಕೋನದಿಂದ ಸಮಕಾಲೀನರಲ್ಲವಾದರೂ, ಆಶಯಗಳು ಬೆರೆಯತೊಡಗಿದ್ದವು, ಘರ್ಷಿಸತೊಡಗಿದ್ದವು.

Abhijnana Excerpt from Sahitya Kathana By Kannada Critic DR Nagaraj

1996 ರಲ್ಲಿ ಪ್ರಕಟವಾದ ‘ಸಾಹಿತ್ಯ ಕಥನ’

ಪಾರಲೌಕಿಕ ಸ್ವರೂಪದ ತಾತ್ವಿಕತೆ ಭಾಷೆಯ ಬಗೆಗೆ ಆತ್ಮವಿಶ್ವಾಸ ತರುತ್ತದೆ. ರೂಪಕಾತ್ಮಕ ಸ್ವರೂಪ ಭಾಷೆಯ ಬಗೆಗೆ ಸಂದೇಹಗಳನ್ನು ಸೃಷ್ಟಿಸತೊಡಗುತ್ತದೆ. ಭರ್ತೃಹರಿ ಪ್ರಕಾರ ಆಗಮಪ್ರಾಮಾಣ್ಯ ಭಾಷೆಯ ಸಹಜ ಗುಣದಿಂದಲೇ ಬಂದಿದ್ದರೆ, ದಿನ್ನಾಗನಿಗೆ ಹೀಗೆ ಭಾಷೆಯ ಯಾವ ಸ್ಥಿತಿಗೂ ಆತ್ಯಂತಿಕ ಪ್ರಾಮಾಣ್ಯವಿಲ್ಲ. ಈ ಆತ್ಯಂತಿಕ ಪ್ರಾಮಾಣ್ಯ ನಿರಾಕರಣೆ ಬೌದ್ಧ ಚಿಂತನೆಯ ಮೂಲಗುಣವೇ ಆಗಿತ್ತು. ಆಗಮಗಳೂ ಕೂಡಾ ಒಂದು ಬಗೆಯ ಅನುಮಾನ ಮೂಲವಾದ ಜ್ಞಾನ ಅಷ್ಟೆ. ಅದನ್ನು ಮಾನವಜ್ಞಾನ ಸಂಗ್ರಹದ ಒಂದು ಕ್ರಮ ಎಂಬರ್ಥ ಬರುವ ನಿಲುವನ್ನು ತಾಳುವ ಮೂಲಕ ಶ್ರುತಿ- ಆಗಮಗಳ ಪ್ರಶ್ನಾತೀತ ಗುಣವನ್ನು ಬೌದ್ಧರು ನಿರಾಕರಿಸಿದರು.

ಪಾಶ್ಚಾತ್ಯರ ನವೋತ್ತರ ಚಿಂತನಾಕ್ರಮಗಳಿಗೆ ಹೆಚ್ಚು ಹತ್ತಿರವಿರುವುದು ಬೌದ್ಧರು ಈ ರೂಪಕಾತ್ಮಕ ಸ್ವರೂಪವನ್ನು ಬಿಡಿಸಿದ ರೀತಿ. ಅಂದರೆ ಭಾಷೆಗೆ ಮೂಲಸತ್ವ, ಮೂಲತಿರುಳು ಎಂಬುದಿಲ್ಲ. ಭಾಷೆಗೆ ಆಳ ಎಂಬುದೇ ಇಲ್ಲ. ಭಾಷೆಗೆ ಅಪಾರ ವೈವಿಧ್ಯವಿರುವ ಮೇಲ್ಮೈ ಮಾತ್ರವಿದೆ. ಆದರೆ, ಭರ್ತೃಹರಿಯ ಪ್ರಕಾರ ಭಾಷೆಯಲ್ಲಿ ವಿವಿಧ ಆಳಗಳಿವೆ. ವಿವಿಧ ಅಂತಸ್ಥ ರಚನೆಗಳಿವೆ.

ಭಾಷೆಗೆ ಅಂತರ್ಗತವಾದ ರೂಪಕಾತ್ಮಕ ಗುಣವಿರುವುದರಿಂದ ಅದು ಸಹಜವಾಗಿ ಸಾಹಿತ್ಯ ಸೃಷ್ಟಿಗೆ ಅನುವು ಮಾಡಿಕೊಡುತ್ತದೆ. ವಿಕಲ್ಪ ಎನ್ನುವುದು ಪ್ರತಿಭೆಯಾಗುತ್ತದೆ. ಭರ್ತೃಹರಿಯ ಭಾಷಿಕ ಕಲ್ಪನೆ ಸಹೃದಯ ಮೀಮಾಂಸೆಗೆ ಹೆಚ್ಚು ಹತ್ತಿರವಿದ್ದರೆ, ಬೌದ್ಧರ ನಿಲುವು ಉನ್ನತಾರ್ಥದಲ್ಲಿ ನೇತ್ಯಾತ್ಮಕ ವಿಮರ್ಶೆಗೆ ಹೆಚ್ಚು ಹತ್ತಿರವಿದೆ.

ಸೌಜನ್ಯ : ಅಕ್ಷರ ಪ್ರಕಾಶನ , ಹೆಗ್ಗೋಡು

ಇದನ್ನೂ ಓದಿ : Literature : ಅಭಿಜ್ಞಾನ : ‘ಡೈಮಂಡ್ ಸರ್ಕಸ್ಸಿನಲ್ಲಿ ಒಂದು ಹೆರಿಗೆ’

Published On - 1:17 pm, Tue, 11 January 22

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ